ನಾಗಪ್ಪ ಎಲ್ಲಾ ಚೆನ್ನಾಗಿದ್ದಾರೆ ತಾನೆ?
ಬೆಂಗಳೂರು : ಆಡಿಯೋ ಕ್ಯಾಸೆಟ್‌ನಲ್ಲಿದ್ದ ರಾಜ್ ಕುಮಾರ್ ಅವರ ಧ್ವನಿಯನ್ನು ಕನ್ನಡಿಗರೆಲ್ಲಾ ಕೇಳಿದ್ದಾರೆ. ಐದು ದಿನಗಳಿಂದ ಮೂಡಿದ್ದ ದುಗುಡ ಕೊಂಚ ಕಡಿಮೆಯಾಗಿದೆ. ರಾಜ್ ಅವರ ಮನೆಯಲ್ಲೂ ನೆಮ್ಮದಿಯ ನಿಟ್ಟುಸಿರು ಮೂಡಿದೆ. ರಾಜ್ ಅವರು ತಮ್ಮ ಕ್ಯಾಸೆಟ್ ಸಂದೇಶದಲ್ಲಿ ಆಕಾಶವಾಣಿಯ ವಾರ್ತೆ ಕೇಳುತ್ತಿರುವುದಾಗಿಯೂ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ ದನಿಗೆ - ಪ್ರತಿಧ್ವನಿ ಎಂಬ ಕಾರ್ಯಕ್ರಮವನ್ನು ಬೆಂಗಳೂರು ಆಕಾಶವಾಣಿ ಸಿದ್ಧಪಡಿಸಿದೆ. ರಾಜ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್, ರಾಜ್ ಅವರ ಪತ್ನಿ ಶ್ರಿಮತಿ ಪಾರ್ವತಮ್ಮ ರಾಜಕುಮಾರ್ ರಾಜ್ ಅವರ ಧ್ವನಿಗೆ ಪ್ರತಿಧ್ವನಿ ನೀಡಿದ್ದಾರೆ. ತಮ್ಮ ಮನದಂತರಾಳದ ಮಾತುಗಳನ್ನು ರಾಜ್ ಅವರಲ್ಲಿ ತೋಡಿಕೊಂಡಿದ್ದಾರೆ. ಈ ಸಂದೇಶವನ್ನು ವೀರಪ್ಪನ್ ಅಡಗುತಾಣದಲ್ಲಿರುವ ರಾಜ್ ಅವರಿಗೆ ಮುಟ್ಟಿಸಲು ಬೆಂಗಳೂರು ಆಕಾಶವಾಣಿ ಕೇಂದ್ರ ಈ ಸಂದೇಶ ವಾಹಿನಿಯನ್ನು ನಾಲ್ಕಾರು ಬಾರಿ ಬಿತ್ತರಿಸಿದೆ. ಈ ಕಾರ್ಯಕ್ರಮ ಚೆನ್ನೈ, ಕೊಯಮತ್ತೂರು ಆಕಾಶವಾಣಿ ಕೇಂದ್ರಗಳಿಂದಲೂ ಏಕಕಾಲದಲ್ಲಿ ಮರುಪ್ರಸಾರ ಆಗಿದೆ.
ರಾಜ್ ಧ್ವನಿ ಕೇಳಿ ರಾಜ್ ಕುಟುಂಬ ವರ್ಗದವರು ಹಾಗೂ ಅಭಿಮಾನಿಗಳಿಗೆ ನೆಮ್ಮದಿ ಸಿಕ್ಕಿದಂತೆ, ತಮ್ಮ ಮಕ್ಕಳ ಹಾಗೂ ಪತ್ನಿಯ ಧ್ವನಿ ಕೇಳಿ ರಾಜ್ ಅವರ ಮನಸ್ಸಿಗೂ ನೆಮ್ಮದಿ ದೊರಕುವುದರಲ್ಲಿ ಸಂದೇಹವಿಲ್ಲ. ರಾಜ್ ಅವರ ಮನದಲ್ಲಿ ಮೂಡಿರುವ ಆತಂಕಗಳಿಗೂ ಈ ಸಂದೇಶ ತಂಪೆರೆದಿದೆ. ಅಪ್ಪಾಜಿ ಗೋವಿಂದಣ್ಣ, ನಾಗರಾಜು ಎಲ್ಲ ಚೆನ್ನಾಗಿದ್ದಾರೆ ತಾನೆ?
ರಾಜ್ ದನಿಗೆ ಪ್ರತಿಧ್ವನಿ ಕಾರ್ಯಕ್ರಮದ ಮುಖ್ಯಾಂಶಗಳು
ರಾಘವೇಂದ್ರ ರಾಜ್ ಕುಮಾರ್: ಅಪ್ಪಾಜಿ, ನಿಮ್ಮ ಕ್ಯಾಸೆಟ್ ಸಂದೇಶ ತಲುಪಿತು. ಶಿವರಾಜಣ್ಣ ಚೆನ್ನೈನಲ್ಲೇ ನಿಮ್ಮ ಧ್ವನಿ ಕೇಳಿ ಆನಂದದಿಂದ ನಮಗೆ ದೂರವಾಣಿ ಮೂಲಕ ತಿಳಿಸಿದರು. ನೀವು ಚೆನ್ನಾಗಿದ್ದೀರಿ ಅಂತ ಕೇಳಿ ನಮಗೆಲ್ಲ ಸಂತೋಷ ಆಗಿದೆ. ಅಪ್ಪಾಜಿ, ನೀವು ಹೇಳಿದಂತೆ ನಾವೆಲ್ಲ ಇಲ್ಲಿ ನಿಮ್ಮ ಬರುವಿಕೆಗೆ ಕಾಯ್ತಾ ಇದ್ದೀವಿ. ತಮಿಳು - ತೆಲುಗು - ಕನ್ನಡದವರು ಯಾರಿಗೂ ತೊಂದರೆ ಆಗಿಲ್ಲ. ಅಪ್ಪಾಜಿ ನೀವೂ ನೆಮ್ಮದಿಯಿಂದಿರಿ. ನಿಮ್ಮ ದನಿ ಕೇಳಿ ನಮಗೆಲ್ಲ - ಕನ್ನಡಿಗರಿಗೆಲ್ಲಾ ಆನಂದ ಆಗಿದೆ. ನೀವು ಆದಷ್ಟು ಬೇಡಿ ಬನ್ನಿ ಅಪ್ಪಾಜಿ.
ಪಾರ್ವತಮ್ಮ ರಾಜ್ ಕುಮಾರ್ : ರೀ... ನನಗೆ ತುಂಬಾ ಸಂತೋಷ ಆಯ್ತು. ನಿಮ್ಮ ದನಿಕೇಳಿ ನನಗೆ ಚೈತನ್ಯ ಬಂತು. ನೀವು ಸುಖವಾಗಿದ್ದೀರಿ ಅಂತ ಕೇಳಿ ಆನಂದ ಆಯ್ತು. ನಿಮ್ಮ ದನಿ ಕೇಳಿ ನಾನು ನಿಮ್ಮ ಜತೆಲೇ ಇದ್ದೀನಿ ಅನ್ನಿಸ್ತು. ನಾಗಪ್ಪ, ಗೋವಿಂದು ಎಲ್ಲಾ ಚೆನ್ನಾಗಿದ್ದಾರಲ್ಲ. ರೀ ನಾನು ಕೇಳಿದೆ ಎಂದು ಹೇಳಿ. ನೀವು ಆದಷ್ಟು ಬೇಗ ವಾಪಸ್ ಬನ್ನಿ. ನಾವೆಲ್ಲ ಕಾಯ್ತಾ ಇದ್ದೀವಿ.
ಈ ರೀತಿ ತಮ್ಮ ಭಾವನೆಗಳನ್ನು ತೋಡಿಕೊಂಡ ಪಾರ್ವತಮ್ಮನವರು ವೀರಪ್ಪನ್‌ಗೆ ಸೋದರತ್ವದ ದಿನವಾದ ನಾಗರ ಪಂಚಮಿಯ ದಿನ ತಮಿಳಿನಲ್ಲಿ ತಮ್ಮ ಪ್ರಾರ್ಥನೆಯನ್ನೂ ಸಲ್ಲಿಸಿದರು. ಅದರ ಭಾವಾರ್ಥ ಇಂತಿದೆ: ಅಣ್ಣ ವೀರಪ್ಪನ್ ನನ್ನನ್ನು ನಿನ್ನ ತಂಗಿ ಎಂದು ತಿಳಿದುಕೋ. ನೀವು ಇಂದು ನನ್ನ ಅಣ್ಣ ಅಲ್ಲ ಎಂದೆದೂ ನನಗೆ ಅಣ್ಣ ಇದ್ದಂತೆ. ನಮ್ಮ ಯಜಮಾನ್ರನ್ನ ನೀವು ಚೆನ್ನಾಗಿ ನೋಡ್ಕೋತಿದೀರಾ ಅಂತ ಅವರು, ಹೇಳಿದ್ದಾರೆ. ನೀವು ಒಳ್ಳೆಯವರು ಅಂತ ತಿಳಿಸಿದ್ದಾರೆ. ದಯವಿಟ್ಟು ಅಣ್ಣ ನಮ್ಮ ಯಜಮಾನ್ರನ್ನ ಹಾಗೂ ಅವರ ಜತೆಯಲ್ಲಿ ಇರುವವರನ್ನು ಬಿಟ್ಟು ಬಿಡಿ. ತಂಗಿಯ ಮನಸ್ಸನ್ನು ಅವಳ ನೋವನ್ನು ನೀವು ಅರ್ಥ ಮಾಡಿಕೊಂಡಿದ್ದೀರಿ ಎಂದು ತಿಳಿಯುತ್ತೇನೆ. ದಯವಿಟ್ಟು ಅವರನ್ನು ಬೇಗ ಬಿಟ್ಟುಬಿಡಿ.