ಆಗೋದೆಲ್ಲಾ ಒಳ್ಳೆಯದಕ್ಕೇ... ಯಾಕೆ ಗೊತ್ತೇ?
ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನ ಬಳಿ ಒಂದು ಕುದುರೆ ಇತ್ತು. ಆ ಕುದುರೆ ಒಂದು ದಿನ ಬೆಳಿಗ್ಗೆ ಓಡಿಹೋಯಿತು. ಹಳ್ಳಿಯ ಜನ ಆತನ ಬಳಿ ಬಂದು, "ಅಯ್ಯೋ, ಛೇ! ನಿನ್ನ ಕುದುರೆ ಕಳೆದುಹೋಗಬಾರದಿತ್ತು'' ಎಂದು ಸಂತಾಪ ವ್ಯಕ್ತಪಡಿಸಿದರು. ಮರುದಿನ ಆ ಕುದುರೆ ಕಾಡಿನಿಂದ ಮೂರು ಕಾಡುಕುದುರೆಗಳನ್ನು ಕರೆದುಕೊಂಡು ರೈತನ ಮನೆಗೆ ಹಿಂದಿರುಗಿತು. "ವಾಹ್! ಎಷ್ಟು ಒಳ್ಳೆಯದಾಯಿತು'' ಎಂದು ಮತ್ತೆ ಉಳಿದ ರೈತರು ಸಂತೋಷ-ಆಶ್ಚರ್ಯ ವ್ಯಕ್ತಪಡಿಸಿದರು. ಆದರೆ ರೈತ ಸುಮ್ಮನೆ, "ಇರಬಹುದು'' ಎಂದಷ್ಟೇ ಹೇಳಿದ.
ಮರುದಿನ ರೈತನ ಮಗ ಆ ಮೂರು ಕಾಡು ಕುದುರೆಗಳಲ್ಲಿ ಒಂದರ ಮೇಲೆ ಹತ್ತಿ ಸವಾರಿ ಮಾಡಲು ಹೋಗಿ ಕಾಲು ಮುರಿದುಕೊಂಡ. ಮತ್ತೆ ಹಳ್ಳಿಯ ಜನ ಬಂದು, "ಅಯ್ಯೋ ಪಾಪ ಹೀಗಾಗಬಾರದಿತ್ತು'' ಎಂದು ಸಂತಾಪ ವ್ಯಕ್ತಪಡಿಸಿದರು. ಆಗಲೂ ರೈತ "ಇರಬಹುದು'' ಎಂದಷ್ಟೇ ಹೇಳಿದ.
ಅದಾದ ಮರುದಿನ ರಾಜನ ಸೈನಿಕರು ಹಳ್ಳಿಗೆ ಬಂದು, "ಯುದ್ಧ ಶುರುವಾಗುತ್ತದೆ, ನಿಮ್ಮ ಮನೆಗಳಲ್ಲಿ ಇರುವ ಯುವಕರನ್ನು ಕೂಡಲೇ ಸೈನ್ಯಕ್ಕೆ ಸೇರಿಸಿ'' ಎಂದು ಹೇಳಿ ತಕ್ಷಣ ಆ ಹಳ್ಳಿಯ ಎಲ್ಲ ಆರೋಗ್ಯವಂತ ಯುವಕರನ್ನು ಎಳೆದುಕೊಂಡು ಹೋದರು. ಈ ರೈತನ ಮಗನ ಕಾಲು ಮುರಿದಿದ್ದರಿಂದ ಅವನನ್ನು ಅಲ್ಲಿಯೇ ಬಿಟ್ಟು ಹೋದರು. ಉಳಿದ ಜನ ಬಂದು, "ನಿನ್ನ ಮಗನ ಕಾಲು ಮುರಿದದ್ದು ಒಳ್ಳೆಯದೇ ಆಯಿತು. ಅಭಿನಂದನೆ'' ಎಂದು ಹೇಳಿದರು. ರೈತ ಸುಮ್ಮನೆ "ಇರಬಹುದು'' ಎಂದು ಹೇಳಿದ.

ನಾವು ಎಲ್ಲ ವಿಷಯಗಳಿಗೂ ಒಂದೊಂದು ರೀತಿ ಪ್ರತಿಕ್ರಿಯೆ ನೀಡುತ್ತೇವೆ. ಅದು ಹೀಗೆ ಆಯಿತು ಎಂದು ತೀರ್ಪು ನೀಡಿಕೊಳ್ಳುತ್ತೇವೆ. ಆದದ್ದೆಲ್ಲ ಒಳ್ಳೆಯದಕ್ಕೆ ಎಂಬ ಮನೋಭಾವದಲ್ಲಿ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಸಾವಧಾನವಾಗಿ ಸ್ವೀಕರಿಸಿದರೆ ಕೆಟ್ಟ ಸಂಗತಿಯಲ್ಲಿಯೂ ಒಳಿತನ್ನು ಕಂಡುಕೊಳ್ಳಲು ಸಾಧ್ಯ ಎನ್ನುವುದು ಈ ಝೆನ್ ಕಥೆಯ ಸಾರ.












Click it and Unblock the Notifications