ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ದಾರ್ ಮಂತ್ರಿ ಮತ್ತು ಎಣ್ಣೆ ನಾಯ್ ಮಾದ

By ಗವಿಸ್ವಾಮಿ, ಬೆಂಗಳೂರು
|
Google Oneindia Kannada News

Mantri and Nayi Maada : Short story by Gavi Swamy
ಮುಂಜಾನೆಯ ಚುಮುಚುಮು ಚಳಿಯಲ್ಲಿ ಡೈರಿಗೆ ಹಾಲು ಹಾಕಿ ವಾಪಸ್ ಬರುತ್ತಿದ್ದ ಮಂತ್ರಿ ಜೇಬಿಗೆ ಕೈ ಹಾಕಿ ಬೀಡಿಗಾಗಿ ತಡಕಾಡಿದ. ಜೇಬಿನಲ್ಲಿ ಒಂದು ಬೀಡಿಯೂ ಇರಲಿಲ್ಲ. ಎದುರಿಗಿದ್ದ ಮಲ್ಲಣ್ಣನ ಪೆಟ್ಟಿಗೆ ಅಂಗಡಿಗೆ ಹೋಗಿ, ''ಒಂದ್ ಕಟ್ ಬೀಡಿ ಕಡ್ಡಿಪೆಟ್ಟಿ ಕೊಡಣ್ಣ ಹಾಲಿನ್ ದುಡ್ ಬಂದಾಗ ಕೊಡ್ತಿನಿ'' ಎಂದು ಮಲ್ಲಣ್ಣನನ್ನು ಕೇಳಿದ.

''ಹಳ ಬಾಕಿ ಇನ್ನೂ ಬಂದಿಲ್ವಲ್ಲುಡ'' ಎಂದ ಮಲ್ಲಣ್ಣ, ಗ್ಲಾಸುಗಳಿಗೆ ಟೀ ತುಂಬುತ್ತಾ.

''ಇವತ್ತು ಹಾಲಿನ್ ದುಡ್ಡು ಬರ್ಬೇಕಾಗಿತ್ತುಕಣ್ಣ, ಸೆಕೆಟ್ರಿ ಶಿವ್ನಂಜ ಬಡ್ಡೈದ ಆ ದುಡ್ ತಕ್ಕಂಡೋಗಿ ಯಾರ್ಗೋ ಬಡ್ಡಿಗ್ ಕೊಟ್ಬುಟ್ಟಿದ್ದನಂತ, ಈಗ ನಾವ್ ಕೇಳಿದ್ರೆ ದುಡ್ಡು ಇನ್ನೂ ಬಂದಿಲ್ಲ, ಬರೋವಾರ ಒಟ್ಗೆ ಬತ್ತದ ಅಂತ ಸಬೂಬ್ ಹೇಳ್ತನ.''

ಮಲ್ಲಣ್ಣ ಮಂತ್ರಿಗೆ ಬೀಡಿ ಕಡ್ಡಿಪೆಟ್ಟಿ ಕೊಟ್ಟು ಹಳೆಬೈಂಡಿನಲ್ಲಿ ಲೆಕ್ಕ ಬರೆದುಕೊಂಡ. ಮಂತ್ರಿ ಬೀಡಿಯನ್ನು ಜೇಬಿಗೆ ಹಾಕಿಕೊಂಡು ಇತ್ತ ತಿರುಗುತ್ತಿದ್ದಾಗ, ಅಲ್ಲೇ ಐದಾರು ಮಂದಿಯ ಗುಂಪಿನೊಳಗೆ ಟೀ ಕುಡಿಯುತ್ತಾ ಕೂತಿದ್ದ ಮಂತ್ರಿಯ ಡೆಡ್ ಎಗೆನೆಸ್ಟ್ ನಾಯ್ ಮಾದ, ''ಬೆಂಗ್ಳೂರ್ಲಿ ಸೂಪ್ರೇಜ್ರ್ ಆಗಿದ್ದವರ್ಗೆ ಈ ಗತಿ ಬರಬಾರ್ದಾಗಿತ್ತುಕಪ್ಪ, ಥೂ! ತಿರ್ಕ ಬಡ್ಡೆತ್ತವ'' ಎಂದು ಬಿಟ್ಟ. ನಾಯ್ ಮಾದ ಆಗಲೇ ಏರಿಸಿಬಿಟ್ಟಿದ್ದ!

ಮಂತ್ರಿಗೆ ಬೆಳ್ಬೆಳಿಗ್ಗೆ ಪಿತ್ತ ನೆತ್ತಿಗೇರಿದಂತಾಗಿ, ''ಡೇ ಮುಚ್ಚುಡ ಸಾಕು, ನಿಮ್ಮಪ್ಪ ಯಾರ್ಯಾರ್ ಅಟ್ಟೀಲಿ ಜೀತ ಮಾಡ್ತಿದ್ದ ಅಂಬದು ಎಲ್ಲರ್ಗೂ ಗೊತ್ತು ಕಣಾ'' ಎಂದುಬಿಟ್ಟ! ಮಾತಿಗೆ ಮಾತು ಬೆಳೆದು, ಕೊನೆಗೆ ನಾಯ್ ಮಾದನ ಬಾಯಿಂದ 'ನಿಮ್ಮವ್ವನಾ...' ಎಂಬ ಮುತ್ತು ಉದುರಿತು!

ಆ ವಾಕ್ಯವನ್ನು ಕೇಳಿದ್ದೇ ತಡ ಬೇರೆಯವರಾಗಿದ್ರೆ ಮೈಮೇಲೆ ಹಾಕಿಕೊಳ್ಳದೇ ತಿರುಗಿಸಿ ಬೈಯ್ಯುತ್ತಿದ್ದರು. ಆದರೆ ಮಂತ್ರಿ ಹಾಗೆ ಮಾಡಲಿಲ್ಲ. ಅನಿರೀಕ್ಷಿತ ಪಟ್ಟುಗಳನ್ನು ಹಾಕಿ ಎದುರಾಳಿಗಳನ್ನು ಬೇಸ್ತು ಬೀಳಿಸುವುದರಲ್ಲಿ ಹೆಸರುವಾಸಿ ಈತ. ನಾಯ್ ಮಾದ ಹಾಗೆ ಬೈದದ್ದೇ ತಡ ಅವನ ತೋಳನ್ನು ಹಿಡಿದು ಬೀದಿಯಲ್ಲಿ ದರದರದರ ಎಳೆದೊಯ್ಯುತ್ತಾ ತನ್ನ ಮನೆಯ ಮುಂದಕ್ಕೆ ತಂದು ನಿಲ್ಲಿಸಿದ.

ಜಗಲಿ ಮೇಲೆ ಕೂತಿದ್ದ ತನ್ನ ಅವ್ವ ಹಣ್ಣುಮುದುಕಿ ರಂಗಮ್ಮನತ್ತ ಅವನನ್ನು ನೂಕಿ, ''ಹೋಗುಡ ಅದ್ಯಾನ ಮಾಡು'' ಎಂದ. ನಾಯ್ ಮಾದ ಮಂತ್ರಿಯ ಪಟ್ಟಿನಿಂದ ತಬ್ಬಿಬ್ಬಾಗಿ ಪೆಕರುಪೆಕರಾಗಿ ನೋಡತೊಡಗಿದ!

ವರ್ಷದ ಕೂಸನ್ನು ಕಂಕುಳಿಗೆ ಹಾಕಿಕೊಂಡು ಬಯಲಿಗೆ ಹೋದ ಸೊಸೆ ಚಿಕ್ದೇವಿಯು ಒಂದು ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಇದರಿಂದ ಕಂಗಾಲಾಗಿ ಕೂತಿದ್ದಂತಹ ರಂಗಮ್ಮನಿಗೆ ಸಿಟ್ಟು ಬಂದು, ''ನಿನ್ ಹೆಡ್ತಿ ಎತ್ತಗ್ ಹೋದ್ಲೋ ಇನ್ನೂ ಬಂದಿಲ್ಲ ತಡ್ಕು ಹೋಗು ನಿನ್ ಬಾಯ್ಗ್ ಮೊಣ್ಣಾಕವ್ನೆ' ಅಂದಳು.

***
ಇತ್ತ ಚಿಕ್ದೇವಿಯು ಹೊಲಗಳ ತೆವರುಗುಂಟ ಬಿರಬಿರನೆ ಹೆಜ್ಜೆ ಹಾಕುತ್ತ ಕಾಲುದಾರಿ ಹಿಡಿದು, ಒಂದೇ ಉಸಿರಿನಲ್ಲಿ ನಡೆದು ಪಕ್ಕದ ಊರಿನಲ್ಲಿದ್ದ ತನ್ನ ತವರುಮನೆ ತಲುಪಿದಳು. ಇತ್ತ ಹಾದೀಲಿ ಹೋಗುವವರನ್ನೆಲ್ಲ ನಿಲ್ಲಿಸಿ ವಿಚಾರಿಸಿ, ಯಾರಿಂದಲೂ ಚಿಕ್ದೇವಿಯ ಸುಳಿವು ಸಿಗದೇ ಹೋದಾಗ ಗಾಬರಿಗೊಂಡು ಪಾಳುಬಾವಿಗಳನ್ನೆಲ್ಲ ಇಣುಕಿ ನೋಡಿ ತಟ್ಟಾದ ರಂಗಮ್ಮ ಮತ್ತೆ ಜಗುಲಿ ಸೇರಿಕೊಂಡಳು.

ರಂಗಮ್ಮ ಗಾಬರಿಯಾಗುವುದಕ್ಕೆ ಕಾರಣವೂ ಇತ್ತು. ಹಿಂದಿನ ರಾತ್ರಿ ತಂಗಳನ್ನ ಬಡಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ಎರಡು ಮೂರು ಏಟುಗಳನ್ನೂ ಹೊಡೆದುಬಿಟ್ಟಿದ್ದ ಮಂತ್ರಿ. ಚಿಕ್ದೇವಿ ತವರ ದಾರಿ ಹಿಡಿದಿರುವುದನ್ನು ಊಹಿಸಿದಂತಿದ್ದ ಮಂತ್ರಿ, ಒಂಚೂರೂ ಚಿಂತಿಸದೇ ನಿರಾಳನಾಗಿ ಕೂತಿದ್ದ.

***
ಮಂತ್ರಿಯ ಅಪ್ಪ ಸತ್ತು ಹನ್ನೆರಡು ವರ್ಷಗಳಾದವು. ನಾಲ್ಕು ಜನ ಅಕ್ಕಂದಿರಿಗೆ ಮದುವೆಯಾಗಿ ಪರವೂರು ಸೇರಿಕೊಂಡಿದ್ದಾರೆ. ಇವನು ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಹಬ್ಬಹರಿದಿನಗಳಿಗೆ ಊರಿಗೆ ಬರುತ್ತಿದ್ದಾಗ, ನಾನು ಗಾರ್ಮೆಂಟ್ಸ್ ಕಂಪನಿಯಲ್ಲಿ ಸೂಪ್ರೇಜರಾಗಿದ್ದೀನಿ, ನನ್ನದೇನಿದ್ದರೂ ಮೇಲುಸ್ತುವಾರಿ, ನನ್ನ ಕೈಕೆಳಗೆ ನೂರಾರು ಜನ ಕೆಲಸ ಮಾಡ್ತಾರೆ ಅಂತಿದ್ದ.. ಇವನ ಡಿಸ್ಕಿಡಿಸೈನ್ ಡ್ರೆಸ್ಸು ನೋಡಿ ಖಂಡಿತವಾಗಿ ಇವನು ಗಾರ್ಮೆಂಟ್ಸಲ್ಲೇ ಇರೋದು ಎಂದು ಎಲ್ಲರೂ ನಂಬಿದ್ದರು.

ಅದೇ ಸಮಯದಲ್ಲಿ ಬೆಂಗಳೂರು ಸೇರಿಕೊಂಡಿದ್ದ ನಾಯ್ ಮಾದ ಒಮ್ಮೆ ಊರಿಗೆ ಬಂದಿದ್ದಾಗ, ಮಂತ್ರಿ ಮೆಜಸ್ಟಿಕ್ಕಿನ ಯಾವುದೋ ಲಾಡ್ಜಲ್ಲಿ ರೂಮ್ಬಾಯಿ ಆಗಿದ್ದಾನೆಂದು ಊರು ತುಂಬಾ ಡಂಗುರ ಹೊಡೆದಿದ್ದ. ಆಗ ಜನರಿಗೆ ಅನುಮಾನ ಮೂಡಿ, ಮಂತ್ರಿಯನ್ನು ಎನಕ್ವೈರಿ ಮಾಡಿದರು. ನಾಯ್ ಮಾದ ಪಿಕ್ ಪಾಕೆಟ್ ಮಾಡಿ ಸಿಕ್ಕಿಬಿದ್ದಿದ್ದಾಗ ನಾನೇ ಅವನನ್ನು ಬಿಡಿಸಿದ್ದೆ, ಅಂಥವನ ಮಾತ್ ನಂಬಲೇಬೇಡಿ ಎಂದಿದ್ದ ಈ ಮಂತ್ರಿ. ಜನರಿಗೆ ಯಾರದು ಸತ್ಯ ಯಾರದು ಸುಳ್ಳು ಒಂದೂ ಅರ್ಥವಾಗದೇ ಇಬ್ಬರನ್ನೂ ಅವರ ಪಾಡಿಗೆ ಬಿಟ್ಟುಬಿಟ್ಟರು.

ಎರಡು ವರ್ಷ ಬೆಂಗಳೂರಿನಲ್ಲಿ ಇದ್ದಂತಹ ನಾಯ್ ಮಾದ ಮತ್ತೆ ಊರಿಗೆ ಬಂದು ಸೆಟ್ಲಾದ. ನಾಯ್ ಮಾದ ವಾಪಾಸಾದ ವರ್ಷಕ್ಕೆ ಮಂತ್ರಿಯೂ ಊರಿಗೆ ಬಂದು ಸೆಟ್ಲಾದ. ಯಾಕೆ ಅಂತ ಕೇಳಿದಾಗ, ಯಾರೋ ನನ್ನನ್ನು ಮರ್ಡರು ಮಾಡಲು ಸ್ಕೆಚ್ಚು ಹಾಕ್ತಿದ್ರು, ಭಯ ಆಯ್ತು ಬಂದುಬಿಟ್ಟೆ ಎಂದಿದ್ದ.

***
ಚಿಕ್ದೇವಿಯ ಅಣ್ಣ ಗುಟ್ಟಾಗಿ ಊರ ಛೇರ್ಮನ್ನರ ಮನೆಗೆ ಬಂದು, ನ್ಯಾಯಪಂಚಾಯ್ತಿ ಕರೆಯುವಂತೆ ತಾಕೀತು ಮಾಡಿ ಪಟ್ಟಾಗಿ ಕುಳಿತ. ಆಗ ಛೇರ್ಮನ್ನರು, ಹೊದಲ್ಲಿದ್ದ ಮಂತ್ರಿಯನ್ನು ಕರೆಸಿದರು.

ಛೇರ್ಮನ್ನರ ಮನೆಗೆ ಬಂದಂತಹ ಮಂತ್ರಿ, ಅಲ್ಲಿ ಕೂತಿದ್ದವರನ್ನು ಒಮ್ಮೆ ಸರ್ವೆ ಮಾಡಿದ. ಆ ಗುಂಪಿನಲ್ಲಿ ನಾಯ್ ಮಾದನ ಮುಖ ನೋಡಿ ಗಲಿಬಿಲಿಯಾದ. ಆದರೂ ತೋರ್ಪಡಿಸಿಕೊಳ್ಳದೇ, ಸಾವರಿಸಿಕೊಂಡು ಗೋಡೆಗೊರಗಿ ಛೇರ್ಮನ್ನರ ಮಾತಿಗಾಗಿ ಕಾದ.

ಛೇರ್ಮನ್ನರು : ನಿನ್ ಹೆಡ್ತಿಗ ದಿಕ್ಕಾಪಾಲಾಗಿ ಹೊಡೆದಿದೈಯಂತಲ್ಲ ಯಾಕಯ್ಯ?

ಮಂತ್ರಿ : ನಾನು ಎರಡೇಟ್ ಕೊಟ್ಟಿರದು ನಿಜ ಕನಿಛೇರ್ಮನ್ರೇ, ನಾ ಯಾಕ್ ಹೊಡ್ದಿ ಅಂದ್ರ...

ಚಿಕ್ದೇವಿ ಅಣ್ಣ(ಮಂತ್ರಿಯ ಮಾತನ್ನು ತುಂಡು ಮಾಡುತ್ತಾ) : ನಮ್ ಹುಡುಗಿನ ಇವರ್ ಮನ್ಗ ಜೀತಕ್ ಕಳ್ಸಿದಂವ ಸ್ವಾಮಿ. ಇರೋ ಒಬ್ಬಳು ತಂಗೀನ ಗಿಣಿಕಂಡಗ ಸಾಕಿಂವಿ ನಾವು.

ಛೇರ್ಮನ್ನರು(ಚಿ.ಅಣ್ಣನನ್ನು ತಡೆದು) : ಅಂವ ಹೇಳಿ ಮುಗಿಸ್ಲಿ ಇರಪ್ಪ.

ಮಂತ್ರಿ : ವತಾರೆ ಮಾಡಿದ್ದನ್ನೇ ರಾತ್ರಿಗೂ ಇಕ್ತಾಳೆ ಕನಿ ಛೇರ್ಮನ್ರೇ, ಮೂರೊತ್ತೂ ತಂಗ್ಳ್ ಉಣ್ಣಕಾದದ ಛೇರ್ಮನ್ರೇ, ತಂದ್ಹಾಕವ್ನು ನಾನು, ಮೂರು ಹೊತ್ತೂ ಬೇಯಿಸಿ ಹಾಕದಿಕ್ಕೆ ನಿನಗೇನಾಗಿದ್ದಮ್ಮಿ ಅಂದ್ರೆ ತಿರುಗಿಸಿ ಉತ್ತರ ಕೊಡ್ತಳಕನಿ ಛೇರ್ಮನ್ರೇ.

ಛೇರ್ಮನ್ನರು(ನಗುವನ್ನು ತಡೆದು) : ಅಷ್ಟಕ್ಕೇ ಕೈ ಮಾಡ್ಬುಡದೇನಯ್ಯ, ಒಬ್ಳೇ ಮಗಳು ಅಂತಾ ಒಲೆ ಮುಂದೆ ಬೇಯಕ್ ಬುಡ್ದೇ ಸುಖದಲ್ಲಿ ಸಾಕಿರ್ತಾರೆ, ರೂಢಿ ಆಯ್ತಾ ಆಯ್ತಾ ಹೊಂದ್ಕತಳೆ ಬುಡಯ್ಯ.

ಮಂತ್ರಿ : ನಾಳ ನಾಳಿದ್ದು ಗೌರಿ ಹಬ್ಬ ಬಂತು ನೋಡಿ, ಮನ-ಕ್ವಾಣ ತೊಳಬೇಕಾಯ್ತದ, ಸುಣ್ಣ-ಬಣ್ಣ ಹೊಡಬೇಕಾಯ್ತದ ಅಂತ ಎಲ್ಲ ಕೆಲಸನೂವ ಮುದ್ಕಿ ಮೇಲ ಹಾಕ್ಬುಟ್ಟು ಈ ನೆಪ ಮಾಡ್ಕಂಡು ಎದ್ಬುಟ್ಟಳ ಕನಿ ಛೇರ್ಮೇನ್ರೆ.

ನಾಯ್ ಮಾದ (ಬಾಯಿ ಹಾಕಿದ) : ಆ ಬಡ್ಪಾಯಿ ಹೆಣ್ಣಿನ್ ಮ್ಯಾಲೆ ಪೌರ್ಸ ತೋರ್ಸೋ ಬದ್ಲು, ಅವನ ಮಿಂಡಗಾತಿಗ್ ಹೊಡೀಲಿ ಬುಡಿ ಛೇರ್ಮನ್ರೇ, ಅವಳಾದ್ರೆ ಕತ್ತೆ ಇದ್ದಂಗವ್ಳೆ ತಡ್ಕತಾಳೆ!

ನಾಯ್ ಮಾದ ಅಚಾನಕ್ಕಾಗಿ ಹಾಕಿದ ಬಾಂಬು ಕೋಲಾಹಲವನ್ನುಂಟುಮಾಡಿತು!

ಛೇರ್ಮನ್ನರು (ಕೋಪಗೊಂಡು) : ಉಡೇ ನಾಯಿ, ಯಾನ್ ಯೋಳ್ತಾಯಿದ್ದಯುಡ ನೀನು?

ನಾಯ್ ಮಾದ : ಸುಳ್ಳೇಳ್ದವ್ರ ಮನ ಸೊಳ್ ಕೆಟ್ಟೋಯ್ತು... ಇರದ್ನೇ ಹೇಳ್ತಾ ಅವ್ನಿ ಕನಿ ಛೇರ್ಮನ್ರೇ.

ಕೊತಕೊತ ಕುದಿಯುತ್ತಿದ್ದ ಮಂತ್ರಿ ತೋಳೇರಿಸಿಕೊಂಡು ನಾಯ್ ಮಾದನತ್ತ ನುಗ್ಗಿದ. ಅಲ್ಲಿ ನೆರೆದಿದ್ದವರು ಅವನ ತೋಳು ಹಿಡಿದು ಹಿಂದಕ್ಕೆಳೆದುಕೊಂಡರು. ಛೇರ್ಮನ್ರ ಆಣತಿಯಂತೆ, ನಾಯ್ ಮಾದನನ್ನು ಎಳೆದೊಯ್ದು ಆಚೆ ನೂಕಿ ಕದ ಹಾಕಿದರು.

ಚಿಕ್ದೇವಿ ಅಣ್ಣ(ಎದ್ದು ನಿಂತು): ಅವರನ್ನ್ಯಾಕೆ ಆಚೆ ಹಾಕ್ತೀರಿ, ಸತ್ಯ ಏನೂ ಅಂತ ನಮಗೂ ಗೊತ್ತಾಗ್ಲಿ, ಅವರ್ಗೆ ಅವ್ಕಾಸ ಕೊಡಿ ಛೇರ್ಮನ್ರೇ.

ಛೇರ್ಮನ್ನರು: (ಚಿ.ಅಣ್ಣನಿಗೆ) ನಾಯ್ ಮಾದ ಮೂರೊತ್ತೂ ಕುಡ್ಕಂಡು ನಿಂತಿರ್ತಾನೆ, ಅವನ ಮಾತನ್ನ ಯಾರೂ ಲೆಕ್ಕಕ್ ಇಟ್ಗಳಲ್ಲ, ಮಂತ್ರಿನೂ ಅವನೂ ಹಾವು-ಕೀರ ಅಂತ ಇಡೀ ಊರ್ಗೇ ಗೊತ್ತು. ಅವನ ಮಾತ್ ಕಟ್ಗಬೇಡ ಬುಡಪ್ಪ.

ಚಿ.ಅಣ್ಣ : ಹಾಗಂತ ಅವರ್ ಮಾತ್ ತಳ್ಳಾಕಕಾದ್ದ ಛೇರ್ಮನ್ರೇ, ಇದು ಎಷ್ಟ್ ಜಿನದಿಂದ ನಡೀತಾ ಇದ್ದದು, ಇದರ ಮರ್ಮ ಆಚಗ್ ಬರ್ಲಿಬುಡಿ, ಹೆಣ್ ಕೊಟ್ಟೋರ್ಗೆ ಇದನ್ನ ತಿಳ್ಕಳೋ ಹಕ್ಕುಂಟು.

ಈ ಮಂತ್ರಿಯ ಒಳವ್ಯವಾರಗಳು ಏನೇನಿವೆಯೋ, ನಾನು ಈಗ ಇವನನ್ನ ವಹಿಸಿಕೊಂಡು ಮಾತಾಡಿ ನಾಳೆ ದಿವಸ ಮುಜುಗರ ಅನುಭವಿಸೋದಕ್ಕಿಂತ ನ್ಯೂಟ್ರಲ್ಲಾಗಿರದೇ ವಾಸಿ ಎಂಬ ತೀರ್ಮಾನಕ್ಕೆ ಬಂದ ಛೇರ್ಮನ್ನರು ಮಂತ್ರಿಯತ್ತ ಒಂದು ಮಾತು ಬಿಸಾಕಿದರು.

ಛೇರ್ಮನ್ನರು : ಏನಯ್ಯಾ ಮಂತ್ರಿ, ಬಾಯ್ಗ ಕಡಬು ಹಾಕ್ಕಂಡವನ ರೀತಿ ನಿಂತಿದೈಯಲ್ಲ, ಇದನ್ನ ನಾವು ಯಾವ್ ರೀತಿ ಅರ್ಥ ಮಾಡ್ಕಬೇಕು?

ಮಂತ್ರಿ : ನಾನೂವೆ ಬೆಂಗ್ಳೂರಲ್ಲೆಲ್ಲಾ ಇದ್ದು ಬಂದಿದ್ದೀನಿ ಛೇರ್ಮನ್ರೇ, ಅಲ್ಲಿ ಈ ತರಾ ಇಲ್ಲ ಬುಡಿ.. ಇಲ್ಲಿ ಒಂದ್ ಗಂಡು ಹೆಣ್ಣು ಕಷ್ಟಸುಖ ಮಾತಾಡ್ತಾ ನಿಂತಿದ್ರೂವಿ ಅದ್ಕೆ ರೆಕ್ಕೆ ಹುಟ್ಸಿ ಊರ್ ತುಂಬಾ ಹಬ್ಬುಸ್ತವೆ ಈ ನಾಯ್ ಮಾದನಂಥ ಕಚಡ ಬಡ್ಡೆತ್ತವು.. ಅಷ್ಟಕ್ಕೂ ನಾನು ಒಬ್ಬಳ್ನ ಮಡೀಕಂಡಿದ್ದಿದ್ದಿದ್ರೆ ನಾ ಯಾಕ್ ಸ್ವಾಮಿ ತಂಗ್ಳನ್ನ ಉಣ್ತಿದ್ದಿ. ಅವಳ್ಗೆ ಎಲ್ಲಾ ಸೌಕರ್ಯನೂ ಮಾಡ್ಕೊಟ್ಟು ಮೂರೊತ್ತು ಬಿಸಿಯಾಗಿ ಮಾಡಾಕಮ್ಮಿ ಅಂತಿದ್ದಿ.

ಚಿಕ್ದೇವಿ ಅಣ್ಣ : ಬ್ಯಾಡಕವ್ವ ಬ್ಯಾಡಕವ್ವ ಬೆಂಗ್ಳೂರ್ ನೋಡಿ ಬಂದಿರೋರ ಸಾವಾಸ ಬ್ಯಾಡಕವ್ವ ಅಂತಾ ತಲ ಚಚ್ಗಂಡು ಹೇಳಿದ್ದಿ ನಮ್ಮವ್ಗ, ಅವಳು ನನ್ ಮಾತ್ ಕೇಳಲಿಲ್ಲ.. ಹುಡ್ಗ ನಮ್ಗ ದೂರದ್ ಸಂಬಂಧ. ಚೆಂದಾಗ್ ನೋಡ್ಕತನೆ ಅಂತ ಹೇಳಿ ನಮ್ ಬಾಯ್ ಮುಚ್ಚಿಸ್ಬುಟ್ಳು.. ಗಿಣೀನ ಗಿಡುಗನ ಕೈಗೆ ಕೊಟ್ಟಂಗಾಯ್ತು..

ಛೇರ್ಮನ್ರು : (ಚಿ.ಅಣ್ಣನಿಗೆ) ನೋಡಪ್ಪಾ, ಮಂತ್ರಿ ತಾತ ಒಂದ್ ಕಾಲದಲ್ಲಿ ಚೆನ್ನಾಗಿ ಬಾಳ್ದಂತಂವ. ಇವರಪ್ಪ ಒಬ್ನೇ ಮಗ ಭಾರೀ ದಿಲ್ದಾರ, ಜೂಜ್ಕೋರ. ಎಕ್ರೆಗೆ ಬರೀ ಇನ್ನೂರು ಮುನ್ನೂರಕ್ಕೆಲ್ಲಾ ಇಪ್ಪತ್ತೆಕ್ರೆ ಬಿಕರಿ ಮಾಡ್ಬುಟ್ಟ.
ಇವರವ್ವ ಬಡಿದಾಡಿ ನಾಕೆಕರೆ ಉಳಿಸ್ಕಂಡ್ಳು. ಇವ್ರು ಚೆನ್ನಾಗ್ ಬಾಳ್ದಂತವ್ರುಕಪ್ಪಾ. ಹೀಗೇನೋ ಇವ್ರ ಹಣೆಬರ ಸರಿ ಇಲ್ಲ, ಸ್ವಲ್ಪ ಪರದಾಟ. ಯಾವಾಗ್ಲೂ ಹಿಂಗೇ ಇರಲ್ಲ ಅಲ್ವಾ.

ಮಂತ್ರಿ (ಛೇರ್ಮನ್ನರ ಮಾತಿನಿಂದ ಹುಮ್ಮಸ್ಸು ಬಂದು) : ನಾವೇನೋ ಬೀದೀಲಿ ನಿಂತಿದ್ದವ್ರು ಅಂತ ತಿಳ್ಕಬುಟ್ಟರ ಕನಿ ಛೇರ್ಮನ್ರೇ ಇವ್ರು, ಯಾವನೋ ಬಿಕನಾಸಿ ಮಾತ್ಗೆ ಇವರು ಇಷ್ಟೊಂದು ಬೆಲೆ ಕೊಟ್ರೆ ನಾವೇನ್ ಮಾಡಕಾದದು ಛೇರ್ಮನ್ರೇ.. ಇಷ್ಟಕ್ಕೂ ಬಂದ್ಮೇಲೆ ಅವರ ಮಗಳು ಅಲ್ಲೇ ಇರಲಿ ಬುಡಿ.

ಚಿಕ್ದೇವಿ ಅಣ್ಣ : (ಟವೆಲು ಹೆಗಲಿಗೆ ಹಾಕಿಕೊಂಡು ಹೊರಡಲು ಅನುವಾಗಿ) ಬುಡಿ ಛೇರ್ಮನ್ರೇ, ಅವರು ಹೇಳ್ದಂಗೇ ಆಗ್ಲಿ.. ಇದು ಎಲ್ಲೀಗಂಟ ನಡೆಯುತ್ತೋ ನಾವೂ ನೋಡ್ತೀವಿ.

ಛೇರ್ಮನ್ರು (ಚಿ.ಅ ತಡೆದು ಕೂರಿಸುತ್ತಾ): ನೋಡಯ್ಯ ಮಂತ್ರಿ, ನಿಮ್ ಮಗಳು ಬರೋದೇ ಬ್ಯಾಡ ನೀವೇ ಇಟ್ಗಳಿ ಅಂತಿದಯೆಲ್ಲಾ, ಹೆತ್ತು ಹೊತ್ತು ಸಾಕ್ದವರಿಗೆ ಒಂದು ತುತ್ತು ಊಟ ಹಾಕೋದು ಕಷ್ಟವೇನಯ್ಯ? ಯೋಚ್ನೆ ಮಾಡು, ಮುಂದ್ಕ್ ಅನುಭವಿಸವ್ರು ಯಾರ ಅಂತ.

ಮಂತ್ರಿ ತೆಪ್ಪಗಾದ. ಛೇರ್ಮನ್ನರ ಇಷಾರೆ ಮೇರೆಗೆ ಮಂತ್ರಿಯೊಂದಿಗೆ ಅಲ್ಲಿದ್ದವರು ಜಾಗ ಖಾಲಿ ಮಾಡಿದ್ರು.. ಚಿಕ್ದೇವಿಯ ಅಣ್ಣ ಒಬ್ಬನೇ ಉಳಿದ.

ಛೇರ್ಮನ್ನರು : ನೋಡಪ್ಪಾ ಒಬ್ಳೇ ತಂಗಿ ಅಂತಾ ನೀವು ಮುದ್ದಾಗಿ ಸಾಕಿದ್ದೀರಿ ಒಪ್ಗತಿನಿ. ಅವಳನ್ನ ಮನೇಲಿರಿಸ್ಕಂಡು ಉಗುರುಕಣ್ಣು ಕೊಳೆಯಾಗದಂಗೆ ನೋಡ್ಕೋವಷ್ಟು ಪ್ರೀತಿ ನಿಮಲ್ಲಿದೆ, ನಿಜ. ಹಾಗಂತ ಎಷ್ಟ್ ಜಿನಗಂಟ ಮನಲಿಟ್ಗಳಕಾದದು ಹೇಳು? ನಿನ್ ತಂಗಿ ಮುನಿಸ್ಕಂಡು ತವರಿಗೆ ಬಂದಿರ್ಬೋದು, ನಿಜ. ಅದು ನಿನಗ್ ಗೊತ್ತು, ಅವಳಿಗ್ ಗೊತ್ತು. ಎಲ್ಲೋ ಇವ್ಳೇ ದಾರಿ ತಪ್ಪಿರ್ಬೇಕು, ಅದಕ್ಕೇ ಗಂಡ ಓಡ್ಸವ್ನೆ ಅನ್ನುತ್ತೆ ಸಮಾಜ.. ಹೌದೋ ಇಲ್ವೋ? ನೀನೇ ವಿಚಾರ ಮಾಡು.

ಚಿಕ್ದೇವಿ ಅಣ್ಣ ಮರುಮಾತನಾಡದೇ ಛೇರ್ಮನ್ರ ಮನೆಯಿಂದ ಹೊರಟ.

***
ಮಾರನೇ ದಿನ ಬೆಳಕು ಮೂಡುತ್ತಿತ್ತು. ಆಗ ಹೊಲದ ಕಡೆಗೆ ಹೋಗುತ್ತಿದ್ದವನೊಬ್ಬ ನೆಲಗಡಲೆ ಹೊಲದ ಮಧ್ಯೆ ಇದ್ದ ಹಲಸಿನ ಮರದ ಕೆಳಗೆ ಆ ದೃಶ್ಯವನ್ನು ನೋಡಿ ಬೆಚ್ಚಿಬಿದ್ದು ಊರಿಗೆ ಓಡಿ ಸುದ್ದಿ ಮುಟ್ಟಿಸಿದ. ಆಗ ಮರದಡಿಯಲ್ಲಿ ಎಲ್ಲರೂ ಸುತ್ತುವರೆಯತೊಡಗಿದರು. ಆ ರೌಂಡಿನ ಸೆಂಟರಿನಲ್ಲಿ ಮಂತ್ರಿಯು ನೆಲಕ್ಕೆ ಮುಖ ಕುತ್ತಿಕೊಂಡು ಅಂಗಾತ ಬಿದ್ದಿದ್ದ. ಕಾಲುದೆಸೆಯಲ್ಲಿ ರೋಗರ್ ಬಾಟಲಿ ಬಾಯ್ತೆರೆದುಕೊಂಡು ಬಿದ್ದಿತ್ತು.

ನೆರೆದಿದ್ದವರಲ್ಲಿ ಕೆಲವರು, ಇದು ಮಾವನ ಮನೆಯವರ್ದೇ ಕೆಲಸ, ರಾತ್ರಿ ಹೊಲ ಕಾಯ್ತಿದ್ದವನನ್ನ ಹೊಡ್ದಾಕ್ಬುಟ್ಟು ಡೌಟು ಬರದೇ ಇರಲಿ ಅಂತ ರೋಗರ್ ಸೀಸೆ ಇಟ್ಟು ಮಲಗ್ಸವ್ರೇ ಅಂತಿದ್ರು.. ಇನ್ನು ಕೆಲವರು, ನಿನ್ನೆ ಛೇರ್ಮನ್ನರ ಮನೇಲಿ ಅದೇನ್ ಅವ್ಮಾನ ಆಯ್ತೋ, ಅದಕ್ಕೆ ಪಾಯ್ ಹಿಂಗ್ ಮಾಡ್ಕಬುಟ್ಟಿದ್ದಾನೆ ಅಂತಿದ್ರು.. ಯಾವನೋ ಮುಟ್ಟಲು ಹೋದಾಗ ಇನ್ಯಾವನೋ ಅವನನ್ನು ಹಿಂದಕ್ಕೆಳೆದು, ಡೋ ಇದು ಪೋಲೀಸ್ ಕೇಸುಕುಡ, ಆಮೇಲೆ ನಮ್ ತಲಗ್ ಬತ್ತದ ಮುಚ್ಕಂಡಿರುಡ ಎಂದು ಗದರಿದ.

ಆಗ ಅಲ್ಲೇ ಇದ್ದ ಒಬ್ಬ ಮುದುಕಪ್ಪ, ಕ್ಯಾನಯ್ಯ ಪೋಲೀಸ್ ಕೇಸಾದ್ರ, ಅವ್ರೇನು ಢಮಾರ್ ಅನ್ನಸ್ಬುಟ್ಟರಾ, ಸೂಲಾಡಿದ ಇಲ್ವಾ ಅಂತ ನೋಡಿ ಮೂದೇವ್ಗಳೇ ಎನ್ನುತ್ತಾ ಮುಂದೆ ಬಂದ. ಆವಾಗ ದೂರದಲ್ಲಿ ಮಂತ್ರಿಯ ಅತ್ತೆ ಮತ್ತು ಕಂಕುಳಲ್ಲಿ ಕೂಸು ಹಿಡಿದ ಚಿಕ್ದೇವಿ ಇಬ್ಬರೂ ಎಡುವುತ್ತಾ ಏದುಸಿರು ಬಿಡುತ್ತಾ ಓಡಿ ಬರುತ್ತಿದ್ದರು. ಎಲ್ಲರ ಕಣ್ಣುಗಳು ಅವರತ್ತ ತಿರುಗಿದವು. ಅವರು ಬಳಿ ಬಂದಾಗ, ಗುಂಪು ಬಿರುಕೊಡೆದು ಅವರನ್ನು ಒಳನುಂಗಿ ಕ್ಷಣದಲ್ಲಿ ಮತ್ತೆ ರೌಂಡಾಯಿತು..

ಆಗ ಮಂತ್ರಿಯ ತಲೆದೆಸಲಿ ಕೂತುಕೊಂಡ ಅತ್ಯಮ್ಮ, ''ಅಯ್ಯೋ, ನನ್ ಅಳಿಯನ್ಗೆ ಎಳ್ ತಂಬಿಟ್ಟು ಅಂದ್ರೆ ಪಂಚಪ್ರಾಣ ಆಗಿತ್ತುಕವ್ವ, ಅಳೀಗೂಳ್ಗ ಬಂದಿದ್ದಾಗ ಹನ್ನೇಡ್ ಜಿನಗಂಟ್ಲೂ ಅದನ್ನೇ ಮಾಡಸ್ಕಂಡು ತಿಂದಿದ್ದಕವ್ವ,
ನನ್ ಅಳಿಯ ಹಬ್ಬಕ್ ಬತ್ತನೆ ಅಂದ್ಬುಟ್ಟು ನಾಳ್ಗೂ ಅದನ್ನೇ ಮಾಡಂವು ಅಂತಿದ್ದಿಕವ್ವೋ ಎಂದು ಗೋಳಾಡತೊಡಗಿದಳು.

ಅತ್ಯಮ್ಮನ ದನಿ ಕೇಳಿಸಿದ್ದೇ ತಡ, ಗಕ್ಕನೆ ಎದ್ದು ಕುಳಿತ ಮಂತ್ರಿ, ''ನಡರೀ ಅತ್ಯಮ್ಮ ಮಾಡ್ಕೊಡಿ!'' ಎಂದ. ಇದ ನೋಡಿ ಅತ್ಯಮ್ಮ ಮೂರ್ಛೆ ಹೋಗಿ, ಎಲ್ಲರೂ ನೀರು ನೀರು ನೀರು ಅಂತಾ ನೀರಿಗೆ ತಡಕಾಡತೊಡಗಿದರು. ಕೂಸು ಅಪ್ಪನ ತೊಡೆ ಮೇಲೆ ನಿಂತು ಕತ್ತಿನ ಪಟ್ಟಿ ಜಗ್ಗುತ್ತಿತ್ತು.

English summary
Mantri and Nayi Maada : Kannada short story by Gavi Swamy, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X