ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡುಗಡೆಯ ಬಯಕೆ, ಬೇಡಿಕೆಗಳ ಈಡೇರಿಕೆ ನಡುವೆ ಬಯಲು ಆಲೋಚನೆಗಳು

By Super
|
Google Oneindia Kannada News

ಬೆಂಗಳೂರು : ವನಪ್ರದೇಶದಲ್ಲಿ ಅಕಸ್ಮಾತ್‌ ಕೈಗೆ ಸಿಕ್ಕವರನ್ನು ಮಾತ್ರ ಕಾಡುಗಳ್ಳ ವೀರಪ್ಪನ್‌ ಈ ಹಿಂದೆ ಅಪಹರಿಸಿದ್ದುಂಟು. ಕೃಪಾಕರ್‌ ಮತ್ತು ಸೇನಾನಿ ಅವರು ಸಹ ವನ್ಯಜೀವಿಗಳ ಛಾಯಾಚಿತ್ರ ತೆಗೆಯಲು ಕಾನನದೊಳಗೆ ಹೊಕ್ಕು, ವೀರಪ್ಪನ್‌ ಬಂಧಿಯಾಗಿದ್ದರು. ತನ್ನ ಎಲ್ಲೆಯಾಳಗೆ ಕಾಲಿಟ್ಟವರನ್ನು ಮಾತ್ರ ವೀರಪ್ಪನ್‌ ಒತ್ತೆಯಾಳುಗಳನ್ನಾಗಿಟ್ಟುಕೊಂಡು ತನ್ನ ಬೇಡಿಕೆಗಳನ್ನು ಮುಂದಿಟ್ಟಿದ್ದಾನೆಯೇ ವಿನಾ ಎಂದೂ ತನ್ನ ಎಲ್ಲೆ ದಾಟಿ ಮನೆಗೆ ನುಗ್ಗಿ ಯಾರನ್ನೂ ಅಪಹರಿಸಿದ್ದಿಲ್ಲ.

ಈ ಬಾರಿ ನಡೆದಿರುವುದೇ ಬೇರೆ. ವೀರಪ್ಪನ್‌ ಹೊಂಚು ಹಾಕಿ, ಕನ್ನಡ ಚಿತ್ರರಸಿಕರ ಅಭಿಮಾನದ ಭದ್ರಕೋಟೆಯಲ್ಲಿ ಬಂಧಿಯಾಗಿರುವ ಡಾ. ರಾಜ್‌ ಅವರನ್ನೇ ಅಪಹರಿಸುವ ಸಾಹಸ ಮಾಡಿದ್ದಾನೆ. ಎಲ್ಲರನ್ನೂ ಬಿಟ್ಟು, ರಾಜ್‌ ಅವರನ್ನೇ ಅಪಹರಿಸುವ ಬಗ್ಗೆ ವೀರಪ್ಪನ್‌ ಯೋಚಿಸಿದ್ದಾದರೂ ಏಕೆ? ರಾಜ್‌ ಅವರನ್ನು ಅಪಹರಿಸುವುದು ಅರೆಕ್ಷಣದಲ್ಲಿ ನಡೆದ ಕರಾಳ ಘಟನೆ ಅಲ್ಲ. ಇದಕ್ಕೆ ವೀರಪ್ಪ ವರ್ಷಗಟ್ಟಲೆ ಕುಟಿಲ ಕಾರಸ್ಥಾನ ಮಾಡಿರುವುದಂತೂ ಸತ್ಯ ಎನ್ನಿಸುತ್ತದೆ.

ಕಾರಣ ಏನು? : ಕನ್ನಡ ನಾಡಿನ ಮಹಾನ್‌ ವ್ಯಕ್ತಿಯನ್ನು ವೀರಪ್ಪನ್‌ ಅಪಹರಿಸಿರುವ ಹಿಂದೆ, ಭಾರಿ ದೊಡ್ಡ, ಅತಿ ದೊಡ್ಡ, ನಮ್ಮ ಊಹೆಗೂ ಮಿಗಿಲಾದ ಬೇಡಿಕೆಯಾಂದಿರಬಹುದು ಎಂಬ ಸಂಶಯ ಸುಳಿದಾಡುತ್ತಿದೆ. ಹಾಗಾದರೆ ಆ ಬೇಡಿಕೆ ಏನಿರಬಹುದು. ಕೇವಲ ದುಡ್ಡೆ? ತನ್ನ ಹಾಗೂ ತನ್ನ ಸಹಚರರ ಮೇಲಿರುವ ಟಾಡಾ ಸಂಬಂಧಿ ಮೊಕದ್ದಮೆಗಳನ್ನು ಕೈಬಿಡುವಂತೆ ಆಗ್ರಹಿಸಲು ಈ ಕೆಲಸ ಮಾಡಿದ್ದಾನೆಯೇ? ಅಥವಾ ಅದಕ್ಕಿಂತಲೂ ಅತಿಶಯವಾದ ಬೇಡಿಕೆ ಏನಾದರೂ ಇದೆಯೇ?

ಆಗು ಹೋಗುಗಳ ಕಲ್ಪನೆ ವೀರಪ್ಪನ್‌ಗೆ ಇಲ್ಲವೇ? : ವೀರಪ್ಪನ್‌ ಸ್ವತಃ ರಾಜ್‌ ಅವರು ನೆಲೆಸಿದ್ದ ಅವರ ಸ್ವಂತ ಊರಾದ ದೊಡ್ಡ ಗಾಜನೂರು ಬಳಿಯ ತೋಟದ ಮನೆಗೇ ಅದೂ ಅಮಾವಾಸ್ಯೆಯ ಕಗ್ಗತ್ತಲಲ್ಲಿ ನುಗ್ಗಿ, ಡಾ. ರಾಜ್‌ ಹಾಗೂ ಇತರ ಮೂವರನ್ನು ಅಪಹರಿಸಿದ್ದಾನೆ. ಡಾ. ರಾಜ್‌ ಕುಮಾರ್‌ ಎಂದರೆ ಯಾರು? ಅವರ ಹಿರಿಮೆ ಏನು? ರಾಜ್‌ ಅವನ್ನು ಅಪಹರಿಸಿದರೆ ಏನೆಲ್ಲ ಆಗಬಹುದು ಎಂಬ ಕಲ್ಪನೆ ವೀರಪ್ಪನ್‌ಗೆ ಇಲ್ಲವೇ ಇಲ್ಲ ಎನ್ನುವಂತಿಲ್ಲ. ಆತನಿಗೆ ಈ ಎಲ್ಲದರ ಸ್ಪಷ್ಟ ಕಲ್ಪನೆ ಇದೆ ಎಂದೇ ಭಾವಿಸಬಹುದು.

ಪ್ರಥಮತಃ ವೀರಪ್ಪನ್‌ ರಾಜ್‌ ಅವರನ್ನು ಅಪಹರಿಸಿ 6 ದಿನಗಳು ಸಮೀಪಿಸುತ್ತಿದ್ದರೂ, ತನ್ನ ಬೇಡಿಕೆ ಏನು? ಎಂಬುದನ್ನು ಮಾತ್ರ ಈ ವರೆಗೆ ಬಹಿರಂಗ ಪಡಿಸಿಲ್ಲ. ಈ ಮಧ್ಯೆ ರಾಜ್‌ ಅವರ ಧ್ವನಿ ಎನ್ನಲಾದ ಆಡಿಯೋ ಕ್ಯಾಸೆಟ್‌ ನಾಗರ ಪಂಚಮಿಯ ದಿನ ಸರಕಾರದ ಕೈ ಸೇರಿದೆ. ಆತಂಕದ ಮುಡುವಿನಲ್ಲಿ ಮುಳುಗುತ್ತಿದ್ದ ಕನ್ನಡದ ಮನಸ್ಸುಗಳಿಗೆ ಕೊಂಚ ನೆಮ್ಮದಿ ಮೂಡಿದೆ. ಡಾ. ರಾಜ್‌ ಆರೋಗ್ಯವಾಗಿದ್ದಾರೆ, ಕ್ಷೇಮವಾಗಿದ್ದಾರೆ ಎಂಬ ವರ್ತಮಾನವೂ ಸಿಕ್ಕಿದೆ.

ಕ್ಷಮಾದಾನ ಬೇಡಿಯಾನೇ?: ತನ್ನ ಜೀವಿತದಲ್ಲೇ ಮೊದಲ ಬಾರಿಗೆ ವೀರಪ್ಪನ್‌ ಮನೆಗೇ ನುಗ್ಗಿ ಅಪಹರಣದ ಸಾಹಸಕ್ಕೆ ಕೈ ಹಾಕಿದ್ದಾನೆ. ಅದೂ ಡಾ. ರಾಜ್‌ರಂತಹ ಗಣ್ಯಾತಿಗಣ್ಯ ವ್ಯಕ್ತಿಯನ್ನು. ಇವರನ್ನೇ ಅಪಹರಿಸ ಬೇಕೆಂದು ವೀರಪ್ಪನ್‌ ಲೆಕ್ಕಹಾಕಿರುವುದಾದರೂ ಏಕೆ? ವೀರಪ್ಪನ್‌ ವನವಾಸದಿಂದ ಬೇಸತ್ತಿದ್ದಾನೆಯೇ? ಎಲ್ಲರಂತೆ ಬದುಕಲು ಬಯಸಿದ್ದಾನೆಯೇ? ಕ್ಷಮಾದಾನ ಕೋರುವ ಮನಸ್ಸು ಮಾಡಿದ್ದಾನೆಯೇ? ತಾನು ಪೂಲನ್‌ ದೇವಿಯಂತೆ ಮನುಜನಾಗಿ ಬದುಕಬೇಕೆಂದು ಬಯಸಿದ್ದಾನೆಯೇ?

ಈ ಎಲ್ಲ ಪ್ರಶ್ನೆಗಳೂ ಈಗ ನಾಗರಿಕರ ಮನದಲ್ಲಿ ಸುಳಿದಾಡುತ್ತಿವೆ. ರಸ್ತೆಯಲ್ಲಿ, ಮನೆಯಲ್ಲಿ, ಬಸ್‌ ನಿಲ್ದಾಣದಲ್ಲಿ, ಕಚೇರಿ - ಕಾರ್ಖಾನೆಗಳಲ್ಲಿ ಎಲ್ಲೆಡೆ ಈಗ ಇದೇ ಮಾತು. ಜನರಾಡಿಕೊಳ್ಳುತ್ತಿರುವ ಮಾತುಗಳ ಹಿಂದೆ ಸತ್ಯಾಂಶ ಅಡಗಿರಬಹುದೇ?

ಕ್ಷಮಾದಾನ ನೀಡುವ ಅಧಿಕಾರ ರಾಜ್ಯಕ್ಕಿಲ್ಲ: ಏತನ್ಮಧ್ಯೆ, ವೀರಪ್ಪನ್‌ ಏನಾದರೂ ಕ್ಷಮೆ ಯಾಚಿಸಿದರೆ, ಕ್ಷಮೆ ನೀಡಲು ರಾಜ್ಯ ಸರಕಾರ ಸಿದ್ಧವೇ? ಈ ಪ್ರಶ್ನೆಗೆ ರಾಜ್ಯದ ಗೃಹ ಸಚಿವರು ಉತ್ತರಿಸಿದ್ದಾರೆ. ಅಕಸ್ಮಾತ್‌ ವೀರಪ್ಪನ್‌ ಏನಾದರೂ ಕ್ಷಮೆ ಯಾಚಿಸಿದರೆ, ಆತನಿಗೆ ಕ್ಷಮೆ ನೀಡುವ ವಿಚಾರ ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ. ಇದನ್ನು ಕೇಂದ್ರ ಸರಕಾರ ಹಾಗೂ ರಾಷ್ಟ್ರದ ರಾಷ್ಟ್ರಪತಿಗಳೇ ನಿರ್ಧರಿಸಬೇಕು. ವೀರಪ್ಪನ್‌ ಬೇಡಿಗೆ ಸಂವಿಧಾನದ ಚೌಕಟ್ಟಿನಲ್ಲಿದ್ದರೆ, ಅದನ್ನು ಪರಿಗಣಿಸಲು ರಾಜ್ಯಸರಕಾರ ಮುಕ್ತ ಮನಸ್ಸು ಹೊಂದಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ನಿಲುವೂ ಇದೇ ಆಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ವೀರಪ್ಪನ್‌ ಏನಾದರೂ ಸಂವಿಧಾನದ ಚೌಕಟ್ಟಿನ ಹೊರಗೆ ತನ್ನ ಬೇಡಿಕೆ ಇಟ್ಟರೆ, ಡಾ. ರಾಜ್‌ ಅವರ ಬಿಡುಗಡೆ ಮತ್ತಷ್ಟು ವಿಳಂಬವಾಗಬಹುದು. ಆದರೆ, ವೀರಪ್ಪನ್‌ ರಾಜ್‌ ಅವರನ್ನೇ ಅಪಹರಿಸಿರುವ ನಿಟ್ಟಿನಲ್ಲಿ ಆತ ತನಗೂ ಹಾಗೂ ತನ್ನ ಸಹಚರರಿಗೂ ಕ್ಷಮೆ ನೀಡುವಂತೆ ಕೋರುವ ಸಾಧ್ಯತೆಗಳು ಇಲ್ಲದಿಲ್ಲ. ಒಂದುವೇಳೆ ವೀರಪ್ಪನ್‌ ನಿಜವಾಗಿಯೂ ಕ್ಷಮಾಯಾಚನೆ ಮಾಡಿದರೆ ಕೇಂದ್ರ ಯಾವ ನಿರ್ಧಾರ ಕೈಗೊಳ್ಳಬಹುದು?

English summary
Loud thinking on the mulbery bush
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X