ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಳಿಯ ಕಾಮದಹನ

By Super
|
Google Oneindia Kannada News

ದೂರದಬೆಟ್ಟ ಸಿನಿಮಾ ನೋಡಿದ್ದೀರಾ? ರಾಜ್‌ಕುಮಾರ್‌, ದ್ವಾರಕೀಶ್‌, ಚಿ. ಉದಯಶಂಕರ್‌ ನೇತೃತ್ವದ ಹುಡುಗರ ತಂಡ ಕಾಮನಹಬ್ಬ ಆಚರಿಸುತ್ತಾರೆ. ಮನೆ ಮನೆಗೂ ನುಗ್ಗಿ, ಬೆರಣಿ, ಸೌದೆ ಕದಿಯುತ್ತಾರೆ, ಪಾಪಮ್ಮನ ಮನೆಯ ಗೇಟ್‌ ಅನ್ನೇ ಅಪಹರಿಸುತ್ತಾರೆ. ಶಿವನೊಲುಮೆಗಾಗಿ ಕಾಮನ ದಹನ ಮಾಡುತ್ತಾರೆ.

ಕಾಮಣ್ಣ ಮಕ್ಕಳು, ಕಳ್ಳನನ್ನ ಮಕ್ಕಳು, ಏನೇನು ಕದ್ದರು, ಸೌದೆ ಬೆರಣಿ ಕದ್ದರು, ಯಾತಕ್ಕೆ ಕದ್ದರು.... ಕಾಮಣ್ಣನ ಸುಡಕ್ಕೆ..... ಎಂದು ಹಾಡುತ್ತಾರೆ. ಇದೇ 9ರಂದು ಶುಕ್ರವಾರ ಕಾಮನಹುಣ್ಣಿಮೆ. ಹೋಳಿಯ ಹಬ್ಬ. ವಸಂತನೊಂದಿಗೆ ಚೈತ್ರವನ್ನು ರಂಗು ರಂಗಿನೊಂದಿಗೆ ಸ್ವಾಗತಿಸುವ ಸಂಭ್ರಮ.

ಫಾಲ್ಗುಣ ಶುಕ್ಲ ಹುಣ್ಣಿಮೆಯಂದು ಹೋಳಿ ಆಚರಿಸುವುದು ವಾಡಿಕೆ. ಅಂದು ಕಾಮನನ್ನು ಸುಡುತ್ತಾರೆ. ಶಿವನ ತಪಸ್ಸನ್ನು ಭಂಗಮಾಡಲು ಕಬ್ಬಿನ ಜಲ್ಲೆಯ ಬಿಲ್ಲಿನಿಂದ - ಹೂ-ಶರ ಹೂಡಿದ ಮನ್ಮಥ ತ್ರಿನೇತ್ರನ ಕೆಂಗಣ್ಣ ಉರಿಗೆ ಸುಟ್ಟು ಭಸ್ಮವಾದ ದಿನ ಅದು ಎನ್ನುತ್ತದೆ ಪುರಾಣ. ಹೋಳಿಕಾದೇವಿಯ ಪ್ರೀತ್ಯರ್ಥವಾಗಿ ವಿಶೇಷ ಪೂಜೆಗಳೂ ನಡೆಯುತ್ತವೆ.

ಟುವ್ವಿ ಟುವ್ವಿ ಅನ್ನು-ತ ವಸಂತ - ಬಂ-ದ : ವಸಂತ ಋತುಗಳ ರಾಜ. ಫಾಲ್ಗುಣದ ಹುಣ್ಣಿಮೆಯ ಪೂರ್ಣ ಚಂದ್ರನ ಆನಂದದ ಬೆಳದಿಂಗಳಿನೊಂದಿಗೆ ವಸಂತನ ಆಗಮನವೂ ಆಗುತ್ತದೆ. ಪ್ರಕೃತಿ ದೇವಿ ಹಸಿರು ಸೀರೆಯನುಟ್ಟು, ಕೆಂಪು ರವಿಕೆಯ ತೊಟ್ಟು ಕಂಗೊಳಿಸುತ್ತಾಳೆ. ಪಂಚಮಸ್ವರದಲ್ಲಿ ಕೋಗಿಲೆಗಳು ಹಾಡುತ್ತವೆ. ಪ್ರಕೃತಿಯ ಆರಾಧಕರಿಗೆಲ್ಲಾ ಹೊಸ ಚೈತನ್ಯ ನೀಡುವ ಈ ಋತುರಾಜನನ್ನು ರಂಗುರಂಗಿನ ಓಕುಳಿಯಾಂದಿಗೆ ಸ್ವಾಗತಿಸುವುದು ಸಂಪ್ರದಾಯವೇ ಆಗಿಹೋಗಿದೆ.

ರತಿಭಾವ, ಶೃಂಗಾರಭಾವದ ಕಲ್ಪನೆಯ ರಂಗು ಕೆಂಪು. ಅದುವೇ ಓಕುಳಿ. ಚೈತ್ರ - ವೈಶಾಖ ವಸಂತಋತು. ಇದು ಮಧುಮಾಸ. ಜೇನಿನಂತೆ ಸವಿಯಾದ ತಿಂಗಳು. ಮನುಷ್ಯನಲ್ಲಿ ಸಹಜವಾಗಿ ಸುಪ್ತವಾದ ಕಾಮನೆಗಳನ್ನು ಬಡಿದೆಬ್ಬಿಸುವ ತಿಂಗಳು. ಆದರೆ, ಪ್ರೇಮವನ್ನು ಮರೆತು ಕೇವಲ ಮನುಷ್ಯ ಕಾಮಕ್ಕೆ ಬಲಿಯಾಗಬಾರದು ಎಂಬ ಕಾರಣಕ್ಕಾಗೇ ಅಂದು ಕಾಮನನ್ನು ಸಾಂಕೇತಿಕವಾಗಿ ಸುಡುತ್ತಾರೆ.

ಉತ್ತರ ಕರ್ನಾಟಕ ಭಾಗದಲ್ಲಂತೂ ಓಕುಳಿಯ ಉತ್ಸವವೇ ಜರುಗುತ್ತದೆ. ಉತ್ತರ ಭಾರತದಲ್ಲೂ ಹೋಳಿಯ ಆಚರಣೆ ಬಲು ಜೋರು. ಬಣ್ಣ ಬಣ್ಣದ ನೀರನ್ನು ಪಿಚಕಾರಿಗಳ ಮೂಲಕ ಎಲ್ಲರ ಮೇಲೆ ಎರಚಿ ಆನಂದ ಪಡುತ್ತಾರೆ. ತಮ್ಮ ಸಂತಸ, ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ.

ಹಿಂದೆ ರಾಜ ಮಹಾರಾಜರು, ವಂಸತೋತ್ಸವಗಳನ್ನು ಏರ್ಪಡಿಸುತ್ತಿದ್ದರು. ಕವಿಗೋಷ್ಠಿಗಳನ್ನು ಏರ್ಪಡಿಸುತ್ತಿದ್ದರು. ಈ ತಿಂಗಳನ್ನು ಮಾಧವನ (ವಿಷ್ಣು) ಮಾಸ ಎಂದೂ ನಮ್ಮ ಹಿರೀಕರು ಭಾವಿಸಿದ್ದರು. ಅದಕ್ಕೇ ಈ ಮಾಸಕ್ಕೆ ಮಧುಮಾಸ ಎಂಬ ಹೆಸರು ಕೂಡ ಎಂಬುದು ಅವರ ವಾದ. ವಸಂತ ಮಾಸದ ಅಧಿದೇವನೂ ಮಾಧವನೇ ಅಂತೆ. ಹೀಗಾಗಿ ಕೃಷ್ಣ ತನ್ನ ಬಾಲಲೀಲೆಯಲ್ಲಿ ತನ್ನ ಗೆಳೆಯರೊಂದಿಗೆ ಮನೆ ಮನೆಗೆ ನುಗ್ಗಿ, ನೆಲ್ಲುಗಳಲ್ಲಿ ಇಟ್ಟ ಬೆಣ್ಣೆಯನ್ನು ಕದಿಯಲು, ಒಬ್ಬರ ಮೇಲೊಬ್ಬರಂತೆ ಹತ್ತಿ ಪಿರಮಿಡ್‌ ರಚಿಸಿ, ಬೆಣ್ಣೆ ಕದಿಯುತ್ತಿದ್ದ ಸಂಕೇತವಾಗಿ ಇಂದೂ ಉತ್ತರ ಭಾರತದಲ್ಲಿ ಎತ್ತರದ ಸ್ಥಳದಲ್ಲಿ ಹೊಸ ಮಡಿಕೆಯಲ್ಲಿ ಬೆಣ್ಣೆ, ಮೊಸರು, ಹಾಲನ್ನು ಇಟ್ಟು ಯುವಕರಿಗೆ ಸವಾಲು ಎಸೆಯುತ್ತಾರೆ.

ಗೆಳೆಯರ ದಂಡಿನೊಂದಿಗೆ ಆಗಮಿಸುವ ವೀರರು, ಸುತ್ತುಗಟ್ಟಿ, ಒಬ್ಬರ ಮೇಲೊಬ್ಬರು ಹತ್ತಿ ಪಿರಮಿಡ್‌ ರಚಿಸಿ, ಆ ಮಡಿಕೆಗಳನ್ನು ಒಡೆಯುತ್ತಾರೆ. ಆ ಸಂದರ್ಭದಲ್ಲಿ ಉಪ್ಪರಿಗೆಯಲ್ಲಿ ನಿಂತ ಮಂದಿ, ಈ ಸಾಹಸಿಗರಿಗೆ ಅಡಚಣೆಯುಂಟು ಮಾಡಲು ರಭಸದಿಂದ ಓಕುಳಿ ಎರಚುತ್ತಾರೆ. ಉನ್ನತ ಜನರು, ಉನ್ನತ ಒಲವು..... ಎಂಬ ಗುಟಕಾ ಕಂಪನಿಯಾಂದರ ಜಾಹೀರಾತು ನೋಡಿದವರಿಗೆ ಇದು ನೆನಪಿಗೆ ಬಂದೀತು.

ಕರ್ನಾಟಕದಲ್ಲೂ ಹೋಳಿಯ ಹುಣ್ಣಿಮೆ ಅನಾದಿಕಾಲದಿಂದ ಅನೂಚಾನವಾಗಿ ನಡೆದುಬಂದಿದೆ. ಕನಕದಾಸರು ತಮ್ಮ ಮೋಹನತರಂಗಿಣಿಯಲ್ಲಿ ಇದನ್ನು ವರ್ಣಿಸಿದ್ದಾರೆ. ಶ್ರೀಕೃಷ್ಣನ ಮಡದಿಯಾದ ರುಕ್ಮಿಣಿ ದೇವಿಯ ಸಂಜಾತನಾದ ಪ್ರದ್ಯುಮ್ನನು ಶಂಭಾಸುರನನ್ನು ಕೊಂದು, ಆತನ ಬಂಧನದಲ್ಲಿದ್ದ ರತಿದೇವಿಯಾಂದಿಗೆ ದ್ವಾರಕೆಗೆ ಹಿಂತಿರುಗುತ್ತಾನೆ. ಆ ಶುಭ ಸಂದರ್ಭದಲ್ಲಿ ವಸಂತೋತ್ಸವವೂ ನಡೆಯುತ್ತದೆ. ಇದುವೆ ರಂಗಿನಹೋಳಿಗೆ ನಾಂದಿ ಎಂಬುದೂ ಕೆಲವರ ನಂಬಿಕೆ.

ಅರಿಷಡ್ವರ್ಗಗಳನ್ನು ಜಯಿಸಿ, ಕಾಮದಿಂದ ಮುಕ್ತನಾಗಿ ಧ್ಯಾನ ಸಮಾಧಿಯಲ್ಲಿದ್ದ ಶಿವನಿಗೆ ಮದನನು ಬಿಟ್ಟ ಬಾಣ, ಹಲವು ಭಾವನೆಗಳನ್ನು ಕೆರಳಿಸಿತು. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವ, ಕೋಪದಿಂದ ಮನ್ಮಥನನ್ನು ತನ್ನ ಮೂರನೇ ಕಣ್ಣು ತೆರೆದು ಸುಟ್ಟನಾದರೂ, ತನ್ನಲ್ಲಿ ಭುಗಿಲೆದ್ದ ಕಾಮವನ್ನು ಸುಡಲಾರದಾದ. ಇದುವೇ ಪಾರ್ವತಿ ಕಲ್ಯಾಣಕ್ಕೆ, ಕುಮಾರ ಸಂಭವಕ್ಕೆ ಕಾರಣವಾಯಿತು. ಲೋಕ ಕಲ್ಯಾಣವೂ ಆಯ್ತು. ಆಗ ಮದನನ ಹೂ ಬಾಣ ತಾಗಿದ ಶಿವನಿಗೆ ಜಗತ್ತೇ ರಂಗು ರಂಗಾಗಿ ಹೊಸತಾಗಿ ಕಾಣಿಸಿತಂತೆ. ಆ ರಂಗಿನ ಆಚರಣೆಯೇ ಹೋಳಿ ಎಂಬುದು ಇನ್ನು ಕೆಲವರ ಅನಿಸಿಕೆ.

ಕತೆಗಳು, ದಂತ ಕತೆಗಳು, ಪುರಾಣ - ಪುಣ್ಯ ಕತೆಗಳು ಏನೇ ಹೇಳಲಿ, ಮನಸ್ಸಿಗೆ ಮುದನೀಡುವ ಚೈತ್ರನಾದಿಯಾದ ವಸಂತನ ಸ್ವಾಗತಿಸುವ ಹೋಳಿಗೆ ವಿಶೇಷ ಅರ್ಥವಿದೆ. ಮನಸ್ಸಿಗೆ ಮುದ ನೀಡುವ, ಬದುಕನ್ನು ವರ್ಣರಂಜಿತಗೊಳಿಸುವ ಹೋಳಿಗೆ ನೀವೂ ತಯಾರಿ ನಡಿಸಿದ್ದೀರಾ ತಾನೆ?

English summary
Holi is one of the most joyous festivals in India, celebrated with verve and gusto around the country. Find out about the customs, traditions, celebrations, legends and delicacies associated with this unique Indian festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X