ಐಟಿ : ಮಳೆ ಸುರಿಸೋ ಗುಡುಗೋ, ಠುಸ್‌ ಗುಳ್ಳೆಯೋ ?

ಬೆಂಗಳೂರು : ಭಾರತದ ಮೋಡದಲ್ಲಿ ಕಾಣುತ್ತಿರುವ ಮಾಹಿತಿ ತಂತ್ರಜ್ಞಾನದ ಗುಡುಗು ಮಿಂಚಾಗಿ, ಮಳೆಸುರಿಸುತ್ತದೆಯೇ ಹೊರತು, ಅಬ್ಬರಿಸಿ ಮುಗುಮ್ಮಾಗುವಂಥದ್ದಲ್ಲ. ಖಾಸಗಿ ಈಕ್ವಿಟಿ ಇನ್‌ವೆಸ್ಟ್‌ಮೆಂಟಿಗೆ ಸಂಬಂಧಿಸಿದಂತೆ ಮಂಗಳವಾರ ನಡೆದ ವಿಚಾರ ಸಂಕಿರಣವೊಂದರಲ್ಲಿ ಐಟಿ ಪರಿಣತರು ಆಡಿರುವ ಮಾತಿದು.

‘ಭಾರತದಲ್ಲಿ ಐಟಿ : ಮಳೆ ಸುರಿಸೋ ಗುಡುಗೋ ಅಥವಾ ಠುಸ್‌ ಗುಳ್ಳೆಯೋ ?’ ಎಂಬುದು ಸಂಕಿರಣದ ವಿಷಯ. ಹಾಂಗ್‌ಕಾಂಗ್‌ ಮೂಲದ ಏಷ್ಯಾ ಪ್ರವೇಟ್‌ ಈಕ್ವಿಟಿ ರಿವ್ಯೂ ಸಂಕಿರಣದ ಸಂಯೋಜಕ ಸಂಸ್ಥೆ. ಭಾರತ ಸಾಫ್ಟ್‌ವೇರ್‌ ರಫ್ತಿನಲ್ಲಿ ದಿಗ್ಗಜ. ಜೊತೆಗೆ ಸಾಫ್ಟ್‌ವೇರ್‌ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲೂ ದಿನೇದಿನೇ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಐಟಿ ಭವಿತವ್ಯವೇ ಭಾರತದ ಆರ್ಥಿಕ ಭವಿತವ್ಯವಾಗಲಿದೆ ಎಂಬುದು ಪರಿಣತರ ಒಟ್ಟಾರೆ ಅಭಿಪ್ರಾಯವಾಗಿ ಸಂಕಿರಣದಲ್ಲಿ ಹೊಮ್ಮಿತು.

2008ರ ಹೊತ್ತಿಗೆ 140 ಬಿಲಿಯನ್‌ ಡಾಲರ್‌ ಆದಾಯ : ಭಾರತದಲ್ಲಿ ಸಾಕಷ್ಟು ಖಾಸಗಿ ಬಂಡವಾಳ ಹೂಡಿರುವ ಇ.ಎಂ.ವಾರ್‌ಬರ್ಗ್‌ ಪಿಂಕಸ್‌ ಅಂಡ್‌ ಕಂಪನಿ (ಏಷ್ಯಾ) ಯ ಕಾರ್ಯನಿರ್ವಾಹಕ ನಿರ್ದೇಶಕ ದಲಿಪ್‌ ಪಾಠಕ್‌ ಚರ್ಚೆಯ ಮಧ್ಯೆ ಎಲ್ಲರ ಬಾಯಿ ಮುಚ್ಚಿಸಿ, ಅಂಕಿಅಂಶಗಳಿಂದ ಪಕ್ಕಾ ವಾದ ಮಂಡಿಸಿದರು- 2008ರ ಹೊತ್ತಿಗೆ ಭಾರತದ ಸಾಫ್ಟ್‌ವೇರ್‌ ಉದ್ಯಮ 140 ಬಿಲಿಯನ್‌ ಡಾಲರ್‌ ಆದಾಯ ತರಲಿದೆ ಎಂಬುದು ನಾಸ್‌ಕಾಮ್‌ ಲೆಕ್ಕಾಚಾರ. ಈ ಲೆಕ್ಕಾಚಾರ ಹೆಚ್ಚೂಕಮ್ಮಿ ನಿಜವಾಗಿ, 120 ಬಿಲಿಯನ್‌ ಡಾಲರ್‌ ಆದಾಯ ಬರುತ್ತದೆ ಎಂದಿಟ್ಟುಕೊಳ್ಳೋಣ. ಅದು ಉತ್ಪನ್ನ ವೆಚ್ಚ, 650 ಬಿಲಿಯನ್‌ ಡಾಲರ್‌ ಮೊತ್ತದ ಕೇವಲ ಶೇ.20ರಷ್ಟು ಮಾತ್ರ. ಹೂಡಿಕೆ ಗಮನಿಸಿದಲ್ಲಿ ಆದಾಯ ಏನೇನೂ ಸಾಲದು. ಹೀಗಾಗಿ ಮೂಲ ಸೌಕರ್ಯ ಹೆಚ್ಚಿಸಿ, ಇನ್ನಷ್ಟು ಆದಾಯ ಪಡೆಯೋದು ಉತ್ತಮ.

ಹೂಡಿಕೆಗೆ ಅಧಿಕಾರಶಾಹಿಗಳ ಎಡರು : ಅಮೆರಿಕೆಯ ಎಲ್‌ಎಲ್‌ಸಿಯ ಒಡಂಬಡಿಕೆದಾರ ಕಂಪನಿ ಹಾರ್ಬರ್‌ ವೆಸ್ಟ್‌ನ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಎಡ್ವರ್ಡ್‌ ಕೇನ್‌ ಅವರ ವಾದವೇ ಬೇರೆ- ‘ಭಾರತದಲ್ಲಿ ಹೆಜ್ಜೆಹೆಜ್ಜೆಗೂ ಅಧಿಕಾರಿಶಾಹಿಗಳ ಎಡರು. ಸರ್ಕಾರದ ಕಂಡಾಪಟ್ಟೆ ನೇಮಗಳ ತೊಡರು. ಸುಮಾರು 15 ವರ್ಷಗಳ ಕಾಲ ಹೆಚ್ಚು ಬಂಡವಾಳ ದಕ್ಕಿಸಿಕೊಳ್ಳುವವರಿಗೆ ವಿಧಿಸಲಾಗುತ್ತಿದ್ದ ಸುಂಕವೇ ಅಭಿವೃದ್ಧಿಗೆ ಮುಳುವಾಯಿತು. ಖಾಸಗಿ ಈಕ್ವಿಟಿ ಹೂಡಿಕೆಗೆ ಭಾರತ ಅರ್ಹ ದೇಶವಲ್ಲ ಎಂಬ ಭಾವನೆ ಬೆಳೆದಿತ್ತು.

ತಂತ್ರಜ್ಞಾನ ಕ್ಷೇತ್ರದಲ್ಲಿ ಬರೇ ಸಾಫ್ಟ್‌ವೇರ್‌ ಉತ್ಪನ್ನ ಮತ್ತು ಸೇವೆಗೆ ಮಾತ್ರ ಪ್ರಗತಿಗೆ ಒತ್ತು ಕೊಟ್ಟರೆ ಸಾಲದು. ದೂರವಾಣಿ, ಸಂಚಾರ- ಸಂಪರ್ಕ ಸೇವೆಗಳಲ್ಲಿ ಸಾಕಷ್ಟು ಸುಧಾರಣೆಯಾಗಬೇಕು. 100 ದೇಶಗಳ, ಸುಮಾರು 500 ಕಂಪನಿಗಳು ಇವತ್ತು ಭಾರತದ ಸಾಫ್ಟ್‌ವೇರ್‌ ಉತ್ಪನ್ನದ ಗ್ರಾಹಕರು ಅನ್ನೋದು ಹೆಮ್ಮೆಯ ವಿಷಯ. ಅಮೆರಿಕೆಯಲ್ಲಿ ಐಟಿ ಪರಿಣತರ ಕೊರತೆಯೂ ಈ ಆರೋಗ್ಯಕರ ಬೆಳವಣಿಗೆಗೆ ಕಾರಣವೂ ಹೌದು’.

ಖಾಸಗಿ ಇಕ್ವಿಟಿದಾರರಿಗೆ ಏಕರೂಪದ ಪರವಾನಗಿ ಕೊಡಿ : ‘ಐಟಿ ಬೆಳೆಯುತ್ತದೆ. ಗುಳ್ಳೆಯಂತೆ ಒಡೆಯೋದಿಲ್ಲ. ನಮ್ಮ ದೇಶದ ದೂರವಾಣಿ ವ್ಯವಸ್ಥೆಯಲ್ಲಿ ಕಳೆದೊಂದು ದಶಕದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಮುಂದೆ ಇದು ಇನ್ನಷ್ಟು ಸುಧಾರಣೆ ಕಾಣುವ ಭರವಸೆ ಇದೆ. ನಮ್ಮಲ್ಲಿ ನಿಯಂತ್ರಣ ಪ್ರಕ್ರಿಯೆಗಳನ್ನು ಸರಳೀಕರಿಸಬೇಕು. ತಾರತಮ್ಯ ಬಿಟ್ಟು ಖಾಸಗಿ ಸ್ಟಾಕ್‌ ಹೂಡಿಕೆದಾರರಿಗೆ ಏಕರೂಪದ ಪರವಾನಗಿ ವಿತರಿಸಬೇಕು. ಅವ್ಯವಹಾರ ನಡೆಯದಂತೆ ನಿಯಂತ್ರಣ ಹೇರಿ, ಉಳಿದ ಹರಟೆಗಳನ್ನು ಬದಿಗೊತ್ತಿದರೆ ಐಟಿ ಆಕಾಶದೆತ್ತರ ಬೆಳೆಯುತ್ತದೆ’ ಎಂದು ವಿದೇಶೀ ಸಂಚಾರಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಸಿಂಘಾಲ್‌ ಅಭಿಪ್ರಾಯ ಮಂಡಿಸಿದರು.

(ಯುಎನ್‌ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+