ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಗ ಎಂಬ ಮೂರಕ್ಷರದ ಸಂಭ್ರಮ

By Staff
|
Google Oneindia Kannada News

Karagaನೀವು ಕರಗ ನೋಡಿದ್ದೀರಾ?

ಬೆಂಗಳೂರಿನ ಎಲ್ಲೆಡೆ ಒಂದೇ ಶಬ್ದ. ಚಿಟಿಚಿಟಿ. ಕೆ.ಆರ್‌. ಮಾರುಕಟ್ಟೆ, ಅವೆನ್ಯೂ ರಸ್ತೆ, ನಗರಪಾಲಿಕೆಯ ಸುತ್ತಮುತ್ತಾ ಜನವೋ ಜನ. ಕರಗ ಬಂತು ಕರಗ ಎಂಬ ಕೂಗು. ರಾತ್ರಿಯಿಡಿ ಕರಗ ನೋಡಲು ಎತ್ತರದ ಮನೆಗಳ ಮೇಲೆ, ರಸ್ತೆಯ ಎರಡೂ ಮಗ್ಗುಲಲ್ಲಿ, ನೂರಾರು ಸಾವಿರಾರು ಜನರ ಜಮಾವಣೆ.

ರಸ್ತೆಯ ಮೇಲೆಲ್ಲ ಪುರಿ, ಬತ್ತಾಸು, ಕಡಲೆಕಾಯಿ ಮಾರುವವರ ಸಾಲು, ಬೆಲೂನು, ತುತ್ತೂರಿ. ಮುಖ್ಯವಾಗಿ ಚಿಟಿಚಿಟಿ ಸದ್ದು ಮಾಡುವ ಚಿಕ್ಕ ತಗಡಿನ ಆಟಿಕೆ. ಅದಕ್ಕೆ ನಾವೆಲ್ಲ ಕಪ್ಪೆ ಅಂತ ಕರೀತಿದ್ವಿ ಎಲ್ಲರ ಕೈಯಲ್ಲೂ ಅದೇ. ಬೆಂಗಳೂರಿಗೇ ಕೇಳುವಂತೆ ಅದರ ಸದ್ದು. ಅದುವೇ ಕರಗದ ಹಿಮ್ಮೇಳ. ಬೆಂಗಳೂರಿಗೆ ಸುತ್ತಮುತ್ತಲ ಹಾಗೂ ದೂರದ ಊರುಗಳಿಂದ ಜನ ಬರುತ್ತಾರೆ. ಎಲ್ಲರ ಅಪೇಕ್ಷೆಯೂ ಕರಗ ನೋಡುವುದೇ ಆದರೆ, ಇವರಲ್ಲಿ ಕರಗವನ್ನು ಕಣ್ಣಾರೆ ನೋಡುವವರು ಅರ್ಧದಷ್ಟು ಜನ ಮಾತ್ರ.

ಕರಗ ಎಂದರೇನು? ಕರಗದ ವೈಶಿಷ್ಟ್ಯ ಏನು?

ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಇರುವ, ಕರಗ ಕಲೆಯ ಹುಟ್ಟಿನ ಬಗ್ಗೆ ನಿರ್ದಿಷ್ಟವಾದ ಮಾಹಿತಿ ಇಲ್ಲ. ಕರಗ ಹೊರುವ ಕಲಾವಿದರು ನೀಡುವ ಮಾಹಿತಿಯನ್ನಾಧರಿಸಿ ಹೇಳುವುದಾದರೆ ... ಕರಗಕ್ಕೂ ಪಾಂಡವರಿಗೂ ಅವಿನಾಭಾವ ಸಂಬಂಧ ಇದೆ. ಹೀಗಾಗೆ ಕರಗ ಉತ್ಸವ ಪ್ರಾರಂಭ ಆಗುವುದೂ ಧರ್ಮರಾಯನ ದೇವಸ್ಥಾನದಿಂದಲೇ. ಕರಗದ ಬಗ್ಗೆ ಹಲವಾರು ಕತೆಗಳಿವೆ. ಎಲ್ಲ ಕತೆಗಳಲ್ಲೂ ದ್ರೌಪತಿಯ ಉಲ್ಲೇಖ ಇದೆ.

ಕುರುಕ್ಷೇತ್ರ ಯುದ್ಧಾನಂತರ ಪಾಂಡವರು ಕಾಲು ಸಹಿತ ಕೈಲಾಸಕ್ಕೆ ಹೊರಟಾಗ ದ್ರೌಪತಿಯೂ ಅವರನ್ನು ಅನುಸರಿಸಿದಳು. ಮಾರ್ಗ ಮಧ್ಯೆ ದ್ರೌಪದಿ ಮೂರ್ಛೆ ಹೋದಳು. ಕಣ್ತೆರೆದು ನೋಡಿದಾಗ ಪಾಂಡವರಾರೂ ಅಲ್ಲಿರಲಿಲ್ಲ. ತಿಮಿರಾಸುರ ಎಂಬ ರಕ್ಕಸ ಆಕೆಯನ್ನು ಆಗ ಪೀಡಿಸಿದ. ದ್ರೌಪದಿ ಆಗ ಶಕ್ತಿಯ ರೂಪ ತಾಳಿ ಅವನನ್ನು ನಿಗ್ರಹಿಸಿದಳು. ಆಗ ಅವಳ ತಲೆಯ ಮೇಲೆ ಕುಂಭ ಇರುತ್ತು. ಇದುವೇ ಇಂದಿನ ಕರಗ ಆರಾಧನೆಯ ಮೂಲ.

ಇನ್ನೊಂದು ಕತೆಯ ರೀತ್ಯ ಸ್ವಯಂವರದಲ್ಲಿ ಮತ್ಸ್ಯಯಂತ್ರ ಬೇಧಿಸಿದ ಅರ್ಜುನ ದ್ರೌಪದಿಯ ಮದುವೆಯಾಗಿ ಮನೆಗೆ ಕರೆತರುತ್ತಾನೆ. ಕುಂತಿ ಆದೇಶದಂತೆ ದ್ರೌಪದಿ ಉಳಿದ ನಾಲ್ವರನ್ನೂ ವರಿಸುತ್ತಾಳೆ. ಆನಂದಾತಿಶಯದಲ್ಲಿ ಕೈಯಲ್ಲಿದ್ದ ಕಳಸವನ್ನು ತಲೆಯ ಮೇಲೆ ಹೊತ್ತು ಮೆರೆಯುತ್ತಾಳೆ. ಕುಣಿಯುತ್ತಾಳೆ. ಆ ಕಳಸವೇ ಇಂದು ಆರಾಧಿಸುವ ಕರಗ. ಇನ್ನು ಮೂರನೇ ಕತೆಯ ಪ್ರಕಾರ ಕರಗ ಹೊರುವವರು ಪಾಂಡವರ ಆರಾಧಕರು. ವಹ್ನಿಕುಲದ ಇವರ ಮೂಲ ಪುರುಷ ಅಗ್ನಿ. ದ್ರೌಪದಿ ಅಗ್ನಿಯಿಂದ ಹುಟ್ಟಿದವಳು. ದೇವಾಸುರ ಯುದ್ಧಕ್ಕೆ ಕರಗಂಬೊತ್ತು ಪ್ರೇರಕಳೂ ಹೌದು ಹೀಗಾಗೇ ದ್ರೌಪದಿಯ ಆರಾಧನೆಯ ಸಂಕೇತವಾಗಿ ಕರಗ ಉತ್ಸವ. ಕತೆಗಳು ಏನೇ ಹೇಳಲಿ, ಎಲ್ಲ ಕತೆಯಲ್ಲೂ ಪಾಂಡವರ, ಮಹಾಭಾರತದ ಕೊಂಡಿ ಇದೆ.

ಇದೊಂದು ಜಾನಪದ ಕಲೆ. ನಾವು ಸಾಮಾನ್ಯವಾಗಿ ಶಕ್ತಿದೇವತೆಯನ್ನು ಆರಾಧಿಸುವಾಗ ತಲೆಯ ಮೇಲೆ ಹೂವಿನಿಂದ ಅಲಂಕೃತವಾದ ಕಳಶ ಹೊರುವುದನ್ನು ಕಾಣುತ್ತೇವೆ. ದ್ರೌಪದಿಯ ನೆನೆದು ಆರಾಧಿಸುವ ಇಲ್ಲೂ ಅದುವೇ ಪ್ರಧಾನ. ಕರಗ ಒಂಬತ್ತು ದಿನ ನಡೆಯುವ ಉತ್ಸವ. ಯುಗಾದಿಯ ದಿನದ ನಂತರ ಸಪ್ತಮಿ ಅಥವಾ ಅಷ್ಟಮಿಯ ದಿನ ಧ್ವಜಾರೋಹಣದಿಂದ ಆರಂಭವಾಗಿ ಬಿದಿಗೆಯ ಧ್ವಜಾರೋಹಣದ ವರೆಗೆ ಹಲವಾರು ಧಾರ್ಮಿಕ ವಿಧಿಗಳು ನಡೆಯುತ್ತವೆ. ಕರಗ ಉತ್ಸವದ ಕಂಕಣ ತೊಟ್ಟವರು ಕರಗ ನಡೆಯುವ ಒಂಬತ್ತು ದಿನಗಳ ಮೊದಲು ನಿತ್ಯವೂ ಕಬ್ಬನ್‌ ಉದ್ಯಾನದ ದೇಗುಲ, ಸಂಪಂಗಿರಾಮನಗರದ ಎಲ್ಲಮ್ಮ ಗುಡಿ, ಸುಧಾಮನಗರದ ಮುನೇಶ್ವರ ದೇಗುಲ, ಗವಿಪುರದ ಗಂಗಾಧರೇಶ್ವರ, ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮನ ದೇವಾಲಯಗಳ ಬಳಿ ಸ್ನಾನ ಮಾಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಸಿ ಕರಗ, ಸಾಂಕೇತಿಕ ಪ್ರಥಮ ಪೂಜೆ ಪೂರ್ಣ ನವಮಿಯಂದು ನಡೆಯುವ ಮಹೋತ್ಸವ ಮುಖ್ಯವಾದವು.

ವಿಕ್ರಮನಾಮ ಸಂವತ್ಸರದಲ್ಲಿ ನಡೆದ ಕರಗ ಹೊತ್ತವರು ಲಕ್ಷ್ಮೀಶ. ಕರಗದ ಪೂರ್ವಭಾವಿಯಾಗಿ 9 ದಿನ ಮೊದಲೇ ಸಾಮಾನ್ಯವಾಗಿ ಕಬ್ಬನ್‌ ಪಾರ್ಕ್‌ನಲ್ಲಿ ಪ್ರಥಮ ಪೂಜೆ ನಡೆಯುತ್ತದೆ. ಚೈತ್ರ ಶುದ್ಧ ಹುಣ್ಣಿಮೆಯ ದಿನ ಪೂರ್ಣ ಕರಗ. ಅಂದು ಸಂಜೆಯ ಹೊತ್ತಿಗೆ ಕರಗ ಹೊರುವ ವ್ಯಕ್ತಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬಾ ಕರಿ ಬಳೆ ತೊಡಿಸಿ, ಅಚ್ಚ ಗಮಗಮಿಸುವ ಮಲ್ಲಿಗೆ ಜಡೆ ಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆಯನುಡಿಸಿ, ಕುಪ್ಪಸ ತೊಡಿಸಿ, ಹವಳದ ಹಾರ, ರತ್ನಾಭರಣಗಳಿಂದ ಸಿಂಗರಿಸುತ್ತಾರೆ.

ಕರಗ ಹೊರುವಾತ ನವವಧುವಿನಂತೆ ಶೋಭಿಸುತ್ತಿರುತ್ತಾರೆ. ಆನಂತರ ಶಕ್ತಿಸ್ವರೂಪನಾದ ಆತನಿಗೆ ಶಾಸ್ತ್ರೋಕ್ತವಾಗಿ ಧೂಪದೀಪಗಳಿಂದ ಪೂಜೆ ನಡೆಯುತ್ತದೆ. ಆನಂತರ ಹಣೆಗೆ ನಾಮ, ನಡುಪಟ್ಟಿ, ತಲೆಗೆ ಪೇಟ ಕಟ್ಟಿ ಕೈಯಲ್ಲಿ ಖಡ್ಗ ಹಿಡಿದ ಅಂಗರಕ್ಷಕರ ತಂಡ ವೀರಕುಮಾರರ ಕಾಪಿನಲ್ಲಿ ಕರಗ ಹೊರುವ ವ್ಯಕ್ತಿಯನ್ನು ನಡೆಮುಡಿಯಾಂದಿಗೆ ದೇವಸ್ಥಾನಕ್ಕೆ ಕರೆತರುತ್ತಾರೆ.

ಜನಸ್ತೋಮವನ್ನು ಭೇದಿಸಿ ಗರ್ಭಗುಡಿ ಪ್ರವೇಶಿಸುವ ಆತ ಆಗಲೇ ಸಿದ್ಧವಾಗಿರುವ ಹೂವಿನ ಕರಗವನ್ನು ತಲೆಯ ಮೇಲೆ ಹೊರುತ್ತಾರೆ. ಮತ್ತೆ ಪೂಜೆ ಪ್ರಾರಂಭ. ಪೂಜಾರಿಯ ಮಂತ್ರ ಘೋಷ, ಸ್ತುತಿಪದ್ಯ ಮೊಳಗಿದ ನಂತರ ವೀರಕುಮಾರರ ರಕ್ಷಣೆಯಲ್ಲಿ ಮೊದಲೇ ನಿಗದಿಯಾದ ರಾಜ ಬೀದಿಗಳಲ್ಲಿ ಕರಗ ರಾತ್ರಿಯಿಡೀ ಸಂಚರಿಸಿ ಬೆಳಗಿನ ಜಾವ ಮತ್ತೆ ಗರ್ಭ ಗುಡಿ ಪ್ರವೇಶಿಸುತ್ತದೆ. ಕರಗ ಹೊತ್ತವರ ಕುಣಿತ ನೋಡಲು ಬಲು ಸೊಗಸು. ದೂರದೂರದ ಊರುಗಳಿಂದ ಬಂದು, ರಾತ್ರಿಯೆಲ್ಲ ನಿದ್ದೆಗೆಟ್ಟು ಕರಗ ನೋಡುವ ಮಂದಿ ಶ್ರದ್ಧಾಭಕ್ತಿಗಳಿಂದ ಕರಗಕ್ಕೆ ಪೂಜೆ ಸಲ್ಲಿಸುತ್ತಾರೆ. ಮಸ್ತಾನ್‌ಸಾಬ್‌ ದರ್ಗಾದಲ್ಲಿ ಕೂಡ ಮುಸ್ಲಿಮ್‌ ಬಾಂಧವರು ಕರಗವನ್ನು ಸ್ವಾಗತಿಸಿ, ಪೂಜಿಸಿ ಬೀಳ್ಕೊಡುತ್ತಾರೆ.

ಭಾವೈಕ್ಯದ ಸಂಕೇತವಾಗಿರುವ ಈ ಕರಗದ ಜತೆಗೆ ಅಲಂಕೃತ ರಥಗಳು, ಮಂಟಪ, ಪಲ್ಲಕ್ಕಿಗಳಲ್ಲಿ ವಿವಿಧ ದೇವತಾ ವಿಗ್ರಹಗಳ ಮೆರವಣಿಗೆಯೂ ನಡೆಯುತ್ತದೆ. ಧಾರ್ಮಿಕ ವಿಧಿಗಳೊಂದಿಗೆ ನಡೆವ ಈ ಕರಗಕ್ಕೆ ಧರ್ಮರಾಯನ ಕರಗ ಎಂದೇ ಹೆಸರು. ಕರಗ ಉತ್ಸವದ ಮಾರನೆ ದಿನ ವಿಜಯೋತ್ಸವದ ಸಂಕೇತವಾಗಿ ವಸಂತೋತ್ಸವವೂ ಜರುಗುತ್ತದೆ. ಇದರೊಂದಿಗೆ 9 ದಿನಗಳ ವಸಂತ ನವರಾತ್ರಿ ಕರಗ ಮುಕ್ತಾಯವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X