ಮತ್ತೆ ಜೀವ ಪಡೆದ ಮಹಾರಾಷ್ಟ್ರ - ಕರ್ನಾಟಕ ಗಡಿ ವಿವಾದ
ಬೆಂಗಳೂರು : ರಾಜ್‌ಕುಮಾರ್ ಅಪಹರಣ, ಕಾವೇರಿ ವಿವಾದವೂ ಸೇರಿದಂತೆ ವೀರಪ್ಪನ್‌ನ ಅತಿರೇಕದ ಬೇಡಿಕೆಗಳು, ಕೃಷ್ಣ ನದಿ ನೀರಿನ ಹಂಚಿಕೆ ವಿವಾದ, ಹೈಕೋರ್ಟ್ ಪೀಠ ಸಮಸ್ಯೆಯೇ ಮುಂತಾದ ಹತ್ತು ಹಲವು ತಾಪತ್ರಯಗಳಿಂದ ತಲೆಕೆಡಿಸಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಕೃಷ್ಣರ ನಿದ್ದೆಗೆಡಿಸುವ ಮತ್ತೊಂದು ವಿವಾದ ಏಕಾಏಕಿ ಸುದ್ದಿಯಾಗಿದೆ.
ಮಹಾಜನ್ ವರದಿ ಜಾರಿಗೆ ಬರಲಿ ಎಂದು ಕರ್ನಾಟಕ ದಶಕಗಳಿಂದಲೇ ಕೂಗುತ್ತಿರುವಾಗ, ಈಗ ಇದ್ದಕ್ಕಿದ್ದಂತೆ ಮಹಾರಾಷ್ಟ್ರ ಸರಕಾರ ಗಡಿ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿಯವರಲ್ಲಿ ಮೊರೆ ಇಟ್ಟಿದೆ. ದಶಕಗಳಿಂದ ಬಗೆಹರಿಯದೆ ಉಳಿದಿರುವ ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದವನ್ನು ಇತ್ಯರ್ಥಪಡಿಸಲು ಮಧ್ಯಸ್ಥಿಕೆ ವಹಿಸುವಂತೆ ಮಹಾರಾಷ್ಟ್ರ ಸರಕಾರದ ನಿಯೋಗ ಮಂಗಳವಾರ ಪ್ರಧಾನಿಯವರಲ್ಲಿ ಮನವಿ ಮಾಡಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್, ಜಗನ್ ಬುಜಬಲ್, ಶರದ್ ಪವಾರ್ ಮಂಗಳವಾರ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿ ನಿರ್ದಿಷ್ಟ ಕಾಲಮಿತಿಯಾಳಗೆ ಈ ಸಮಸ್ಯೆಗೆ ಪರಿಹಾರ ದೊರಕಿಸುವಂತೆ ಕೋರಿದ್ದರೆ, ಗಡಿ ವಿವಾದ ಇತ್ಯರ್ಥವಾಗುವವರೆಗೆ ವಿವಾದಿತ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವಂತೆ ಶಿವಸೇನೆ ಪಟ್ಟು ಹಿಡಿದಿದೆ.
ಅತಿ ಸೂಕ್ಷ್ಮವಾದ ಈ ವಿವಾದವನ್ನು ಒಮ್ಮಿಂದೊಮ್ಮೆಲೆ ಬಗೆಹರಿಸುವುದು ಕಷ್ಟ ಸಾಧ್ಯ ಎಂದು ಅರಿತಿರುವ ಪ್ರಧಾನಿಯವರು ಕರ್ನಾಟಕ ಮುಖ್ಯಮಂತ್ರಿಯಾಂದಿಗೆ ಚರ್ಚಿಸಿ ಇನ್ನೊಂದು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಮಧ್ಯೆ ಗಡಿ ವಿವಾದ ಬಗೆಹರಿಸಲು ಪ್ರಧಾನಿಯವರ ಮಧ್ಯಸ್ಥಿಕೆಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು, ಆನಂತರ ಕರ್ನಾಟಕದೊಂದಿಗೆ ನೇರ ಮಾತುಕತೆ ನಡೆಸಲಾಗುವುದು ,ಒಂದೊಮ್ಮೆ ಅದೂ ವಿಫಲವಾದರೆ ಕೊನೆಯದಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲಾಗುವುದು ಎಂದು ದೇಶ್‌ಮುಖ್ ತಿಳಿಸಿದ್ದಾರೆ. ಅಂದರೆ ಮತ್ತೊಮ್ಮೆ ಗಡಿ ವಿವಾದ ಗರಿ ಬಿಚ್ಚಿಕೊಳ್ಳಲಿದೆ ಎನ್ನುವುದು ಈ ಮಾತುಗಳಿಂದ ಸ್ಪಷ್ಟ.












Click it and Unblock the Notifications