ಮಹಾರಾಷ್ಟ್ರ ಉಪಚುನಾವಣೆ: 85 ಜಿ. ಪ. ಸ್ಥಾನಗಳ ಪೈಕಿ 22 ಬಿಜೆಪಿ ತೆಕ್ಕೆಗೆ, ಶಿವಸೇನೆಗೆ 12
ಮುಂಬೈ, ಅಕ್ಟೋಬರ್ 07: ಮಹಾರಾಷ್ಟ್ರದಲ್ಲಿ 85 ಜಿಲ್ಲಾ ಪರಿಷತ್ ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಈ ಪೈಕಿ 22 ಜಿಲ್ಲಾ ಪಂಚಾಯತ್ ಸ್ಥಾನಗಳು ಬಿಜೆಪಿ ತೆಕ್ಕೆಗೆ ಸೇರಿಕೊಂಡಿದೆ. ಈ ಸಂದರ್ಭದಲ್ಲಿ 144 ಪಂಚಾಯತ್ ಸಮಿತಿಯ ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ 36 ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಆರು ಜಿಲ್ಲಾ ಪರಿಷತ್‌ಗಳಲ್ಲಿ ಖಾಲಿ ಇದ್ದ 84 ಸ್ಥಾನಗಳಿಗೆ ಉಪಚುನಾವಣೆ ನಡೆದಿದೆ. ದುಲೆ, ನಂದೂರ್‌ಬಾರ್, ಅಕೋಲಾ, ವಾಶಿಮ್, ನಾಗ್ಪುರ, ಪಾಲ್ಘರ್‌ನ 37 ಪಂಚಾಯತ್ ಸಮಿತಿಗಳ 141 ಸ್ಥಾನಗಳ ಚುನಾವಣೆ ನಡೆದಿದ್ದು, ಬುಧವಾರ ಮತ ಎಣಿಕೆ ನಡೆದಿದೆ. ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ ಲಭಿಸಿದೆ. ಆದರೆ ಕಾಂಗ್ರೆಸ್, ಶಿವಸೇನೆ ಹಾಗೂ ಎನ್‌ಸಿಪಿ ಮೈತ್ರಿ ಕೂಟವು ಸೇರಿದಾಗ ಬಿಜೆಪಿಗಿಂತ ಅಧಿಕ ಸ್ಥಾನವು ಮಹಾ ವಿಕಾಸ್ ಅಘಾಡಿ ಮೈತ್ರಿ ಕೂಟಕ್ಕೆ ಲಭಿಸಿದೆ.
85 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ ಒಂದು ಜಿಲ್ಲಾ ಪರಿಷತ್‌ನಲ್ಲಿ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದಾರೆ. ಹಾಗೆಯೇ 144 ಪಂಚಾಯತ್ ಸಮಿತಿಯ ಸ್ಥಾನಗಳ ಪೈಕಿ ಮೂರು ಪಂಚಾಯತ್ ಸಮಿತಿ ಸ್ಥಾನಗಳು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. 367 ಅಭ್ಯರ್ಥಿಗಳು ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದಾರೆ ಹಾಗೂ 555 ಅಭ್ಯರ್ಥಿಗಳು ಪಂಚಾಯತ್ ಸಮಿತಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ
85 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ ಬಿಜೆಪಿಯು ಅಧಿಕ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಆಡಳಿತವಿರುವ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಕ್ರಮವಾಗಿ 19, 15 ಹಾಗೂ 12 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಒಟ್ಟಾಗಿ ಈ ಮೂರು ಪಕ್ಷಗಳು 46 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಏತನ್ಮಧ್ಯೆ ಪಕ್ಷೇತರ ಅಭ್ಯರ್ಥಿಗಳು ನಾಲ್ಕು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಸಿಪಿಐಎಂ ಒಂದು ಸ್ಥಾನದಲ್ಲಿ ಹಾಗೂ ಬೇರೆ ಇತರೆ ಸ್ಥಳೀಯ ಪಕ್ಷಗಳು 12 ಸ್ಥಾನದಲ್ಲಿ ಜಯ ಗಳಿಸಿದೆ. ಪಂಚಾಯತ್ ಸಮಿತಿ ಉಪಚುನಾವಣೆಯಲ್ಲಿ 144 ಸ್ಥಾನಗಳ ಪೈಕಿ ಕಾಂಗ್ರೆಸ್ 36 ಸ್ಥಾನಗಳನ್ನು ತನ್ನ ಕೈ ವಶಕ್ಕೆ ಪಡೆದರೆ, ಬಿಜೆಪಿ 33, ಶಿವಸೇನೆ 23 ಹಾಗೂ ಎನ್‌ಸಿಪಿ 18 ಸೀಟುಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರ ಅಭ್ಯರ್ಥಿಗಳು ಏಳು ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಹಾಗೂ ಇತರೆ ಪಕ್ಷಗಳು 26 ಸ್ಥಾನಗಳಲ್ಲಿ ಗೆಲುವು ಸಾಧಿಸಿ ವಶಕ್ಕೆ ಪಡೆದಿದೆ. 144 ಸ್ಥಾನಗಳ ಪೈಕಿ ಮಹಾ ವಿಕಾಸ್ ಅಘಾಡಿ ಮೈತ್ರಿ ಕೂಟವು 73 ಸ್ಥಾನಗಳಲ್ಲಿ ಜಯಿಸಿದೆ.

ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ದ್ವಿಮುಖ ನಿಲುವು
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆ ಸಚಿವ ಅಶೋಕ್ ಚಾವಣ್, "ಜಿಲ್ಲಾ ಪರಿಷತ್ ಹಾಗೂ ಪಂಚಾಯತ್ ಸಮಿತಿ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಪೆಟ್ಟು ಬಿದ್ದಿದೆ. ಅದು ಮಾರಾಠ ಮೀಸಲಾಯಿಯ ವಿಚಾರದಲ್ಲಿ ಬಿಜೆಪಿಯ ದ್ವಿಮುಖ ನಿಲುವಿನಿಂದಾಗಿ ಆಗಿದೆ," ಎಂದು ಹೇಳಿದ್ದಾರೆ. "ಮರಾಢ ಮೀಸಲಾತಿ ವಿಚಾರವಾಗಲಿ ಅಥವಾ ಒಬಿಸಿ ಚುನಾವಣಾ ಮೀಸಲಾತಿ ವಿಚಾರವಾಗಲಿ, ಬಿಜೆಪಿಯು ಯಾವಾಗಲೂ ದ್ವಿಮುಖ ನಿಲುವನ್ನೇ ಹೊಂದಿದೆ. ಈ ಮೀಸಲಾತಿಯ ವಿಚಾರದಲ್ಲಿ ಒಂದು ಉತ್ತಮ ನಿರ್ಧಾರವನ್ನು ಕೈಗೊಳ್ಳುವ ಅವಕಾಶ ಬಿಜೆಪಿಯು ಕೇಂದ್ರದಲ್ಲಿ ಇರುವಾಗ ಇದೆ. ಆದರೆ ಬಿಜೆಪಿಯು ಯಾವುದೇ ಸರಿಯಾದ ನಿರ್ಧಾರವನ್ನು ಕೈಗೊಳಲ್ಲ," ಎಂದು ಟೀಕೆ ಮಾಡಿದ್ದಾರೆ.

ಈ ಹಿಂದೆ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಇತ್ತು, ಈಗ ಎಷ್ಟಿದೆ?
"ಮಹಾ ವಿಕಾಸ್ ಅಘಾಡಿ ಜಿಲ್ಲಾ ಪರಿಷತ್‌ನಲ್ಲಿ 46 ಸ್ಥಾನಗಳಲ್ಲಿ ಈ ಭಾರಿ ಜಯ ಗಳಿಸಿದೆ. ಕಳೆದ ಬಾರಿ 37 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು, ನಮಗೆ ಸ್ಥಾನಗಳ ಸಂಖ್ಯೆ ಅಧಿಕವಾಗಿದೆ," ಎಂದು ಕೂಡಾ ಹೇಳಿದ್ದಾರೆ. "ಬಿಜೆಪಿಯ ಸ್ಥಾನವು 22 ಕ್ಕೆ ಇಳಿಕೆ ಕಂಡಿದೆ. ಈ ಹಿಂದೆ 31 ಸ್ಥಾನಗಳು ಬಿಜೆಪಿಯದ್ದು ಆಗಿತ್ತು. ಹಾಗೆಯೇ ವಂಚಿತ ಬಹುಜನ ಅಘಾಡಿಯ ಸಂಖ್ಯೆಯು 12 ರಿಂದ 8ಕ್ಕೆ ಇಳಿದಿದೆ," ಎಂದು ಕೂಡಾ ವಿವರಣೆ ನೀಡಿದ್ದಾರೆ.

ಶಿವಸೇನೆಯು ದಿನ ಕಳೆದಂತೆ ಕ್ಷೀಣಿಸುತ್ತಿದೆ ಎಂದ ಫಡ್ನವೀಸ್
ಇನ್ನು ಈ ನಡುವೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್, "ಶಿವಸೇನೆಯ ಬದಲಾಗಿ ಈಗ ಯಾರು ಬೆಳೆಯುತ್ತಿದ್ದಾರೆ ಎಂಬುವುದನ್ನು ಜಿಲ್ಲಾ ಪರಿಷತ್ ಚುನಾವಣೆಯು ತೋರಿಸುತ್ತಿದೆ. ಹಾಗೆಯೇ ಉದ್ಧವ್ ಠಾಕ್ರೆಯ ಪಕ್ಷವು ಎಷ್ಟು ಕೆಳಕ್ಕೆ ಇಳಿಯುತ್ತಿದೆ ಎಂಬುವುದನ್ನು ತೋರಿಸಿದೆ," ಎಂದು ಹೇಳಿದ್ದಾರೆ. ಹಾಗೆಯೇ "ಬಿಜೆಪಿಯ ಸ್ಥಾನವು ಏರಿಕೆ ಆಗುತ್ತಿದೆ. ಬೇರೆಯವರದ್ದು ಇಳಿಕೆಯಾಗುತ್ತಿದೆ. ಶಿವಸೇನೆಯು ಭಾರೀ ಕೆಳಕ್ಕೆ ಇಳಿಯುತ್ತಿದೆ. ಮತದಾರರು ಬಿಜೆಪಿಯನ್ನು ನಂಬರ್ 1 ಪಾರ್ಟಿಯಾಗಿ ಮಾಡುತ್ತಾರೆ," ಎಂದು ಹೇಳಿದ್ದಾರೆ. ಈ ನಡುವೆ ಬಿಜೆಪಿ ಶೇಕಡ 25 ಮಾತ್ರ ಗೆಲುವು ಸಾಧಿಸಿದ್ದಾರೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications