ಮೈಸೂರು ಝೂನಿಂದ ಹುಲ್ಲೆ, ಹುಲಿ, ಆನೆ ದತ್ತು ಪಡೆಯುತ್ತೀರಾ?
ಮೈಸೂರು : ಪುಟ್ಟ ನಾಯಿ ಮರಿಯನ್ನೋ, ಬೆಕ್ಕಿನ ಮರಿಯನ್ನೋ ಮನೆಗೆ ತಂದು ಸಾಕುವವರು ಹಲವರಿದ್ದಾರೆ. ಈ ಪ್ರಾಣಿ ಪ್ರೇಮಿಗಳಿಗೆ ಹುಲಿಮರಿಯನ್ನೋ ಆನೆಯ ಮರಿಯನ್ನೋ ಸಾಕಬೇಕು ಎಂಬ ಹಂಬಲವಿದ್ದರೂ, ಅವಕಾಶ, ಅನುಮತಿ, ಜಾಗ ಇಲ್ಲದೆ ತಮ್ಮ ಆಸೆಯನ್ನು ಮನದಲ್ಲೇ ನುಂಗಿಕೊಳ್ಳುತ್ತಾರೆ.
ಇಂತಹ ಪ್ರಾಣಿ ಪ್ರೇಮಿಗಳಿಗೆ ವನ್ಯಪ್ರಾಣಿಗಳನ್ನು ಪೋಷಿಸಿದ ತೃಪ್ತಿ ದೊರಕಿಸಿಕೊಡುವ ಕಾರ್ಯಕ್ರಮವೊಂದನ್ನು ವಿಶ್ವವಿಖ್ಯಾತ ಮೈಸೂರು ಮೃಗಾಲಯ ಹಾಕಿಕೊಂಡಿದೆ. ವನ್ಯಜೀವಿ ಸಂರಕ್ಷಣೆಯಲ್ಲಿ ಸಾರ್ವಜನಿಕರನ್ನೂ ತೊಡಗಿಸಿಕೊಳ್ಳುವ ಪ್ರಯತ್ನ ಇದಾಗಿದೆ.
ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಹೊಸ ಯೋಜನೆಯಡಿ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿರುವ ಪಕ್ಷಿ - ಪ್ರಾಣಿಗಳನ್ನು ದತ್ತುಪಡೆಯಲು ನಿಮಗೂ ಅವಕಾಶ ಇದೆ. (ದತ್ತು ಪಡೆದೆವೆಂದು ಅವನ್ನು ನೀವು ಮನೆಗೆ ಕೊಂಡೊಯ್ಯುವಂತಿಲ್ಲ ಅಷ್ಟೇ) ಮೃಗಾಲಯದಲ್ಲಿರುವ ನೂರಾರು ಪ್ರಾಣಿ ಪಕ್ಷಿಗಳ ನಿರ್ವಹಣೆ ಪ್ರಸಕ್ತ ಸನ್ನಿವೇಶದಲ್ಲಿ ಅತಿ ದುಬಾರಿ ಆಗಿದೆ.
ಲಭ್ಯವಿರುವ ಸಂಪನ್ಮೂಲದಲ್ಲಿ ಪ್ರಾಣಿಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದು ಕಷ್ಟ. ಹೀಗಾಗೇ ಸಾರ್ವಜನಿಕರಿಂದ ಪ್ರಾಣಿಗಳ ಪೋಷಣೆಗೆ ನೆರವು ಪಡೆಯಲು ತೀರ್ಮಾನಿಸಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನೀವು ಪುಟ್ಟ ಪಕ್ಷಿಯಾಂದನ್ನು ದತ್ತು ಪಡೆದು - ಅದರ ಒಂದು ವರ್ಷದ ಪಾಲನೆಯ ಹೊಣೆ ಹೊರುವುದಾದರೆ, 500 ರುಪಾಯಿ ಕೊಟ್ಟರೆ ಸಾಕು. (ಆ ಪಕ್ಷಿ ನಿಮ್ಮ ಹೆಸರು ಹೇಳಿಕೊಂಡು ಹೊಟ್ಟೆ ತುಂಬಾ ತಿನ್ನುತ್ತದೆ! ) ಇಲ್ಲ .. ಸಾಕ್ತಾ ಸಾಕ್ತಾ ದೊಡ್ಡ ಪ್ರಾಣೀನೇ ಸಾಕ್ತೀನಿ ಅನ್ನುವುದಾದರೆ, ಆನೆಯನ್ನೇ ದತ್ತು ಪಡೆಯಬಹುದು. ಆನೆಯಾಂದರ ವಾರ್ಷಿಕ ಪೋಷಣೆಗೆ 1.59 ಲಕ್ಷ ರುಪಾಯಿಗಳಾದರೆ, ಸಿಂಹಕ್ಕೆ 90ರಿಂದ 95 ಸಾವಿರ ರುಪಾಯಿ. ಹುಲಿಯಾಂದಕ್ಕೆ 80ರಿಂದ 85 ಸಾವಿರ ಹಾವು ಹಾಗೂ ನವಿಲಿಗೆ ಕೇವಲ ಐದೇ ಸಾವಿರ. ಹೆಚ್ಚಿನ ವಿವರಗಳಿಗೆ ಮೈಸೂರು ಮೃಗಾಲಯದ ನಿರ್ದೇಶಕ ಕುಮಾರ್ ಪುಷ್ಕರ್ ಅವರನ್ನು ಸಂಪರ್ಕಿಸಬಹುದು.
(ಇನ್‌ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications