Manipur violence: ಕೆಲ ಕ್ಷಣಗಳಲ್ಲೇ ಡಿಸಿ ಕಚೇರಿ ಧ್ವಂಸ, ವಾಹನಗಳು ಭಸ್ಮ, ಬಿಜೆಪಿ ಕಚೇರಿಗೆ ಬೆಂಕಿ- ವರದಿ, ವಿವರ
ಇಂಫಾಲ್, ಸೆಪ್ಟೆಂಬರ್ 28: ಇಬ್ಬರು ವಿದ್ಯಾರ್ಥಿಗಳ ಹತ್ಯೆ ಬೆಳಕಿಗೆ ಬಂದ ಬೆನ್ನಲ್ಲೇ ಮಣಿಪುರದ ರಾಜಧಾನಿ ಇಂಫಾಲದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದೆ. ಉದ್ರಿಕ್ತರು ಸರ್ಕಾರಿ ಕಚೇರಿಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದಾರೆ. ನೋಡನೋಡುತ್ತಿದ್ದಂತೆಯೇ ವಾಹನಗಳು ಭಸ್ಮವಾಗುತ್ತಿವೆ. ಬಿಜೆಪಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ.
ಹಿಂಸಾತ್ಮಕ ಪ್ರತಿಭಟನೆಗಳು ಗುರುವಾರ ಮುಂಜಾನೆಯವರೆಗೂ ಮುಂದುವರೆದಿವೆ. ಇಂಫಾಲ್ ಪಶ್ಚಿಮದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಉದ್ರಿಕ್ತರ ಗುಂಪು ಧ್ವಂಸಗೊಳಿಸಿದೆ. ಇದೇ ಕಚೇರಿಯ ಮುಂದೆ ನಿಂತಿದ್ದ ನಾಲ್ಕು ಚಕ್ರದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈನಲ್ಲಿ ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಶವಗಳ ಹೊಂದಿದ್ದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಈ ಬಾರಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯು ಹಿಂಸಾರೂಪ ಪಡೆದಿದೆ.
ಕಳೆದ ರಾತ್ರಿ, ಪ್ರತಿಭಟನಾಕಾರರು ಉರಿಪೋಕ್, ಯೈಸ್ಕುಲ್, ಸಗೋಲ್‌ಬಂಡ್ ಮತ್ತು ತೇರಾ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಹಲವಾರು ಸುತ್ತಿನ ಅಶ್ರುವಾಯು ಶೆಲ್‌ಗಳನ್ನು ಹಾರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುವುದನ್ನು ತಡೆಯಲು ಪ್ರತಿಭಟನಾಕಾರರು ಸುಡುವ ಟೈರ್‌ಗಳು, ಬಂಡೆಗಳು ಮತ್ತು ಕಬ್ಬಿಣದ ಪೈಪ್‌ಗಳನ್ನು ರಸ್ತೆಗಳ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಗುಂಪೊಂದು ಡಿಸಿ ಕಚೇರಿಯನ್ನು ಧ್ವಂಸಗೊಳಿಸಿತು ಮತ್ತು ಎರಡು ನಾಲ್ಕು ಚಕ್ರದ ವಾಹನಗಳಿಗೆ ಬೆಂಕಿ ಹಚ್ಚಿತು. ಸಿಆರ್‌ಪಿಎಫ್ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರದಿಂದ ಭುಗಿಲೆದ್ದು ಪ್ರತಿಭಟನೆಯಲ್ಲಿ 65 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದಂತೆ ಭದ್ರತಾ ಪಡೆಗಳು ಎರಡು ಜಿಲ್ಲೆಗಳಲ್ಲಿ ( ಇಂಫಾಲ್ ಪೂರ್ವ ಮತ್ತು ಪಶ್ಚಿಮ ) ಕರ್ಫ್ಯೂ ವಿಧಿಸಿವೆ.
ಇದೇ ವೇಳೆ, ತೌಬಲ್ ಜಿಲ್ಲೆಯ ಖೋಂಗ್ಜಾಮ್‌ನಲ್ಲಿರುವ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮಣಿಪುರ ಪೊಲೀಸರು, ಜನರ ಗುಂಪೊಂದು ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತು. ಪೊಲೀಸರ ಮೇಲೆ ಹಲ್ಲೆ ನಡೆಸಿ ಅವರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂತಹ ಅಪರಾಧಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕಿತ್ತುಕೊಂಡ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮತ್ತು ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ವಿರುದ್ಧ ಲಾಠಿ ಚಾರ್ಜ್, ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಬುಲೆಟ್‌ಗಳನ್ನು ಬಳಸಬೇಡಿ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಭದ್ರತಾ ಪಡೆಗಳಿಗೆ ಒತ್ತಾಯಿಸಿದೆ.
ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.
ಮಣಿಪುರದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಶೇಕಡಾ 40 ರಷ್ಟಿದ್ದಾರೆ ಮತ್ತು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.












Click it and Unblock the Notifications