ಜ್ಞಾನೋದಯ ಎನ್ನುವುದು ಹೇಗೆ ಸಿಗುತ್ತದೆ ಗೊತ್ತೇ?
ಚೀನಾದ ಪೇಕಿಂಗ್ ಎಂಬಲ್ಲಿ ಒಬ್ಬ ಝೆನ್ ಗುರುವಿದ್ದ. ಆತ ಮಾತನಾಡುತ್ತಿದ್ದದ್ದೇ ಬಹಳ ವಿರಳ. ಯಾವಾಗಲೂ ಕೆಲಸದಲ್ಲಿಯೇ ಮಗ್ನನಾಗಿರುತ್ತಿದ್ದ. ತರುಣನೊಬ್ಬ ಆತನನ್ನು ಯಾವಗಲೂ ಗಮನಿಸುತ್ತಿದ್ದ. ಒಮ್ಮೆ ಝೆನ್ ಗುರುವಿನ ಮನೆಗೆ ತೆರಳಿ ಅವನನ್ನು ಭೇಟಿಯಾದ.
Recommended Video
ಗುರುವಿಗೆ ನಮಸ್ಕರಿಸಿ, 'ಗುರುಗಳೇ ನಿಮಗೆ ಒಂದು ಪ್ರಶ್ನೆ ಕೇಳಬಹುದೇ' ಎಂದು ಕೇಳಿದ. 'ಕೇಳು' ಎಂದ ಗುರು.
'ನಿಮಗೆ ಜ್ಞಾನೋದಯವಾಗಿದೆ ಎಂದು ಇಡೀ ದೇಶದಲ್ಲಿ ಎಲ್ಲರೂ ಹೇಳುತ್ತಾರೆ. ಅದು ನಿಜವೇ?' ಎಂದು ಕುತೂಹಲದಿಂದ ಪ್ರಶ್ನಿಸಿದ.
'ಅದು ನನಗೇನು ಗೊತ್ತು? ಅದೆಲ್ಲವೂ ಅವರಿವರು ಹೇಳುವ ಮಾತು. ನನಗೆ ಜ್ಞಾನೋದಯವಾಗಿದೆ ಎಂದು ನಾನು ಹೇಳಿದರೆ ನನಗೆ ಜ್ಞಾನೋದಯವಾಗಲೇ ಇಲ್ಲ ಎಂದಂತೆ. ಯಾಕೆಂದರೆ ಜ್ಞಾನೋದಯವಾದವನು ಎಂದಿಗೂ ಅದನ್ನು ಬಾಯಿಬಿಟ್ಟು ಹೇಳಿಕೊಳ್ಳಲಾರ. ಹೇಳಿದರೆ ಆತನಲ್ಲಿ ಅಹಂಕಾರ ಇನ್ನೂ ಇದೆ ಎಂದರ್ಥ' ಎಂದ ಗುರು.

ತರುಣನ ಕುತೂಹಲ ಹೆಚ್ಚಿತು, 'ನೀವು ಜ್ಞಾನೋದಯ ಆಗುವುದಕ್ಕೂ ಮುಂಚೆ ಯಾವ ಕೆಲಸ ಮಾಡುತ್ತಿದ್ದಿರಿ?' ಎಂದು ಪ್ರಶ್ನಿಸಿದ.
'ನನ್ನ ಕೆಲಸವೇ? ಕಾಡಿಗೆ ಹೋಗಿ ಒಣಗಿದ ಮರ ಕತ್ತರಿಸಿ ಕಟ್ಟಿಗೆ ತರುವುದು ಮತ್ತು ದೂರದ ಬಾವಿಯಿಂದ ಮನೆಯ ಮಂದಿಗೆಲ್ಲ ಬೇಕಾಗುವಷ್ಟು ನೀರು ತಂದು ತಂಬುವುದು' ಎಂದ ಝೆನ್ ಗುರು.
'ಹಾಗಾದರೆ ಜ್ಞಾನೋದಯವಾದ ಮೇಲೆ ಯಾವ ಕೆಲಸ ಮಾಡುತ್ತಿದ್ದೀರಿ' ತರುಣನ ಕುತೂಹಲ ಕಡಿಮೆಯಾಗಲಿಲ್ಲ.
'ಅದೇ ಕೆಲಸ. ಕಾಡಿಗೆ ಹೋಗಿ ಒಣಗಿದ ಮರ ಕತ್ತರಿಸಿ ಕಟ್ಟಿಗೆ ತರುವುದು ಮತ್ತು ಮನೆಯವರಿಗೆಲ್ಲ ಎಷ್ಟು ಬೇಕೋ ಅಷ್ಟು ನೀರನ್ನು ಬಾವಿಯಿಂದ ಹೊತ್ತು ತರುವುದು'.
ತರುಣ ಮತ್ತೆ ಪ್ರಶ್ನಿಸಿ, 'ನನಗೆ ಇದು ಅರ್ಥವೇ ಆಗುತ್ತಿಲ್ಲ. ಜ್ಞಾನೋದಯ ಆಗುವ ಮೊದಲು ಮಾಡುತ್ತಿದ್ದ ಕೆಲಸವನ್ನೇ ಈಗಲೂ ಮಾಡುತ್ತಿದ್ದೀರಿ. ಹಾಗಾದರೆ ಜ್ಞಾನೋದಯವಾಗಿದ್ದರ ಫಲವೇನು?'.
ಗುರು ತರುಣನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ ಹೇಳಿದ, 'ಜ್ಞಾನೋದಯವೆಂದರೆ ವ್ಯಾಪಾರವೇ, ಏನಾದರೂ ಲಾಭ ಪಡೆಯಲು. ನಾನು ಆಗಲೂ, ಈಗಲೂ ಮಾಡುವ ಕೆಲಸ ಒಂದೇ. ವ್ಯತ್ಯಾಸವೆಂದರೆ ಮೊದಲು ನನಗೆ ಈ ಕೆಲಸ ಮಾಡಲೇಬೇಕಾದ ಕರ್ತವ್ಯವಾಗಿತ್ತು. ಆದರೆ ಈಗ ಅದೇ ಕೆಲಸ ನನಗೆ ಅತ್ಯಂತ ತೃಪ್ತಿ ನೀಡುವ ಸಂಗತಿಯಾಗಿದೆ. ಇಷ್ಟುದಿನ ನನಗೆ ಕರ್ತವ್ಯ ಎಂದು ಭಾಸವಾಗಿದ್ದು, ಈಗ ಸಂತೋಷ ನೀಡುವ ಮಾರ್ಗವಾಗಿದೆ. ಕೆಲಸ ಅದೇ. ಆದರೆ, ಮನೋಧರ್ಮ ಬದಲಾಗಿದೆ.
ನಾವು ಯಾವ ಕೆಲಸ ಮಾಡುತ್ತೀವೋ ಅದನ್ನು ಹೊರೆ ಅಥವಾ ಕಷ್ಟ ಎಂದು ಭಾವಿಸಿದರೆ ನಮಗೆ ಜೀವನದ ಆನಂದ ಸಿಗುವುದಿಲ್ಲ. ಸಿಕ್ಕ ಕೆಲಸವನ್ನು ಪ್ರೀತಿಯಿಂದ ಮಾಡಿದರೆ ಅದು ಕೆಲಸ ಎಂಬ ಭಾವನೆಯೇ ಮೂಡುವುದಿಲ್ಲ. ಆಗ ನಮಗೆ ಸಿಗುವ ಸಂತಸ ದುಪ್ಪಟ್ಟು. ಅಯ್ಯೋ, ಈ ಕೆಲಸ ಯಾರು ಮಾಡುತ್ತಾರೆ, ಅದೇ ಕೆಲಸ ಬೇಜಾರು ಎಂದೆನಿಸಿದರೆ ಜೀವನದ ಅಮೂಲ್ಯ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತೀರಿ.(ಸಂಗ್ರಹ)












Click it and Unblock the Notifications