2400 ಕಿ.ಮೀ. ರಸ್ತೆಗಳು ಮೇಲ್ದರ್ಜೆಗೆ : ಧರ್ಮಸಿಂಗ್
ಬೀದರ್ : ಹೆದ್ದಾರಿಗಳೂ ಸೇರಿದಂತೆ ರಾಜ್ಯದ ಸುಮಾರು 2400 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶವನ್ನು ರಾಜ್ಯ ಸರಕಾರ ಹೊಂದಿದೆ ಎಂದು ಲೋಕೋಪಯೋಗಿ ಸಚಿವ ಧರ್ಮಸಿಂಗ್ ಇಲ್ಲಿ ತಿಳಿಸಿದ್ದಾರೆ.
ಈ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು 2400 ಕೋಟಿ ರುಪಾಯಿ ವೆಚ್ಚ ಆಗಲಿದ್ದು, ವಿಶ್ವಬ್ಯಾಂಕ್ ನೆರವು ನೀಡಲು ತನ್ನ ಸಮ್ಮತಿಯನ್ನು ಸೂಚಿಸಿದೆ ಎಂದು ಸಚಿವರು ಹೇಳಿದರು. ಈ ಯೋಜನೆಯಲ್ಲಿ ಬೀದರ್, ಗುಲ್ಬರ್ಗಾ, ಜೇವರ್ಗಿ ರಸ್ತೆಯೂ ಸೇರಿದ್ದು, ಇದು ಸುಮಾರು 190 ಕಿಲೋ ಮೀಟರ್‌ಗಳಾಗಲಿವೆ ಎಂದು ಅವರು ಹೇಳಿದರು.
ರಸ್ತೆಗಳ ನಿರ್ಮಾಣ ಕಾರ್ಯಕ್ಕಾಗಿ ಟೆಂಡರ್ ಕರೆಯಲಾಗಿದೆ. 250 ಕೋಟಿ ರುಪಾಯಿಗಳ ಅಂದಾಜು ಮಾಡಲಾಗಿದೆ ಎಂದು ಅವರು ಹೇಳಿದರು. ಬೀದರ್ - ಹತ್ತಿಗುಡೂರು ರಸ್ತೆಯ ನಿರ್ಮಾಣ ಮುಂದಿನ 5 ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. ಇತ್ತೀಚಿಗೆ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಹಾಳಾಗಿರುವ ರಸ್ತೆ, ಸೇತುವೆ ಮುಂತಾದವುಗಳ ಬಗ್ಗೆ ಅಧ್ಯಯನ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಕೂಡ ಹಾನಿಯ ಬಗ್ಗೆ ಸಂಪೂರ್ಣ ವಿವರ ನೀಡಲು ತಿಳಿಸಲಾಗಿದೆ ಎಂದೂ ಅವರು ಹೇಳಿದರು.











Click it and Unblock the Notifications