ಕಪಿಲ್ ಇನ್ನು ಮುಂದೆ ಕ್ರಿಕೆಟ್ ಮೈದಾನಕ್ಕೇ ಇಳಿಯೋದಿಲ್ಲವಂತೆ
ನವದೆಹಲಿ : ಒಂದು ಕಾಲದಲ್ಲಿ ಕಪಿಲ್ ಇಲ್ಲದ ಭಾರತದ ಕ್ರಿಕೆಟ್ಟನ್ನೇ ಎಷ್ಟೋ ಕ್ರಿಕೆಟ್ ಪ್ರೇಮಿಗಳು ಒಪ್ಪಿಕೊಳ್ಳುತ್ತಿರಲಿಲ್ಲ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಲಯಗಳಲ್ಲಿ ಒಂದು ದಿನದ ಪಂದ್ಯಗಳಿಗೆ ಹೊಸ ವೇಗ ಕಲ್ಪಿಸಿಕೊಟ್ಟಿದ್ದ ಯಶಸ್ವಿ ನಾಯಕ ಕಪಿಲ್‌ಗೆ ಈ ಹೊತ್ತು ಕ್ರಿಕೆಟ್ಟೇ ಬದ್ಧ ವೈರಿ !
1986ರಲ್ಲಿ ಟೈ ಆಗಿದ್ದ ಟೆಸ್ಟ್‌ನಲ್ಲಿ ಆಡಿದ ತಂಡಗಳನ್ನೇ ಮಾರ್ಚ್ 17ರಂದು ಮತ್ತೆ ಆಡಿಸಿ, ಗುಜರಾತ್ ಸಂತ್ರಸ್ತರಿಗೆ ಹಣ ಸಂಗ್ರಹಿಸುವ ಆಲೋಚನೆಗೆ ಕಪಿಲ್ ಸ್ಪಂದಿಸಿಲ್ಲ. 1986ರಲ್ಲಿ ನಾಯಕತ್ವ ವಹಿಸಿದ್ದ ಕಪಿಲ್, ಈಗ ನಾ ಒಲ್ಲೆ ಅಂದಿದ್ದಾರೆ.
‘ಭೂಕಂಪ ಪರಿಹಾರಕ್ಕಾಗಿ ನಿಧಿ ಸಂಗ್ರಹಣೆಗೆ ಕ್ರಿಕೆಟ್ ಆಡಿಸೋದು ಒಳ್ಳೆಯದೇ. ಆದರೆ ಮ್ಯಾಚ್‌ಫಿಕ್ಸಿಂಗ್ ಎಂಬ ಮಸಿಯನ್ನು ನನಗೆ ಬಳಿದಿರೋದರಿಂದ ಮತ್ತೆ ನಾನು ಬಿಳಿ ಬಟ್ಟೆ ತೊಟ್ಟು ಕಣಕ್ಕೆ ಇಳಿಯಲಾರೆ. ಹಿಂದೆ ಕಾರ್ಗಿಲ್ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಣೆಗೆ ಕ್ರಿಕೆಟ್ ಆಡಿದ್ದೆ. ಆದರೆ ಇನ್ನು ನನ್ನಿಂದ ಅದು ಸಾಧ್ಯವಿಲ್ಲ’ ಎಂದು ಕಪಿಲ್ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದಾರೆ.
(ಇನ್ಫೋ ವಾರ್ತೆ)












Click it and Unblock the Notifications