ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ತೇದಾರಿ ಕಾದಂಬರಿ: ತಬ್ಬಲಿಯು ನೀನಾದೆ ಮಗಳೇ

ಆಕೆ ಯಾಕೆ ಆ ಕೊಲೆಗಳನ್ನು ಮಾಡಿದಳು, ಯಾರನ್ನು ಈ ಪ್ರಕರಣಗಳಲ್ಲಿ ಸಿಕ್ಕಿಹಾಕಿಸಲು ನೋಡಿದಳು. ಒಂದೊಂದೇ ವಿಷಯವನ್ನು ಹೇಳುತ್ತಾ ಕೊಲೆಗಳಿಗೆ ಕಾರಣ ಬಿಚ್ಚಿಟ್ಟಳು ಆಕೆ

By ಬಸವರಾಜ್ ಕಂಠಿ
|
Google Oneindia Kannada News

ರಾತ್ರಿ ಸುಮಾರು ಹತ್ತು ಗಂಟೆಗೆ ಭೈರೇಗೌಡ ಕರೆ ಮಾಡಿದ.

"ಡಿಎನ್ ಎ ರಿಪೋರ್ಟ್ ಎರಡು ದಿನಾ ಆದ್ಮೇಲೆ ಬರುತ್ತಂತೆ. ಆದ್ರೆ ಫಿಂಗರ್ ಪ್ರಿಂಟ್ ರಿಪೋರ್ಟ್ ಬಂದಿದೆ. ಆ ಡಬ್ಬಿ ಮೇಲೆ ಇರೋ ಗುರುತು ರೂಪಾ ಫಿಂಗರ್ ಪ್ರಿಂಟ್ ಜೊತೆ ಮ್ಯಾಚ್ ಆಗ್ತಿದೆ".

ನನ್ನ ಊಹೆ ನಿಜವಾಗಿತ್ತು. ಆದರೆ ನನ್ನನ್ನು ಕಾಡುತ್ತಿದ್ದ ಪ್ರಶ್ನೆ ಆ ಮಾಯವಾಗಿದ್ದ ಹೊತ್ತಗೆಗಳು. ಅದೇ ಕ್ಷಣಕ್ಕೆ ಥಟ್ ಅಂತ ಉತ್ತರ ಹೊಳೆಯಿತು. ಭೈರೇಗೌಡನಿಗೆ ಕೇಳಿದೆ,[ಕಾದಂಬರಿ ಮೊದಲನೇ ಭಾಗ]

"ರಶ್ಮಿ ಮತ್ತು ನೇತ್ರಾ ಮನೆಗೆ ಹೋದ್ರಾ?"

"ಹೂಂ ಸರ್. ನಮ್ಮ ಗಾಡಿಯಲ್ಲೇ ಕಳಿಸಿಕೊಟ್ಟೆ. ನಾನು ಈಗ ಸ್ಟೇಷನ್ನಿಗೆ ಬಂದೆ. ಯಾಕೆ? ಏನಾಯ್ತು?".
***************************************

ಕಾರಿನಲ್ಲಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ ರಶ್ಮಿ ಮತ್ತು ನೇತ್ರಾ ಅವರನ್ನು, ಮನೆಗೆ ಬಿಡಲು ಬಂದಿದ್ದ ಪೊಲೀಸರೇ ಸರಳವಾಗಿ ಹಿಡಿದು ಮರಳಿ ಅವರ ಮನೆಗೇ ಕರೆದುಕೊಂಡು ಹೋಗಿದ್ದರು. ಕಾರಿನ ಡಿಕ್ಕಿಯಲ್ಲಿ ದೊಡ್ಡದಾದ ಎರಡು ಬ್ಯಾಗ್ ಗಳು ಇದ್ದವಂತೆ. ಕತ್ತಲಾದ ಮೇಲೆ ಬಂಧಿಸುವಂತಿಲ್ಲವಾದ್ದರಿಂದ, ನಾನು ಮತ್ತು ಭೈರೇಗೌಡ ರಶ್ಮಿಯ ಮನೆಗೇ ಹೋದೆವು.

Arrest

ಅಷ್ಟರಲ್ಲಿ ರೂಪಾ ಕೂಡ ಅಲ್ಲಿಗೆ ಬಂದಿದ್ದಳು. ರಶ್ಮಿ ಮಂಕಾಗಿ ಎದುರಿನ ಗೋಡೆಯನ್ನೇ ದಿಟ್ಟಿಸುತ್ತಾ ಸೋಫಾದ ಮೇಲೆ ಕೂತಿದ್ದಳು, ನೇತ್ರಾ ಅವಳ ಮಡಿಲಲ್ಲಿ ತಲೆಯಿಟ್ಟು ಮಲಗಿದ್ದಳು. ಅಲ್ಲಿ ಒಬ್ಬ ಗಂಡಸು ಮತ್ತು ಹೆಂಗಸು ಪೇದೆಗಳಿದ್ದರು.

ಭೈರೇಗೌಡ ಹೇಳಿದ, "ನೋಡಿ, ನಿಮ್ಮನ್ನ ಅರೆಸ್ಟ್ ಮಾಡಬೇಕಾಗಬಹುದು. ನಿಮ್ಮ ಸಹಾಯಕ್ಕೆ ಯಾರನ್ನಾದರೂ ಕರೆಸಬೇಕು ಎನಿಸಿದರೆ ಫೋನು ಮಾಡಿ ಕರೆಸಬಹುದು".

ಅವನೆಡೆಗೆ ನೋಡದೆಯೇ ರಶ್ಮಿ ತಲೆ ಅಲ್ಲಾಡಿಸಿದಳು.

ನಾನು ಮಾತಾಡಿದೆ, "ನೀನೇ ಕೊಲೆ ಮಾಡಿದ್ದೀಯಾ ಅಂತಾ ನನಗೆ ಅನಿಸಿತ್ತು, ಆದರೆ ಡಿಎನ್ ಎ ರಿಪೋರ್ಟ್ ಬರಲಿ ಅಂತ ಸುಮ್ಮನಿದ್ದೆ. ಎಲ್ಲೋ ಮನಸ್ಸಿನ ಒಂದು ಕಡೆ ನೀನು ಕೊಲೆ ಮಾಡಿರದಿರಲಿ ಎಂದು ಅನಿಸುತ್ತಿತ್ತು. ನಿನ್ನಂತಹ ಇಂಡಿಪೆಂಡೆಂಟ್ ಹುಡುಗಿಯರನ್ನ ಕಂಡ್ರೆ ನನಗೆ ತುಂಬಾ ಇಷ್ಟ. ಛೇ... ಏನ್ ಮಾಡೋದು. ಸತ್ಯ ಕಹಿಯಾಗಿರುತ್ತೆ". ಅವಳ ಮುಖದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ನಾನು ಒಂದೆರಡು ಕ್ಷಣ ತಡೆದೆ. ಅವಳ ಕಣ್ಣಿನಿಂದ ನೀರು ಹನಿಯಿತು.

"ನನಗೆ ಕೊಲೆಯ ಕಾರಣ ಮಾತ್ರ ಹೇಳಿಬಿಡು", ಎಂದೆ.

ಅವಳು ಕಣ್ಣು ಒರೆಸಿಕೊಳ್ಳುತ್ತಾ, ನಿಧಾನವಾಗಿ ಬಾಯಿ ತೆರೆದಳು, "ನನ್ನ ತಂಗಿ ಡಿಪ್ರೆಶನ್ ಹೋಗಿದ್ದು ಅಮ್ಮ ತೀರಿಹೋಗಿದ್ದಕ್ಕೆ ಅಲ್ಲಾ... ಒಬ್ಬ ಅವಳಿಗೆ ಲವ್ ಮಾಡಿ ಮೋಸ ಮಾಡಿದ್ದ... ಹುಡುಗಿಯರನ್ನ ಆಟದ ಗೊಂಬೆಯಂತೆ ನೋಡೋ ಹುಡಗರನ್ನ ಕಂಡ್ರೆ ನನಗೆ ಮೈಯೆಲ್ಲಾ ಉರೀತಿತ್ತು. ನನ್ನ ತಂಗಿಗೇ ಹೀಗಾದ ಮೇಲೆ ಅಂಥವರನ್ನ ಮುಗಿಸಿ ಬಿಡಬೇಕು ಅಂತ ತೀರ್ಮಾನಿಸಿದೆ. ಅಂತಹ ಸಾಕಷ್ಟು ಹುಡುಗ್ರು ರೂಪಾಳ ಜೊತೆ ಈ ಮನೆಗೆ ಬಂದ್ ಹೋಗಿದ್ರು. ಶ್ರೇಯಸ್ ಕೂಡ ಒಬ್ಬ ಹುಡುಗಿಗೆ ಮೋಸ ಮಾಡಿದ್ದ ಅಂತ ರೂಪಾನೇ ಹೇಳಿದ್ಳು."

ನಾನು ನಿಟ್ಟುಸಿರು ಬಿಟ್ಟೆ. "ರೂಪಾನಾ ಸಿಕ್ ಹಾಕಿಸ್ಬೇಕು ಅಂತಾ ಯಾಕೆ ಯೋಚಿಸ್ದೆ?"

"ಅವಳಂಥವರೇ ಈ ಹುಡುಗ್ರು ಹಾಳಾಗೋದಕ್ಕೆ ಕಾರಣ ಅನಿಸ್ತು. ಅದಕ್ಕೇ ಈ ಸಲ ಕೊಲೆ ಮಾಡ್ದಾಗ ಅವಳ ಫೌಂಡೇಷನ್ ಡಬ್ಬಿ ಅಲ್ಲಿ ಬಿಟ್ಟು ಬಂದಿದ್ದೆ".

"ಆ ಡಬ್ಬಿನೇ ನನಗೆ ರೂಪಾ ಈ ಕೊಲೆ ಮಾಡಿಲ್ಲ ಅಂತಾ ಹೇಳ್ತು. ಅಷ್ಟು ಅಚ್ಚುಕಟ್ಟಾಗಿ ಮಾಡಿದ್ದ ಕೊಲೆಯಲ್ಲಿ ಆ ಡಬ್ಬಿ ಇರಬಾರದಾಗಿತ್ತು, ಅದೂ ನಮ್ಮ ಕಣ್ಣಿಗೆ ಸರಳವಾಗಿ ಕಾಣಿಸೋ ರೀತಿ." ನನ್ನ ಮಾತಿಗೆ ಭೈರೇಗೌಡನ ಹಿಂದೆ ನಿಂತಿದ್ದ ಪೇದೆ ತಲೆದೂಗಿದ. "ಇನ್ನು ಆ ಕಳ್ಳ ಹುಷಾರಿಲ್ಲದೆ ಮಲಗಿದ್ದಾಗ, ಬೇರೆ ದಾರಿ ಕಾಣದೆ, ಎಲ್ಲಿ ನಿನ್ನ ಮಿಕ ಕೈ ಬಿಟ್ಟು ಹೋಗುತ್ತದೋ ಅಂತಾ ನಿನ್ನ ಹಳೇ ಮೊಬೈಲನ್ನೇ ಬಳಸಿ, ನಂತರ ಅದು ಕಳ್ದೋಗಿದೆ ಅಂತಾ ಹೇಳ್ದೆ, ಅಲ್ವಾ?"

ಅವಳು ಕಣ್ಣೀರು ಒರೆಸುತ್ತಾ ತಲೆದೂಗಿದಳು.

ನಾನು ರೂಪಾಳ ಕಡೆಗೆ ತಿರುಗಿ ಕೇಳಿದೆ, "ನೀನು ಡಿ.ಎನ್.ಎ ಟೆಸ್ಟ್ ಬಗ್ಗೆ ರಶ್ಮಿಗೆ ಯಾವಾಗ ಹೇಳ್ದೆ?"

"ಇವತ್ತು ಬೆಳಗ್ಗೆ", ಎಂದಳು.

"ರಶ್ಮಿ ಬಿಟ್ಟ ಒಂದೇ ಸಾಕ್ಷಿ ಆ ಆರಿಹೋದ ಎಂಜಲು. ಅವಳಿಗೆ ಅದರ ಬಗ್ಗೆ ಗೊತ್ತಿರಲಿಲ್ಲ ಅನ್ಸುತ್ತೆ. ನೀನು ಹೇಳಿದ ಮೇಲೆ ತಾನು ಸಿಕ್ಕಿಹಾಕಿಕೊಳ್ಳುವುದು ಖಚಿತವಾಗಿ, ತಪ್ಪಿಸಿಕೊಂಡು ಹೋಗಲು ಪ್ಲಾನ್ ಮಾಡಿದ್ಳು", ಎಂದೆ. ರೂಪಾ ಅವಾಕ್ಕಾದಳು.

ಭೈರೇಗೌಡ ಕೇಳಿದ, "ಪುಲಕೇಶಿಯವರೇ, ತನ್ನ ತಂಗಿಗೆ ಮೋಸ ಮಾಡಿದ ಹುಡುಗನನ್ನೇ ಯಾಕೆ ರಶ್ಮಿ ಆರಿಸಲಿಲ್ಲ?"

"ಪೊಲೀಸರ ಎನ್ಕ್ವೈರಿಯಲ್ಲಿ ಅವಳು ಸಿಕ್ಕಿ ಹಾಕಿಕೊಳ್ಳುವ ಸಂಭವ ಜಾಸ್ತಿ ಇರುತ್ತೆ. ಅವನು ಖಂಡಿತಾ ಅವಳ ಪಟ್ಟಿಯಲ್ಲಿ ಇದ್ದ... ಆದ್ರೆ ತುಂಬಾ ಕೆಳಗೆ".

"ನೇತ್ರಾ ಮೇಲೆ ಯಾಕೆ ನಿಮಗೆ ಅನುಮಾನ ಬರಲಿಲ್ಲ?"

"ಕಳ್ಳನಿಗೆ ಕೊಡೋದಕ್ಕೆ ಅವಳ ಹತ್ರ ದುಡ್ಡೆಲ್ಲಿಂದಾ ಬರ್ಬೇಕು?"

"ಓಹ್! ಹೌದಲ್ವಾ. ಕರೆಕ್ಟ್".

ಭೈರೇಗೌಡ, ಮತ್ತು ಪೇದೆಗಳಿಬ್ಬರನ್ನೂ ಅಲ್ಲೇ ಬಿಟ್ಟು ಭಾರವಾದ ಮನಸ್ಸಿನಲ್ಲಿ ನಾನು ಹೊರಡಲು ಮುಂದಾದೆ.

ಅಕ್ಕನ ಮಡಿಲಲ್ಲಿ ನೇತ್ರಾ ನೆಮ್ಮದಿಯ ನಿದ್ದೆ ಮಾಡುತ್ತಿದ್ದಳು.
ಮುಗಿಯಿತು

English summary
'Tabbaliyu neenade magale'-A murder mystery story by Basavaraj Kanthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X