ಕಾಡುವ ಸಾವಿರಾರು ಹಾಡುಗಳು, ಇನ್ನು ಹಾಡಲೊಲ್ಲೆಯೆಂದ ಜಾನಕಮ್ಮ...

Posted By: ಸ ರಘುನಾಥ
Subscribe to Oneindia Kannada

ನಾವು ಇಷ್ಟಪಡುವ, ಪ್ರೀತಿಸುವ, ಗೌರವಿಸುವವರಿಗೆ ವಯಸ್ಸಾಗುವುದೇ ಇಲ್ಲ ಅಂದುಕೊಂಡಿರ್ತೀವಿ. ಆ ಕಾರಣಕ್ಕೆ ಅಮ್ಮನ ಸುಸ್ತು, ಆಕೆ ತಲೆಗೂದಲಿನ ಬಿಳಿ, ಅನಾರೋಗ್ಯ ಯಾವುದೂ ನಮಗೆ ವಯಸ್ಸಾಗುತ್ತಿರುವ ಸೂಚನೆ ಅನ್ನಿಸುವುದಿಲ್ಲ. ಮಗುವಿನ ಕಂಠದಲ್ಲೂ ಹಾಡಿರುವ ಅಮ್ಮ ಎಸ್.ಜಾನಕಿಯವರು ತಮ್ಮ ಕೊನೆಯ ಕಾರ್ಯಕ್ರಮ ಇದು ಎಂದು ಘೋಷಿಸಿ, ಮೈಸೂರಿನಲ್ಲಿ ಹಾಡಿ ಮುಗಿಸಿದ್ದಾರೆ. ಈ ನಿರ್ಧಾರಕ್ಕೆ ನೀಡಿರುವುದು ವಯಸ್ಸಾಗಿದೆ ಎಂಬ ಕಾರಣ.

ಮೈಸೂರಿನಲ್ಲಿ ಇಂದು ಗಾನಕೋಗಿಲೆ ಜಾನಕಿ ಅವರ ಕೊನೆ ಸಂಗೀತ ಕಾರ್ಯಕ್ರಮ

ಅಮ್ಮ ಜಾನಕಿ ಅವರ ಹಾಡು ಕೇಳುತ್ತಲೇ ನಮಗೂ ವಯಸ್ಸಾಗಿದೆ. ಆದರೆ ಅವರಿಗೆ ಯಾವಾಗ ಎಂಬತ್ತು ವರ್ಷ ತುಂಬಿತು ಎಂಬುದು ಗೊತ್ತಾಗಲೇ ಇಲ್ಲ. ಈ ಸಂದರ್ಭಕ್ಕೆ ಸ.ರಘುನಾಥ ಅವರು ಲೇಖನವೊಂದನ್ನು ಬರೆದುಕೊಟ್ಟಿದ್ದಾರೆ. -ಸಂಪಾದಕ

*****

ನಮ್ಮ ಮನಸುಗಳನ್ನು ತನ್ನ ಗಾಯನದ ಮೂಲಕ ಅರಳಿಸಿದ, ಹಿಂಡಿದ, ಇಂಪಿನ ಸವಿಯಲ್ಲಿ ಹೊರಳಿ ಹೊರಳಿ ಸುಖದಲ್ಲಿಯೂ ನರಳಿಸಿದ ಎಸ್.ಜಾನಕಿಯವರು 28.10.2017ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇದೇ ನನ್ನ ಕೊನೆಯ ಕಾರ್ಯಕ್ರಮವೆಂದು ಸಾರಿ, ಮಾಧುರ್ಯದ ಜ್ವಾಲೆಯಲ್ಲಿ ಹೃದಯಕ್ಕೆ ನಿರಾಸೆಯ ಮುಸುಕು ಹೊದೆಸಿದರು.

ಈ ಘೋಷಣೆಯೊಂದಿಗೆ ದೀರ್ಘ ಕಾಲದ ತಮ್ಮ ಗಾಯನ ಜೀವನಕ್ಕೆ 80ನೇ ವಯಸ್ಸಿನಲ್ಲಿ ಸ್ವಸ್ತಿ ನುಡಿ ಹಾಡಿದರು.

ತ್ಯಾಗರಾಜರು ತಮ್ಮ ಕೀರ್ತನೆಯೊಂದರಲ್ಲಿ 'ಮಾ ಜಾನಕಿ ಚೆಟ್ಟ ಪಟ್ಟಗ ಮಹರಾಜ ವೈತಿವಿ' (ನಮ್ಮ ಜಾನಕಿ ಕೈ ಹಿಡಿಯೆ ಮಹರಾಜನಾದೆ) ಎಂದು ರಾಮನಿಗೆ ಹೇಳುತ್ತಾರೆ. ಸಿನೆಮಾ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಈ ಕೀರ್ತನೆಯನ್ನು ಅನ್ವಯಿಸಿದಾಗ 'ನಮ್ಮ ಜಾನಕಿಯ ಕೈ ಹಿಡಿದು ಇಂಪಿನ ಮಹರಾಜನಾದೆ' ಎಂದು ಹೇಳಿದರೆ ಉತ್ಪ್ರೇಕ್ಷೆಯಾಗದು.

'ಹಾಲಲಿ ಮಿಂದವಳೋ ದಂತದ ಮೈಯವಳೋ / ಹುಣ್ಣಿಮೆ ಹೆಣ್ಣಾದಳೋ' ಎಂಬ ಗೀತೆಗೆ ಉಪಮೆಗಳಂತೆ ಕಾಣುವ ಭಾರತಿ, ಜಯಂತಿ, ಆರತಿ, ಲೀಲಾವತಿ, ಹರಿಣಿ, ಬಿ.ಸರೋಜಾದೇವಿ, ಭಾನುಮತಿ, ಅಂಜಲಿ, ಜಮುನಾ, ಸಾವಿತ್ರಿ, ರಾಜಶ್ರೀ ಕೆ.ಆರ್ ವಿಜಯಾ, ಜಯಪ್ರದಾ, ಗೀತಾ, ಮಾಧವಿ, ... ಅವರಂತಹ ನಟಿಯರು ತೆರೆಯ ಮೇಲೆ ತುಟಿ ಆಡಿಸುತ್ತ ಅಭಿನಯಿಸುವುದನ್ನು ಕಂಡಾಗ ಜಾನಕಿಯವರ ಗಾಯನದಿಂಪು ಹೀಗೆ ಚೆಲುವಿನ ರೂಪ ತಳೆದಿವೆಯೇ ಅನ್ನಿಸುತ್ತಿತ್ತು.

ವಾದ್ಯಗಳು ಕೊರಳಿಗಾಗಿ ಹಸಿದಿದ್ದವು

ವಾದ್ಯಗಳು ಕೊರಳಿಗಾಗಿ ಹಸಿದಿದ್ದವು

ಜಾನಕಿಯವರು ಹಾಡಿದ ಯಾವ ಹಾಡು ಇಂಪಲ್ಲ, ಯಾವುದು ಭಾವ ತುಂಬಿ ತುಳುಕುತ್ತಿಲ್ಲ ಎಂದು ಹುಡುಕಿದರೆ ಆ ಹುಡುಕಾಟಕ್ಕೆ ಸೋಲು 100% ಗ್ಯಾರಂಟಿ. ಹಾಡಿಗೆ ನುಡಿಯುವ ವಾದ್ಯಗಳು ಈಕೆಯ ಕೊರಳಿಗಾಗಿ ಹಸಿದಿದ್ದು ಈಗ ಆ ಹಸಿವೆಯನ್ನು ತೀರಿಸಿಕೊಳ್ಳುತ್ತಿವೆಯೆ ಎಂಬಂತೆ ನುಡಿಯತೊಡಗಿವೆ ಅನ್ನಿಸುತ್ತದೆ.

ಎರಡು ಬಟ್ಟಲ ಜೇನು ಒಂದು ಬಟ್ಟಲಿಗೆ ತುಂಬಿದಂತೆ

ಎರಡು ಬಟ್ಟಲ ಜೇನು ಒಂದು ಬಟ್ಟಲಿಗೆ ತುಂಬಿದಂತೆ

ಎಲ್ಲೆಲ್ಲಿಯೋ ಇದ್ದ ನಾದ ಸುಖವನ್ನು ಅರಸಿ ಜಾನಕಿಯವರ ಕೊರಳಲ್ಲಿ ಆಶ್ರಯ ಪಡೆದವೆ ಅನ್ನಿಸುವುದೂ ಉಂಟು. ಕೇಳಿದ್ದ ಹಾಡನ್ನೇ ಕೇಳುತ್ತಿದ್ದೇವೆ ಅನ್ನಿಸದಂತೆ ಮಾಡುವ ಮಾಯಕದ ಗಾಯನ ಈ ಅಮ್ಮನದು. ಪಿ.ಬಿ.ಶ್ರೀನಿವಾಸರೊಂದಿಗೆ ಹಾಡಿದ ಗೀತೆಗಳು ಎರಡು ಬಟ್ಟಲ ಜೇನನ್ನು ಒಂದೇ ಬಟ್ಟಲಿಗೆ ತುಂಬಿದಂತೆ.

ಎಷ್ಟೊಂದು ಅದ್ಭುತ ಹಾಡುಗಳು

ಎಷ್ಟೊಂದು ಅದ್ಭುತ ಹಾಡುಗಳು

ಇಂದೇನು ಹುಣ್ಣಿಮೆಯೋ ರತಿದೇವಿ ಮೆರವಣಿಗೆಯೋ(ಪೋಸ್ಟ್ ಮಾಸ್ಟರ್), ಬಾರಾ ಚಂದ್ರಮ (ಸ್ಡರ್ಣಗೌರಿ), ನಲಿವ ಮನ (ನಂದಾ ದೀಪ), ಬೆಳುದಿಂಗಳಿನಾ ನೊರೆ ಹಾಲು (ನಾ ಮೆಚ್ಚಿದ ಹುಡುಗ), ಕಣ್ಣರೆಪ್ಪೆ ಒಂದನೊಂದು ಮರೆವುದೆ (ಪರೋಪಕಾರಿ), ಬಹುಜನ್ಮದ ಪೂಜಾಫಲ (ಶ್ರೀ ಕೃಷ್ಣದೇವರಾಯ), ನಾನೇ ವೀಣೆ ನೀನೆ ತಂತಿ (ಮಾವನ ಮಗಳು), ಮಲೆನಾಡಹೆಣ್ಣ ಮೈ ಬಣ್ಣ (ಬೂತಯ್ಯನ ಮಗ ಅಯ್ಯು),

ಉಪಾಸನೆ ಚಿತ್ರದ ಭಾವವೆಂಬ ಹೂವು ಅರಳಿ, ಆಚಾರವಿಲ್ಲದ ನಾಲಗೆ, ಭಾರತ ಭೂಷಿರ ಮಂದಿರ ಸುಂದರಿ ಮುಂತಾದವು ನಿತ್ಯ ಇಂಪಿನಲ್ಲಿ ಕೇಳಿಬರುವ ಗೀತೆಗಳಾದರೆ, ಗಗನವು ಎಲ್ಲೋ ಭೂಮಿಯು ಎಲ್ಲೋ (ಗೆಜ್ಜೆಪೂಜೆ), ನಿನ್ನ ಸವಿನೆನಪೇ ಆರಾಧನೆ (ಅನುರಾಗ ಬಂಧನ), ಯುಗಯುಗಾದಿ ಕಳೆದರೂ (ಕುಲವಧು), ಶರಣು ವಿರೂಪಾಕ್ಷ ಶಶಿಶೇಖರ (ಶ್ರೀ ಕೃಷ್ಣದೇವರಾಯ), ಮತಿ ಬೇಕು ಸುಗುಣ ಮತಿಗೆ(ದುಡ್ಡೇ ದುಡ್ಡಪ್ಪ),

ಮನೆಯೇ ಗುಡಿಯಮ್ಮ(ಗೃಹ ಲಕ್ಷ್ಮಿ), ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ, ಮಂಗಳದ ಈ ಸುದಿನ (ನಾ ಮೆಚ್ಚಿದ ಹುಡುಗ), ಬರೆದೆ ನೀನು ನಿನ್ನ ಹೆಸರ (ಸೀತಾ), ಬೇಡ ಕೃಷ್ಣ ರಂಗಿನಾಟ (ಸಂತ ತುಕಾರಾಮ್), ಆಡೋಣ ಬಾ ಬಾ ಗೋಪಾಲ (ಮಲ್ಲಿ ಮದುವೆ), ಮಿಸ್ ಲೀಲಾವತಿ ಸಿನೆಮಾದ ರಾಮಚಂದ್ರರೊಂದಿಗೆ ಹಾಡಿದ ದೋಣಿ ಸಾಗಲಿ ಮುಂದೆ ಹೋಗಲಿ ಮುಂತಾದವು ಜಾನಕಮ್ಮನ ಹಾಡುಗಾರಿಕೆಯ ಹೈಲೈಟ್ ಗಳು.

ಆರ್ದ್ರತೆ ತುಂಬಿ ಕೊರಳು ಕಟ್ಟುತ್ತದೆ

ಆರ್ದ್ರತೆ ತುಂಬಿ ಕೊರಳು ಕಟ್ಟುತ್ತದೆ

ಎರಡು ಕನಸು ಚಿತ್ರದ ಪೂಜಿಸಲೆಂದೇ ಹೂಗಳ ತಂದೆ ಮತ್ತು ಇಂದು ಎನಗೆ ಗೋವಿಂದ ಗೀತೆಗಳು ಮಾಧುರ್ಯ ಸಹಿತ ಆರ್ದ್ರತೆಯನ್ನು ತುಂಬಿಕೊಂಡು ನಮ್ಮ ಕೊರಳನ್ನು ಕಟ್ಟಿಸುತ್ತವೆ. ​ಕನಕ ದಾಸರ ಮತ್ತು ತ್ಯಾಗರಾಜರ ಕೃತಿಗಳನ್ನು ಶಾಸ್ತ್ರೀಯವಾಗಿಯೂ ಮತ್ತು ಸುಗಮ ಸಂಗೀತ ಶೈಲಿಯಲ್ಲಿ ಜಾನಕಿಯವರು ಸುಮಧುರ, ಸುಕೋಮಲ, ಸುಶ್ರಾವ್ಯವಾಗಿ ಹಾಡಿದ್ದಾರೆ. ಇಲ್ಲಿ ಥಟ್ಟನೆ ನೆನಪಾಗುವುದು ‘ಎವರನೀ ನೀವೆವರನೀ, ನಗುಮೋಮು ಗನಲೇನಿ' ಮುಂತಾದುವು.

ಜಾನಕಿಯವರ ಸವಿಗಾನದಲ್ಲಿ ಮಗ್ನರಾಗಿರುವಾಗ ಪಂಚಾಮೃತ ಕುಡಿಯೆಂದು ತುಟಿಗೇ ಹಿಡಿದಾಗ ಮುಖಭಾವ ಈ ಗಾನಾಮೃತದ ವಾಹಿನಿ ನಿಲ್ಲಲಿ ಇರು ಎಂದು ಹೇಳುತ್ತದೆ ಎಂದರೆ ಅತಿಶಯೋಕ್ತಿ ಆಗದು ಅನ್ನಿಸುತ್ತದೆ.

17 ಭಾಷೆಗಳ 48,000 ಹಾಡುಗಳು

17 ಭಾಷೆಗಳ 48,000 ಹಾಡುಗಳು

ಜಾನಕಮ್ಮನ ನಿವೃತ್ತಿ ನಿರ್ಧಾರವನ್ನು ಕೇಳಿದಾಗ ನೆನಪಾಗಿದ್ದು ಕನ್ನಡದ ಸುಕುಮಾರ ಭಾಷೆಯ ಕವಿಗಳಲ್ಲಿ ಒಬ್ಬರಾದ ಜಿ.ಎಸ್. ಶಿವರುದ್ರಪ್ಪನವರ ಈ ಗೀತೆಯ ಕೆಳಗಿನ ಸಾಲುಗಳು:

​ಹಮ್ಮು ಬಿಮ್ಮು ಒಂದು ಇಲ್ಲ

​ಹಾಡು, ಹೃದಯ ತೆರೆದಿದೆ

​ಹಾಡಿನಲ್ಲಿ ಲೀನವಾಗ -

​ಲೆನ್ನ ಮನವು ಕಾದಿದೆ

​ಇನ್ನು ಮುಂದೆ ಹೃದಯಗಳು ಈ ನುಡಿಗಳನ್ನು ನೆನೆಯುತ್ತಲೇ ಜಾನಕಿಯವರನ್ನು ಅವರು ಹಾಡಿದ 17 ಭಾಷೆಗಳ 48,000 ಹಾಡುಗಳ ಮೂಲಕ ಹೃದ್ಗತಗೊಳಿಸಿಕೊಳ್ಳಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tribute to singer S Janaki songs, who announced retirement in Mysuru on October 28th. S.Janaki sung more than 48,000 songs in 17 language. Here is an article by Sa Raghunatha.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ