ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಡುತ್ತಾ ಹಾಡುತ್ತಾ ಅಕ್ಷರ-ಸ್ಥರಾಗಿ..

By Staff
|
Google Oneindia Kannada News

ಅಹಮದಾಬಾದ್‌ : ನಿಮ್ಮ ಇಷ್ಟದ ಸಿನಿಮಾ ನಾಯಕ ಅಥವಾ ನಾಯಕಿ ಜೊತೆ ಹಾಡಿ. ಹಾಡುತ್ತಾ, ಹಾಡುತ್ತಾ ಅಕ್ಷರಗಳ ಮೇಲಿನ ಹಿಡಿತ ಹೆಚ್ಚಿಸಿಕೊಳ್ಳಿ. ಇದು ಅನಕ್ಷರರಿಗಾಗಿ ಸಂಶೋಧಕರೊಬ್ಬರು ಮಾಡಿರುವ ಸಲಹೆ.

ಅನಕ್ಷರ-ಸ್ಥರನ್ನು ಅಕ್ಷರ-ಸ್ಥರನ್ನಾಗಿಸುವ ನಿಟ್ಟಿನಲ್ಲಿ ಇಂಥ ಹೊಸ ವಿಧಾನವೊಂದನ್ನು ರೂಪಿಸಿರುವ ಸಂಶೋಧಕ ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಬ್ರಿಜ್‌ ಕೊಥಾರಿ ಹಾಡು-ಕಲಿ ವಿಧಾನವನ್ನು ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಇದಕ್ಕಾಗಿ ವರ್ಷಕ್ಕೆ ವ್ಯಕ್ತಿಯಾಬ್ಬನಿಗೆ ಕೇವಲ 25 ಪೈಸೆ ವೆಚ್ಚ ತಗಲಲಿದೆ. ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ರಾಷ್ಟ್ರಾದ್ಯಂತ ಇರುವ ಲಕ್ಷಾಂತರ ನಿರಕ್ಷರಿಗಳು ಸುಲಭವಾಗಿ ಅಕ್ಷರಸ್ಥರಾಗುವರು ಎಂದು ಬ್ರಿಜ್‌ ಕೊಥಾರಿ ಹೇಳುತ್ತಾರೆ.

ಈ ಸಂಬಂಧ ಕಳೆದ ಮೂರು ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿರುವ ಕೊಥಾರಿ ಅವರು ತಮ್ಮ ಸಂಶೋಧನೆಯ ಶಿಕ್ಷಣ ಮಾದರಿಯನ್ನು ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಕೊಥಾರಿ ಅವರ ಹೊಸ ಮಾದರಿ ಅನೇಕ ಶಿಕ್ಷಣ ತಜ್ಞರ ಗಮನಸೆಳೆದಿದೆ.

ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿರುವ ಅನಕ್ಷರತೆ ವಿರುದ್ಧ ಹೋರಾಡುವುದು ಅಷ್ಟು ಸುಲಭದ ಕೆಲಸವಲ್ಲ. ಏಳು ವರ್ಷ ದಾಟಿದ ಸುಮಾರು 30 ಕೋಟಿ ಅನಕ್ಷರಸ್ಥರಿದ್ದು, ಸುಮಾರು 57 ಕೋಟಿ ಹೊಸ ಅಕ್ಷರಸ್ಥರಿದ್ದಾರೆ ಅವರಲ್ಲಿ ಅನೇಕರಿಗೆ ಪತ್ರಿಕೆಗಳನ್ನು ಓದಲೂ ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈ ಹೊಸ ಮಾ-ದರಿಯಿಂದ ಪರಿಣಾಮಕಾರಿ ಫಲಿತಾಂಶ ಸಿಗುವುದು ಖಚಿತ ಎಂದು ಅವರು ಹೇಳುತ್ತಾರೆ.

ಕೊಥಾರಿ ಅವರ ಶಿಕ್ಷಣ ಮಾ-ದರಿಯು ಆಯಾ ಭಾಷೆಗಳ ಉಪಶೀರ್ಷಿಕೆಯ ತತ್ವವನ್ನು ಒಳಗೊಂಡಿದೆ. ಜನಪ್ರಿಯ ಸಿನಿಮಾ ಹಾಡುಗಳಿಗೆ ಆಯಾ ಭಾಷೆಯಲ್ಲಿ ಉಪಶೀರ್ಷಿಕೆ ಕೊಡುವ ಮೂಲಕ ನಿರಕ್ಷರಿಗಳ ಮೇಲೆ ಪರಿಣಾಮಕಾರಿ ಪ್ರಭಾವ ಬೀರಲು ಸಾಧ್ಯ. ಅನಕ್ಷರ-ಸ್ಥರಿಗೆ ಇದರಿಂದ ಹಾಡಿನ ಜೊತೆಗೆ ತಾವೂ ಹಾಡುತ್ತಾ , ಅಕ್ಷರಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತದೆ. ಇದರಿಂದ ಅವರಿಗೆ ಓದಲು ಮಾನಸಿಕ ಸ್ಥೈರ್ಯ ಬರುತ್ತದೆ. ತಮ್ಮ ಅರಿವಿಗೆ ಬರದಂತೆಯೇ ಅವರು ಕಲಿಯುತ್ತಾ ಹೋಗುತ್ತಾರೆ. ಈ ಸಂಬಂಧ ಕೊಥಾರಿ ಅವರು ಮಾಡಿರುವ 3 ತಿಂಗಳ ಪ್ರಯೋಗ ಉತ್ತಮ ಬದಲಾವಣೆಗೆ ಕಾರಣವಾಗಿದೆ.

ಚಿತ್ರ ಗೀತೆಗಳಲ್ಲದೆ ಜಾನಪದ ಗೀತೆ, ಭಕ್ತಿಗೀತೆಗಳೂ ಸೇರಿದಂತೆ ಸಂಭಾಷಣೆಯನ್ನೂ ಸಂಶೋಧಿತ ಪ್ರಯೋಗಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಆದರೆ ಹಾಡುಗಳನ್ನು ಬಳಸಿಕೊಂಡರೆ ಅದು ಆಸಕ್ತಿಯನ್ನು ಹುಟ್ಟಿಹಾಕುತ್ತದೆ. ಹಾಡಿನ ಸಾಹಿತ್ಯವನ್ನು ಮತ್ತೆ ಮತ್ತೆ ಗುನುಗಿಕೊಳ್ಳುವುದರಿಂದ ಮನಸಿನಲ್ಲಿ ಉಳಿಯುತ್ತವೆ.

ಈ ಪ್ರಯೋಗವನ್ನು ಉಪಯೋಗಿಸಿರುವ ಏಕೈಕ ರಾಜ್ಯ ಗುಜರಾತ್‌ ಆಗಿದೆ. ಸೂಕ್ತ ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಪಾಠ ಮನದಟ್ಟು ಮಾಡಿಸಲೂ ಈ ಪ್ರಯೋಗ ಮಾಡಬಹುದೆಂದು ಕೊಥಾರಿ ತಿಳಿಸಿದ್ದಾರೆ.

ಶಿಕ್ಷಣದ ಬಗೆಗೆ ನೀತಿ ರೂಪಿಸುವ ಅನೇಕ ರಾಜಕಾರಣಿ, ಅಧಿಶಾಹಿಗೆ ಹೊಸ ಪ್ರಯೋಗಗಳ ಬಗ್ಗೆ ಮುಕ್ತ ಮನಸ್ಸಿಲ್ಲದಿರುವುದಕ್ಕೆ ವಿಷಾ-ದ ವ್ಯಕ್ತಪಡಿಸಿರುವ ಕೊಥಾರಿ ಈ ಬಗ್ಗೆ ಗಮನಹರಿಸಬೇಕೆಂದಿದ್ದಾರೆ.

ಉಪಶೀರ್ಷಿಕೆ ಶಿಕ್ಷಣ ಮಾದರಿ ಬಗ್ಗೆ ಸಕಾರಾತ್ಮಕ ಧೋರಣೆ ವ್ಯಕ್ತಪಡಿಸಿರುವ ಇಸ್ರೋದ ಬಿ. ಎಸ್‌. ಭಾಟಿಯಾ ಅವರು ಉಪಶೀರ್ಷಿಕೆ ವಿಧಾನ ಅನುಸರಿಸಲು ತಾಂತ್ರಿಕ ತೊಡಕೇನೂ ಇಲ್ಲ. ಈ ಹಿಂದೆ ದೂರದರ್ಶನದಲ್ಲಿ ಭಾನುವಾರ ಸಂಜೆ ಪ್ರಸಾರವಾಗುತ್ತಿದ್ದ ಪ್ರಾದೇಶಿಕ ಚಿತ್ರಗಳ ಪ್ರಸಾರ ಕಾಲಕ್ಕೆ ಆಯ್ದ 6 ಭಾಷೆಗಳಲ್ಲಿ ಏಕಕಾಲಕ್ಕೆ ಉಪಶೀರ್ಷಿಕೆಯನ್ನು ಈಗಾಗಲೇ ನೀಡಿದೆ ಈಗಿನ ತಾಂ-ತ್ರಿಕತೆ ಉಪಯೋಗಿಸಿಕೊಂಡು ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಉಪಶೀರ್ಷಿಕೆ ನೀಡುವತ್ತ ಯೋಚಿಸಬಹುದಾಗಿದೆ.

ರಾಷ್ಟ್ರೀಯ ಸಾಕ್ಷರತಾ ಮಿಷನ್‌ ಬೇರೆ ವಿಧಾನದಲ್ಲಿ ಅಕ್ಷರ-ಸ್ಥರನ್ನಾಗಿಸುವ ಕೆಲಸದಲ್ಲಿ ಸ್ವಲ್ಪ ಯಶಸ್ಸು ಕಂಡಿದ್ದರೂ ಪೂರ್ಣ ಸಫಲವಾಗಿಲ್ಲ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದೇಶದ ಶೇಕಡಾ 40ರಷ್ಟು ಹೊಸ ಅಕ್ಷರಸ್ಥರು ಮತ್ತೆ ನಿರಕ್ಷರಕುಕ್ಷಿಗಳಾಗಲಿದ್ದಾರೆ ಎಂದು ರಾಷ್ಟ್ರೀಯ ಸಾಕ್ಷರತಾ ಮಿಷನ್‌ 1994ರ ತಜ್ಞರ ವರದಿ ಒಪ್ಪಿಕೊಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X