ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಿಪ್ರ ಬರ ಪರಿಹಾರ ಕಾಮಗಾರಿಗೆ ಆಡಳಿತ ವಿಕೇಂದ್ರೀಕರಣ- ಕೃಷ್ಣ

By Super
|
Google Oneindia Kannada News

ಬೆಳಗಾವಿ : ಬರ ಪರಿಹಾರ ಕಾಮಗಾರಿ ಯೋಜನೆಗಳ ಜಾರಿಗೆ ಇರುವ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲು ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಬರ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆ ನಡೆಸಿದ ನಂತರ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತಾಡುತ್ತಿದ್ದರು. ಬರ ಪರಿಹಾರ ಕಾಮಗಾರಿಗಳು ಯೋಜನಾಬದ್ಧವಾಗಿ ನಡೆಯಲು ವಿವಿಧ ಇಲಾಖೆಗಳ ಯೋಜನೆಗಳನ್ನು ಸಮನ್ವಯಗೊಳಿಸುವಂತೆ ಅಭಿವೃದ್ಧಿ ಆಯುಕ್ತರಿಗೆ ಸೂಚನೆ ಕೊಡಲಾಗುವುದು. ಜೊತೆಗೆ ತ್ವರಿತ ಪರಿಹಾರಕ್ಕಾಗಿ ಸರಳೀಕೃತ ವ್ಯವಸ್ಥೆ ರೂಪಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶ ನೀಡುತ್ತೇನೆ ಎಂದು ಕೃಷ್ಣ ಹೇಳಿದರು.

ಬೆಂಗಳೂರಿಗೆ ವಾಪಸಾದ ತಕ್ಷಣವೇ ಈ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತಂದು, ಆಡಳಿತ ವಿಕೇಂದ್ರೀಕರಣಗೊಳಿಸಿ, ಬರ ಪರಿಹಾರ ಕಾಮಗಾರಿಗಳು ಕ್ಷಿಪ್ರಗತಿಯಲ್ಲಿ ನಡೆಯುವಂತೆ ಮಾಡಲಾಗುವುದು. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಅಧ್ಯಯನ ತಂಡವನ್ನು ಕಳುಹಿಸುತ್ತಿದ್ದು, ಆ ತಂಡವನ್ನು ಬರದ ಹೊಡೆತ ಬಿದ್ದಿರುವ ಪ್ರದೇಶಗಳಿಗೆ ಕರೆದುಕೊಂಡು ಹೋಗಿ, ಕೈಕೊಟ್ಟ ಮಳೆಯಿಂದ ಹದಗೆಟ್ಟಿರುವ ಪರಿಸ್ಥಿತಿಯ ವಾಸ್ತವ ಚಿತ್ರಣ ತೋರಿಸಲಿದ್ದೇವೆ. ತಂಡ ಕೇಂದ್ರಕ್ಕೆ ವರದಿ ಸಲ್ಲಿಸಿದ ನಂತರ ಕೇಂದ್ರದ ನೆರವನ್ನು ನಿರೀಕ್ಷಿಸಬಹುದು ಎಂದರು.

ದೇವೇಗೌಡ ಟೀಕೆ : ಒಂದು ತಿಂಗಳು ಸುಮ್ಮನೆ ಕೈಕಟ್ಟಿ ಕುಳಿತಿದ್ದ ಸರ್ಕಾರ ಬರ ಸಮಸ್ಯೆ ಉಲ್ಬಣಗೊಂಡ ನಂತರ ಸ್ಥಳ ಪರಿಶೀಲನೆಗೆ ಒತ್ತು ಕೊಡುತ್ತಿದೆ. ಬರ ಪರಿಸ್ಥಿತಿ ಎದುರಿಸುವಲ್ಲಿ ಮೊದಲ ಹಂತದಲ್ಲೇ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿಗಳು ಈಗ ಜಿಲ್ಲೆಗಳಿಗೆ ಭೇಟಿ ಕೊಡಲು ಶುರು ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಟೀಕಿಸಿದರು. ಬರ ಪರಿಸ್ಥಿತಿ ಅಧ್ಯಯನಕ್ಕೆ ಬೆಳಗಾವಿ ಜಿಲ್ಲೆಗೆ ಭಾನುವಾರ ಭೇಟಿ ಕೊಟ್ಟಾಗ ಅವರು ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಿದ್ದರು.

ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ತಾಲ್ಲೂಕುಗಳಿಗೆ ಪ್ರವಾಸ ನಡೆಸಿ, ಬರ ಪರಿಸ್ಥಿತಿಯ ಕಾಮಗಾರಿ ಕೆಲಸ ನೋಡಿಕೊಳ್ಳಬೇಕಿತ್ತು. ಆದರೆ ಆಗಿರುವುದೇ ಬೇರೆ. ಮಳೆಯಿಲ್ಲದೆ ಬೆಳೆ ನೆಲ ಕಚ್ಚಿ ರೈತ ಕಂಗಾಲಾಗಿರುವ ಈ ಹೊತ್ತಿನಲ್ಲಿ ಸಾಲ ವಸೂಲಾತಿ ಕಾರ್ಯವನ್ನು ನಿಲ್ಲಿಸಬೇಕು. ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ದೇವೇಗೌಡ ಒತ್ತಾಯಿಸಿದರು.

English summary
S.M.Krishna to overcome administrative hurdles to speed up drought relief projects
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X