ಲಕ್ಷಕ್ಕೂ ಹೆಚ್ಚು ಭಕ್ತರಿಂದ ಉಡುಪಿ ಕೃಷ್ಣ ದರ್ಶನ
ನಮ್ಮ ಪ್ರತಿನಿಧಿಯಿಂದ
ಉಡುಪಿ : ಇಲ್ಲಿನ ಪ್ರಸಿದ್ಧ ಶ್ರೀ ಕೃಷ್ಣ ದೇಗುಲಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳವಾರ ಭೇಟಿ ಕೊಟ್ಟು ಕೃಷ್ಣ ದರ್ಶನ ಪಡೆದರು. ಈ ವರ್ಷದಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ದಾಖಲೆ ಭಕ್ತರ ಸಂಖ್ಯೆ ಇದಾಗಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಮುಂಜಾನೆಯೇ ಉದ್ದನೆಯ ಸಾಲುಗಳಲ್ಲಿ ಸರತಿ ನಿಂತ ಭಕ್ತರು ಕೃಷ್ಣ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದರು. ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯ ದೇಗುಲದಲ್ಲಿ ಮೂರು ದಿನಗಳ ವಿಶೇಷ ಪೂಜಾ ಕಾರ್ಯಗಳ ಹಮ್ಮಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಕೃಷ್ಣ ಪಥದಲ್ಲಿ ನಡೆಯಲು ಸ್ವಾಮೀಜಿ ಕರೆ : ಅಹಿಂಸಾ ಮಾರ್ಗದಲ್ಲಿ ನಡೆಯುವಂತೆ ಹಾಗೂ ಕೃಷ್ಣ ನ ಸಂದೇಶಗಳನ್ನು ಅನುಸರಿಸುವಂತೆ ವಿಶ್ವೇಶ ತೀರ್ಥ ಸ್ವಾಮೀಜಿ ತಮ್ಮ ಕೃಷ್ಣ ಜನ್ಮಾಷ್ಟಮಿ ಸಂದೇಶದಲ್ಲಿ ಜನತೆಗೆ ತಿಳಿಸಿದ್ದಾರೆ. ಮನುಷ್ಯ ಸ್ವಾರ್ಥಿಯಾಗುತ್ತಿರುವ ಹಾಗೂ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿರುವ ಸ್ವಾಮೀಜಿ, ಗೀತೆಯಲ್ಲಿ ಆಚಾರ್ಯ ಬೋಧಿಸಿರುವ ಕರ್ಮ ಸಿದ್ಧಾಂತವನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ.
ಮುಖಪುಟ / ಊರು ಕೇರಿ












Click it and Unblock the Notifications