• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಗೂಢರು

By Staff
|

ಕಾಲಿಂಗ್ ಬೆಲ್ ಇದ್ದಕ್ಕಿದ್ದಂತೇ ಮೊಳಗಿ ಬೆಚ್ಚಿಸಿತು. ಗಡಬಡಿಸಿ ಕಂಪ್ಯೂಟರ್ ಪರದೆಯನ್ನು ಮಿನಿಮೈಸ್ ಮಾಡಿ ಎದ್ದುಹೋಗಿ ಬಾಗಿಲು ತೆರೆದೆ. "ಏನು ಮಾಡ್ತಿದ್ದೀಯೋ?" ಎನ್ನುತ್ತಾ ಜಾನಕಿ ಒಳಬಂದಳು. "ಹೇಹ್ಹೆಹ್ಹೇ ಏನಿಲ್ಲಾ" ಅಂದೆ ಪೆದ್ದುಪೆದ್ದಾಗಿ. ನೈಟಿಯಲ್ಲಿದ್ದ ಅವಳು ಕಂಪ್ಯೂಟರ್ ಮುಂದಿನ ಸ್ವಿವೆಲ್ ಚೇರ್‌ನಲ್ಲಿ ಕುಳಿತು ಎಡಬಲ ತಿರುಗಿದಳು. "ಬೋರಾಗ್ತಿದೆ ಕಣೋ" ಎನ್ನುತ್ತಾ ಕೈಗಳನ್ನು ತಲೆಯ ಹಿಂದೆ ಹೆಣೆದು ಎದೆಯನ್ನು ಮೇಲೆತ್ತಿ "ಊಂ ಊಂ ಉಹ್ಞುಹ್ಞೂಂ..." ಎನ್ನುತ್ತಾ ಮೈಮುರಿದಳು. ಮಾಳಿಗೆಯ ಮೇಲೆ ತಟಪಟ ಹನಿಗಳುದುರಿದವು. ಮಳೆ ಮತ್ತೆ ಆರಂಭವಾಗಿತ್ತು.

  • ಪ್ರೇಮಶೇಖರ, ಪಾಂಡಿಚೆರಿ.

Nigoodaru by Prem shekharಬೆಳಿಗ್ಗೆ ಎಚ್ಚರವಾದಾಗ ಹೊರಗೆ ಸಣ್ಣಗೆ ಮಳೆ ಹನಿಯುತ್ತಿತ್ತು. ಗಡಿಯಾರ ನೋಡಿದೆ. ಎಂಟು ಗಂಟೆ ಇಪ್ಪತ್ತು ನಿಮಿಷಗಳಾಗಿರುವುದನ್ನು ಕಂಡು ಅಚ್ಚರಿಯೆನಿಸಿತು. ಮನೆಯೊಳಗಿನ ಕತ್ತಲೆ ನೋಡಿದರೆ ಇನ್ನೂ ಆರು ಗಂಟೆಯೂ ದಾಟಿಲ್ಲ ಅನಿಸುತ್ತಿದೆ. ಕಿಟಕಿಯ ಕರ್ಟನ್ ಸರಿಸಿ ಹೊರಗೆ ಕಣ್ಣಾಡಿಸಿದಾಗ ಕಂಡದ್ದು ಕಪ್ಪು ಮುಗಿಲುಗಳಿಂದ ಗಿಡಿದಿದ್ದ ಆಕಾಶ... ನಿನ್ನೆ ಸಂಜೆ ಟೀವಿ ಬಿತ್ತರಿಸಿದ್ದ ಹವಾಮಾನ ವರದಿ ನಿಜವಾಗಿಯೇಬಿಟ್ಟಿತ್ತು. ನೈರುತ್ಯ ಮಾರುತದ ಕಡುಗಪ್ಪು ಮೋಡಗಳ ಪೂರ್ವ ಕರಾವಳಿಯ ವಾರ್ಷಿಕ ಭೇಟಿ ಆರಂಭವಾಗಿತ್ತು. ಮಾನ್ಸೂನಿನ ಮೊದಲ ಹನಿಗಳು ಪಾಂಡಿಚೆರಿಯನ್ನು ತೋಯಿಸಲಾರಂಭಿಸಿದ್ದವು.

ಟಾಯ್ಲೆಟ್ಟಿಗೆ ಹೋಗಿಬಂದು ಹಲ್ಲುಜ್ಜುತ್ತಿರುವಾಗ ಕೆಳಗಿನಿಂದ ಜಾನಕಿಯ ಕೂಗು ಕೇಳಿಬಂತು. ಆತುರಾತುರವಾಗಿ ಬಾಯಿ ಮುಕ್ಕಳಿಸಿ ಓಡುತ್ತಾ ಬಾಲ್ಕನಿ ತಲುಪಿ ಕೆಳಗಿ ನೋಡಿದೆ. ಮೊದಲ ಅಂತಸ್ತಿನ ಬಾಲ್ಕನಿಯ ಅಂಚಿನಲ್ಲಿ ನಿಂತು ಮೇಲೆ ನೋಡುತ್ತಿದ್ದ ಅವಳು ಕಾಣಿಸಿದಳು. ನನ್ನ ಮುಖ ಕಂಡೊಡನೇ "ಏನು ಈಗ ಎಚ್ಚರ ಆಯ್ತಾ?" ಅಂದಳು. "ಹ್ಞೂ. ಬೆಳಗಾಗಿರೋದು ಗೊತ್ತೇ ಆಗ್ಲಿಲ್ಲ" ಅಂದೆ. "ಸರಿ ಸರಿ. ಬೇಗ ಕೆಳಗೆ ಬಂದು ನಿನ್ನ ಪಾಲಿನ ದೋಸೆ ತಿಂದುಹೋಗು. ಇಲ್ಲಾಂದ್ರೆ ಒದೆ ತಿಂತೀಯ." ನಾಲ್ಕು ದಿಕ್ಕಿಗೂ ಕೇಳುವಂತೆ ಕೂಗಿ ಹೇಳಿ ಮರೆಯಾದಳು. ಗ್ರೌಂಡ್‌ಫ್ಲೋರ್‌ನ ಡಾಕ್ಟರ್ ವಾಲ್ಟರ್ ಸಿಂಗಾರವೇಲು ಸಹಾ ನನ್ನ ಹಾಗೇ ತಡವಾಗಿ ಎದ್ದಿರಬೇಕು, ಆತುರಾತುರವಾಗಿ ಕಾರಿಗೆ ಮುಸುಕು ಹೊದಿಸುತ್ತಿದ್ದವನು ತಲೆಯೆತ್ತಿ ಮೇಲೆ ನೋಡಿ ಮೂವತ್ತೆರಡು ಹಲ್ಲುಗಳನ್ನೂ ಒಮ್ಮೆ ಮಿನುಗಿಸಿದ.

ಹತ್ತು ನಿಮಿಷಗಳಲ್ಲಿ ಸ್ನಾನ ಮುಗಿಸಿ ನನ್ನ ಗೂಡಿಗೆ ನೇರವಾಗಿ ಕೆಳಗಿದ್ದ ಜಾನಕಿಯ ಅಪಾರ್ಟ್‌ಮೆಂಟಿಗೆ ಓಡಿದೆ. ನಾನು ಬಾಗಿಲು ಸಮೀಪಿಸುತ್ತಿರುವಂತೇ ಅವಳ ಗಂಡ ಬೆರಳಿನಲ್ಲಿ ಕಾರಿನ ಕೀ ತಿರುಗಿಸುತ್ತಾ ಮೆಟ್ಟಲ ಸರಣಿಯತ್ತ ನಡೆದುಹೋಗುತ್ತಿದ್ದ. ನನ್ನನ್ನು ನೋಡಿ "ಹಾಯ್" ಅಂದ. ಬ್ರೀಫ್‌ಕೇಸ್ ಹಿಡಿದು ಅವನ ಹಿಂದೆಯೇ ಹೊರಬಂದ ಜಾನಕಿ "ಎರಡು ನಿಮಿಷ ಕೂರು. ಇವರನ್ನ ಕಳಿಸಿ ಬಂದ್ಬಿಡ್ತೀನಿ" ಎಂದು ಹೇಳಿ ಕಾಲಿನಲ್ಲಿದ್ದ ಹವಾಯ್ ಚಪ್ಪಲಿಗಳಿಂದ ಫಟ್ ಫಟ್ ಸದ್ದು ಹೊರಡಿಸುತ್ತಾ ಮೆಟ್ಟಲಿಳಿದಳು.

ಒಳಗೆ ಹೋಗಿ ಸೋಫಾದಲ್ಲಿ ಕುಳಿತೆ. ದೋಸೆಯ ಪರಿಮಳ ಮನೆಯಿಡೀ ತುಂಬಿಕೊಂಡಿತ್ತು. ಅಕ್ಕನ ವಾರಿಗೆಯವಳು ಜಾನಕಿ. ನನಗಿಂತ ನಾಲ್ಕು ವರ್ಷಗಳಿಗೆ ದೊಡ್ಡವಳು. ಮೈಸೂರಿನ ಚಾಮರಾಜಪುರಂನ ಬಜ್ಜಣ್ಣ ಲೇನ್‌ನ ಅಂಚಿನಲ್ಲಿ ಅಕ್ಕಪಕ್ಕದ ಮನೆಯಲ್ಲಿದ್ದ ನಮ್ಮ ನಡುವೆ ಚಿಕ್ಕಂದಿನಿಂದಲೂ ಸ್ನೇಹ ಸಲಿಗೆ. ಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿ ಗಂಡನ ಹಿಂದೆ ಬೆಂಗಳೂರಿಗೆ ನಡೆದ ಅವಳು ನಾಲ್ಕು ವರ್ಷಗಳ ಹಿಂದೆ ಪಾಂಡಿಚೆರಿ ಸೇರಿದ್ದಳು. ಅವಳ ಗಂಡನಿಗೆ ಈ ಊರಿಗೆ ವರ್ಗವಾಗಿತ್ತು. ಮೈಸೂರಿಗೆ ಬಂದಾಗಲೆಲ್ಲಾ ಮನೆಗೆ ತಪ್ಪದೆ ಭೇಟಿ ಕೊಟ್ಟು ಅಮ್ಮನ ಜತೆ ಬಾಯಿತುಂಬಾ ಮಾತಾಡಿ, ಅಕ್ಕನೊಡನೆ ಹರಟೆ ಹೊಡೆದು, ನನ್ನನ್ನು ಕೆಣಕಿ ಕೀಟಲೆ ಮಾಡಿ ಹೋಗುತ್ತಿದ್ದಳು.

ಎರಡು ವರ್ಷಗಳ ಹಿಂದೆ ಪಾಂಡಿಚೆರಿ ಯೂನಿವರ್ಸಿಟಿಯಲ್ಲಿ ನನಗೆ ಕೆಲಸ ಸಿಕ್ಕಿದಾಗ ಅವಳಿಲ್ಲಿರುವುದು ನನಗೆ ಧೈರ್ಯ ಮೂಡಿಸಿತ್ತು. ಉತ್ಸಾಹದಿಂದಲೇ ಇಲ್ಲಿಗೆ ಹೊರಟುಬಂದಿದ್ದೆ. ಅವಳು ಖುಷಿಯಿಂದ ಬರಮಾಡಿಕೊಂಡಿದ್ದಳು. ಇಳಂಗೋ ನಗರ್‌ನಲ್ಲಿ ಅವಳೇ ಏರ್ಪಾಡು ಮಾಡಿದ್ದ ಬ್ಯಾಚೆಲರ್‍ಸ್ ಅಪಾರ್ಟ್‌ಮೇಂಟ್ ಒಂದರಲ್ಲಿ ನಾಲ್ಕು ತಿಂಗಳಿದ್ದೆ. ಅವಳಿದ್ದ ಕಟ್ಟಡದಲ್ಲಿನ ಮೇಲಿನ ಅಂತಸ್ತಿನಲ್ಲಿದ್ದ ಎರಡು ಅಪಾರ್ಟ್‌ಮೇಂಟ್‌ಗಳಲ್ಲೊಂದು ಖಾಲಿಯಾದೊಡನೇ ಬಲವಂತವಾಗಿ ನನ್ನನ್ನಲ್ಲಿ ಪ್ರತಿಷ್ಠಾಪಿಸಿಬಿಟ್ಟಿದ್ದಳು. ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಅವಳ ಮನೆಯಲ್ಲೇ ನನ್ನ ರಾತ್ರಿಯೂಟ ನಡೆದುಹೋಗುತ್ತಿತ್ತು. ಬೆಳಗಿನ ತಿಂಡಿಗೆ ತುಪ್ಪದ ದೋಸೆ ಮಾಡಿದಾಗಲಂತೂ ನನ್ನನ್ನು ಬಿಟ್ಟು ಅವಳು ತಿಂದದ್ದು ಈ ಒಂದೂವರೆ ವರ್ಷದಲ್ಲಿ ಬಹುಷಃ ಒಮ್ಮೆಯೂ ಇಲ್ಲ. ಹದಿನೈದು - ಇಪ್ಪತ್ತು ವರ್ಷಗಳ ಹಿಂದಿದ್ದಂತೇ ಪಟಪಟ ಮಾತು ಉದುರಿಸುತ್ತಾ, ಚುರುಚುರುಕಾಗಿ ಓಡಾಡಿಕೊಂಡಿದ್ದ ಅವಳು ನಾನು ಮೈಸೂರಿನ ನಮ್ಮ ಮನೆಯಲ್ಲಿದ್ದಂತಹದೇ ಭಾವನೆಯನ್ನು ನನ್ನಲ್ಲಿ ಮೂಡಿಸಿಬಿಟ್ಟಿದ್ದಳು.

ಅವಳ ಗಂಡ ಬೆಂಗಳೂರು ಮೂಲದ ಸಾಫ್ಟ್‌ವೇರ್ ಕಂಪೆನಿಯೊಂದರ ಪಾಂಡಿಚೆರಿ ಶಾಖೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್. ಅವಳ ಮಗ ಪ್ರತಿಷ್ಠಿತ ಶಾಲೆಯೊಂದರಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿದ್ದ. ಇಡೀ ಮನೆಯಲ್ಲಿ ಶ್ರೀಮಂತಿಕೆ, ಮೂರೂ ಮುಖಗಳಲ್ಲಿ ಸಂತೃಪ್ತಿ.

ಹೀಗಿದ್ದೂ ಅಪರೂಪಕ್ಕೊಮ್ಮೆ ಅವಳ ಮುಖದಲ್ಲಿ ಸೂತಕದಂತಾ ಮಂಕು ಕವಿದುಕೊಳ್ಳುವುದನ್ನು ನಾನು ಗಮನಿಸಿದ್ದೆ. ಆ ದಿನಗಳಲ್ಲಿ ಮನೆಯಿಡೀ ಮೌನವಾಗಿಬಿಡುತ್ತಿತ್ತು. ಅವಳ ಗಂಡ ಬಹುಷಃ ಮನೆಯಲ್ಲಿರುತ್ತಿರಲಿಲ್ಲ. ಮಗ ತನ್ನ ಲೋಕದಲ್ಲಿ ತಾನಿರುತ್ತಿದ್ದ. ಅವಳು ಬಾಲ್ಕನಿಯಲ್ಲಿ ಕುಳಿತು ಆಕಾಶದಲ್ಲಿ ನೋಟ ನೆಟ್ಟಿರುತ್ತಿದ್ದಳು. ಎರಡು ಬಾರಿ ಅವಳ ಇಂಥಾ ವರ್ತನೆಗೆ ನಾನು ನೇರವಾಗಿ ಮುಖಾಮುಖಿಯಾಗಿದ್ದೇನೆ.

ಆರೇಳು ತಿಂಗಳ ಹಿಂದಿರಬೇಕು, ಒಂದು ಸಂಜೆ ಕಾಲೆಳೆಯುತ್ತಾ ಮೆಟ್ಟಲೇರಿ ಬಂದು ನನ್ನ ಬಾಲ್ಕನಿಯಲ್ಲಿ ಕುರ್ಚಿ ಎಳೆದುಕೊಂಡು ಸುಮ್ಮನೆ ಮೌನವಾಗಿ ಕೂತುಬಿಟ್ಟಳು. ನನ್ನ ಪ್ರಶ್ನಾರ್ಥಕ ನೋಟಕ್ಕೆ ಉತ್ತರದಂತೆ "ನಿನ್ನ ಬಾಲ್ಕನಿಗೆ ಆಕಾಶ ತುಂಬಾ ಹತ್ತಿರ ಕಣೋ" ಎಂದು ಸಣ್ಣಗೆ ನಕ್ಕಳು. ನನ್ನೆದೆಯಲ್ಲಿ ಪ್ರಶ್ನೆಗಳೆದ್ದವು...

ತಿಂಗಳ ಹಿಂದೆ ನಡೆದದ್ದು ಇನ್ನೂ ವಿಚಿತ್ರ. ನಾನು ಸಂಜೆ ಯೂನಿವರ್ಸಿಟಿಯಿಂದ ಬರುವುದನ್ನೇ ಕಾಯುತ್ತಿದ್ದವಳಂತೆ ಧಡಧಡನೆ ಮೆಟ್ಟಲೇರಿ ಬಂದು ಸೋಫಾದ ಉದ್ದಕ್ಕೂ ಒರಗಿ "ನನಗೊಂದು ಕಪ್ ಚಾಯ್ ಮಾಡೋ" ಎಂದು ಆಜ್ಞಾಪಿಸಿದಳು. ಮುಂದಿನ ಅರ್ಧಗಂಟೆಯಲ್ಲಿ "ಒಂದು ಲೋಟ ನೀರು ತಾರೋ, ಟೀವಿ ಹಾಕೋ, ಸಿ ಡಿ ಪ್ಲೇಯರ್‌ನಲ್ಲಿ ತಲತ್ ಅಜೀಜ್‌ನ ಗಝಲ್ ಹಾಕೋ" ಎಂದು ಮುಂತಾಗಿ ನನ್ನನ್ನು ಹತ್ತು ಸಲವಾದರೂ ಅತ್ತಿಂದಿತ್ತ ಇತ್ತಿಂದತ್ತ ಓಡಾಡಿಸಿದಳು. ಅವಳ ಈ ವರ್ತನೆ ನನಗೆಷ್ಟು ವಿಚಿತ್ರವೆನಿಸಿತೆಂದರೆ 'ಇದೇಕೆ ಹೀಗೆ?" ಎಂದು ಕೇಳುವುದಕ್ಕೂ ನಾಲಿಗೆ ಹೊರಳದೇ ಒಂದು ಯಂತ್ರದಂತೆ ಅವಳ ಆಜ್ಞೆಯನ್ನೆಲ್ಲಾ ಪಾಲಿಸಿದೆ. ಕಣ್ಣುಮುಚ್ಚಿ ಹಾಡು ಕೇಳಿ, ಒಂದೊಂದು ಹನಿಯಂತೆ ಟೀ ಕುಡಿದಾದ ಮೇಲೆ ತಾನು ಸೋಫಾದಲ್ಲಿ ಒರಗಿದಂತೇ ಸೋಫಾಕ್ಕೆ ಅಂಟಿದಂತಿದ್ದ ಕುರ್ಚಿಯಲ್ಲಿ ನನ್ನನ್ನು ಬಲವಂತವಾಗಿ ಕೂರಿಸಿಕೊಂಡಿದ್ದಳು. "ನಿನಗಿಷ್ಟವಾದ ಪುಸ್ತಕ ಹಿಡಿದು ಹೀಗೇ ನನ್ನ ಪಕ್ಕ ಕೂತಿರೋ" ಎಂದು ಹೇಳಿ ಕಣ್ಣುಮುಚ್ಚಿದವಳು ಎರಡು ನಿಮಿಷಗಳಲ್ಲಿ ನಿದ್ದೆಹೋಗಿಬಿಟ್ಟಿದ್ದಳು. ಅವಳ ಮಗ "ಅಮ್ಮಾ ಅಮ್ಮಾ" ಎಂದು ಕೂಗುವುದು ಕಿವಿಗೆ ಬಿದ್ದು ನಾನವಳನ್ನು ಎಬ್ಬಿಸಿದಾಗ ಗಡಬಡಿಸಿ ಎದ್ದವಳು ನಂತರ ಏನೂ ಆಗಿಲ್ಲ ಎಂಬಂತೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಕೆಳಗಿಳಿದುಹೋಗಿದ್ದಳು.

ಈ ನಡವಳಿಕೆ ನನಗೆ ತೀರಾ ಅಪರಿಚಿತವಾಗಿ, ಆ ನಿಮಿಷಗಳಲ್ಲಿ ನನಗವಳು ಬೇರೆಯೇ ವ್ಯಕ್ತಿಯಾಗಿ ಕಂಡುಬಂದು ರಾತ್ರಿಯಿಡೀ ಯೋಚನೆಗೆ ಬಿದ್ದಿದ್ದೆ. ಏನಾದರಾಗಲೀ, 'ನಿನ್ನೆ ಯಾಕೆ ಹಾಗಿದ್ದೆ?" ಎಂದವಳನ್ನು ಕೇಳಿಯೇಬಿಡಬೇಕು ಅಂದುಕೊಂಡು ಮರುದಿನ ಅವಳ ಮನೆಗೆ ಹೋದರೆ ಅವಳು ಅದೇ ಹಿಂದಿನ ಲವಲವಿಕೆಯ ಜಾನಕಿಯಾಗಿ ನನ್ನನ್ನು ಬೆಪ್ಪಾಗಿಸಿದ್ದಳು.

* * *

ಹೊಗೆಯಾದುತ್ತಿದ್ದ ಬೇಳೆಸಾರಿನೊಂದಿಗೆ ನಾಲ್ಕು ತುಪ್ಪದ ದೋಸೆಗಳನ್ನು ತಿಂದು ಮೇಲೆ ಘಮಘಮಿಸುತ್ತಿದ್ದ ಬ್ರೂ ಕಾಫಿ ಹೀರಿದಾಗ ಬದುಕು ಅದೆಷ್ಟು ಚಂದ ಅನಿಸಿತು. ಸುರಿಯುತ್ತಿದ್ದ ಮಳೆಯ "ಹೋ" ಏಕತಾನ ಇಂಪಾದ ಹಾಡಾಯಿತು.

ಜಾನಕಿಗೆ ಬೈ ಹೇಳಿ ಮೇಲೆ ಬರುತ್ತಿದ್ದಂತೇ ಟೆಲಿಫೋನ್ ಹೊಡೆದುಕೊಂಡಿತು. ಹೋಗಿ ಎತ್ತಿಕೊಂಡೆ. "ನಾನು ನೇಹಾ ಮಾತಾಡ್ತಿದೀನಿ." ಮಳೆಯ ರಾಗದೊಡನೆ ತೇಳಿಬಂದ ನಗೆಮಿಶ್ರಿತ ಇಂಪುಕಂಠ. ರೋಮಾಂಚನವಾಯಿತು.

ನೇಹಾ! ನನ್ನೆಲ್ಲಾ ಕಥೆಗಳನ್ನೂ ಒಂದೂ ಬಿಡದೇ ಓದಿ, ಹೊಗಳಿ ಉದ್ದುದ್ದದ ಇ ಮೇಲ್ ಕಳಿಸುವ ಕೋಲಾರದ ಮೆಡಿಕಲ್ ವಿದ್ಯಾರ್ಥಿನಿ! ನನ್ನ ಅಭಿಮಾನಿ!

ಆರೇಳು ತಿಂಗಳಿಂದಲೂ ಬರೀ ಇ ಮೇಲ್‌ಗಳ ಮೂಲಕ ಮಾತ್ರ ಪರಿಚಯವಾಗಿದ್ದವಳ ದನಿಯೀಗ ನನ್ನ ಕಿವಿಯಲ್ಲಿ! ಬೆರಳುಗಳು ರಿಸೀವರನ್ನು ಬಲವಾಗಿ ಒತ್ತಿದವು.

"ಓಹ್ ರಿಯಲಿ! ಎಲ್ಲಿಂದ ಮಾತಾಡ್ತಿದೀರಿ?" ಮಳೆಗಿಂತಲೂ ಅತಿಯಾಗಿ ಉದ್ರೇಕಗೊಂಡಿತ್ತು ನನ್ನ ದನಿ.

"ಇಲ್ಲೇ ಪಾಂಡಿಚೆರಿಯಿಂದಾನೇ. ಜಿಪ್‌ಮೆರ್‌ನಲ್ಲಿ ಒಂದು ಮೆಡಿಕಲ್ ಕಾನ್‌ಫರೆನ್ಸ್ ಇದೆ. ನಮ್ಮ ಪ್ರೊಫೆಸರ್ ಜೊತೆ ಬಂದಿದ್ದೀನಿ."

"ಹೌದಾ?" ದನಿ ತಗ್ಗಿಸಿದೆ. ಮೊನ್ನೆಯಷ್ಟೇ ಅವಳಿಂದ ಬಂದಿದ್ದ ಇ ಮೇಲ್‌ನಲ್ಲಿ ಇಲ್ಲಿಗೆ ಬರುವುದರ ಬಗ್ಗೆ ಯಾವ ಸೂಚನೆಯೂ ಇರಲಿಲ್ಲವಲ್ಲ!

ಟೆಲಿಪೋನಿನ ಆ ತಂತಿ ಅವಳಿಗೆ ನನ್ನ ಮನಸ್ಸಿನೊಡನೇ ಸಂಪರ್ಕ ಕಲ್ಪಿಸಿಬಿಟ್ಟಿರಬೇಕು. ಅವಳಿಂದ ಛಟ್ಟನೆ ಉತ್ತರ ಬಂತು:

"ನಾನು ಬರೋದು ಗ್ಯಾರಂಟಿ ಇರಲಿಲ್ಲ. ಹೀಗಾಗಿ ನಿಮಗೆ ಮೊದ್ಲೇ ತಿಳಿಸೋಕ್ಕೆ ಆಗ್ಲಿಲ್ಲ. ನಿನ್ನೆ ಸಾಯಂಕಾಲ ಆತುರಾತುರವಾಗಿ ಹೊರಟುಬಂದ್ವಿ."

"ರಿಯಲಿ ನೈಸ್. ನೀವಿಲ್ಲಿಗೆ ಬಂದಿರೋದು ಸಂತೋಷದ ವಿಷಯ."

ಮಳೆ ಏಕಾಏಕಿ ನಿಂತಂತೆ ರಿಸೀವರ್ ಮೌನ. ಎರಡು ಕ್ಷಣಗಳಲ್ಲಿ ನಿಧಾನವಾಗಿ ಹರಿಯುವ ನದಿಯಂತೆ ಅತ್ತಲಿಂದ ಅವಳ ದನಿ ಹರಿದುಬಂತು: "ಕಾನ್‌ಫರೆನ್ಸ್ ನೆಪ ಮಾಡ್ಕೊಂಡು ನಾನಿಲ್ಲಿಗೆ ಓಡಿಬಂದಿರೋದು ನಿಮ್ಮನ್ನ ನೋಡೋದಿಕ್ಕೆ."

ಹೊರಗಿನ ಮಳೆ ನನ್ನೆದೆಗೇ ನುಗ್ಗಿ ಭೋರ್ಗರೆಯಿತು. ಅವಳ ಮುಂದಿನ ಮಾತುಗಳಿಗಾಗಿ ಕಾತರಿಸಿದೆ. ರಿಸೀವರನ್ನು ಕಿವಿಗೆ ಬಲವಾಗಿ ಒತ್ತಿ ಹಿಡಿದೆ.

"ಈ ಸಂಜೆ ಮನೇಲೇ ಇರ್ತೀರಲ್ಲ?"

"ಹ್ಞಾ ಇರ್ತೀನಿ." ಪ್ರಶ್ನೆ ಮುಗಿಯುತ್ತಿದ್ದಂತೇ ಉತ್ತರ ಬಾಣದಂತೆ ಚಿಮ್ಮಿತ್ತು.

"ಸಂಜೆ ಐದುಗಂಟೆಗೆ ಕಾನ್‌ಫರೆನ್ಸ್ ಮುಗಿಯುತ್ತೆ. ಐದೂವರೆಗೆ ಸರಿಯಾಗಿ ನಿಮ್ಮ ಮನೇಲಿರ್ತೀನಿ. ನಿಮ್ಮನ್ನ ನೋಡ್ಬೇಕು. ನಿಮ್ಜತೆ ತುಂಬ ತುಂಬಾ ಮಾತಾಡ್ಬೇಕು." ಕೊರಳು ಕಾವ್ಯವಾಗಿತ್ತು.

".........."

"ನಿಮ್ಮ ಇಡೀ ಸಂಜೆ ನನಗಾಗಿ. ಒಪ್ಪಿಗೆ ತಾನೆ?" ಕಾವ್ಯಧಾರೆಯಲ್ಲಿ ನಸುನಗೆಯ ಪುಟ್ಟ ಅಲೆ. ಅಲೆಯೇರಿ ಸ್ವಪ್ನಲೋಕಕ್ಕೆ ಯಾನ ಹೊರಟಿದ್ದೆ ನಾನು.

"ಬನ್ನಿ. ಕಾಯ್ತಾ ಇರ್ತೀನಿ. ಅಡ್ರೆಸ್ ಹೇಳಲೇ?"

ಅತ್ತಲಿಂದ ಕಿಲಕಿಲ ನಗು. "ಅದನ್ನೆಲ್ಲಾ ಹುಡುಕಿ, ಪರ್ಸ್‌ನಲ್ಲಿ ಜೋಪಾನವಾಗಿ ಇಟ್ಕೊಂಡೇ ನಾನು ಪಾಂಡಿಚೆರಿಯ ಬಸ್ ಹತ್ತಿದ್ದು."

* * *

ಕಥೆ ಓದಿ ಮೊದಲು ಉತ್ಸಾಹದ ಮಾರುದ್ದ ಪತ್ರ ಬರೆದು ನಾಲ್ಕು ದಿನದಲ್ಲಿ ಬೇಸಿಗೆಯ ತೊರೆಯಾಗಿಬಿಡುವ ಅಭಿಮಾನಿಗಳ ನಡುವೆ ಋತು ಬದಲಾದರೂ ನಳನಳಿಸುತ್ತಲೇ ನಿಂತ ಹಸಿರು ವೃಕ್ಷ ನೇಹಾ. ನನ್ನ ನೀಳ್ಗತೆಯೊಂದನ್ನು ಓದಿ ತಾನು ಮೋಡಿಗೊಳಗಾದಂತಾಗಿರುವುದನ್ನು ಸುಧೀರ್ಘ ಇ ಮೆಯಿಲ್‌ನಲ್ಲಿ ಹೇಳಿಕೊಂಡು ಆಪ್ತಳಾದ ಅವಳು ದಿನಗಳೆದಂತೆ 'ನಿಮ್ಮ ಆ ಕಥೆ ಇಷ್ಟ ಆಯ್ತು, ಈ ಕಥೆ ಇಷ್ಟ ಆಯ್ತು..." ಎಂದು ಹೇಳುಹೇಳುತ್ತಲೇ ನಡುನಡುವೆ ಸೊಗಸು ಉಪಮೆಗಳಲ್ಲಿ "ಕಥೆಗಾರನೂ ಇಷ್ಟವಾದ" ಎಂದು ಸೂಚಿಸುತ್ತಾ ನನ್ನೆದೆಯಲ್ಲಿ ನೂರುನೂರು ಕೋಮಲ ಭಾವನೆಗಳನ್ನು ಬಿತ್ತಿಬಿಟ್ಟಿದ್ದಳು. ನನ್ನ ಖುಷಿಗೆ ಕಥೆಗಳನ್ನು ಬರೆಯುತ್ತಿದ್ದ ನಾನು ಅವಳ ಇಷ್ಟಾನಿಷ್ಟಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳಿಗನುಗುಣವಾಗುವಂತೆ ಕಥೆ ಹೆಣೆಯತೊಡಗಿಬಿಟ್ಟಿದ್ದೆ... ನನ್ನ ಜಗತ್ತು ಬದಲಾಗತೊಡಗಿತ್ತು...

ನೇಹಾ ಈಗ ಇದೇ ಊರಿನಲ್ಲಿದ್ದಾಳೆ! ಇಲ್ಲಿಯವರೆಗೆ ಕಂಪ್ಯೂಟರಿನ ಪರದೆಯಲ್ಲಿ ಬರೀ ಅಕ್ಷರಗಳಾಗಿ ಮಾತ್ರ ಪ್ರಕಟಗೊಂಡಿದ್ದ ಅವಳು ಈ ಸಂಜೆ ನನ್ನ ಮುಂದೆ ಸಾಕಾರಗೊಳ್ಳಲಿದ್ದಾಳೆ! ನನ್ನ ಬದುಕು ಈ ಸಂಜೆಯಿಂದ ಬಹುಷಃ... ಬೇರೆಯೇ ಆಗಿಬಿಡುತ್ತದೆ!

ಇಡೀ ಮನೆಯನ್ನು ಒಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದೆ. ಯಾವುದು ಎಲ್ಲಿದ್ದರೆ ಚಂದ ಎಂದು ಸೂರಿಗೆ ತಲೆಯೆತ್ತಿ, ನಡುವಿಗೆ ಕೈಗಳನ್ನಿಟ್ಟು, ಕಣ್ಣುಗಳನ್ನು ಅರೆಮುಚ್ಚಿ ಯೋಚಿಸುತ್ತಾ ನಿಂತೆ...

ಮಧ್ಯಾಹ್ನ ವಿವಿಧಭಾರತಿಯಲ್ಲಿ "ಮನ್‌ಚಾಹೆ ಗೀತ್" ಆರಂಭವಾಗುತ್ತಿದ್ದಂತೇ ಮನದೊಳಗೆ ಅಡಿಯಿಟ್ಟಿದ್ದವಳನ್ನು ಮನೆಯೊಳಗೆ ಬರಮಾಡಿಕೊಳ್ಳುವ ಎಲ್ಲ ತಯಾರಿಯೂ ಸಂಪೂರ್ಣವಾಯಿತು. ಅರಿಸ್ಟೋ ಹೋಟೆಲ್‌ಗೆ ಫೋನ್ ಮಾಡಿ ರಾತ್ರಿಯೂಟಕ್ಕೆ ರೂಫ್ ಟಾಪ್ ಗಾರ್ಡನ್‌ನಲ್ಲಿ ಟೇಬಲ್ ಬುಕ್ ಮಾಡಿದೆ.

* * *

ಮಧ್ಯಾಹ್ನ ನಿಂತಿದ್ದ ಮಳೆ ಸಾಯಂಕಾಲವಾಗುತ್ತಿದ್ದಂತೇ ಮತ್ತೆ ಆರಂಭವಾಯಿತು. ಜತೆಗೆ ಸಮುದ್ರದ ಕಡೆಯಿಂದ ಹುಚ್ಚುಗಾಳಿ. ಛಳಿಯೆನಿಸಿ ಕಿಟಕಿಗಳನ್ನೆಲ್ಲಾ ಮುಚ್ಚಿಬಿಟ್ಟೆ. ಎರಡು ಸಲ ಬಿಸಿಬಿಸಿ ಚಹಾ ಕುಡಿದೆ. ಐದು ಗಂಟೆ ಹದಿನೇಳು ನಿಮಿಷಕ್ಕೆ ಸರಿಯಾಗಿ ನೇಹಾಳಿಂದ ಫೋನ್ ಬಂತು.

"ಈಗ ಬರ್ತಾ ಇದೀನಿ." ಚುಟುಕಾಗಿ ಉಲಿದು ಲೈನ್ ಕತ್ತರಿಸಿದಳು. ಅವಳ ಇಂಪುಕಂಠದ ಜತೆ ಮಳೆಯ ಗಾನವನ್ನೂ ಮೀರಿ ಕಿವಿ ಇರಿದಿತ್ತು ಆಟೋರಿಕ್ಷಾದ ಕರ್ಕಶ ಸದ್ದು.

ಓಡಿಹೋಗಿ ಬಾಲ್ಕನಿಯಲ್ಲಿ ನಿಂತೆ. ಮುಖ್ಯರಸ್ತೆಯಲ್ಲಿ ಸರಿದೋಡುತ್ತಿದ್ದ ಆಟೋರಿಕ್ಷಾಗಳಲ್ಲಿ ಯಾವುದು ಇತ್ತ ಹೊರಳುತ್ತದೆ ಎಂದು ಕೊರಳು ಉದ್ದವಾಗಿಸಿ ನೋಡಿದೆ. ಕ್ಷಣಗಳು ಯುಗಗಳಾಗುತ್ತಿದ್ದಂತೇ ತಿರುವಿನಲ್ಲಿ ಕಂಡ ಆಟೋರಿಕ್ಷಾ ತೆವಳುತ್ತಾ ಬಂದು ಮನೆಮುಂದಿನ ರಸ್ತೆಯ ಆ ಬದಿಯಲ್ಲಿ ನಿಂತಿತು. ಕಾತರದಿಂದ ಅದರತ್ತಲೇ ಕಣ್ಣು ಕೀಲಿಸಿದವನಿಗೆ ಕಂಡದ್ದು ಒಂದುಪಕ್ಕಕ್ಕೆ ಸರಕ್ಕನೆ ಸರಿದ ಮಳೆಗಡ್ಡವಾಗಿ ಕಟ್ಟಿದ್ದ ಪರದೆ. ಮುಂದಿನ ಕ್ಷಣದಲ್ಲಿ ಅವಳು ಕೆಳಗಿಳಿದಳು. ಒಮ್ಮೆ ತಲೆಯೆತ್ತಿ ಬಾಲ್ಕನಿಯಲ್ಲಿದ್ದ ನನ್ನತ್ತ ನೋಡಿದಳು. ಪತ್ರಿಕೆಗಳಲ್ಲಿ ನನ್ನ ಫೋಟೋ ನೋಡಿದ್ದವಳಿಗೆ ನನ್ನ ಗುರುತು ಸಿಕ್ಕಿರಬೇಕು, ಮುಖವರಳಿಸಿದಳು.

ಅವಳೇ ನೇಹಾ!

ನನ್ನ ಹೃದಯದ ಬಡಿತ ತಾರುಮಾರಾಯಿತು. ಅವಳು ದುಪಟ್ಟಾವನ್ನು ತಲೆಗೆ ಹೊದ್ದು ಮಳೆಯ ನೀರನ್ನು ಪಚ್ ಪಚ್ ಎಂದು ತುಳಿಯುತ್ತಾ ನಮ್ಮ ಕಟ್ಟಡದತ್ತ ಓಡುತ್ತಾ ಬಂದಳು. ಗುಲಾಬೀ ಸಲ್ವಾರ್‌ನ ಕಾಲುಗಳು ಚಿಮ್ಮುತ್ತಾ ಚಿಮ್ಮಿಸುತ್ತಾ ಹತ್ತಿರಾದವು.

ಬಾಗಿಲತ್ತ ಓಡಿದೆ. ಬೋಲ್ಟ್ ಸರಿಸಿ ಬಾಗಿಲನ್ನು ವಿಶಾಲವಾಗಿ ತೆರೆದೆ. ಮೆಟ್ಟಲ ಸರಣಿಯಲ್ಲಿ ಹೆಜ್ಜೆಯ ಸಪ್ಪಳ ಕ್ಷಣಕ್ಷಣಕ್ಕೂ ಹೆಚ್ಚೆಚ್ಚು ಸ್ಪಷ್ಟವಾಗುತ್ತಾ ಹೋಯಿತು. ಕಡುಗಪ್ಪು ಕೂದಲ ನೆತ್ತಿ, ಬಿಳುಪು ದುಂಡುಮುಖ, ಕೊರಳು, ಗುಲಾಬಿ ರಂಗಿನ ಸಲ್ವಾರ್ ಕಮೀಜ್‌ನಲ್ಲಿ ಅಡಗಿದ್ದ ದೇಹದಲ್ಲಿ ಸ್ಪಷ್ಟವಾಗಿ ಗುರುತಿಗೆ ಸಿಕ್ಕಿದ ತುಂಬಿದ ಎದೆ, ಕುಗ್ಗಿದ ಹೊಟ್ಟೆ, ತೆಳುನಡು... ಬಿಡಿಬಿಡಿಯಾಗಿ ಕಣ್ಣಳತೆಗೆ ನಿಲುಕುತ್ತಾ ಬಂದು ನನ್ನೆದುರು ಇಡಿಯಾಗಿ ಅನಾವರಣಗೊಂಡು ನಿಂತಳು.

ಮೊಟ್ಟಮೊದಲು ಅವಳನ್ನು ನೋಡುತ್ತಿದ್ದೆ. ನನ್ನ ಇದುವರೆಗಿನ ಕಲ್ಪನೆಗಳಿಗೇನೂ ಮೋಸವಾಗದಂತೆ ಸುಂದರವಾಗಿದ್ದಳು, ಆಕರ್ಷಕವಾಗಿದ್ದಳು. ಮುದ್ದಾದ ಪುಟ್ಟ ಬೊಂಬೆಯಂತಿದ್ದಳು. ಆದರೆ ಕುಳ್ಳಿಯಂತೆ ಕಂಡಳು. ಇನ್ನೂ ಮೂರುನಾಲ್ಕು ಇಂಚಾದರೂ ಎತ್ತರ ಇರಬಾರದಿತ್ತಾ ಇವಳು ಎಂದುಕೊಳ್ಳುತ್ತಾ "ಬನ್ನಿ ಬನ್ನಿ" ಎಂದು ಒಳಗೆ ಆಹ್ವಾನಿಸಿದೆ.

ಮುಖದ ತುಂಬಾ ನಗೆ ಚೆಲ್ಲುತ್ತಾ ಮನೆಯೊಳಗಡಿಯಿಟ್ಟವಳು ನೇರವಾಗಿ ದಿವಾನ್‌ನತ್ತ ನಡೆದು ಅದರ ಮೇಲೇರಿ ಕಾಲುಗಳನ್ನು ಮಡಚಿ ಆರಾಮವಾಗಿ ಗೋಡೆಗೊರಗಿ ಕುಳಿತಳು. "ಹೀಗೆ ಕೂರೋದು ನಂಗಿಷ್ಟ." ನಗುತ್ತಲೇ ವಿವರಣೆ ನೀಡಿದಳು. ಒಳಗಡಿಯಿಟ್ಟೊಡನೇ ಮನೆ ತನ್ನದೆನ್ನುವಷ್ಟು ಸರಾಗವಾಗಿ, ನಿರಾಳವಾಗಿ ಕೂತವಳು ನನಗೆ ಇನ್ನೂ ಆಪ್ತಳಾದಳು.

ಅವಳ ಶರೀರದಿಂದ ಸೂಸುತ್ತಿದ್ದ ಹಿತವಾದ ಪರಿಮಳವನ್ನು ಆಘ್ರಾಣಿಸುತ್ತಾ "ಏನು ತಗೋತೀರಿ? ಚಾಯ್ ಆಗಬಹುದೇ?" ಎಂದು ಕೇಳಿದೆ.

"ಚಾಯ್ ಬೇಡ. ನಂಗೆ ಕಾಫಿ ಇಷ್ಟ. ನಾನು ಮೂಲತಃ ಚಿಕ್ಕಮಗಳೂರಿನೋಳು ಅಲ್ಲವಾ?" ನಗೆಯರಳಿಸಿದಳು ಮಲೆನಾಡ ಹೆಣ್ಣು. "ಈಗ ಮಾಡಿ ತರ್ತೀನಿ" ಎನ್ನುತ್ತಾ ನಾನು ಹಿಂದೆ ತಿರುಗುತ್ತಿದ್ದಂತೇ ಅವಳು ದಿವಾನ್‌ನಿಂದ ಧಡಕ್ಕನೆ ಕೆಳಗಿಳಿದು ನನ್ನ ಬೆನ್ನ ಹಿಂದೆಯೇ ಕಿಚನ್‌ಗೆ ಬಂದಳು. ನನಗೆ ಅತಿಸಮೀಪದಲ್ಲಿ ನಿಂತಳು.

"ನಾನೇ ಮಾಡ್ತೀನಿ ಬಿಡ್ರಿ. ಎಲ್ಲಾ ಎಲ್ಲೆಲ್ಲಿದೆ ಅಂತ ಹೇಳಿಬಿಡಿ ಸಾಕು" ಎನ್ನುತ್ತಾ ಸಿಂಕ್‌ನ ನಲ್ಲಿ ತಿರುಗಿಸಿ ಕೈ ತೊಳೆದುಕೊಂಡಳು. ಕೇವಲ ಇ ಮೇಲ್‌ಗಳ ಮೂಲಕ ಹೆಣ್ಣೊಬ್ಬಳು ಗಂಡಸೊಬ್ಬನೊಡನೆ ಇಷ್ಟು ಆತ್ಮೀಯವಾಗಬಹುದೇ ಎಂದು ಸೋಜಿಗ ಪಡುತ್ತಾ ಕಾಫಿ ಪೌಡರ್, ಸಕ್ಕರೆಯ ಡಬ್ಬಗಳು, ಹಾಲಿನ ಪಾತ್ರೆಯನ್ನು ಹೊರತೆಗೆದು ಕಾಫಿ ಮೇಕರ್ ಪಕ್ಕ ಇಟ್ಟೆ. ಅವಳಿಗೆಂದೇ ಮಧ್ಯಾಹ್ನ ಗ್ರ್ಯಾಂಡ್ ಬೇಕರಿಯಿಂದ ತಂದಿದ್ದ ಪಫ್‌ಗಳನ್ನು ಹೊರತೆಗೆದೆ. ಸಿಲ್ವರ್ ಫಾಯಿಲ್‌ನಲ್ಲಿ ಸುತ್ತಿದ್ದ ಅವು ಇನ್ನೂ ಬಿಸಿಯಾಗಿದ್ದವು. ಫ್ರಿಜ್‌ನಿಂದ ಮಿಲ್ಕ್ ಪುಡಿಂಗ್ ಹೊರತೆಗೆದು ಓವನ್‌ನೊಳಗಿಟ್ಟೆ. ಅವಳ ಕಾನ್‌ಫರೆನ್ಸ್‌ನ ಬಗ್ಗೆ ಮಾತಾಡುತ್ತಾ ನಿಮಿಷಗಳನ್ನು ಕಳೆದಂತೆ ಕಾಫಿ ತಯಾರಾಯಿತು...

ಮತ್ತೆ ದಿವಾನ್ ಮೇಲೆ ಕಾಲು ಮಡಿಚಿ ಕುಳಿತು ಕಾಫಿಯ ಕಪ್‌ಗೆ ತುಟಿಯೊತ್ತಿದಳು. "ಹೊಸದೇನಾದ್ರೂ ಬರೆದಿರಾ?" ಪ್ರಶ್ನಿಸಿದಳು.

"ಇಲ್ಲ. ಸಮಯಾನೇ ಸಿಕ್ತಾ ಇಲ್ಲ." ಉತ್ತರಿಸಿದೆ. "ಬಿಡುವು ಮಾಡಿಕೊಂಡು ಬರೀಬೇಕು. ಒಂದೆರಡು ಒಳ್ಳೇ ಪ್ಲಾಟ್‌ಗಳಿವೆ." ಸೇರಿಸಿದೆ. ಅವಳಿಂದ ಮತ್ತೆ ಯಾವ ಪ್ರಶ್ನೆಯೂ ಬರಲಿಲ್ಲ.

ನನ್ನೆಲ್ಲಾ ಕಥೆಗಳ ಬಗ್ಗೆ, ಕಥಾವಸ್ತುವಿನ ಬಗ್ಗೆ, ಅಷ್ಟೇ ಅಲ್ಲ, ನಮ್ಮಿಬ್ಬರ ಮನೆ, ಮನೆಜನಗಳ ಬಗ್ಗೆ ಈ ಆರೇಳು ತಿಂಗಳುಗಳಲ್ಲಿ ಇ ಮೇಲ್ ಮೂಲಕವೇ ಸಾಕಷ್ಟು ವಿಚಾರವಿನಿಮಯ ನಡೆದುಹೋಗಿದ್ದರಿಂದ ಈಗ ಎದುರುಬದುರು ಕುಳಿತು ಮಾತಾಡಲು ವಿಷಯವೇ ಇಲ್ಲದುದರ ಅರಿವು ಏಕಾಏಕಿ ತಟ್ಟಿ ಒಂದುಕ್ಷಣ ಗೊಂದಲಕ್ಕೊಳಗಾದೆ. ಅವಳಿಗೂ ಹಾಗೇ ಅನಿಸಿರಬೇಕು, ಸುಮ್ಮನೆ ನನ್ನ ಮುಖವನ್ನೇ ನೋಡುತ್ತಾ ಕಾಫಿ ಹೀರಿದಳು. ಕುಡಿದು ಮುಗಿಸಿ ಲೋಟವನ್ನು ಕೆಳಗಿಟ್ಟು ಅತ್ತಿತ್ತ ಕೊರಳು ಹೊರಳಿಸಿದಳು. ಮೌನ ಅಸಹನೀಯವೆನಿಸಿತು.

"ಏನೋ ತುಂಬಾ ಮಾತಾಡಬೇಕು ಅಂದ್ರಿ?" ತುಟಿಗಳಲ್ಲಿ ನಗೆ ಹನಿಸುವ ಪ್ರಯತ್ನ ಮಾಡಿದೆ. "ಹ್ಞೂ" ಅನ್ನುತ್ತಾ ಪೆಚ್ಚುಪೆಚ್ಚಾಗಿ ನನ್ನನ್ನೇ ನೋಡಿದಳು. ಆ ಸ್ಥಿತಿಯಲ್ಲಿ ಮತ್ತಷ್ಟು ಮುದ್ದಾಗಿ ಕಂಡಳು.

ನನ್ನ ಮನದ ಗೊಂದಲ ತಿಳಿಯಾಯಿತು. ಎದೆಯಲ್ಲಿ ಅಡಗಿದ್ದ ನೂರು ನೂರು ಮಾತುಗಳು, ಸಾವಿರ ಸಾವಿರ ಕನಸುಗಳು ಹೊರಹರಿಯಲು ತುದಿಗಾಲಲ್ಲಿ ನಿಂತವು.

"ನಿಮ್ಮನ್ನ, ನನ್ನ ಅಪೂರ್ವ ಅಭಿಮಾನಿಯನ್ನ ನೋಡ್ಬೇಕು ಅಂತ ತುಂಬಾ ಆಸೆ ಇತ್ತು. ಈಗ ನೀವು ನನ್ನ ಮುಂದೆ ಕುಳಿತಿರೋದು ವಾಸ್ತವವೋ ಕನಸೋ ತಿಳೀತಾ ಇಲ್ಲ." ನಿಧಾನವಾಗಿ ಮಾತು ಹರಿಸಿದೆ.

ಅವಳು ನಕ್ಕಳು. ತಲೆ ಓರೆಯಾಯಿತು. ನನ್ನನ್ನು ಓರೆಗಣ್ಣಿನಿಂದ ನೋಡಿದಳು. "ನಂಗೂ ಅಷ್ಟೇ, ನಿಮ್ಮನ್ನ ಹೀಗೆ ನೋಡ್ತಾ ಇರೋದು ಕನಸಾಗಿಲ್ಲದೇ ಇರಲಿ ಅಂತ ಹಾರೈಸ್ತಾ ಇದೀನಿ." ಮಳೆಯೊಂದಿಗೆ ರಾಗವಾಗಿ ಬಂತು ಅವಳ ಮಾತು.

ಅವಳ ಮುಖವನ್ನೇ ನೇರವಾಗಿ ನೋಡಿದೆ. ಅವಳು ತಲೆ ತಗ್ಗಿಸಿದಳು.

ಧಡಕ್ಕನೆ ಮೇಲೆದ್ದೆ. ಸೆಳೆತಕ್ಕೆ ಸೋತು ದಿವಾನ್‌ನತ್ತ ನಡೆದೆ. ಅವಳ ಪಕ್ಕ ಕುಳಿತಾಗ ನನ್ನ ಮೈಯಿಡೀ ನವಿರಾಗಿ ಕಂಪಿಸುತ್ತಿತ್ತು. ಉಸಿರು ಏರಿತ್ತು. ಹೊರಗೆ ಗಾಳಿಯ ಹುಯ್ಲಿನೊಡನೆ ಮಳೆ ಬಿರುಸಾಯಿತು.

"ನೇಹಾ, ನೀನು ನಂಗೆ ತುಂಬ ಇಷ್ಟ." ಮೆಲ್ಲಗೆ ಪಿಸುಗಿದೆ. ಕಂಪಿಸುತ್ತಿದ್ದ ಕೈಚಾಚಿ ಅವಳ ಕೈ ಹಿಡಿದೆ. ಅವಳು ಒಮ್ಮೆ ತಲೆಯೆತ್ತಿ ನನ್ನತ್ತ ನೋಡಿದಳು. ಮರುಕ್ಷಣ ತಲೆಯನ್ನು ಮತ್ತೂ ಕೆಳಗೆ ಬಾಗಿಸಿದಳು. ಕೆನ್ನೆಗಳು ಛಕ್ಕನೆ ಕೆಂಪೇರಿಬಿಟ್ಟಿದ್ದವು.

ಅವಳ ಕೊರಳ ಸುತ್ತ ಕೈ ಹಾಕಿ ಹತ್ತಿರಕ್ಕೆಳೆದುಕೊಂಡೆ. ತುಟಿಗಳನ್ನು ಗಾಢವಾಗಿ ಚುಂಬಿಸಿದೆ. ಅವಳು ಕಣ್ಣುಮುಚ್ಚಿದಳು. ಅವಳನ್ನು ಬಿಗಿಯಾಗಿ ಎದೆಗೊತ್ತಿಕೊಂಡು ಕುಳಿತೆ. ಇಬ್ಬರಿಗೂ ಮಾತು ಬೇಡವಾಗಿತ್ತು. ಕಾಲ ಸರಿದೋಡಿತು...

ಅವಳು ಫಕ್ಕನೆ ಕಣ್ಣುತೆರೆದಳು. ಶರೀರವನ್ನು ನವಿರಾಗಿ ಅಲುಗಿಸಿ ಅಪ್ಪುಗೆಯಿಂದ ಬಿಡಿಸಿಕೊಂಡಳು. ನನ್ನಿಂದ ದೂರ ಸರಿದು ಕುಳಿತಳು. ಅಪರಿಚಿತನನ್ನು ನೋಡುವಂತೆ ನನ್ನ ಮೇಲೆ ಕಣ್ಣಾಡಿಸಿದಳು. ಗಿರಿಯ ನೆತ್ತಿಯಿಂದ ಪಾತಾಳಕ್ಕೆ ಒಗೆಯಲ್ಪಟ್ಟಿದ್ದ ನಾನು ಅವಳೆಡೆ ಬೆಪ್ಪುನೋಟ ಹೂಡಿದೆ.

ಅವಳು ಒಮ್ಮೆ ಗಡಿಯಾರ ನೋಡಿದಳು. "ನಾನೀಗ ಹೋಗ್ಬೇಕು" ಎನ್ನುತ್ತಾ ದಢಕ್ಕನೆ ಮೇಲೆದ್ದಳು. ಎರಡು ಚಣದಲ್ಲಿ ಬಟ್ಟೆ ಸರಿಪಡಿಸಿಕೊಂಡಳು. "ನಮ್ಮ ಪ್ರೊಫೆಸರ್ ಕಾಯ್ತಾ ಇರ್ತಾರೆ. ನಾನೀಗ ಹೋಗ್ಲೇಬೇಕು" ಎನ್ನುತ್ತಾ ಟೀಪಾಯ್ ಮೇಲಿದ್ದ ತನ್ನ ಕೈಚೀಲವನ್ನೆತ್ತಿಕೊಂಡು ಬಾಗಿಲತ್ತ ಧಾಪುಗಾಲಿಟ್ಟಳು. ನಾನು ದಂಗುಬಡಿದುಹೋಗಿದ್ದೆ.

ಬಾಗಿಲು ತೆರೆದ ಅವಳು ಹಿಂದೆ ತಿರುಗಿದಳು. ಅರೆಕ್ಷಣ ಸುಮ್ಮನೆ ಗೊಂಬೆಯಂತೆ ನಿಂತುಬಿಟ್ಟಳು. ಮುಖದ ತುಂಬಾ ಗೊಂದಲ. ಪಟಪಟ ಬಡಿದುಕೊಂಡ ಕಣ್ಣರೆಪ್ಪೆಗಳು, ತಾಳ ತಪ್ಪಿದಂತೆ ಅರೆಕ್ಷಣ ಹಿಂದೆ ಮುಂದೆ ಸರಿದಾಡಿದ ಹೆಜ್ಜೆಗಳು... ಛಕ್ಕನೆ ಒಂದು ದಿಕ್ಕು ಹಿಡಿದು ಬಾಗಿಲು ದಾಟಿದಳು.

"ಮಳೆ ಸುರೀತಾ ಇದೆ. ಇಲ್ಲೇ ಇರಿ, ಆಟೋ ತರ್ತೀನಿ." ನನ್ನ ದನಿ ಪಾತಾಳದಿಂದ ಬಂದಿತ್ತು.

"ಮಳೆ ನಿಂತಿದೆ. ಆಟೋದವನಿಗೆ ಕಾಯೋದಿಕ್ಕೆ ಹೇಳಿಬಂದಿದ್ದೀನಿ." ಛಟ್ಟನೆ ಹೇಳಿ ಮೆಟ್ಟಲಿಳಿದಳು. ಮತ್ತೊಮ್ಮೆ ಆಘಾತಕ್ಕೆ ಸಿಕ್ಕಿದ ನಾನು ಯಂತ್ರದಂತೆ ಅವಳು ಹೋದ ಕಡೆ ಕಣ್ಣು ಹೊರಳಿಸಿದೆ.

ಮೆಟ್ಟಲ ಸರಣಿಯಲ್ಲಿ ಹೆಜ್ಜೆಗಳು ವೇಗವಾಗಿ ಅಸ್ಪಷ್ಟಗೊಂಡವು. ಅವಳನ್ನು ಕರೆತಂದ ಆಟೋರಿಕ್ಷಾ ಹೊರಗೆ ರಸ್ತೆಯಾಚೆ ನಿಂತಿತ್ತು. ಮಳೆ ಸಂಪೂರ್ಣವಾಗಿ ನಿಂತುಹೋಗಿತ್ತು. ಕಾಲೆಳೆಯುತ್ತಾ ಒಳಗೆ ಬಂದೆ. ಎದುರಿನ ಗೋಡೆಯ ಮೇಲಿದ್ದ ಗಡಿಯಾರ ಕಣ್ಣುಗಳನ್ನಿರಿಯಿತು. ಅದರ ಮುಳ್ಳುಗಳನ್ನೇ ಬೆರಗಿನಿಂದ ನೋಡಿದೆ. ಐದುಗಂಟೆ ನಲವತ್ತೇಳು ನಿಮಿಷವಾಗಿತ್ತು. ಅಂದರೆ...? ನೇಹಾ ನನ್ನ ಮನೆಯಲ್ಲಿ ಕಳೆದದ್ದು ಕೇವಲ ಇಪ್ಪತ್ತೆರಡು ನಿಮಿಷಗಳು!

ಹಾಸಿಗೆಯ ಮೇಲೆ ಬಿದ್ದುಕೊಂಡೆ. ಕಳೆದ ಇಪ್ಪತ್ತೆರಡು ನಿಮಿಷಗಳಲ್ಲಿ ನಡೆದುದೇನೆಂದು ಅರಿವಾಗದೇ ಗೊಂದಲಕ್ಕೆ ಬಿದ್ದು ಒದ್ದಾಡಿದೆ. ನೇಹಾ ನಿಜವಾಗಿ ಇಲ್ಲಿದ್ದಳೇ ಅಥವಾ ಅದೆಲ್ಲಾ ನನ್ನ ಭ್ರಮೆಯೇ ಎಂಬ ಅನುಮಾನ ನನ್ನನ್ನು ಭೂತದಂತೆ ಅಮರಿಕೊಂಡು ಹಿಸುಕಿ ಹಿಂಡಿತು.

ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಅವಳಿಲ್ಲಿಗೆ ಬಂದಿದ್ದಳು. ಅನುಮಾನವಲ್ಲ ಅದು. ಅವಳ ದೇಹದಿಂದ ಸೂಸಿದ ಪರಿಮಳವಿನ್ನೂ ಇಲ್ಲಿನ ಹವೆಯೊಂದಿಗೆ ಬೆರೆತು ಶಾಶ್ವತವಾಗಿ ಬೀಡುಬಿಟ್ಟಂತೆ ಉಳಿದುಬಿಟ್ಟಿದೆ...

ಹೌದು ಅವಳಿಲ್ಲಿಗೆ ಬಂದಿದ್ದಳು. ಹೋಗುವಾಗ ನನ್ನೊಳಗಿನದೇನನ್ನೋ ಕಿತ್ತುಕೊಂಡು ಓಡಿಹೋಗಿದ್ದಳು...

ಅನ್ಯಮನಸ್ಕತೆಯಿಂದ ಒದ್ದಾಡಿದೆ. ಉಸಿರು ಕಟ್ಟಿದಂತೆನಿಸಿತು. ಹಾಸಿಗೆಯಿಂದ ಧಡಕ್ಕನೆದ್ದು ಎಲ್ಲ ಕಿಟಕಿಗಳನ್ನೂ ವಿಶಾಲವಾಗಿ ತೆರೆದೆ. ಬಾಲ್ಕನಿಗೆ ಬಂದೆ. ಮಳೆ ಇರಲಿಲ್ಲ. ಆದರೆ ಆಕಾಶ ಪೂರ್ತಿ ನಿರಾಶಾದಾಯಕ ಬೂದು. ಬಣ್ಣಗಳನ್ನು ಕಾಣುವ ಬಯಕೆ ಏಕಾಏಕಿ ಒಳಗಿನಿಂದ ಒತ್ತರಿಸಿಕೊಂಡು ಬಂದು ಅತ್ತಿತ್ತ ಕೊರಳು ಹೊರಳಿಸಿದೆ. ಕೋಣೆಯೊಳಗೆ ಧಾಪುಗಾಲಿಟ್ಟು ನಡೆದು ಕಂಪ್ಯೂಟರ್ ಆನ್ ಮಾಡಿದೆ. ವಾಲ್ ಪೇಪರ್‌ನಲ್ಲಿ ದಿನವೂ ಕಾಣುತ್ತಿದ್ದ ಸಿಂಡಿ ಕ್ರಾಫರ್ಡ್‌ಳ ಅದೇ ಮಾದಕ ಮಂದಹಾಸ. ಅದೀಗ ಕುಹಕದ ನಗೆಯಾಗಿ ಕೊರಳು ಹಿಸುಕಿತು. ತಲೆ ಒದರಿದೆ.

ಮೆಯಿಲ್ ಬಾಕ್ಸ್ ತೆರೆದಾಗ ಕಂಡದ್ದು ಎರಡು ಪತ್ರಗಳು, ಹನ್ನೆರಡು ಕೆಲಸಕ್ಕೆ ಬಾರದ ಜಾಹಿರಾತುಗಳು. ಅಭ್ಯಾಸದಂತೆ ಜಾಹಿರಾತುಗಳನ್ನೆಲ್ಲಾ ಡಿಲೀಟ್ ಮಾಡಿ ಪತ್ರಗಳತ್ತ ಕಣ್ಣು ಹೂಡಿದಾಗ ಅದರಲ್ಲಿನ ಒಂದು ಬೆಂಗಳೂರಿನ ಗೆಳೆಯ ಶಿವಶರಣಪ್ಪ ಬೋಳಾರನದು. ಕ್ಲಿಪ್ ಬಾಲ ಅಂಟಿಸಿಕೊಂಡು ಅಟ್ಯಾಚ್‌ಮೆಂಟೊಂದು ಇರುವ ಸೂಚನೆ ನೀಡಿದ ಅದನ್ನು ನಂತರ ತೆರೆಯುವಾ ಅಂದುಕೊಂಡು ಮತ್ತೊಂದರತ್ತ ಕಣ್ಣಾಡಿಸಿದೆ. ಯಾವುದೋ ಅಪರಿಚಿತ ಹೆಸರು- ಸುಚರಿತಾ ಅಂತ. ಕುತೂಹಲವಾಯಿತು. ತೆರೆದೆ.

ಎರಡು ದೀರ್ಘ ಪ್ಯಾರಾಗಳಿದ್ದ ಪತ್ರದ ಮೊದಲ ಸಾಲೇ ನನಗೊಬ್ಬಳು ಹೊಸ ಅಭಿಮಾನಿ ಸೃಷ್ಟಿಯಾಗಿರುವುದನ್ನು ಸಾರಿತು. ಮೌಸ್‌ನ ಗುಂಡಿಯನ್ನು ಪಟಕ್ಕನೆ ಒತ್ತಿ ಅದನ್ನು ಡಿಲೀಟ್ ಮಾಡಿಬಿಟ್ಟೆ. ಹೊಸ ಹೆಣ್ಣೊಬ್ಬಳನ್ನು ಅಭಿಮಾನಿಯಾಗಿ ಸ್ವೀಕರಿಸುವ ಮಾನಸಿಕ ಚೈತನ್ಯ ನನ್ನಲ್ಲಿರಲಿಲ್ಲ. ಬೋಳಾರನ ಪತ್ರ ತೆರೆದೆ.

"ನೋಡು, ನಿನಗೆ ಖಂಡಿತಾ ಖುಷಿಯಾಗುತ್ತದೆ" ಎಂಬ ಒಂದೇವಾಕ್ಯದ ವಿವರಣೆಯೊಂದಿಗೆ ಅವನು ಕಳಿಸಿದ್ದು... ಯೋನಿಯ ಹತ್ತು ಹನ್ನೆರಡು ಕ್ಲೋಸ್ ಅಪ್ ಚಿತ್ರಗಳು.

ಯಾವುದೋ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡಿದ್ದಿರಬೇಕು. ಮೇಲಿಂದ, ಕೆಳಗಿಂದ, ಎಡದಿಂದ, ಬಲದಿಂದ- ಚಿತ್ರವಿಚಿತ್ರ ಕೋನಗಳಿಂದ ತೆಗೆದಿದ್ದ ದೃಶ್ಯಗಳು. ಕುತೂಹಲಕ್ಕೆ ಸೋತು ಒಂದೊಂದನ್ನೂ ಬಿಡಿಬಿಡಿಯಾಗಿ ಕಂಪ್ಯೂಟರ್ ತೆರೆಯ ಮೇಲೆ ಮೂಡಿಸಿ ನೋಡುತ್ತಾ ಹೋದೆ...

ಮೊದಮೊದಲು ಕುತೂಹಲ ಕೆರಳಿಸಿದ್ದು ನಿಧಾನಕ್ಕೆ ಅಸಹ್ಯ ಹುಟ್ಟಿಸತೊಡಗಿತು. ಏನೇನೋ ಸುಂದರ, ಮೋಹಕ ಕಲ್ಪನೆಗಳಿಗೆ ಕಾರಣವಾಗಿದ್ದ ಅದೀಗ ನನ್ನ ಕಂಪ್ಯೂಟರ್ ಪರದೆಯಲ್ಲಿ ಒಂದು ಬಿರಿದ ಹಸೀ ಹಸೀ ಗಾಯದಂತೆ ಕಂಡು ವಾಕರಿಕೆಯೆನಿಸತೊಡಗಿತು. ಸುಕೋಮಲ ತೊಡೆಗಳ ನಡುವೆ ಕೊಡಲಿಯೊಂದು ನಿರ್ದಯವಾಗಿ ಎರಗಿ ಕಚಕ್ಕನೆ ಆಳಕ್ಕಿಳಿದು ಮಾಂಸಖಂಡವನ್ನು ಬಗೆದು ಮೂಡಿಸಿದ ಆಳಗಾಯದಂತೆ... ಏಟಿಗೆ ಸಿಕ್ಕಿದ ಚರ್ಮ ಹಿಸಿದುಹೋಗಿ ಎರಡೂ ದಿಕ್ಕಿಗೆ ಹರಡಿಕೊಂಡಂತೆ... ಆದಿಯಿಲ್ಲದ, ಅಂತ್ಯ ಕಾಣದ ಕ್ರೌರ್ಯದ ನಿಸ್ಸಹಾಯಕ ಸ್ತಬ್ಧ ಸಾಕ್ಷಿಯಂತೆ...

ಬೆಕ್ಕಸಬೆರಗಾಗಿ ಕೂತುಬಿಟ್ಟೆ.

ಕಾಲಿಂಗ್ ಬೆಲ್ ಇದ್ದಕ್ಕಿದ್ದಂತೇ ಮೊಳಗಿ ಬೆಚ್ಚಿಸಿತು. ಗಡಬಡಿಸಿ ಕಂಪ್ಯೂಟರ್ ಪರದೆಯನ್ನು ಮಿನಿಮೈಸ್ ಮಾಡಿ ಎದ್ದುಹೋಗಿ ಬಾಗಿಲು ತೆರೆದೆ. "ಏನು ಮಾಡ್ತಿದ್ದೀಯೋ?" ಎನ್ನುತ್ತಾ ಜಾನಕಿ ಒಳಬಂದಳು. "ಹೇಹ್ಹೆಹ್ಹೇ ಏನಿಲ್ಲಾ" ಅಂದೆ ಪೆದ್ದುಪೆದ್ದಾಗಿ. ನೈಟಿಯಲ್ಲಿದ್ದ ಅವಳು ಕಂಪ್ಯೂಟರ್ ಮುಂದಿನ ಸ್ವಿವೆಲ್ ಚೇರ್‌ನಲ್ಲಿ ಕುಳಿತು ಎಡಬಲ ತಿರುಗಿದಳು. "ಬೋರಾಗ್ತಿದೆ ಕಣೋ" ಎನ್ನುತ್ತಾ ಕೈಗಳನ್ನು ತಲೆಯ ಹಿಂದೆ ಹೆಣೆದು ಎದೆಯನ್ನು ಮೇಲೆತ್ತಿ "ಊಂ ಊಂ ಉಹ್ಞುಹ್ಞೂಂ..." ಎನ್ನುತ್ತಾ ಮೈಮುರಿದಳು. ಮಾಳಿಗೆಯ ಮೇಲೆ ತಟಪಟ ಹನಿಗಳುದುರಿದವು. ಮಳೆ ಮತ್ತೆ ಆರಂಭವಾಗಿತ್ತು.

"ಇವರಿಗೇನೋ ಪಾರ್ಟಿ ಇದೆಯಂತೆ. ಕುಡಿದು ತಿಂದು ಮನೆಗೆ ಬರೋದಕ್ಕೆ ಮಧ್ಯರಾತ್ರಿ ಆಗಬೋದು. ಮಗರಾಯ ಕಂಪ್ಯೂಟರ್ ಗೇಮ್‌ನಲ್ಲಿ ಮುಳುಗಿಹೋಗಿದ್ದಾನೆ..." ಮತ್ತೊಮ್ಮೆ ಎದೆ ಮೇಲೆತ್ತಿ ಬಾಯಿಯನ್ನು "ಆ........" ಎಂದು ವಿಶಾಲವಾಗಿ ತೆರೆದು ಧೀರ್ಘವಾಗಿ ಆಕಳಿಸಿದಳು. "...ಅವರಿಬ್ಬರಿಗೂ ಅವರದೇ ಪ್ರಪಂಚ" ಎನ್ನುತ್ತಾ ಮಾತು ಮುಗಿಸಿದಳು.

ನಾನು ಗೊಂದಲಕ್ಕೊಳಗಾದೆ. ಏನು ಮಾತಾಡಬೇಕೆಂದು ಹೊಳೆಯದೇ ಆ ಗಳಿಗೆಯಲ್ಲಿ ಬಾಯಿಗೆ ಬಂದ "ತುಂಬಾ ಮಳೆ ಅಲ್ವಾ?" ಎಂಬ ಪ್ರಶ್ನೆಯನ್ನು ಥಟಕ್ಕನೆ ಹೊರಹಾಕಿದೆ. ಅಷ್ಟಾದರೂ ಹೇಳಲು ಸಾಧ್ಯವಾದುದಕ್ಕಿರಬೇಕು, ವಿಚಿತ್ರ ನೆಮ್ಮದಿಯೆನಿಸಿತು.

"ಹೌದು ಕಣೋ. ಮಳೆ ಜತೆ ಹಾಳು ಛಳಿ ಬೇರೆ. ಬೆಚ್ಚಗೇನಾದ್ರೂ ಹೊದ್ದು ಮಲಗಿಬಿಡುವಾ ಅನಿಸ್ತಿದೆ." ಕಣ್ಣುಮುಚ್ಚಿದಳು. ದನಿಯಲ್ಲಿ ಅತೀವ ಬೇಸರವಿತ್ತು.

ನೇಹಾಳ ನೆನಪು ಪುಟಿದೆದ್ದು ಬಂತು. ಹೊರಗೆ ಮಳೆ ಬಿರುಸಾಯಿತು. ಸಮುದ್ರದತ್ತ ತೆರೆದುಕೊಂಡಿದ್ದ ಕಿಟಕಿಯಿಂದ ಚಳಿಗಾಳಿ ಭರ್ರನೆ ಒಳನುಗ್ಗಿತು. ಜಾನಕಿ "ಅಹ್ ಎಂಥಾ ಛಳಿ! ಕಿಟಕಿ ಮುಚ್ಚೋ" ಎಂದು ಕೀರಲು ಕಂಠದಲ್ಲಿ ಕೂಗಿ ಸೋಫಾದ ಮೇಲೆ ನನ್ನ ಪಕ್ಕ ಬಿದ್ದುಕೊಂಡಿದ್ದ ದಿಂಬೊಂದನ್ನು ಎಳೆದು ಎರಡೂ ಕೈಗಳಿಂದ ಎದೆಯ ಮೇಲೆ ಬಿಗಿಯಾಗಿ ಅವಚಿಕೊಂಡಳು. ನಾನು ಮೇಲೆದ್ದು ಕಿಟಕಿಯತ್ತ ನಡೆದೆ. ಕಿಟಕಿ ಮುಚ್ಚಿ ಪರದೆಯನ್ನು ಎಳೆದು ಹಿಂದಕ್ಕೆ ತಿರುಗುತ್ತಿದ್ದಂತೇ ಅವಳ ದನಿ ಕೇಳಿಸಿತು.

"ಒಂದು ಕಪ್ಪು ಬಿಸಿಬಿಸಿ ಚಾಯ್ ಮಾಡೋ." ಹೇಳುತ್ತಾ ಕುರ್ಚಿಯಲ್ಲಿ ಹಿಂದಕ್ಕೆ ಒರಗಿ ಕಾಲುಗಳನ್ನು ಸುಂಯ್ಯನೆ ಮೇಲೆತ್ತಿ ಸೋಫಾದ ಮೇಲಿಟ್ಟಳು. ದಿಂಬನ್ನು ಎದೆಗೆ ಮತ್ತಷ್ಟು ಬಿಗಿಯಾಗಿ ಒತ್ತಿಕೊಂಡು ಕಣ್ಣುಮುಚ್ಚಿದಳು.

ಅದೇ ಗಳಿಗೆಯಲ್ಲಿ ಬಿಸಿಯಾದುದನ್ನೇದಾರೂ ಗಂಟಲಿಗೆ ಸುರಿದುಕೊಳ್ಳಬೇಕೆಂದು ನನಗೂ ಅನಿಸಿದ್ದು ಕಾಕತಾಳೀಯವೇ ಇರಬೇಕು. ಅಥವಾ ಏಕಾಏಕಿ ಒಳನುಗ್ಗಿ ಇಡೀ ಕೋಣೆಯನ್ನು ಥಂಡಿಯಾಗಿಸಿದ ಚಳಿಗಾಳಿ ಏಕಕಾಲದಲ್ಲಿ ಇಬ್ಬರ ಎದೆಯಲ್ಲೂ ಒಂದೇ ಬಯಕೆ ಮೂಡಿಸಿ ತುಂಟಾಟವಾಡಿರಬೇಕು

"ಯೆಸ್, ಈಗಲೇ ಮಾಡಿ ತರ್ತೀನಿ" ಎನ್ನುತ್ತಾ ಕಿಚನ್‌ನತ್ತ ನಡೆದೆ. ಸ್ಟೋವ್ ಹಚ್ಚಿ ಚಹಾಕ್ಕೆ ನೀರಿಟ್ಟೆ... ಕುದಿಯಲಾರಂಭಿಸಿದ ಚಹಾ ಎಲೆಗಳ ಕಂಪು ಇಡೀ ಕೋಣೆಯಲ್ಲಿ ಪಸರಿಸುತ್ತಿದ್ದಂತೇ ನೇಹಾ ಬಿಟ್ಟುಹೋಗಿದ್ದ ಪರಿಮಳ ಗುರುತು ಸಿಗದಂತೆ ಅದೆತ್ತಲೋ ಓಡಿಹೋಗಿರುವಂತೆನಿಸಿತು.

ನಾನು ಟೀ ಲೋಟಗಳನ್ನು ಹಿಡಿದು ಬಂದವನು ಕಂಡ ನೋಟದಿಂದ ಬೆಚ್ಚಿದೆ. ಕಂಪ್ಯೂಟರ್ ಮುಂದೆ ಜಾನಕಿ, ಮೌಸ್‌ನ ಮೇಲಿದ್ದ ಅವಳ ಬೆರಳುಗಳು. ಬೋಳಾರ ಕಳಿಸಿದ್ದ ಚಿತ್ರಗಳು ಕಂಪ್ಯೂಟರ್ ಪರದೆಯ ಮೇಲೆ ಒಂದೊಂದಾಗಿ ಮೂಡಿ ಮರೆಯಾಗುತ್ತಿದ್ದವು. ಅವಳ ಕಣ್ಣುಗಳಲ್ಲಿ ನಾನೆಂದೂ ಕಂಡಿರದಿದ್ದ ಅಚ್ಚರಿ. ನಿಮಿಷಗಳ ಹಿಂದೆ ನನ್ನ ಕಣ್ಣುಗಳಲ್ಲಿ ಮೂಡಿದ್ದ ಅಚ್ಚರಿಗೂ ಅವಳ ಕಣ್ಣುಗಳಲ್ಲಿ ನಾನೀಗ ನೋಡುತ್ತಿರುವ ಅಚ್ಚರಿಗೂ ಯಾವುದೇ ವ್ಯತ್ಯಾಸವಿಲ್ಲವಷ್ಟೇ! ಬದುಕಿನ ಮತ್ತೊಂದು ಸೋಜಿಗ ನನ್ನ ಕಣ್ಣಮುಂದೆ ಮೈತೆರೆಯುತ್ತಿಲ್ಲವಷ್ಟೇ!

ಬೆರಗುಹತ್ತಿ ಯೋಚಿಸುತ್ತಾ ನಿಂತುಬಿಟ್ಟೆ. ನನ್ನ ಇರವಿನ ಅರಿವು ಅವಳಿಗೆ ಏಕಾಏಕಿ ತಟ್ಟಿರಬೇಕು, ಸರಕ್ಕನೆ ಇತ್ತ ತಿರುಗಿದಳು. ಕಣ್ಣುಗಳಲ್ಲಿ ಅರೆಕ್ಷಣ ಗಲಿಬಿಲಿ. ಮರುಕ್ಷಣ ತುಟಿಗಳಲ್ಲಿ ತೆಳ್ಳನೆಯ ನಗೆ. ನನ್ನ ಮೇಲೆ ನೋಟ ನೆಟ್ಟಂತೇ ಕುರ್ಚಿಯಿಂದ ನಿಧಾನವಾಗಿ ಮೇಲೇಳುತ್ತಾ ಸಣ್ಣಗೆ ದನಿ ತೆಗೆದಳು:

"ನಮಗೆ ನಾವೇ ಎಷ್ಟೋಂದು ಅಪರಿಚಿತ! ಈ ನಿಗೂಢತೆ ಭಯ ಹುಟ್ಟಿಸುತ್ತೆ."

ಕೈಚಾಚಿ ಚಹಾದ ಲೋಟ ಎತ್ತಿಕೊಂಡಳು.

ಇಬ್ಬರೂ ಮೌನವಾಗಿ ಚಹಾ ಹೀರಿದೆವು.

--***೦೦೦***--

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more