ವೀರಪ್ಪನ್ - ಗೋಪಾಲ್ ಮಾತುಕತೆಯ ಸಾರಾಂಶ !!!
ಒಂದು ವಾರ ಕಾಲ ವೀರಪ್ಪನ್ ಜತೆ ಇದ್ದು ರಾಜ್ ಅಪ ಹರಣದ ಬಗ್ಗೆ ಅವನ ಒಲವು ನಿಲವುಗಳನ್ನು ಚರ್ಚಿಸಿಕೊಂಡ ನಂತರ ಗೋಪಾಲ್ ಇವತ್ತು ರಾತ್ರಿ ಚೆನ್ನೈಗೆ ವಾಪಸ್ಸಾಗುತ್ತಾರೆಂದು ವರದಿಗಳಿವೆ. ವೀರಪ್ಪನ್‌ಗೆ ಏನು ಬೇಕು ? ಎರಡೂ ರಾಜ್ಯಗಳು ಕಳಿಸಿಕೊಟ್ಟಿರುವ ತಮ್ಮ ಉತ್ತರವನ್ನು ಕೇಳಿದ ಆತ ಏನು ಹೇಳಿದ ? ರಾಜ್ ಮತ್ತು ಅವರ ಇತರ ಮೂವರು ಸಂಗಡಿಗರನ್ನು ಯಾವಾಗ ಬಿಡುಗಡೆ ಮಾಡುತ್ತಾನೆ ? ಈ ಎಲ್ಲ ಪ್ರಶ್ನೆಗಳಿಗೆ ಗೋಪಾಲ್ ಉತ್ತರ ಹೊತ್ತು ತರುತ್ತಾರೆ ಎಂದು ಎಲ್ಲರೂ ಅವರ ಆಗಮನವನ್ನೇ ಕಾತರದಿಂದ ಎದುರು ನೋಡುತ್ತಿದ್ದಾರೆ. ಗೋಪಾಲ್ ಬರುವುದು ಇವತ್ತು ರಾತ್ರಿ. ಕಾಡಿನಲ್ಲಿ ಮಳೆಗಿಳೆ ಅಂತ ಇನ್ನೂ ಲೇಟಾದರೂ ಆಶ್ಚರ್ಯವಿಲ್ಲ. ಅಲ್ಲಿಯವರೆವಿಗೆ ಕಾಯುವುದು ಕಷ್ಟದ ಕೆಲಸ , ಕುತೂಹಲ ತಡೆಯುವುದಕ್ಕೆ ಆಗುತ್ತಿಲ್ಲ ಎನ್ನುತ್ತೀರಾ?
ಹೌದು. ನಿಮ್ಮ ಕಷ್ಟ ಅರ್ಥವಾಗತಕ್ಕದ್ದೆ. ಗೋಪಾಲ್ ಬರುವವರೆಗೆ ನಿಮ್ಮ ಕುತೂಹಲ ತಣಿಸುವ ಏಕಮೇವ ಉದ್ದೇಶದಿಂದ 'ವೀರಪ್ಪನ್ ಮತ್ತು ಗೋಪಾಲ್ ನಡುವೆ ನಡೆದ ಮಾತುಕತೆಯ ವಿವರಗಳನ್ನು " ಇಲ್ಲಿ ಕೊಡುತ್ತಿದ್ದೇವೆ. ಓದಿ..........
ವೀರಪ್ಪನ್ : ಹಲೋ ಗೋಪಾಲ್ ! ರಾಜ್‌ಕುಮಾರ್ ಅವರನ್ನು ಅಪಹರಿಸಿಕೊಂಡು ಬಂದಿದ್ದೇನೆ. ನೀನೇನಂತೀಯಾ ? ಸಂತೋಷ ಆಯಿತಾ?
ಗೋಪಾಲ್ : ಆ! ರಾಜ್‌ಕುಮಾರಾ ! ಥತ್ ನಿನ್ನ . ರಜನಿಯನ್ನೋ, ಕಮಲ್‌ನನ್ನೋ ಅಥವಾ ಇನ್ನಾರರಾ ತಮಿಳು ಆರಾಧ್ಯ ದೈವಗಳನ್ನೋ ಅಪಹರಿಸು ಅಂತ ನಾನು ಹೇಳಿದ್ದು.
ವೀರಪ್ಪನ್ : ನಾನೇನಪ್ಪಾ ಮಾಡ್ಲಿ ? ಯಾರೋ ಹೇಳಿದ್ರು ರಜನಿ, ಕಮಲ್ ವಿದೇಶಕ್ಕೆ ಹೋಗಿದ್ದಾರೆ, ಬರೋದು ಇನ್ನೂ ಕೆಲವು ತಿಂಗಳಾಗತ್ತೆ ಅಂತ . ಈ ಮಧ್ಯೆ ನಾನು ಟಿವಿಯಲ್ಲಿ ಮುಖತೋರಿಸಿ ವರ್ಷವಾಗುತ್ತ ಬಂತಲ್ಲಯ್ಯ.
ಸರೀ ಅಂತ ರಾಜ್‌ಕುಮಾರ್ ಅವರನ್ನೇ ಎತ್ತ್ಹಾಕಿಕೊಂಡು ಬಂದೆ ಗೋಪಾಲ್. ಅದ್ಸರಿ. ನನ್ನನ್ನು ನೋಡಕ್ಕೆ ನೀನು ಯಾವಾಗ ಬರ್ತಿ ?
ಗೋಪಾಲ್ : ಕರ್ನಾಟಕ, ತಮಿಳುನಾಡಿನ ಪ್ರತಿನಿಧಿಯಾಗಿ ಹೊರಟಿದ್ದೀನಿ, ಇವತ್ತು ರಾತ್ರಿ ಬರ್ತೀನಿ.
ವೀರಪ್ಪನ್ : ಬೇಗ ಬಾರಪ್ಪಾ . ನಿನ್ನ ನೋಡಿ ಬಹಳ ದಿನ ಆಯ್ತು. ಅಂದಹಾಗೆ ಹೆಂಡ್ತಿ, ಮಕ್ಕಳನ್ನ ಕರೆದುಕೊಂಡು ಬರ್ತೀಯೋ ಹೇಗೆ?
ಗೋಪಾಲ್ : ಹೆಂಡ್ತಿ, ಮಕ್ಕಳನ್ನಾ ! ಯಾಕೆ ?
ವೀರಪ್ಪನ್ : ಲಾಸ್ಟ್ ಟೈಂ ಫೋನ್ ಮಾಡ್ದಾಗ ನೀನೇ ಹೇಳಿದ್ದೆ ಅಲ್ವ . ಮಕ್ಕಳಿಗೆ ರಜಾ ಬಂದಿದೆ ಅಂತ. ಮಕ್ಕಳೂ ಬರ್ಲಿ, ಕಾಡಲ್ಲಿ ಆಟ ಗೀಟ ಆಡ್ಕೊಳ್ಳಿ ಅಂತ ಹೇಳ್ದೆ ಅಷ್ಟೆ.
ಗೋಪಾಲ್ : ಇಲ್ಲ, ಇಲ್ಲ. ಕ್ಯಾಮರಾಮನ್ ಜತೆಗೆ ನಾನೊಬ್ಬನೇ ಬರ್ತಾ ಇದೀನಿ.
ವೀರಪ್ಪನ್ : ಒಳ್ಳೆ ಕ್ಯಾಮರಾಮನ್ ಕರೆದುಕೊಂಡು ಬಾರಪ್ಪಾ ಮಾರಾಯ. ಹೋದಸಲ ಬಂದ ಆಸಾಮಿ ಸರೀನೇ ಇರಲಿಲ್ಲ. ಟಿವಿಯಲ್ಲಿ ನನ್ನದು ಒಂದು ಚಿತ್ರನಾದ್ರೂ ಚೆನ್ನಾಗಿ ಬರಲಿಲ್ಲ. ಈ ಸಲ ಕ್ಯಾಮರಾಮನ್ ಶ್ರೀರಾಮ್ ಕರೆದುಕೊಂಡು ಬರಕ್ಕಾಗತ್ತಾ ?
ಗೋಪಾಲ್ : ಆಯ್ತು, ಆಯ್ತು . ಒಳ್ಳೆ ಕ್ಯಾಮರಾಮನ್ ಕರೆದುಕೊಂಡು ಬರ್ತೀನಿ . ಆಮೇಲೆ , ಮದ್ರಾಸ್‌ನಿಂದ ಏನಾದರೂ ತರಬೇಕೇನಪ್ಪಾ ?
ವೀರಪ್ಪನ್ : ನಮ್ಮ ಟೀಂಗೆಲ್ಲ ವುಡ್‌ಲ್ಯಾಂಡ್ ಶೂಸ್ ಬೇಕಪ್ಪ. ಜತೆಗೆ ಮೀಸೆಗೆ ಹಾಕಕ್ಕೆ ಛಲೋ ಹೇರ್ ಟಾನಿಕ್ ತರಬೇಕು ನೋಡು.
ಗೋಪಾಲ್ : ಓಕೆ. ಅಲ್ಲಯ್ಯ ವೀರಪ್ಪಾ ನನ್ನ ಪಾಲು ಮರೀಬೇಡ ನೋಡು ಆಮೇಲೆ ಗೊತ್ತಾಯಿತಾ. ಐದುಕೋಟಿ ಬೇಕು ಹತ್ತು ಕೋಟಿ ಬೇಕು ಅಂತ ಯಾಕೆ ನೀನು ಡಿಮ್ಯಾಂಡ್ ಮಾಡೋದಕ್ಕೋ ಹೋದಿ. ಒಂದು ಕೋಟಿ ಸಾಕು ಕಣಪ್ಪ. ನಾನು ಅಶೋಕ್‌ನಗರದಲ್ಲಿ ಫ್ಲ್ಯಾಟ್ ತಗೋಬೇಕು...
ವೀರಪ್ಪನ್ : ಗೋಪಾಲ್, ಹಾಗೆ ಬರ್ತಾ ಒಂದು ಲ್ಯಾಪ್ ಟಾಪ್ ಕಂಪ್ಯೂಟರ್ ತಗೊಂಬಾರೋ
ಗೋಪಾಲ್ : ಯಾಕೇ ?
ವೀರಪ್ಪನ್ : ಕಾಡಲ್ಲಿ ತುಂಬಾ ಬೋರು ಹೊಡೆಯುತ್ತೋ ಕಣೋ. ಇಂಟರ್‌ನೆಟ್‌ನಲ್ಲಿ ಸರ್ಫ್ ಮಾಡ್ತಾಯಿದ್ರೆ ಟೈಂ ಪಾಸಾಗತ್ತೆ. ಆಮೇಲೆ ಹಂಗೇನೇ ಜಾವಾ ಸ್ಕಿೃಪ್ಟ್ ಕಲಿಯಣಾ ಅಂತಿದೀನಿ. ಒಂದು ಸರ್ಟಿಫಿಕೇಟ್ ಸಿಕ್ಕಿಬಿಟ್ಟರೆ...
ಗೋಪಾಲ್ : ಜಾವಾ ಸರ್ಟಿಫಿಕೇಟಾ ? ಅದ್ಯಾಕಯ್ಯಾ ?
ವೀರಪ್ಪನ್ : ಯಾವುದಕ್ಕೂ ಇದ್ರೆ ಒಳ್ಳೇದೂ..ಅಮೆರಿಕಾಗೆ ಹೋಗಿ ಬಿಲ್ ಗೇಟ್‌ನ ಕಿಡ್ನಾಪ್ ಮಾಡಣಾಂತ ...
ಗೋಪಾಲ್ : ತಮಾಷೆ ಅಲ್ಲಪ್ಪಾ ವೀರಪ್ಪಾ . ಅದೇನು ಇಂಡಿಯಾ ಅಂದುಕೊಂಡಿದ್ದೀಯಾ ? ಒಂದು ದಿವಸದಲ್ಲಿ ಹಿಡಿದು ಒಳಗೆ ಹಾಕ್ತಾರೆ ಗೊತ್ತಾ ?
ವೀರಪ್ಪನ್ : ಅಯ್ಯೋ ಗೋಪಾಲ. ನಾನೇನೋ ತಮಾಷೆ ಮಾಡಿದ್ರೆ ನೀನು ಅದನ್ನೇ ಸೀರಿಯಸ್ಸಾಗಿ ತಗೊಂಬಿಟ್ಟೆ. ಹುಚ್ಚು ಹುಡುಗ, ಹುಚ್ಚು ಹುಡುಗ !!