ಬಳ್ಳಾರಿಯಲ್ಲಿ ತಲೆ ಎತ್ತಲಿದೆ ಶಬರಿಗಿರಿ ಅಯ್ಯಪ್ಪ ಮಂದಿರದ ಪ್ರತಿಕೃತಿ
ಬಳ್ಳಾರಿ : ಶಬರಿಮಲೆ ಅಯ್ಯಪ್ಪ ಮಂದಿರವನ್ನು ಹೋಲುವ ಅಯ್ಯಪ್ಪ ದೇಗುಲ ಬಿಸಿಲ ತವರು ಬಳ್ಳಾರಿ ನಗರದಲ್ಲಿ ನಿರ್ಮಿಸಲು ಅಯ್ಯಪ್ಪ ಭಕ್ತರು ಮುಂದಾಗಿದ್ದು , ಈ ನಿಟ್ಟಿನಲ್ಲಿ ತ್ರಿದಂಡಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನ ಜಿಯಾರ್ ಸ್ವಾಮೀಜಿಗಳು ಮಂಗಳವಾರ ದೇವಸ್ಥಾನ ನಿರ್ಮಾಣಕ್ಕೆ ಕೆಸರು ಕಲ್ಲು ಹಾಕಿದರು.
ದೇಗುಲ ನಿರ್ಮಾಣದ ಕಾಮಗಾರಿಯನ್ನು ಶ್ರೀ ಶಬರಿ ಅಯ್ಯಪ್ಪ ಟ್ರಸ್ಟ್ ವಹಿಸಿಕೊಂಡಿದ್ದು, ನಿರ್ಮಾಣವಾಗುತ್ತಿರುವ ದೇವಸ್ಥಾನ ಥೇಟ್ ಶಬರಿಮಲೆಯ ಅಯ್ಯಪ್ಪ ದೇವಸ್ಥಾನವನ್ನು ಪ್ರತಿಬಿಂಬಿಸುತ್ತದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಜಯಪ್ರಕಾಶ್ ಜೆ. ಗುಪ್ತ ಹೇಳಿದ್ದಾರೆ. ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವ ವಿಗ್ರಹವೂ ಶಬರಿ ಮಲೆಯಲ್ಲಿರುವ ಅಯ್ಯಪ್ಪ ದೇವರ ವಿಗ್ರಹವನ್ನೇ ಹೋಲುತ್ತದೆ ಎಂದು ಅವರು ಹೇಳಿದರು.
ದೇವಸ್ಥಾನದೊಂದಿಗೆ ವೃದ್ಧಾಶ್ರಮ, ಬುದ್ಧಿಮಾಂದ್ಯ ಮಕ್ಕಳ ಆಶ್ರಮ ಮತ್ತು ಅಂಗವಿಕಲರ ಆಶ್ರಮಗಳನ್ನು ಆರಂಭಿಸುವ ಉದ್ದೇಶವೂ ಟ್ರಸ್ಟ್‌ಗಿದೆ. ಕೇರಳದ ಪ್ರಸಿದ್ಧ ಭವಿಷ್ಯಕಾರರಾದ ಪಲತುಲ್ಲಿ ನಾರಾಯಣ ಪನಿಕ್ಕರ್, ಪಾಡೂರ್ ರಾಧಾಕೃಷ್ಣ ಪನಿಕ್ಕರ್ ಮತ್ತು ಉನ್ನಿಕೃಷ್ಣನ್ ಇಪನಿಕ್ಕರ್ ಅವರ ಸಲಹೆಯ ಮೇರೆಗೆ ದೇವಸ್ಥಾನದ 1.06 ಎಕ್ರೆ ಪ್ರದೇಶದಲ್ಲಿ ದೋಷ ನಿವಾರಣೆ ಪೂಜೆಯನ್ನು ನಡೆಸಲಾಗಿದೆ. ದೇವಸ್ಥಾನಕ್ಕಾಗಿ ಜಾಗವನ್ನು ಟ್ರಸ್ಟ್ ನ ಜಯಪ್ರಕಾಶ್ ಗುಪ್ತ ನೀಡಿದ್ದಾರೆ.
ಹಾಲೆಂಡ್‌ನ ಮಹರ್ಷಿ ಯೋಗ ವೇದಿಕ್ ಕಾಲೇಜಿನಲ್ಲಿ ವಾಸ್ತು ವಿಜ್ಞಾನ ಪ್ರೊಫೆಸರ್ ಆಗಿರುವ ಪ್ರಸಿದ್ಧ ವಾಸ್ತು ತಜ್ಞ ಕಾಣಿಪ್ಪಾಯೂರ್ ಶಂಕರ್ ನಂಬೂದರೀಪಾದ್ ಅವರ ಮಗ ಕೃಷ್ಣ ನಂಬೂದರಿಪಾದ್ ಅವರ ನಿರ್ದೇಶನದಲ್ಲಿ ದೇವಸ್ಥಾನದ ಕಟ್ಟಡಗಳನ್ನು ನಿರ್ಮಿಸಲಾಗುವುದು.
ಬಾಲಂಗೋಚಿ : ಅಯ್ಯಪ್ಪ ಮಂದಿರ- ಮೂರ್ತಿಯ ಪ್ರತಿಕೃತಿಯನ್ನೇನೋ ರೂಪಿಸಬಹುದು. ಪಂಪಾನದಿಯನ್ನೂ ರೂಪಿಸುತ್ತಾರಾ ?
(ಇನ್ಫೋ ವಾರ್ತೆ)












Click it and Unblock the Notifications