ರಾಜ್‌ ಬಿಡುಗಡೆಯ ಶುಭ ಸಂದೇಶ ಇಂದೇ ಬರಲಿದೆ: ಕರುಣಾನಿಧಿ

ಚೆನ್ನೈ : ರಾಜ್‌ಕುಮಾರ್‌ ಅವರನ್ನು ಅಪಹರಿಸಿ ತನ್ನ ಬೇಡಿಕೆಗಳ ಈಡೇರಿಕೆಗೆ ಷರತ್ತು ಹಾಕಿರುವ ವೀರಪ್ಪನ್‌ ಜತೆ ಎರಡನೇ ಸುತ್ತಿನ ಮಾತುಕತೆ ನಡೆಸುತ್ತಿರುವ ನಕ್ಕೀರನ್‌ ಗೋಪಾಲ್‌ ಅವರ ಮಾತುಕತೆಗಳು ಪ್ರಗತಿಯಲ್ಲಿದ್ದು, ಬುಧವಾರ ಸಂಜೆ ಅಥವಾ ರಾತ್ರಿಯ ವೇಳೆಗೆ ರಾಜ್‌ಕುಮಾರ್‌ ಹಾಗೂ ಮತ್ತಿತರ ಮೂವರ ಬಿಡುಗಡೆಯ ಶುಭ ಸಂದೇಶ ಬರಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು, ಮಾಧ್ಯಮಗಳಲ್ಲಿ ಬರುತ್ತಿರುವ ವದಂತಿಗಳ ಬಗ್ಗೆ ಕಿಡಿ ಕಾರಿದರು. ಗೋಪಾಲ್‌ ಹಾಗೂ ವೀರಪ್ಪನ್‌ ನಡುವಿನ ಮಾತುಕತೆ ಸೌಹಾರ್ದಯುತವಾಗಿದೆ. ಆಕಸ್ಮಾತ್‌ ರಾಜ್‌ಕುಮಾರ್‌ ಅವರನ್ನು ಕಾಡಿನಲ್ಲಿಯೇ ಬಿಟ್ಟು ಗೋಪಾಲ್‌ ಒಬ್ಬರೇ ಈ ಬಾರಿ ಹಿಂತಿರುಗಿದರೆ, ಮೂರನೇ ಸುತ್ತಿನ ಮಾತುಕತೆಗೆ ಅವರನ್ನೇ ಕಾಡಿಗೆ ಕಳುಹಿಸಲಾಗುವುದು. ಗೋಪಾಲ್‌ ಬಂದನಂತರ ಮಾತ್ರ ಮಾತುಕತೆಯ ವಿವರ ತಿಳಿಯುತ್ತದೆ ಎಂದು ಅವರು ಹೇಳಿದರು.

ರಾಜ್‌ಕುಮಾರ್‌ ಅವರ ಲಕ್ಷ ಅಭಿಮಾನಿಗಳು ಕಾಡಿಗೆ ನುಗ್ಗುತ್ತಾರೆ ಎಂಬ ಪ್ರಚೋದನಕಾರಿ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಪತ್ರಿಕೆಗಳು ಸಮಸ್ಯೆಯನ್ನು ಜಟಿಲಗೊಳಿಸುತ್ತಿವೆ ಎಂದೂ ಕರುಣಾನಿಧಿ ದೂರಿದರು. ಈ ಬಗ್ಗೆ ತಾವು ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರೊಂದಿಗೆ ಸತತ ಸಂಪರ್ಕ ಇಟ್ಟುಕೊಂಡಿರುವುದಾಗಿಯೂ ಹೇಳಿದರು.

ಉಗ್ರರ ಬಿಡುಗಡೆ - ಪರಿಶೀಲನೆ : ವೀರಪ್ಪನ್‌ ಬೇಡಿಕೆಗಳಲ್ಲಿ ಒಂದಾದ ಐವರು ಶಂಕಿತ ಉಗ್ರಗಾಮಿಗಳ ಬಿಡುಗಡೆ ಸಂಬಂಧ ಎಲ್ಲ ಮೊಕದ್ದಮೆಗಳನ್ನೂ ಹಿಂದಕ್ಕೆ ಪಡೆಯಬೇಕೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬುಧವಾರ ಸಂಜೆ ಅಥವಾ ರಾತ್ರಿ ಗೋಪಾಲ್‌ರಿಂದ ಬರುವ ಸಂದೇಶದ ತರುವಾಯ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ನಿರ್ಣಾಯಕ ಹಂತ ತಲುಪಿದೆ - ಕೃಷ್ಣ : ರಾಜ್‌ಕುಮಾರ್‌ ಅವರ ಬಿಡುಗಡೆ ಪ್ರಕ್ರಿಯೆ ಈಗ ನಿರ್ಣಾಯಕ ಹಂತ ತಲುಪಿದೆ, ತಾವು ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಬುಧವಾರ ಸಂಜೆ ತಿಳಿಸಿದ್ದಾರೆ.

ಆದರೆ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ ಅವರು, ಕರುಣಾನಿಧಿ ಅವರಿಗೆ ಗೋಪಾಲ್‌ರಿಂದ ಬುಧವಾರ ಸಂಜೆ ಅಥವಾ ರಾತ್ರಿ ಶುಭ ಸಂದೇಶ ಬರಲಿದೆ ಎಂದು ತಿಳಿಸಿದ್ದಾರೆ.

ಮಂಡ್ಯ ಬಂದ್‌ : ರಾಜ್‌ ಅವರ ಬಿಡುಗಡೆಯ ಯಾವುದೇ ಸೂಚನೆಗಳು ಈವರೆಗೆ ಬಾರದಿರುವ ಬಗ್ಗೆ ಆಕ್ರೋಶಗೊಂಡಿರುವ ಮಂಡ್ಯದ ಅಭಿಮಾನಿಗಳು ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಕರೆಯ ಮೇರೆಗೆ ಬುಧವಾರ ಮಂಡ್ಯ ಬಂದ್‌ ಆಚರಿಸಿದರು. ಮುಂಜಾಗರೂಕತಾ ಕ್ರಮವಾಗಿ ಸರಕಾರ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಬಂದ್‌ ಪೂರ್ಣ ಯಶಸ್ವಿಯಾದಂತಿತ್ತು. ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಕ್ಷೀಣಿಸಿತ್ತು, ಅಂಗಡಿ - ಮುಂಗಟ್ಟುಗಳು ಬಂದ್‌ ಕರೆಗೆ ಸ್ಪಂದಿಸಿದವು. ವಾಹನ ಸಂಚಾರ ಮಾತ್ರ ಯಾವುದೇ ಅಡೆತಡೆಯಿಲ್ಲದೆ ಸಾಗಿತ್ತು. ಬಂದ್‌ ಶಾಂತಿಯುತವಾಗಿ ನಡೆದಿದೆ.

ಕಾವೇರಿ ಗಲಭೆ ವಿಚಾರಣೆ: ಕಾವೇರಿ ಗಲಭೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂಬ ವೀರಪ್ಪನ್‌ ಬೇಡಿಕೆಗೆ ಈಗ ಚಾಲನೆ ದೊರೆತಿದೆ. 1991ರಲ್ಲಿ ನಡೆದ ಕಾವೇರಿ ಗಲಭೆಯ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ರಚಿಸಲಾಗಿರುವ ನ್ಯಾಯಮೂರ್ತಿ ವೆಂಕಟೇಶ್‌ ನೇತೃತ್ವದ ಪ್ರಾಧಿಕಾರ ವಿಚಾರಣೆ ಆರಂಭಿಸಿದೆ. ಮೈಸೂರು, ಬೆಂಗಳೂರು, ಚಾಮರಾಜನಗರ, ಮಂಡ್ಯಗಳಲ್ಲೂ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+