ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದೋ ನಾಳೆಯೋ ತುಂಬಲಿದೆ ಕೆ.ಆರ್‌.ಎಸ್‌.

By Staff
|
Google Oneindia Kannada News

ಬೆಂಗಳೂರು : ಬುಧವಾರ ಬೆಂಗಳೂರಿನಲ್ಲಿ ಬೆಳಗ್ಗೆನಿಂದಲೇ ಮೋಡ ಮುಸುಕಿತ್ತು, ಶಾಲೆಗೆ ಹೋಗುವ ಮಕ್ಕಳು, ಕಚೇರಿಗೆ ತೆರಳುವ ಬೆಂಗಳೂರಿಗರು ಛತ್ರಿ ಹಿಡಿದು, ರೈನ್‌ ಕೋಟ್‌ ಧರಿಸಿ ಮನೆ ಬಿಟ್ಟರು. ಆಗಲೇ ತುಂತುರು ಸಿಂಚನ. ಹತ್ತು ಗಂಟೆಯ ಹೊತ್ತಿಗೆ ಕೊಂಚ ಬಿಸಿಲು ಮೂಡಿತು. ಆದರೂ ಚಳಿಚಳಿ ಎನ್ನಿಸುತ್ತಿತ್ತು.

ಬೆಳಗ್ಗೆ ಕಚೇರಿಗೆ ಹೋಗುವಾಗ ಮಳೆಯಿಂದಾದ ಕಿರಿಕಿರಿಯ ಬಗ್ಗೆ ಮಾತಾಡುತ್ತಾ, ಹಾಳು ಮಳೆ ಎಂದ ಮಂದಿಗೆ ಬುದ್ಧಿ ಕಲಿಸುವಂತೆ ಮಳೆರಾಯ ಮತ್ತೆ ಸಂಜೆ 5 ಗಂಟೆಗೆ ತನ್ನ ಪ್ರತಾಪ ಮೆರೆದ. ಮೋಡಗಳನ್ನೆಲ್ಲಾ ಬೆಂಗಳೂರಿನ ಮೇಲೆ ಕೇಂದ್ರೀಕರಿಸುವಂತೆ ಮಾಡಿ ಒಂದೇ ಸಮನೆ ಸುರಿಮಳೆ ಸುರಿಸಿದ. ಸರಿ ಸುಮಾರು 40 ನಿಮಿಷಗಳ ಕಾಲ ಮಳೆಯ ಆರ್ಭಟ ಕಡಿಮೆಯೇ ಆಗಲಿಲ್ಲ.

ಮನೆಗೆ ಹೊರಟಿದ್ದ ಮಂದಿಯ ವೇದನೆ ನೋಡಲಾರದೆಯೋ ಏನೋ ಅಂತು ವರುಣ ಶಾಂತನಾದ. ಕೇವಲ ಬೆಂಗಳೂರಿನಲ್ಲಿ ಅಷ್ಟೇ ಅಲ್ಲ ರಾಜ್ಯದ ಎಲ್ಲೆಡೆಯೂ ಮಳೆ ಸುರಿಯುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಹೆಮ್ಮೆಯ ಕೃಷ್ಣರಾಜ ಸಾಗರ (ಕೆ.ಆರ್‌.ಎಸ್‌.) ಬಹುತೇಕ ತುಂಬಿಹೋಗಿದೆ. ಇಂದೋ ನಾಳೆಯೋ ಪೂರ್ಣಮಟ್ಟ ತಲುಪುವ ಅಪಾಯ ಇದ್ದು, ಹೊರ ಹರಿವು ಹೆಚ್ಚುವ ಕಾರಣ, ಎರಡೂ ದಂಡೆಗಳಲ್ಲಿರುವ ಜನರಿಗೆ ಪ್ರವಾಹದ ಮುನ್ಸೂಚನೆ ನೀಡಲಾಗಿದೆ.

ಕೆಆರ್‌ಎಸ್‌ನಲ್ಲಿ ನೀರಿಲ್ಲದೆ ಮುಳುಗಿದ್ದ ಕೃಷ್ಣ ದೇಗುಲವೇ ಮೇಲೆದ್ದಾಗ, ಹುಯ್ಯೋ ಹುಯ್ಯೋ ಮಳೆರಾಯ ಕನ್ನಂಬಾಡಿಗೆ ನೀರಿಲ್ಲ ಎಂದು ಹಾಡುತ್ತಿದ್ದವರೆಲ್ಲಾ, ಈಗ ಪ್ರವಾಹಕ್ಕೆ ಹೆದರಿ ನಿಲ್ಲೋ ನಿಲ್ಲೋ ಮಳೆರಾಯ ಎಂದು ಮಳೆರಾಯನ ಪ್ರಾರ್ಥಿಸುತ್ತಿದ್ದಾರೆ. ಕೆ.ಆರ್‌.ಎಸ್‌. ಪ್ರದೇಶದಲ್ಲಿ ನ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಜ್ಜಾಗಿರುವಂತೆ ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಏಕಾಏಕಿ ಮುಂಗಾರು ತೀವ್ರಗೊಂಡಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಮಡಿಕೇರಿಯಲ್ಲಿ ಅತಿಹೆಚ್ಚು ಎಂದರೆ 14 ಸೆಂಟಿ ಮೀಟರ್‌ ಮಳೆ ಬಿದ್ದಿದೆ. ಶೃಂಗೇರಿಯಲ್ಲಿ 11, ಕಮ್ಮರಡಿಯಲ್ಲಿ 9 ಹೀಗೆ ಕರ್ನಾಟಕದ ಎಲ್ಲ ಊರುಗಳ ಹೆಸರನ್ನೂ ಇಲ್ಲಿ ಬರೆಯಬೇಕಾಗುತ್ತದೆ ಎನ್ನುವಷ್ಟು ಮಳೆಯಾಗಿದೆ.

ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಮಳೆ ಬೀಳಲಿದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇದ್ದು, ಆಗಾಗ ಮಳೆ ಸುರಿಯುತ್ತಲೇ ಇರುತ್ತದೆ. ರಾಜಧಾನಿಯ ನಿವಾಸಿಗಳೇ ಮೂಲೆ ಸೇರಿದ ಕೊಡೆಗಳ ಧೂಳು ಕೊಡವಿ ಸಿದ್ಧವಾಗಿಟ್ಟುಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X