ಸಣ್ಣಕಥೆ : ಪಾತಕಿ, ಕೊಲೆಗಡುಕಿ... ಪಿಶಾಚಿ ಕಣೆ ನಾನು!

ಅಣ್ಣ, ಅತ್ತಿಗೆ, ಗಂಡನಿಂದ ಪರಿತ್ಯಕ್ತಳಾಗಿದ್ದ ಆಕೆಯ ಮಡಿಲಲ್ಲಿ ಹದಿನೈದು ದಿನಗಳ ಹೆಣ್ಣುಮಗು ನೀಲಿಗಟ್ಟಿ ಉಸಿರಿಗಾಗಿ ಪರಿತಪಿಸುತ್ತಿತ್ತು. ಇದ್ದ ಉಡುಪಿನಲ್ಲೇ ಆಸ್ಪತ್ರೆಗೆ ಎದ್ದುಬಿದ್ದು ಬಂದಿದ್ದ ಶುಭಾಳಿಗೆ ಕೂಡಲೆ ನೆನಪಾಗಿದ್ದು ತನ್ನ ಆತ್ಮದ ಗೆಳತಿ ಮಾನಸಾ... ಬದುಕು ಇಷ್ಟೇನಾ ಅಂತ ಅಂದುಕೊಳ್ಳುತ್ತ ನಮ್ಮನ್ನು ನಾವೇ ಕತ್ತಲಿಗೆ ತಳ್ಳಿಕೊಳ್ಳುತ್ತಿರುವಾಗ ಬೆಳಕಿನ ನಸುನಗೆಯೊಂದು ಟಿಸಿಲೊಡೆದಿರುತ್ತದೆ... ತಾಯಿಯ ಸಂತಸ, ಸಂಕಟ, ತೊಳಲಾಟಗಳನ್ನು ಬರಿದುಮಾಡುವ ತೇಜಸ್ವಿನಿ ಅವರ ಈ ಸಣ್ಣಕಥೆ ನಿಮ್ಮ ಮುಂದೆ. - ಸಂಪಾದಕ.

***
ಆಡುಂಬಾ ಬಾಲೆಗೆ ತೊಟ್ಟಿಲೇ ತಾಯಮ್ಮಾ...
ಆಡಿ ನಲಿವ ನವಿಲನ್ನ... ನಮ್ ತಂಗ್ಯಮ್ಮನ ಕೈಗೆ ತಾರಮ್ಮಾ...

ಎಪ್ಪತ್ತರಂಚಿನಲ್ಲಿದ್ದರೂ, ದ್ವನಿ ಮುಕ್ಕಾಗದೇ, ರಾಗಬದ್ಧವಾಗಿ ಹಾಡುತ್ತಾ, ನಾಲ್ಕು ತಿಂಗಳ ಮೊಮ್ಮಗಳ ಮೈಗೆ ಎಣ್ಣೆ ಸವರುತ್ತಿದ್ದ ವೆಂಕಜ್ಜಿಯನ್ನೇ ನಸುನಗುತ್ತಾ ನೋಡುತ್ತಿದ್ದಳು ಮಾನಸ. "ಅಚ್ಚಚ್ಚೋ... ಎಣ್ಣೆ ಹಚ್ಚಕಿದ್ರೇ ನಿಂಗೆ ತೀರ್ಥ ಕೊಡವು ಕಾಣಿಸ್ತು ಅಲ್ದನೇ ಚಿನ್ನಮ್ಮಾ..." ಮಡಿಲನ್ನೆಲ್ಲಾ ಒದ್ದೆ ಮಾಡಿದ ಮಗುವನ್ನು ಲಲ್ಲೆಗೆರೆಯುತ್ತಾ, ಕೂರಿಸಿಕೊಂಡರು.

"ನನ್ನ ಬಂಗಾರ, ಉಮ್ಮ ಕುಡ್ಕಂಡು ಮಲ್ಗು ಆತಾ? ಅಜ್ಜಿ ಸೀರೆಯಂತೂ ಒದ್ದೆ ಮಾಡಾತು ಬಿಡು... ಹೋಗ್ಲಿ ತಗ, ಕೂಸಿನ ಉಚ್ಚಿ ಕುಲಕ್ಕೆ ಪಾವನ, ಮಾಣಿ ಉಚ್ಚಿ ಮನೆಗೆ ಪಾವನ ಹೇಳ್ತ..." ಅಜ್ಜಿಯ ಬಾಯಲ್ಲಿ ಈಗ ಹೊಸದೊಂದು ಗಾದೆ ಕೇಳಿ ಹುಬ್ಬೇರಿಸಿದಳು ಮಾನಸ. ಎಲ್ಲದಕ್ಕೂ ಒಂದು ಗಾದೆ ಉಸುರುವ ಅಜ್ಜಿಯ ಪಿಟಾರೆಯೊಳಗೆ ಅದೆಷ್ಟು ಗಾದೆಯ ಖಜಾನೆಗಳಿವೆಯಪ್ಪಾ ಎಂಬ ಸೋಜಿಗ ಅವಳಿಗೆ.

Jeevatantu, a Kannada short story by Tejaswini Hegde

"ಥೋ ಹೋಗೆ ಅಜ್ಜಮ್ಮಾ... ನಿಂದೊಂದು ಮಳ್ಳು ಗಾದೆ. ಅಲ್ಲಾ ಈಗ ಇದ್ರರ್ಥ ಎಂತ ಹೇಳು? ಹೆಣ್ಣು ಗಂಡಲ್ಲಿ ಬೇಧ ಅಂತೂ ಹಳಬ್ರೆಲ್ಲಾ ಮಾಡಿದ್ದಾತು. ಈಗ ಪಾಪದ ಕೂಸು, ಮಾಣಿ ಉಚ್ಚೇಲೂ ಈ ತಾರತಮ್ಯ ಮಾಡದೆಂತಕ್ಕೆ?" ಅವಳಲ್ಲಿ ಅಸಮಾಧನ ಎದ್ದುಕಾಣುತಿತ್ತು.

"ಮಳ್ಳ್‌ಕೂಸೆ, ಹೆಣ್ಮಗು, ಗಂಡ್ಮಗು ಬೇಧ ನಮ್ಮ ಕಾಲಕ್ಕಿಂತ ನಿಮ್ಮ ಕಾಲ್ದಲ್ಲೇ ಮತ್ತೂ ಜಾಸ್ತಿಯಾಯ್ದು ತಿಳ್ಕ! ಕೂಸಿನ ಉಚ್ಚಿ ಕುಲಕ್ಕೆ ಪಾವನ ಅಂದ್ರೆ, ಕೂಸು ಹುಟ್ಟಿ ಬೆಳ್ದು, ಮತ್ತೊಬ್ರ ಮನೆತನ ಬೆಳಗ್ತು ಹೇಳಿ. ಮಾಣಿ, ಅಂವ ಹುಟ್ಟಿದ ಮನೆ ಮಾತ್ರ ಬೆಳಗದು ಹೇಳು ಅರ್ಥದಲ್ಲಿ ಹೇಳಿದ್ದೆ ಮಾರಾಯ್ತಿ. ಹೆಣ್ಮಕ್ಕನೇ ಶ್ರೇಷ್ಠ ಹೇಳ್ತು ಈ ಗಾದೆ... ಹ್ಮ್ಂ, ಸರಿ ಅರ್ಥ ಆಗ್ದೇ ಹೋದ್ರೂ ತಪ್ಪರ್ಥ ಬೇಗಾಗ್ತು ಈಗಿನ ಮಕ್ಕಗೆ..." ಅಜ್ಜಿ ಕಿಚಾಯಿಸಲು, ನಾಲಿಗೆ ಕಚ್ಚಿಕೊಂಡಳು ಮಾನಸ. "ಏಯ್! ಹಾಂಗೆಲ್ಲಾ ಎಂತದೂ ಇಲ್ಲಜ್ಜಿ... ಎಲ್ರೂ ಒಂದೇಯಾ. ಶ್ರೇಷ್ಠ, ಕನಿಷ್ಠ ಹೇಳೆಲ್ಲಾ ಇಲ್ಲೆ." ಸೋಲೊಪ್ಪಲು ಮೊಮ್ಮಗಳೂ ತಯಾರಿಲ್ಲ.

ಮಲೆನಾಡಿನ ಎಂಟಂಕಣದ ಮನೆಯ ಜಗುಲಿಯಲ್ಲಿದ್ದ ಮರದ ಕಂಬಕ್ಕೊರಗಿ ಕುಳಿತು ಶಿಶುವಿಗೆ ಎಣ್ಣೆ ಪಳಚಿ, ಅದರ ಎಳೆಯ ಕೈ, ಕಾಲುಗಳನ್ನು ನೀವುತ್ತಿದ್ದರು ವೆಂಕಜ್ಜಿ. ಸ್ಪ್ರಿಂಗ್‌ನಂತೆ ಹಿಂದೆಮುಂದೆ ಬಳಕುತ್ತಿದ್ದ ಅದರ ಎಳೆಯ ಕುತ್ತಿಗೆಗೆ ಕೈಕೊಟ್ಟು ಆಧರಿಸಿ, ತಲೆಗೆ ಬಲವಂತದಿಂದ ಟೊಪ್ಪಿ ಕಟ್ಟಲು ಹೋಗಿದ್ದೇ, ಅಷ್ಟು ಹೊತ್ತೂ ಹಾಯಾಗಿ ಬಾಯೊಳಗೆ ಹೆಬ್ಬೆಟ್ಟು ಹಾಕಿಕೊಂಡು ಚೀಪುತ್ತಿದ್ದ ಅದು ಒಮ್ಮೆಲೇ ಕಿರುಚತೊಡಗಿತು. "ಎಂತಾತು ನನ್ನ ಪುಟ್ಟಿಗೆ? ಯಾರೆಂತ ಮಾಡ್ದೋ? ಮಾನಸ ಚಿಕ್ಕಿನಾ? ಚಪ್ ಮಾಡನ ಅದ್ಕೆ ಹಾಂ... ಚುಮ್ಮಿರು ಚಿನ್ನ" ತನ್ನ ಕುಡಿಯ ಗೋಳಿಗೆ ಕೋಣೆಯಿಂದ ಓಡಿಬಂದ ಕುಮುದಕ್ಕನ ಮಾತಿಗೆ ಹುಸಿಮುನಿಸು ತೋರಿದಳು ಮಾನಸ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+