ರಾಜ್ಯದ ಹಲವೆಡೆ ಮಳೆ
ಬೆಂಗಳೂರು : ರಾಜ್ಯದ ಕೆಲವೆಡೆಗಳಲ್ಲಿ ಮಂಗಳವಾರವೂ ಮಳೆ ಬಿದ್ದಿದೆ. ರಾಣಿಬೆನ್ನೂರು, ಭದ್ರಾವತಿಯಲ್ಲಿ ತಲಾ 4 ಸೆಂಟಿ ಮೀಟರ್, ಮುಧೋಳ, ಹಿಡಕಲ್‌ನಲ್ಲಿ ತಲಾ 2, ಸಿದ್ದಾಪುರ, ಬನವಾಸಿ, ಗೇರುಸೊಪ್ಪ, ಹಿರೇಕೆರೂರ್, ಹಾನಗಲ್, ಬ್ಯಾಡಗಿ, ಜಮಖಂಡಿ, ಮಹಾಲಿಂಗಪುರ, ಬೇಲೂರು, ಬಂಡಿಪುರಗಳಲ್ಲಿ ತಲಾ 1 ಸೆಂಟಿ ಮೀಟರ್ ಮಳೆ ಬಿದ್ದಿದೆ.
ನಾಲ್ಕು ದಿನದ ಹಿಂದೆ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ನಾಲ್ಕಾರು ಹನಿ ಮಳೆ ಬಿದ್ದಿತ್ತು. ಮತ್ತೆ ಮಳೆ ಸುಳಿದಿಲ್ಲ. ಈ ಹೊತ್ತು ಬಿಸಿಲು ಬಹಳವಾಗೇ ಸುಡುತ್ತಿದೆ. ಸೆಕೆಯೂ ಹೆಚ್ಚಿದೆ. ಬೆವರೂ ಹರಿಯುತ್ತಿದೆ. ಏಕೋ ಇನ್ನೂ ವರುಣ ಕೃಪೆ ತೋರಿಲ್ಲ. ರಾಜ್ಯದ ಅಲ್ಲಲ್ಲಿ ಮಳೆ ಬೀಳುತ್ತಿರುವ ಸುದ್ದಿ ಕೇಳಿದ ಬೆಂಗಳೂರಿಗರು ಅವರೆಲ್ಲಾ ಎಷ್ಟು ಪುಣ್ಯವಂತರಪ್ಪ ಎಂದು ಉದ್ಗಾರ ಮಾಡುತ್ತಿದ್ದಾರೆ.
ಈ ಮಧ್ಯೆ ಉತ್ತರ ಒಳನಾಡಿನ ಕೆಲವೆಡೆ ಗರಿಷ್ಠ ತಾಪಮಾನ ಕುಸಿದಿದೆ. ಕರಾವಳಿ ಕರ್ನಾಟಕದಲ್ಲಿ ಹಾಗೂ ದಕ್ಷಿಣ ಒಳನಾಡಿನ ಉಷ್ಣಾಂಶದಲ್ಲಿ ಅಲ್ಪ ಬದಲಾವಣೆ ಆಗಿದೆ. ಗುಲ್ಬರ್ಗಾದಲ್ಲಿ ರಾಜ್ಯದ ಅತಿ ಹೆಚ್ಚು ತಾಪಮಾನ (40 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ. ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ಚದುರಿದಂತೆ ಮಳೆ ಬೀಳುವ ಸಂಭವ ಇದೆ.
ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಇದ್ದು, ಗರಿಷ್ಠ ತಾಪಮಾನ 33 ಡಿಗ್ರಿ ಮುಟ್ಟಲಿದೆ ಎನ್ನುತ್ತದೆ ಬೆಂಗಳೂರಿನಲ್ಲಿರುವ ಹವಾಮಾನ ವೀಕ್ಷಣಾಲಯದ ವರದಿ.












Click it and Unblock the Notifications