ಸೀರೆ ನೋಡಿಯೇ ಉಟ್ಟುಕೊಂಡಷ್ಟು ಖುಷಿ ಪಟ್ಟರು ಮೇಡಂ ಷೇಬಾ
ನವದೆಹಲಿ : ಮುಷರ್ರಫ್ ಅವರ ಪತ್ನಿ ಬೇಗಂ ಷೇಬಾ ಆಗಮನಕ್ಕಾಗಿ ಇಲ್ಲಿನ ಕಾಟೇಜ್ ಎಂಪೋರಿಯಂ ಸಾಕಷ್ಟು ಸಿದ್ಧತೆಗಳನ್ನು ನಡೆಸಿತ್ತು . ಕಣ್ಕುಕ್ಕುವ ಬಣ್ಣ ಬಣ್ಣದ ನೂರಾರು ಸೀರೆಗಳನ್ನು ಬೇಗಂ ಅವರಿಗೆ ಎದ್ದು ಕಾಣಿಸುವಂತೆ ಎಂಪೋರಿಯಂನ ಕೆಲಸಗಾರರು ಜೋಡಿಸಿದ್ದರು. ಏನು ಪ್ರಯೋಜನ ಹೇಳಿ, ಬೇಗಂ ಬಂದರು, ಸೀರೆಗಳನ್ನು ನೋಡಿದರು, ಕಣ್ಣಿನಲ್ಲಿಯೇ ತೃಪ್ತಿ ಸೂಸಿದರು, ಬರಿಗೈಯ್ಯಲ್ಲೇ ವಾಪಸ್ಸಾದರು !
ಬೇಗಂ ಬಂದರು, ಬಂದಂತೆಯೇ ಮರಳಿದರು ಎಂದು ಅಂಗಡಿಯ ಮಹಿಳಾ ಕೆಲಸಗಾರರು ತಮ್ಮ ಶ್ರಮ ವ್ಯರ್ಥವಾದ ಅಸಮಾಧಾನವನ್ನು ಬಹಿರಂಗಗೊಳಿಸಲು ಮುಜುಗರ ಪಡಲಿಲ್ಲ . ಅಂಗಡಿಯ ವ್ಯವಸ್ಥಾಪಕರಿಗೆ ಮಾತ್ರ ಪಾಕ್ ಅಧ್ಯಕ್ಷರ ಪತ್ನಿ ತಮ್ಮ ಅಂಗಡಿಗೆ ಬಂದು ಹೋದದ್ದೇ ಒಂಥರಾ ಸಮಾಧಾನ. ಬೇಗಂ ನಮ್ಮ ಅಂಗಡಿಯಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ದೆಹಲಿಗೆ ಯಾವ ವಿದೇಶಿಯರು ಬಂದರೂ ನಮ್ಮ ಅಂಗಡಿಯಲ್ಲಿ ಇಷ್ಟೊಂದು ರಶ್ ಆಗಿರಲಿಲ್ಲ ಎನ್ನುತ್ತಾರೆ ಎಂಪೋರಿಯಂನ ವ್ಯವಸ್ಥಾಪಕ ನಿರ್ದೇಶಕ ದುರ್ಗೇಶ್ ಶಂಕರ್.
ಸೀರೆ ಉಡುವ ಕಲೆ ಬೇಗಂ ಅವರಿಗೆ ಗೊತ್ತಿಲ್ಲ
ನೂರಾರು ಸೀರೆಗಳನ್ನು ಅಂಗಡಿಯ ಮಂದಿ ಮುಂದೆ ಸುರಿದಾಗ ಅವುಗಳನ್ನೆಲ್ಲ ಬೇಗಂ ನೋಡಿದರು. ಮುಗುಳು ನಗೆ ಬೀರಿ ನಾನು ಏನನ್ನು ಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ನಾನು ಸೀರೆ ಉಡುವುದಿಲ್ಲ , ನನಗೆ ಸೀರೆ ಉಡುವುದು ಗೊತ್ತಿಲ್ಲ . ಆದರೆ, ಸೀರೆ ಉಡುವ ಅನುಭವ ಪಡೆಯಲು ಆಸೆಯಾಗಿದೆ. ನಿಜ ಹೇಳಬೇಕೆಂದರೆ ಸೀರೆ ಉಟ್ಟಷ್ಟೇ ನನಗೆ ಸಂತೋಷವಾಗಿದೆ ಎಂದು ಬೇಗಂ ಹೇಳಿದರು.
ಸೀರೆ ಬೇಡ ಬಿಡಿ, ಸಲ್ವಾರ್ ಕಮೀಜ್ ಆದರೂ ಕೊಳ್ಳಿ-
ಊಹ್ಞೂಂ, ನಾನು ಈ ದಿನ ಏನನ್ನೂ ಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಬೇಗಂ ಹೇಳಿದರು. ಮುಖದಲ್ಲಿ ಮಾತ್ರ ಅದೇ ಮುಗುಳ್ನಗೆ. ಆದರೆ, ಅಂಗಡಿಯವರ ಮೊಗದಲ್ಲಿ ಕವಿದ ನಿರಾಶೆಯನ್ನು ಗುರ್ತಿಸಿದ ಬೇಗಂ- ನಿಮ್ಮ ಪ್ರೀತಿಗೆ ನಾನು ಋಣಿ. ನಿಮಗೆ ನಿರಾಶೆಯಾಗದಂತೆ ಕೆಲವನ್ನು ಖರೀದಿ ಮಾಡಲು ರಾಯಭಾರಿ ಸಿಬ್ಬಂದಿಗೆ ಸೂಚಿಸುತ್ತೇನೆ. ಅವರು ಆನಂತರ ಖರೀದಿಸುತ್ತಾರೆ ಎಂದರು.
ಬೇಗಂ ನಗುತ್ತಲೇ ಬರಿಗೈಯ್ಯಲ್ಲೇ ವಾಪಸ್ಸಾದರು !












Click it and Unblock the Notifications