ದೇವೇಗೌಡರ ಪತ್ನಿಯ ಮೇಲೆ ಆ್ಯಸಿಡ್ ದಾಳಿ : ತನಿಖೆಗೆ ಆದೇಶ
ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಹಾಗೂ ಸೊಸೆಯ ಮೇಲೆ ಆ್ಯಸಿಡ್ ದಾಳಿ ಮಾಡಿ ಕೊಲೆ ಯತ್ನ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆದೇಶಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಆದೇಶಿಸಿದ್ದಾರೆ.
ಶಿವರಾತ್ರಿಯ ಪೂಜೆಗೆಂದು ತವರೂರಿಗೆ ತೆರಳಿದ್ದ ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಸೊಸೆ ಭವಾನಿ ಅವರ ಮೇಲೆ ಬುಧವಾರ ರಾತ್ರಿ ಹರದನಹಳ್ಳಿಯ ದೇವಾಲಯದಲ್ಲಿ ಆ್ಯಸಿಡ್ ದಾಳಿ ನಡೆದಿತ್ತು. ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಆಗ್ರಹಿಸಿದ್ದರು.
ಪೂರ್ವ ಯೋಜಿತ ಸಂಚು : ಇದೊಂದು ಪೂರ್ವ ಯೋಜಿತ ಸಂಚು ಎಂದು ದೇವೇಗೌಡರ ಪುತ್ರ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ. ತಮ್ಮ ತಾಯಿ ಹಾಗೂ ಪತ್ನಿಯನ್ನು ಕೊಲ್ಲಲು, ಹಾಸನದ ಹಾಲು ಉತ್ಪಾದಕರ ಮಹಾ ಮಂಡಳಿಯ ಮಾಜಿ ಅಧ್ಯಕ್ಷ ಶ್ರೀನಿವಾಸ್ ನಡೆಸಿದ ಪೂರ್ವ ಯೋಜಿತ ಸಂಚಿದು ಎಂದಿರುವ ರೇವಣ್ಣ, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮೊದಲೇ ತಿಳಿಸಿದ್ದರೂ ಅವರು ಸೂಕ್ತ ರಕ್ಷಣೆ ನೀಡಲಿಲ್ಲ ಎಂದೂ ಆರೋಪಿಸಿದ್ದಾರೆ.
ನಾಲ್ವರ ಬಂಧನ : ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ರೇವಣ್ಣ ಅವರ ಪತ್ನಿ ಭವಾನಿ ಅವರ ಮೇಲೆ ಆ್ಯಸಿಡ್ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವೇಗೌಡರ ಸಹೋದರ ಬಸವೇಗೌಡರ ಪುತ್ರ ಲೋಕೇಶ್, ಆತನ ಬೆಂಬಲಿಗರಾದ ಶ್ರೀನಿವಾಸ್, ಜ್ಞಾನೇಶ್ ಹಾಗೂ ಮತ್ತೊಬ್ಬನನ್ನು ಬಂಧಿಸಲಾಗಿದೆ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications