• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದಿಷ್ಟು ಮಳೆಗಾಲ, ಮೀನು ಮತ್ತು ಚಿನ್ನು

By Staff
|

ಚಿನ್ನು ಮತ್ತು ಮೀನು ಆಡುತ್ತಿದ್ದ ಇನ್ನೊಂದು ಆಟವೆಂದರೆ, ಅಡಿಕೆ ಅಂಗಳದಲ್ಲಿ. ಬಿದಿರುಮುಳ್ಳಿನ ಬೇಲಿ ಹಾಕಿ ಅಂಗಳದ ಭಾಗವೊಂದನ್ನು ಅಡಿಕೆ ಒಣಗಿಸಲು ಮೀಸಲಿಡುತ್ತಿದ್ದರು. ಸಂಜೆ ಹೊತ್ತು ಮೀನು ಹೋಗಿ ಹರವಿದ್ದ ಅಡಿಕೆಯ ನಡುವೆ ಕೂರುವಳು. ಎಲ್ಲಾ ಕಡೆ ದೃಷ್ಟಿ ಬೀರುವಳು. ಇದ್ದಕ್ಕಿದ್ದಂತೆ ತನ್ನ ಪಕ್ಕದಲ್ಲಿರುವ ಕಿತ್ತಳೆ ಬಣ್ಣದ ಸಿಪ್ಪೆ ಜೂಲುಜೂಲಾಗಿ ಹೊರಬಂದ ಹೊಸ ಹಣ್ಣಡಿಕೆಯನ್ನು ಕಚ್ಚಿಕೊಂಡು ಆಟವಾಡತೊಡಗುವಳು. ಅದನ್ನು ಮುಂಗೈಯಲ್ಲಿ ಹೊತ್ತು ಬಾಯಿಂದ ಕಚ್ಚುತ್ತ ನೆಲದಲ್ಲಿ ಉರುಳಿ ಉರುಳಿ ಜಗಳಾಡುವಳು. ಯಾವುದೋ ಹಾವಿನೊಡನೆಯೋ ಹಲ್ಲಿಯೊಡನೆಯೋ ಕಾದಾಡುವ ರೀತಿಯಲ್ಲಿ ಜೀವವಿಲ್ಲದ ಹಣ್ಣಡಿಕೆಯೊಂದಿಗೆ ಮೀನು ಜಗಳಾಡುತ್ತಿದ್ದರೆ, ಚಿನ್ನುವಿಗೆ ಅದು ನೋಡಲು ಎಲ್ಲಿಲ್ಲದ ಸಂಭ್ರಮ.

ಚಿನ್ನು ಮೀನುನೆದುರಿಗೆ ನಿಂತು ಅಜ್ಜನ ಊರುಗೋಲನ್ನೋ ದಾರವನ್ನೋ ಅಲ್ಲಾಡಿಸುತ್ತ ಮೀನುಳಿಗೆ ಅದು ಹಾವು ಅಥವಾ ಜೀವವಿರುವ ಪ್ರಾಣಿ ಅಂತ ಭ್ರಮೆ ತರಿಸುವಳು. ಮೀನು ಹಾರಿ ಹಾರಿ ಅದನ್ನು ಹಿಡಿಯ ಹೊರಟಾಗ ಅವಳಿಗೆ ಎಟುಕಗೊಡದೆ ಎತ್ತರೆತ್ತರಕ್ಕೆ ಅಲ್ಲಾಡಿಸುವಳು. ಅಜ್ಜ ಇವರ ಎಲ್ಲಾ ಆಟಗಳನ್ನು ದೂರ ನಿಂತು ನೋಡುವರು.

***

ಬೇಸಗೆ ಮುಗಿಯುತ್ತ ಬಂದಿತ್ತು. ಆಳುಗಳು ಅಂಗಳದಲ್ಲಿದ್ದ ಅಡಿಕೆಯನ್ನೆಲ್ಲ ಬಾಚಿ ಗೋಣಿಯಲ್ಲಿ ಕಟ್ಟಿ, ಬಿದಿರುಮುಳ್ಳಿನ ಬೇಲಿಯನ್ನು ತೆಗೆದು ಮನೆಯ ಬದಿಯಲ್ಲಿಟ್ಟು ಅಂಗಳವನ್ನು ಖಾಲಿ ಮಾಡಿದರು. ಚಿನ್ನು ಮತ್ತು ಮೀನುನಿಗೆ ಆಡಲು ಅಡಿಕೆಯಂಗಳ ಇಲ್ಲವಾಯಿತು. ಅಷ್ಟರಲ್ಲಿ ಗಂಗಾವತಾರವಾಗಿ ಮಳೆಗಾಲ ಬಂದುಬಿಟ್ಟಿತು. ಅಜ್ಜ ಚಿನ್ನುವಿಗೆ ಶಾಲೆಗೆ ಸೇರಿಸಿದರು. ಚಿನ್ನು ಶಾಲೆಚೀಲ ಹೆಗಲಿಗೇರಿಸಿ ಮಳೆಗೆ ನೆನೆಯದ ಹಾಗೆ ರೈನ್-ಕೋಟ್ ಹಾಕಿಕೊಂಡು ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೆ ಶಾಲೆಗೆ ಹೋಗತೊಡಗಿದಳು.

ಆಟಿಯ ಮಳೆ ಎಡೆಬಿಡದೆ ಸುರಿಯಿತು. ಗುಡ್ಡದ ನೀರೆಲ್ಲ ತೋಡಿಗೆ ಬಂದು, ಕಟ್ಟ ಕಡಿದು, ತೋಡಿನ ಎಂದಿನ ಸೌಮ್ಯರೂಪ ಕಳೆದು, ಸಿಕ್ಕಸಿಕ್ಕಿದ್ದೆಲ್ಲ ಕೊಚ್ಚಿಕೊಂಡು ಕೆಂಪಾಗಿ ಮೈದುಂಬಿ ಹರಿಯಿತು. ಚಿನ್ನು ಮತ್ತು ಮೀನು ಜತೆಗೆ ಕಳೆಯಲು ಹೆಚ್ಚಿನ ಸಮಯ ಸಿಗುತ್ತಿರಲಿಲ್ಲ. ಸಿಕ್ಕಿದ ಕಾಲವನ್ನು ಮನೆಯೊಳಗೇ ಕಳೆಯಬೇಕಾಗುತ್ತಿತ್ತು. ಅವಾಗಾವಾಗ ಮಳೆ ಬಿಟ್ಟಾಗ ಮೀನು ಹೊರಗೆ ಹೋಗಿ ಹಿತ್ತಲಿನಲ್ಲಿ ಹುಲ್ಲಿನ ನಡುವೆ, ಕೂರುತ್ತಿದ್ದಳು. ಅಲ್ಲಿ ಹಾವೋ ಹರಣೆಯೋ ಹರಿದಾಡಿದಾಗ ಬೆಂಬತ್ತಿ ಹೋಗುತ್ತಿದ್ದಳು. ಅವಳು ಓಡಾಡುವಾಗ ಚಿನ್ನುವೂ ದೂರ ನಿಂತು ನೋಡುವಳು. ಎಲ್ಲೆಂದರಲ್ಲಿ ಹೋಗುವ ಮೀನುವಿನ ಜತೆ ಸಾಧ್ಯವಾದಲ್ಲೆಲ್ಲ ತಾನೂ ಹೋಗುತ್ತಿದ್ದಳು.

***

ಅದೊಂದು ದಿನ ರೈನ್ ಕೋಟಿದ್ದರೂ ಮಳೆಗೆ ಒದ್ದೆ ಮುದ್ದೆಯಾಗಿ ಚಳಿಗೆ ಗಡಗಡನೆ ನಡುಗುತ್ತ ಮನೆ ಜಗಲಿ ಹತ್ತಿದ ಚಿನ್ನು ನೀರು ಬಸಿಯುತ್ತಿದ್ದ ರೈನ್ ಕೋಟ್ ಬಿಚ್ಚಿ ಜಗಲಿಯ ಬದಿಗಿಟ್ಟಳು. ಅಮ್ಮ ಬಂದು ನಿಂಗೆ ರೈನ್ ಕೋಟ್ ಇದ್ರೂ ಒಂದೆ ಹೆಣ್ಣೆ, ಇಲ್ಲದಿದ್ರೂ ಒಂದೆ ಅಂತ ಪ್ರೀತಿಯಲ್ಲಿ ಬೈಯುತ್ತ ಚಿನ್ನುವಿನ ಬೆನ್ನಿಂದ ಶಾಲೆಚೀಲವನ್ನು ತೆಗೆದು ಚಾವಡಿಯಲ್ಲಿಟ್ಟಳು, ಮನೆಯಲ್ಲಿ ಹಾಕುವ ಬೆಚ್ಚನೆಯ ಹಳೆಬಟ್ಟೆ ಕೊಟ್ಟಳು. ಚಿನ್ನು ಶಾಲೆಯ ಚೀಲವನ್ನು ಚಾವಡಿಯಲ್ಲಿಟ್ಟು ಒಳಮನೆಗೆ ನಡೆದಳು.

ಬಟ್ಟೆ ಬದಲಾಯಿಸುತ್ತ ಅತ್ತಿತ್ತ ಹುಡುಕುನೋಟ ಬೀರಿದ ಚಿನ್ನು, ಮಿಯಾಂವ್ ಅಂತ ಮೆಲ್ಲನೆ ಕೂಗಿದಳು. ಮೊದ್ಲು ಬಿಸಿಬಿಸಿ ಕಾಫಿ ಕುಡಿ, ಹಪ್ಪಳ ತಿನ್ನು, ಮತ್ತೆ ಎಷ್ಟು ಹೊತ್ತು ಬೇಕಾರೂ ಪುಚ್ಚೆಯೊಟ್ಟಿಗೆ ಆಡು ಅಂತ ಅಂದ ಅಮ್ಮ ಬೆಚ್ಚನೆಯ ಬೈರಾಸಿನಲ್ಲಿ ಚಿನ್ನುವಿನ ತಲೆಯೊರಸತೊಡಗಿದಳು.

ಅಡಿಗೆಮನೆಯಾಚೆಗಿನ ಚಾವಡಿಯಲ್ಲಿ ಚಕ್ಕಳಮಕ್ಕಳ ಹಾಕಿ ಕೂತ ಚಿನ್ನು ಬಿಸಿಬಿಸಿ ಕಾಫಿ ಕುಡಿಯುತ್ತ, ಕೆಂಡದಲ್ಲಿ ಕಾಯಿಸಿದ ಹಪ್ಪಳದಿಂದ ಪುಟ್ಟ ತುಂಡೊಂದನ್ನು ಕರಕ್ಕೆಂದು ಮುರಿದಳು. ಅಲ್ಲೆಲ್ಲ ಘಮ್ಮೆಂದು ಹಪ್ಪಳದ ಕಂಪು ಹಬ್ಬಿತು. ಕರಕ್ಕೆಂಬ ಸದ್ದು ಕೇಳುತ್ತಲೂ ಅಲ್ಲಿವರೆಗೆ ಆಡಿಗೆಮನೆಯ ಕತ್ತಲಲ್ಲಿ ಒಲೆಯ ಪಕ್ಕ ಬೆಚ್ಚಗೆ ಮೈಕಾಸಿಕೊಳ್ಳುತ್ತಿದ್ದ ಮೀನು ಮಿಯಾಂವ್ ಅನ್ನುತ್ತ ಓಡಿ ಬಂದು ಚಿನ್ನುವಿನ ಮಡಿಲೇರಿದಳು. ಚಿನ್ನು ಖುಷಿಯಿಂದ ನಗುತ್ತ ಮೀನುವಿನ ಮೈಸವರಿ ಮಡಿಲಲ್ಲಿ ಕೂರಿಸಿ ಹಪ್ಪಳದ ಚೂರುಗಳನ್ನು ಒಂದೊಂದೇ ಅವಳ ಬಾಯಿಗಿಡತೊಡಗಿದಳು. ಮೀನು ಕಣ್ಣುಮುಚ್ಚಿ ಆ ಚೂರುಗಳನ್ನು ತಿನ್ನತೊಡಗಿದಳು.

ರಾತ್ರಿಯ ಅಡಿಗೆಗೆ ತಯಾರು ಮಾಡಲಾರಂಭಿಸಿದ ಅಮ್ಮ ಇವರ ಸಂಭ್ರಮವನ್ನು ನೋಡುತ್ತ, ಅದಕ್ಕೆ ಆಗಲೂ ಹಾಕಿದೆ ನಾನು ಹಪ್ಪಳ, ಹೆಚ್ಚು ತಿಂದ್ರೆ ನಾಳೆ ಮತ್ತೆ ಹೊಟ್ಟೆ ಉಬ್ಬರಿಸ್ತ್ ಕಾಣ್ ಪುಚ್ಚೆಗೆ, ಅಂದಳು. ಪಾಪ ಮೀನುಂಗೆ ನನ್ನೊಟ್ಟಿಗೆ ತಿನ್ನದೆ ಉದಾಸೀನ ಆತಿಲ್ಯಾ ಅಮ್ಮ, ಅನ್ನುತ್ತ ಮೀನುಳ ತಲೆಸವರಿದ ಚಿನ್ನು, ಅಲ್ದಾ ಮೀನು ಅಂತ ಮೀನುಳ ಹತ್ತಿರ ಕೇಳಿದಳು. ಭಾವಸಮಾಧಿಗೆ ಭಂಗ ಬಂದವರ ಹಾಗೆ, ನಿದ್ರೆಯಿಂದ ಎದ್ದವರ ಹಾಗೆ ಹೂಂ ಎಂದು ಮುಲುಗಿದ ಮೀನು ಕಣ್ಣು ಮುಚ್ಚಿ ಚಿನ್ನು ಕೊಟ್ಟ ಇನ್ನೊಂದು ಚೂರು ಹಪ್ಪಳ ತಿನ್ನತೊಡಗಿದಳು. ನೋಡಮ್ಮ, ಮೀನು ಹೌದು ಹೇಳ್ತ್-ಳ್ ಕಾಣ್ ಅಂತ ಚಿನ್ನು ಸಂಭ್ರಮಿಸಿದಳು. ಪುಚ್ಚೆಗೆ ಮಾತಾಡ್-ಗೆ ಕಲ್ಸಿಯಲ್ಲ ನೀನ್, ಹುಷಾರಿ ಹೆಣ್ಣ್ ಅಂತ ಅಜ್ಜ ಬೊಚ್ಚುಬಾಯಿ ಬಿಟ್ಟು ನಕ್ಕರು.

ತಿಂಡಿಯ ಕಾರ್ಯಕ್ರಮ ಮುಗಿದಮೇಲೆ ಮೆಲ್ಲಗೆ ಹೊರಗಿಣುಕುತ್ತಾಳೆ ಚಿನ್ನು, ಬಿಸಿಲು ಮೂಡಿತ್ತು! ಮಳೆಬಂದುದರ ಕುರುಹೇ ಇಲ್ಲದ ಹಾಗೆ ಜಗತ್ತೆಲ್ಲ ನಗುತ್ತಿತ್ತು. ಮನೆಯ ಹಿಂದಿನ ಗುಡ್ಡದಾಚೆಗೆ ಆಕಾಶದಲ್ಲಿ ಕಾಮನಬಿಲ್ಲು ಮೂಡಿತ್ತು. ಮನೆಯ ಕೆಳಗಿನ ಅಡಿಕೆ ತೋಟ, ತೆಂಗಿನ ಮರಗಳು, ಮರಗಳಿಗೆ ಸುತ್ತಿಕೊಂಡ ಕರಿಮೆಣಸಿನ ಗಿಡಗಳು, ಮನೆಯೆದುರಿನ ದಾಸವಾಳದ ಗಿಡ, ಬಯ್ಯಮಲ್ಲಿಗೆ, ದುಂಡುಮಲ್ಲಿಗೆ, ರಾತ್ರಿರಾಣಿಗಿಡ, ತೋಡಿನ ಮತ್ತು ಅಂಗಳದ ನಡುವೆ ಬೇಲಿಯಾಗಿ ನೆಟ್ಟಿದ್ದ ಬಣ್ಣ ಬಣ್ಣದ ಕ್ರೋಟನ್ ಗಿಡಗಳು - ಎಲ್ಲವೂ ಸಂಜೆಬಿಸಿಲಿನ ಚಿನ್ನದ ರಂಗಿಗೆ ತಿರುಗಿ ಶೋಭಿಸುತ್ತಿತ್ತು. ರಾತ್ರಿರಾಣಿ ಗಿಡದಲ್ಲೆರಡು ಮೊಗ್ಗು ಈ ಸಂಜೆಗೆ ಅರಳುವ ತಯಾರಿ ನಡೆಸಿತ್ತು. ಇದ್ಯಾವುದರ ಪರಿವೆಯಿಲ್ಲದೆ ಮನೆಯ ಕೆಳಗಿನ ತೋಡು ತನ್ನಪಾಡಿಗೆ ತಾನು ಮೈದುಂಬಿ ಧೋ ಎಂದು ಹರಿಯುತ್ತಿತ್ತು. ಅಂಗಳದ ನೀರು ಮತ್ತು ತೋಡಿನ ನೀರಿನ ಧೋ.. ಶಬ್ದ ಬಿಟ್ಟರೆ ಮಳೆ ಬಂದದ್ದಕ್ಕೆ ಸಾಕ್ಷಿಯೇ ಇರದ ಹಾಗಿತ್ತು.

ಚಿನ್ನುವಿಗೆ ಈ ಸುಂದರ ಸಂಜೆಯ ವೈಭವ ಕಂಡು ತುಂಬಾ ಖುಷಿಯಾಯಿತು. ಮೀನುಗೂ ಸಿಕ್ಕಾಪಟ್ಟೆ ಖುಷಿಯಾಗಿ ಛಂಗನೆ ಜಿಗಿದು ಹೂಗಿಡಗಳ ನಡುವೆ ಓಡಿದಳು. ಅಲ್ಲಿ ಬಯ್ಯಮಲ್ಲಿಗೆ ಹೂಗಳ ಮೇಲೆ ಅವಾಗಷ್ಟೆ ಬಂದು ಕೂತಿದ್ದ ಹಳದಿ ಹಾತೆಯ ಹಿಂದೆ ಬಿದ್ದು ಬೆನ್ನಟ್ಟಿದಳು. ಅಂಗಳದಲ್ಲಿ ಹರಡಿದ ಮಳೆನೀರನ್ನು ಕಾಲಲ್ಲಿ ಚಿಮ್ಮುತ್ತ ಚಿನ್ನು ಹಿಂಬಾಲಿಸಿದಳು. ಅಜ್ಜ ಜಗಲಿಯಲ್ಲಿ ನಿಂತು ಇವರಾಟ ನೋಡುತ್ತಿದ್ದರು.

ಮೀನು ಎಲ್ಲಾಕಡೆ ಓಡಾಡಿದಳು. ದೊಡ್ಡದೊಡ್ಡ ರೆಕ್ಕೆಗಳಿದ್ದ ಆ ಹಳದಿ ಹಾತೆ ಅಲ್ಲಿದ್ದ ಎಲ್ಲ ಗಿಡಗಳ ಮೇಲೆ ಹೂಗಳ ಮೇಲೆ ಹಾರಿ ಹಾರಿ ಮೀನುವನ್ನು ಆಟವಾಡಿಸಿತು. ಕೊನೆಗೆ ಅಂಗಳದ ಬದಿಗೆ ಬೇಲಿಗಿಡವಾಗಿ ನೆಟ್ಟಿದ್ದ ಕ್ರೋಟನ್ ಗಿಡಗಳ ಕಡೆ ಹಾರಿತು. ಮೀನು ಕೂಡ ಅದರ ಜತೆಗೆ ಹಾರಿದಳು. ಚಿನ್ನುವೂ ಗಿಡಗಳ ನಡುವೆ ದಾರಿಮಾಡಿಕೊಂಡು ಅಲ್ಲಿಗೆ ತಲುಪಿದಳು.

ತೋಡಿನ ಬದಿಯಿಂದ ಮೇಲಕ್ಕೆ ಬೆಳೆದ ಸಂಪಿಗೆ ಮರದ ಕೊಂಬೆಯೊಂದು ಕ್ರೋಟನ್ ಗಿಡಕ್ಕೆ ತಾಗಿಕೊಂಡಂತೆ ಅಂಗಳಕ್ಕೆ ಇಣುಕಿತ್ತು. ಮಾಯಾಮೃಗದಂತಹ ಹಳದಿ ಹಾತೆ ಹಾರಿ ಹೋಗಿ ಸಂಪಿಗೆ ಮೊಗ್ಗಿನ ಮೇಲೆ ಕುಳಿತಿತು. ಮೀನು ಹಠ ಬಿಡದೆ ತಾನೂ ಹೋಗಿ ಸಂಪಿಗೆ ಗಿಡದ ಕಡೆಗೆ ಹಾರಿದಳು. ಹಾತೆ ಅಲ್ಲಿಂದಲೂ ಹಾರಿತು. ಅದನ್ನು ಹಿಡಿಯಲು ಮತ್ತೆ ಹಾರಿದ ಮೀನುಳ ಕೈಗೆ ಸಂಪಿಗೆ ಗಿಡದ ರೆಂಬೆಯೊಂದು ಆಧಾರವಾಗಿ ಸಿಕ್ಕಿ ಅದಕ್ಕೆ ನೇತಾಡಿದಳು. ರೆಂಬೆ ಅವಳ ಭಾರಕ್ಕೆ ಜಗ್ಗಿ ನೇರವಾಗಿ ಕೆಳಗಿದ್ದ ತೋಡಿನ ಮೇಲೆ ನೇತಾಡತೊಡಗಿತು. ಈಗ ಮೀನು ಏನಾದರೂ ಕೈಬಿಟ್ಟು ಹೋದರೆ ನೇರ ಕೆಳಗೆ ತೋಡಿಗೆ ಬೀಳುತ್ತಾಳೆ.

ಚಿನ್ನುವಿಗೆ ಕಳವಳವಾಯಿತು. ಮೀನು ಅದು ಹೇಗೆ ಈಚೆ ಬರುತ್ತಾಳೋ ಅಂತ ಗಡಿಬಿಡಿಯಲ್ಲಿ ಕ್ರೋಟನ್ ಗಿಡಗಳನ್ನು ದಾಟಿ ಹೋಗಿ ದರೆಯ ಬದಿಯಲ್ಲಿ ನಿಂತ ಚಿನ್ನು ನೇತಾಡುತ್ತಿದ್ದ ಮೀನುವನ್ನು ಕೈಗೆಟಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೇ, ಕಾಲಕೆಳಗಿನ ಸಡಿಲ ಮಣ್ಣು ಜಾರಿ ಕುಸಿಯಿತು. ಕಾಲೂ ಜಾರಿತು. ಅಮ್ಮಾ ಎಂದು ಕಿರುಚುತ್ತ ದರೆಯ ಬದಿಯಲ್ಲಿ ಕೆಳಗಡೆ ಬೀಳುತ್ತಾ ಇದ್ದಾಗ ಚಿನ್ನುವಿನ ಕಣ್ಣಿಗೆ ಕಂಡಿದ್ದು ಮೇಲೆ ಸಂಪಿಗೆ ರೆಂಬೆಯಲ್ಲಿ ನೇತಾಡುತ್ತಿದ್ದ ಮೀನು, ಮತ್ತೆ ಹತ್ತಡಿ ಜಾರಿದಾಗ ಹತ್ತಿರವಾಗುತ್ತಿದ್ದ ಇಪ್ಪತ್ತಡಿ ಆಳದಲ್ಲಿ ರಭಸವಾಗಿ ಹರಿಯುತ್ತಿದ್ದ ತೋಡಿನ ಕೆಂಪುನೀರು.

***

ಅಮ್ಮಾ... ಅಂತ ನರಳುತ್ತ ಚಿನ್ನು ಕಣ್ಣುಬಿಟ್ಟಾಗ ಮೊದಲು ಕಂಡಿದ್ದು ಪಕ್ಕದಲ್ಲಿ ಕುಳಿತು ಕನ್ನಡಕವಿಟ್ಟು ಏನೋ ಪುಸ್ತಕ ಕೈಯಲ್ಲಿ ಹಿಡಿದಿದ್ದ ಅಜ್ಜ. ತಾನು ಮನೆಯೊಳಗಿನ ಬೆಡ್-ರೂಮಿನಲ್ಲಿ ಮೆತ್ತಗಿನ ಹಾಸಿಗೆಯ ಮೇಲೆ ಮಲಗಿದ್ದೇನೆ ಅಂತ ಅರಿವಾಯಿತು. ಅವಳು ಕಣ್ಣುಬಿಟ್ಟಿದ್ದು ಕಂಡ ಅಜ್ಜ ಎಚ್ರಾಯ್ತ ಚಿನ್ನೂ, ಮಾತಾಡ್ ಮಗಾ ಅಂತ ಅವಳನ್ನು ಮಾತಾಡಿಸುವ ಪ್ರಯತ್ನ ಮಾಡುತ್ತಿದ್ದರು. ಮೈಕೈಯಲ್ಲ ಅಸಾಧ್ಯ ನೋವು, ತಡೆಯಲಾರದೆ ಚಿನ್ನು ಮುಲುಗಿದಳು. ಮುಗು ಕಣ್ ಬಿಟ್ಲ್ ಕಾಣ್ ಅನ್ನುತ್ತ ಅಜ್ಜ ಅಮ್ಮನನ್ನು ಕರೆದರು.

ಅಮ್ಮ ಬಂದವಳು ಚಿನ್ನುಗೆ ಮೆಲ್ಲಗೆ ಎಬ್ಬಿಸಿ ಕೂರಿಸಿದಳು. ಬಿಸಿ ಹಾಲು ಕುಡಿಸಿದಳು. ನೋವಿನಿಂದ ಮುಖ ಕಿವಿಚಿಕೊಳ್ಳುತ್ತಿದ್ದಂತೆಯೇ ಚಿನ್ನುವಿಗೆ ಥಟ್ಟಂತ ನೆನಪಾಯಿತು, ಮೀನು ಎಲ್ಲಿ? ತಾನು ಬಿದ್ದಿದ್ದು, ಬೀಳುತ್ತಾ ಮೀನು ಸಂಪಿಗೆ ರೆಂಬೆಗೆ ನೇತಾಡುತ್ತಿದ್ದಿದ್ದು ನೋಡಿದ್ದು ಎಲ್ಲಾ ನೆನಪಾಯಿತು. ಮೀನು ಎಲ್ಲಿದ್ಲಮ್ಮಾ ಅಂತ ಕೇಳಿದಳು. ಆ ಹಾಳು ಪುಚ್ಚೆಂದಾಗಿಯೇ ಇಷ್ಟೆಲ್ಲಾ ಆದ್ದ್, ಇನ್ನೊಂದ್ ಸರ್ತಿ ಪುಚ್ಚೆ ಸಾವಾಸ ಮಾಡ್ರೆ ಕಾಣ್ ನಿಂಗೆ... ಅಜ್ಜ ಕಾಣದೇ ಇದ್ದಿದ್ರೆ, ಆಚಮನೆ ಅಣ್ಣ ತೋಡಿಗೆ ಹಾರಿ ನಿನ್ನ ಹಿಡ್ಕಣದೇ ಇದ್ದಿದ್ರೆ ಈಗ ಆಯಿಪ್ಪ್ ಕಥೆ ನಂಗೆ ಜನ್ಮಕ್ಕೆ ಅನುಭವಿಸ್-ಗೆ, ಮೀನು ಅಂಬ್ರ್ ಮೀನು ಅಂತ ಕಣ್ಣೀರಿನ ಜತೆ ಕಾಳಜಿ ಸೇರಿಸಿ ಬೈಯುತ್ತ ಚಿನ್ನುಗೆ ಬ್ರೆಡ್ ತಿನಿಸತೊಡಗಿದಳು ಅಮ್ಮ.

ಹಂಗಾದ್ರೆ ಮೀನು ಏನಾದ್ಲು? ನೀರಿಗೆ ಬಿದ್ದುಹೋದ್ಲಾ? ಗೊತ್ತಾಗ್ಲಿಲ್ಲ ಚಿನ್ನುಗೆ. ಅಮ್ಮ ಅಳುತ್ತಿದ್ದಾಳೆ, ಸಹಸ್ರನಾಮಾರ್ಚನೆ ಮಾಡುತ್ತಿದ್ದಾಳೆ ವಿನಹ ಮೀನುಗೇನಾಯಿತು ಅಂತ ಹೇಳುತ್ತಿಲ್ಲ. ಕಲ್ಪಿಸಿಕೊಳ್ಳಹೊರಟರೆ, ಏನಾಗಿರಬಹುದು ಅಂತ? ಊಹೂಂ.. ಭಯವಾಯ್ತು ಚಿನ್ನುಗೆ. ದಿಕ್ಕುತೋಚದೆ ಚಿನ್ನು ಸುಮ್ಮನಾದಳು. ಅಮ್ಮ ಚಿನ್ನುವಿಗೆ ಮಾತ್ರೆ ತಿನಿಸಿ, ಮದ್ದು ಕುಡಿಸಿ ಮೈತುಂಬ ಹೊದಿಸಿ ಹೊರಗಡೆ ಹೋದಳು.

ಚಿನ್ನುವಿಗೆ ಹಾಗೇ ಮೆಲ್ಲನೆ ಮಂಪರು ಕವಿದು ನಿದ್ರೆ ಬರಲಾರಂಭಿಸಿತು. ಸ್ವಲ್ಪ ಸ್ವಲ್ಪವೇ ಮಂಪರಿಗೆ ಜಾರುತ್ತಿದ್ದ ಹಾಗೆ ಯಾರೋ ಪಕ್ಕದಲ್ಲಿ ಬಂದು ಆತ್ಮೀಯವಾಗಿ ಕೂತಂತೆ, ಪ್ರೀತಿಯಲ್ಲಿ ಮುಖ ಸವರಿದಂತೆ, ಮೈಯನ್ನೆಲ್ಲ ನೇವರಿಸಿದಂತೆನಿಸಿ ಚಿನ್ನು ಮೆಲ್ಲನೆ ಯಾರೆಂದು ಕಣ್ಣು ಬಿಟ್ಟು ನೋಡಿದರೆ... ಅಜ್ಜ ಚಿನ್ನುವಿನ ಒಂದು ಬದಿಗೆ ಕೂತು ಕನ್ನಡಕ ಕೈಯಲ್ಲಿ ಹಿಡಿದು ಸಂತೋಷವಾಗಿ ನಗುತ್ತಿದ್ದರು. ಇನ್ನೊಂದು ಬದಿ... ಹಾಸಿಗೆಯ ಮೇಲೆ ನಿಂತುಕೊಂಡು ತನ್ನ ತಲೆಯನ್ನು ಚಿನ್ನುವಿನ ಹೊದಿಕೆಗೆ ಜೋರಾಗಿ ಉಜ್ಜುತ್ತ ಗುಟುರ್ರ್.ರ್ರ್ ಅಂತ ಮೈಯೊಳಗಿಂದ ಸಂಗೀತ ಹೊರಡಿಸುತ್ತ ಚಿನ್ನುವಿನ ಹೊದಿಕೆಯೊಳಗೆ ಸೇರಿಕೊಳ್ಳುವ ಪ್ರಯತ್ನ ನಡೆಸಿದ್ದಳು, ತುಂಟಿ ಮೀನು... :) :) :)

ಇದನ್ನೂ ಓದಿ :

ಮೀನು ಸಾಕಣೆ... ಸಾಕು ಕಣೇ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more