ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರೀಕನಿಲ್ಲದ ಶೂನ್ಯತೆ ಇರುತ್ತದಲ್ಲ ಅದು ತುಂಬಲಾರದ್ದು

By Super
|
Google Oneindia Kannada News

ಇಡೀ ಜಗತ್ತು ಸಂತೋಷವಾಗಿರಲಿ. ಸಾವಿನ ಮನೆಗೆ ಹತ್ತಿರವಾಗುತ್ತಾ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಮನುಷ್ಯ ಇಂಥದ್ದೊಂದು ಯೋಚನೆಯನ್ನು ಮಾಡುತ್ತಾನೆಂದು ನಂಬುವುದು ಕಷ್ಟ . ಜಗವೆಲ್ಲ ನಗುತಿರಲಿ, ಜಗದಳವು ನನಗಿರಲಿ ಎಂದು ನಂಬುವ, ನಡೆಯುವ ಅಪರೂಪದೆದೆಯವರಿಗೆ ಮಾತ್ರ ಇದು ಸಾಧ್ಯವೇನೋ. ನಿಜಲಿಂಗಪ್ಪ ಅಂಥವರು. ಈಗವರ ಹೃದಯ ದನಿಸುತ್ತಿಲ್ಲ . ಇರುವುದು ನೆನಪು ಮಿಡಿಯುವ ಸದ್ದುಗಳು, ಅನುರಣನಗಳು ಮಾತ್ರ.

ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಆರೋಗ್ಯ ವಿಚಾರಿಸಿ ಬರೆದ ಪತ್ರಕ್ಕೆ ಬೌರಿಂ-ಗ್‌ ಮತ್ತು ಲೇಡಿ ಕರ್ಜ-ನ್‌ ಆಸ್ಪ-ತ್ರೆ-ಯ ಹಾಸಿ-ಗೆ-ಯ-ಲ್ಲಿ- -ದ್ದ ನಿಜಲಿಂಗಪ್ಪನವರೇ ಸ್ವತಃ ಉಕ್ತ ಲೇಖನ ನೀಡಿ ಉತ್ತರ ಬರೆಸಿದ್ದರು. ನಿಮಗೆ ಒಳ್ಳೆಯದಾಗಲಿ, ಇಡೀ ಜಗತ್ತು ಸಂತೋಷವಾಗಿರಲಿ ಎಂದು ಹಾರೈಸಿದ್ದರು. ಕ್ಷಣ ಎಚ್ಚರ, ಕ್ಷಣ ಮಂಪರಿನಲ್ಲಿದ್ದ ಹಿರಿಯ ಜೀವಕ್ಕೆ ಎಷ್ಟೊಂದು ಜೀವನ ಪ್ರೀತಿ. ಇದೇ ನಿಜಲಿಂಗಪ್ಪ ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಚಿತ್ರದುರ್ಗದ ತಮ್ಮ ನಿವಾಸಕ್ಕೆ ಬಂದು ಆಶೀರ್ವಾದ ಕೋರಿದ ಸೋನಿಯಾರಿಗೆ ಸಂವಿಧಾನದ ಪ್ರತಿ ನೀಡಿ ಅರ್ಥಪೂರ್ಣವಾಗಿ ಹಾರೈಸಿದ್ದರು.

ಕೊಡ ತುಳುಕಲಿಲ್ಲ : ಇನ್ನೆರಡೇ ವಸಂತಗಳನ್ನು ಕಂಡಿದ್ದರೆ ಅವರಿಗೆ ನೂರು ತುಂಬುತ್ತಿತ್ತು . ನಿಜಲಿಂಗಪ್ಪ ಶತಾಯುಷಿಗಳಾಗಲಿಲ್ಲ . ನಿಜ . ಆದರೆ, ಯಾವೊಬ್ಬ ವ್ಯಕ್ತಿಯ ಬದುಕೂ ಕೇವಲ ನೂರು ವರ್ಷಗಳ ಬಾಳುವೆಯಿಂದ ಪರಿಪೂರ್ಣವಾಗುವುದಿಲ್ಲ . ಇಷ್ಟಕ್ಕೂ ವ್ಯಕ್ತಿ ನಮಗೆ ಮುಖ್ಯನಾಗುವುದು ಅವರ ನುಡಿ, ನಡೆಗಳ ಫಲಿತದಿಂದಲೇ ಹೊರತು ಬದುಕಿದ ವರ್ಷಗಳ ಸಂಖ್ಯೆಯಿಂದಲ್ಲ . ಈ ನಿಟ್ಟಿನಲ್ಲಿ ಬಳ್ಳಾರಿಯ ಬೆಂದ ನೆಲದಲ್ಲಿ ಚಿಗುರಿ ರಾಜ್ಯದ ಮುಖ್ಯಮಂತ್ರಿ ಪದದವರೆಗೆ ನಡೆದ ನಿಜಲಿಂಗಪ್ಪ ನಮ್ಮೆದುರು ಆಲದ ಮರವಾಗಿ ನಿಲ್ಲುತ್ತಾರೆ.

ಎಸ್ಸೆನ್‌ ಅರ್ಥಾತ್‌ ಅಜಾತ ಶತ್ರು : ರಾಜ್ಯದ ರಾಜಕೀಯದಲ್ಲಿ ಪ್ರಾಮಾಣಿಕರು, ಸಾಹಸಿಗಳು, ಸಜ್ಜನರು ಎಷ್ಟೋ ಮಂದಿ ಸಂದು ಹೋಗಿದ್ದಾರೆ. ಆದರೆ, ನಿಜಲಿಂಗಪ್ಪನವರಂತೆ ಬದುಕಿನ ಕೊನೆಯ ದಿನದವರೆಗೂ (ಸಕ್ರಿಯ ರಾಜಕೀಯದಿಂದ ದೂರವಿದ್ದಾಗಲೂ. ರಾಜಕೀಯಕ್ಕೆ ನಮಸ್ಕಾರಕ್ಕೆ ಹೇಳಿದ್ದು 1971ರಲ್ಲಿ) ಎಲ್ಲಾ ಪಕ್ಷಗಳವರ ಗೌರವ ಉಳಿಸಿಕೊಂಡ ಮತ್ತೊಬ್ಬರಿಲ್ಲ . ಅವರು ಅಕ್ಷರಶಃ ಅಜಾತಶತ್ರು. ಹಿರಿಯ ರಾಜಕೀಯ ಮುತ್ಸದ್ಧಿ ಎನ್ನುವ ಗೌರವ ಅವರಿಗಷ್ಟೇ ಸೀಮಿತ, ಅವರಿಗಷ್ಟೇ ಅಲಂಕೃತ. ಏಕೀಕರಣದ ನಂತರ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಎನ್ನುವ ಹಿರಿಮೆ ಅವರದ್ದು .

ಎರಡು ಸಲ ರಾಜ್ಯದ ಮುಖ್ಯಮಂತ್ರಿಗಳಾಗಿ ಕೃಷಿ, ನೀರಾವರಿ, ವಿದ್ಯುತ್‌ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿಯ ತೊರೆ ಹರಿಸಿದರು. ಶರಾವತಿ ಜಲವಿದ್ಯುತ್‌ ಯೋಜನೆ ಬೆಳಕಾಗಿದ್ದು ಅವರ ಕಾಲದಲ್ಲೇ. ಹೆಬ್ಬಾಳದ ಕೃಷಿ ವಿವಿ, ಸಾಕ್ಷರತಾ ಆಂದೋಲನ ಅವರ ಕೂಸುಗಳೇ.

ಡಿಸೆಂಬರ್‌ 10, 1902 - -ಆ-ಗ-ಸ್ಟ್‌ 08, 2000 : ಸಿದ್ದವನಹಳ್ಳಿ ನಿಜಲಿಂಗಪ್ಪ ಹುಟ್ಟಿದ್ದು ಡಿಸೆಂಬರ್‌ 10, 1902, ಬಳ್ಳಾರಿ ಜಿಲ್ಲೆಯ ಹಲವಾಗಿಲು ಗ್ರಾಮದಲ್ಲಿ . ಅಪ್ಪ ಅಡಿವೆಪ್ಪ , ವರ್ತಕರು. ಮೂರು ವರ್ಷದ ಹುಡುಗನಾಗಿದ್ದಲೇ ನಿಧನರಾದರು. ಅನಿವಾರ್ಯವಾಗಿ ಬಾಲಕ ಎಸ್ಸೆನ್‌ ತಾಯಿ ನೀಲವ್ವ ಮಗನೊಂದಿಗೆ ದಾವಣಗೆರೆಯಲ್ಲಿದ್ದ ಸೋದರಿ ಸಾವಕ್ಕನ ಮನೆ ಸೇರಿದರು. ಸಾವಕ್ಕನ ಗಂಡ ರುದ್ರಪ್ಪನ ಊರು ಚಿತ್ರದುರ್ಗದ ಸಿದ್ದವನಹಳ್ಳಿ. ನಿಜಲಿಂಗಪ್ಪನವರಿಗೂ ಆ ಊರು ಜೊತೆಯಾಯಿತು, ಕೊನೆಯವರೆಗೂ.

ಮಾಧ್ಯಮಿಕ ಶಿಕ್ಷಣ ನಡೆದದ್ದು ದಾವಣಗೆರೆಯಲ್ಲಿ , ಪ್ರೌಢ ಶಿಕ್ಷಣ ಚಿತ್ರದುರ್ಗದಲ್ಲಿ . ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಬಿಎ ಪದವಿ (1924) ಪೂರೈಸಿದರು. ದಾವಣಗೆರೆಯ ಮುರಿಗೆಮ್ಮ 1927 ರಲ್ಲಿ ನಿಜಲಿಂಗಪ್ಪನವರ ಜೊತೆಯಾದರು.

ಕಾಲೇಜು ದಿನಗಳಿಂದಲೂ ಬಸವಣ್ಣ , ಶಂಕರ, ಗಾಂಧಿ ವಿಚಾರ ಧಾರೆಗಳತ್ತ ಎಸ್ಸೆನ್‌ಗೆ ಸೆಳೆತ. 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶನದಲ್ಲಿ ಗಾಂಧಿಯನ್ನು ಕಂಡದ್ದೇ ತಡ, ಸ್ವಾತಂತ್ರ್ಯ ಚಳವಳಿಗೆ ಧುಮುಕಲು ಹಿಂದುಮುಂದು ನೋಡದೆ ನಿಶ್ಚಯಿಸಿದರು. ಕ್ವಿಟ್‌ ಇಂಡಿಯಾ ಚಳವಳಿ (1942) ಯಲ್ಲಿ ಭಾಗವಹಿಸಿ ಸೆರೆಮನೆಯನ್ನೂ ಕಂಡರು. ಮೈಸೂರು ಕಾಂಗ್ರೆಸ್‌ ಸ್ಥಾಪಿಸಿ, ನಾಡಿನಾದ್ಯಂತ ಸಂಚರಿಸಿದರು. ಸಂಚರಿಸದಲ್ಲೆಲ್ಲಾ ಸ್ವಾತಂತ್ರ್ಯ, ಸಮಾನತೆ, ಸಹೃದಯತೆಗಳ ಬೀಜಗಳನ್ನೂರಲು ಪ್ರಯತ್ನಿಸಿದರು.

ಲೋಕಸಭಾ ಸದಸ್ಯರಾಗಿ (1952-1956), ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾಗಿ (1968) ಎಸ್ಸೆನ್‌ ದುಡಿದಿದ್ದಾರೆ. ನೆಹರೂ, ಸರ್ದಾರ್‌ ಪಟೇಲ್‌, ಕಾಮರಾಜ್‌ ,ಎಸ್‌. ಕೆ. ಪಾಟೀಲ್‌ ಮುಂತಾದವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ರಾಜ್ಯದ ಮುಖ್ಯಮಂತ್ರಿಗಳಾಗಿ ಅವರದ್ದು ಎದ್ದು ಕಾಣುವ ಸಾಧನೆ. ಉನ್ನತ ಅಧಿಕಾರಪದಗಳನ್ನು ಕಂಡರೂ, ಅಧಿಕಾರಕ್ಕಾಗಿ ವಿಚಾರಗಳನ್ನು ಎಸ್ಸೆನ್‌ ಯಾವತ್ತೂ ಬಿಕರಿ ಮಾಡಿಕೊಳ್ಳಲಿಲ್ಲ . ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧವೇ ಸೊಲ್ಲೆತ್ತುವ ದಿಟ್ಟತನ ತೋರಿದರು.

ಸಂದ ಗೌರವಗಳು : ಧಾರವಾಡದ ಕರ್ನಾಟಕ ವಿವಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿ ಗೌರವಿಸಿದರೆ, ಹಂಪೆಯ ಕನ್ನಡ ವಿವಿ ನಾಡೋಜ ಗೌರವ ಪ್ರದಾನ ಮಾಡಿ ಹೆಮ್ಮೆ ಪಟ್ಟುಕೊಂಡಿತು. 1999 ರಲ್ಲಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು .

ಎಸ್ಸೆನ್‌ ನಾಡು ಕಂಡ ಚೇತನಗಳಲ್ಲೊಬ್ಬರು. ಅಂದಮಾತ್ರಕ್ಕೆ ಅವರು ಯಾವುದೂ ಕಲೆಗಳಿಲ್ಲ ದ ಚಂದ್ರ ಅಂತೇನೂ ಅಲ್ಲ . ಎಷ್ಟು ಮುಂಗಾರುಗಳು ಸಂದುಹೋದರೂ, ಶರಾವತಿ ಕರ್ಮಕಾಂಡದ ಕಪ್ಪು ಅವರಿಂದ ದೂರಾಗಲೇ ಇಲ್ಲ . ಕರ್ಮಕಾಂಡ ಎನ್ನುವ ಪದ ಹುಟ್ಟಿದ್ದೇ ಅವರ ಕಾಲದಲ್ಲಿ ಎನ್ನುವವರೂ ಉಂಟು. ಅಂತೆಯೇ ಮನೆಗೆ ಮಾರಿ, ಊರಿಗೆ ಉಪಕಾರಿ ಎನ್ನುವ ಆರೋಪಗಳೂ ಅವರ ಮೇಲುಂಟು. ಉತ್ತರ ಕರ್ನಾಟಕದ ಸಾವಿರಾರು ಎಕರೆ ಭೂಮಿಗೆ ನೀರುಣಿಸಲು ಕಾರಣರಾದರೂ, ನೆಲೆಸಿದ ಚಿತ್ರದುರ್ಗಕ್ಕೆ ಕುಡಿಯುವ ನೀರನ್ನೊದಗಿಸಲು ವಿಫಲರಾದರು. ಅಧಿಕಾರದ ದಿನಗಳಲ್ಲಿ ಸುಮ್ಮನಿದ್ದು , ನಂತರದ ದಿನಗಳಲ್ಲಿ ಊರಿನ ಬಾಯಾರಿಕೆ ತಣಿಸಲು ಪ್ರಯತ್ನಿಸಿದರೂ, ಯಾರೂ ಅವರ ಕೂಗಿಗೆ ಓ ಎನ್ನಲಿಲ್ಲ . ಪ್ರಸ್ತುತ ಮುಂಗಾರಲ್ಲೂ ಜಿಲ್ಲೆಯ 5 ತಾಲ್ಲೂಕುಗಳು ಬಾಯ್ತೆರೆದೇ ಕಾಯುತ್ತಿವೆ. ವಾಣಿವಿಲಾಸ ಸಾಗರಕ್ಕಿನ್ನೂ ಚಿತ್ರದುರ್ಗ ಮುಟ್ಟಲು ಸಾಧ್ಯವಾಗಿಲ್ಲ . ಈ ಕೊರಗ ಉಳಿಸಿಕೊಂಡೇ ಹಿರಿಯ ಜೀವ ನಮ್ಮಿಂದ ದೂರಾಗಿದೆ. ಮನೆಯ ಹಿರೀಕ ಇಲ್ಲವಾದ ಸಂಕಟ ನಾಡಿನದಾಗಿದೆ. ಮನೆಯಲ್ಲಿ ಬಾಳುವೆಯೇನೂ ನಿಲ್ಲುವುದಿಲ್ಲವಾದರೂ, ಹಿರೀಕನಿಲ್ಲದ ಶೂನ್ಯತೆ ಇರುತ್ತದಲ್ಲ , ಅದು ತುಂಬಲಾರದ್ದು.

English summary
True gandhian and an untiring statesman
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X