ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರುತಿದೆ !

By Staff
|
Google Oneindia Kannada News


ಈ ಜೀವನ ಒಂದು ರೀತಿ ಹಾರಾಟ, ಜೂಕಾಲಿ.........
ನಾವು, ನಾವೆಲ್ಲಾ ಹಾರುತಾ, ಹಾರುತ್ತಾ ಹಲವಾರು ನೋಟ ನೋಡುತ್ತೇವೆ.
ಆದರೆ ವಿಚಿತ್ರ, ಕರಿನಾಯಿ ಎಂದು ಬೆಳ್ಳಗಾಗೊಲ್ಲ,...........
...ಭ್ರಮೆ ಅನ್ನೋದು ನಮ್ಮನ್ನು ಬಿಟ್ಟು ಹೋಗೊಲ್ಲ.....
ಅಲ್ಲವೇ?

ಹಳೆ ನೆನಪು-

‘ನೀನು ಯಾವ ಸೀಮೆ ಹುಡುಗ’ ಹೈಸ್ಕೂಲಲ್ಲಿ ಕನ್ನಡ ಮೇಷ್ಟ್ರು ನನ್ನ ಬೈದಿದ್ದರು. ‘ನಾನು ಮಲೆಸೀಮೆ ಹುಡುಗ’ ಎಂದಿದ್ದೆ . ಎಲ್ಲರೂ ನಕ್ಕಿದ್ದರು. ಏನೇ ಇರಲಿ ಮಲೆನಾಡು ಬಲು ಚಂದ, ಅಲ್ಲೆ ನಾನು ಪಿ.ಯು.ಸಿ. ಓದಿದ್ದು. ಸುಮಾರು ಐದು ವರ್ಷ ಆದ ಮೇಲೆ, ನನ್ನ ಹಳೆ ಕಾಲೇಜು, ಹಾಸ್ಟೆಲ್‌ನ ನೋಡಬೇಕು ಅಂತ ಬಯಕೆ ಬಂದು ಹೊರಟೆ. ಅದೇ ರಸ್ತೆ, ಅದೇ ಮರ, ಅದೇ ಕಲ್ಲು ಬಂಡೆ, ಅದೇ ಬೆಂಚುಕಲ್ಲು ಎಲ್ಲ ಹಾಗೇ ಇದೆ. ಅದನ್ನೆಲ್ಲಾ ನೋಡುತ್ತಾ ಒಂದು ರೀತಿ ಹುರುಪು ಚೆಲ್ಲಿದ ಅನುಭವ.

ಸಂಜೆ ಬಿಸಿಲಲ್ಲಿ ದೂರ ನಡೆದು ತಿರುವಿನಲ್ಲಿ ರಸ್ತೆ ಬದಿಯ ಬೆಂಚುಕಲ್ಲು ಮೇಲೆ ಕುಳಿತೆ. ಎಂತಹ ನೋಟ. ಗುಡ್ಡದ ಮೇಲೆ ಕಾಣೋದು ಗೇರುಮರದ ಗುಂಪು, ಕಣಿವೆ ಪೂರ್ತ ಅಡಿಕೆ ಗಿಡ, ದೂರದಲ್ಲಿ ಸೂರ್ಯ ಮುಳುಗಿದ್ದಾನೆ. ಆದರೆ ಆ ಹೊಂಬಣ್ಣ ಮಾತ್ರ ಆಗಸದಲ್ಲಿ ತೇಲಿದೆ. ನನ್ನ ಹತ್ತಿರ ಅದೇ ಕರಿನಾಯಿ ಕೂತಿದೆ. ಈ ನಾಯಿ ನಾನು ಹಿಂದೆ ಇದ್ದಾಗಲೂ ಇತ್ತು. ಆದರೆ ಈಗ ಮುದಿಯ. ಈ ನಾಯಿ ನನ್ನ ಮರೆತಿಲ್ಲ . ಈ ಕರಿಯನಿಗೆ ನನ್ನ ಮೇಲೆ ಪ್ರೀತಿ ಅಂತ ಕಾಣುತ್ತೆ.

ಈ ರಸ್ತೆಯಲ್ಲಿ ಓಡಾಡೋರು ಸುಮಾರಾಗಿ ನನಗೆ ಎಲ್ಲಾ ಗೊತ್ತು. ಕೆಲವರು ‘ಓ, ಆರೋಗ್ಯಾನಾ ಮಾರಾಯರ! - ಎಂದು ಬಂದದ್ದು’ ಅಂತ ಸೌಜನ್ಯದ ಮಾತಾಡಿ ಮುಂದುವರೆದರೆ, ಕೆಲವರು ‘ಎಂದು ಬಂದದ್ದು, ಮೊದಲೇ ತಿಳಿಸಿದ್ದರೆ ನಾನು ನಿಮ್ಮನ್ನು ನೀವಿಳಿದುಕೊಂಡ ಕಡೆ ಬಂದು ನೋಡುತ್ತಿದ್ದೆ’ ಅಂತ ಹೇಳಿ ಮುಂದುವರಿಯುತ್ತಿದ್ದರು. ಇದೇನು ಯಾರೂ ನನ್ನನ್ನು ತಮ್ಮ ಮನೆಗೆ ಕರೆಯುತ್ತಿಲ್ಲ. ಅಂತ ಯೋಚನೆ ಮಾಡುತ್ತಿದ್ದೆ. ದೂರದಿಂದ ಒಬ್ಬಾಕೆ ಬರುತ್ತಿದ್ದಳು. ಈ ನಾಯಿ ‘ಕರಿಯ’ ಅತ್ತ ಕಡೆ ತಿರುಗಿ ಬಾಲ ಅಳ್ಳಾಡಿಸೋಕೆ ಶುರು ಮಾಡಿತು. ಗೊತ್ತಾಯ್ತು! ನನ್ನ ಹಳೆ ಕ್ಲಾಸ್‌ ಮೇಟ್‌ ಶಾರದೇ! ಮಾತಾಡಿಸೋಕೆ ಒಂದು ತರಹಾ! ಅಂತಾ ಅವಳ ಕಡೆ ತಿರುಗಿದೆ, ಎದುರಿಗೆ ನಿಂತಿದ್ದಳು. ‘ಏನು ಮಾತಾಡಿಸೋಲ್ಲ. ಬಹಳ ದೊಡ್ಡ ಮನುಷ್ಯ ಆಗಿಬಿಟ್ಟೆ’ ಅಂತ ಆಡಿಕೊಂಡು ತನ್ನ ದೃಷ್ಟಿಯನ್ನು ನನ್ನ ಮೇಲೆ ನೆಟ್ಟಿದ್ದಳು. ನಾನು ಮುಗುಳು ನಗೆ ನಕ್ಕೆ. ‘ನೀನು ಎಂಜಿನಿಯರ್‌ ಅಂತ ಗೊತ್ತು. ಆದರೆ ಬಹಳ ಜಂಭ ಬಂದಿದೆ’ ಅಂತ ಕುಹಕದಿಂದ ಹೇಳಿದಳು. ನಾನು ‘ನಿನಗೆ ಹೇಗೆ ಗೊತ್ತಾಯ್ತು ,’ ಅಂತ ಕೇಳಿದ್ದಕ್ಕೆ ‘ವಿಠಲ್‌ ಭಟ್‌ ಎಲ್ಲ ಹೇಳುತ್ತಾನೆ’ ಅಂತ ಹೇಳಿ ಸುಮ್ಮನೆ ನಿಂತಳು. ‘ನೀವುಗಳು ಇಷ್ಟು ದೂರ ಬರುತ್ತೀರ ಮನೆಗೆ ಮಾತ್ರ ಬರೋದಿಲ್ಲ’ ಅಂತ ಹೇಳಿ ಕತ್ತು ತಗ್ಗಿಸಿದಳು. ಧ್ವನಿ ಇಳಿದಿತ್ತು. ಮತ್ತೊಂದು ಬಾರಿ ತಲೆ ಎತ್ತಿ ಮುಖ ನೋಡಿದಳು. ಅವಳ ಮುಖ ಬಹಳ ಸಪ್ಪೆಯಾಗಿತ್ತು. ‘ನಾಳೆ ಮಧ್ಯಾಹ್ನ ಊಟಕ್ಕೆ ಮನೆಗೆ ಬಾ’ ಅಂತ ಹೇಳಿ ಹೊರಟಳು. ಒಂದೆರಡು ಹೆಜ್ಜೆ ಮುಂದೆ ಹೋಗಿ, ‘ಖಂಡಿತಾ ಬರಬೇಕು, ಬರುತ್ತೀಯಾ ತಾನೇ ?’ ಅಂತ ಹೇಳಿ ಖಾತ್ರಿ ಮಾಡಿಕೊಂಡು ಮುಂದೆ ಹೊರಟಳು. ದೂರದ ತಿರುವಿನಲ್ಲಿ ಹಿಂದಕ್ಕೆ ತಿರುಗಿ ನೋಡಿದಳು;- ನೋಡುತ್ತಾಳೆ ಅಂತ ನನಗೆ ಗೊತ್ತಿತ್ತು- ಕೈ ಬೀಸಿದೆ; ಅವಳೂ ಕೈ ಮೇಲೆತ್ತಿದ್ದಳು.

ಶಾರದೆ ನಿಜವಾಗಲೂ ಬುದ್ಧಿವಂತೆ. ಎಂ.ಬಿ.ಬಿ.ಎಸ್‌. ಗೆ ಮೆರಿಟ್‌ನಲ್ಲಿ ಸೀಟು ಸಿಕ್ಕಿತ್ತು. ಕಡೆಗೆ ಓದೋದು ಬಿಟ್ಟಳಂತೆ. ಮದುವೆ ಆಯಿತಂತೆ. ತಬ್ಬಲಿ ಹುಡುಗಿ, ಹಿಂದೆ ಒಂದು ಸಲ ‘ದಿ ಮದರ್‌’ ಅಂತ ಇಂಗ್ಲೀಷ್‌ ಪಾಠ ಮಾಡುತ್ತಾ ನಮ್ಮ ಮೇಷ್ಟ್ರು ಕೆಲವು ಕೆಟ್ಟ ತಾಯಂದಿರ ಬಗ್ಗೆ ಟೀಕಿಸಿದರು.

ಶಾರದೆ ಎದ್ದು ನಿಂತು ‘ತಾಯಿ ಯಾವಾಗಲೂ ಒಳ್ಳೆಯವಳು, ಕೆಟ್ಟವರಾಗೋಕೆ ಸಾಧ್ಯವಿಲ್ಲ’ ಅಂತ ಪ್ರತಿಭಟಿಸಿದ್ದಳು. ಆವತ್ತೆ ಅವಳು ‘ನನಗೆ ತಾಯಿ ಇಲ್ಲ’ ಅಂತ ಹೇಳಿ ಬಹಳ ಬೇಸರದಿಂದ ಮನೆಗೆ ಹೋಗಿದ್ದಳು. ತಂದೆ ಬಹಳ ಶ್ರೀಮಂತರು ಅಂತ ನನಗೆ ಗೊತ್ತಿತ್ತು. ದಿನಾ ಬಹಳ ಚನ್ನಾಗಿ ಡ್ರೆಸ್‌ ಮಾಡಿಕೊಂಡು ಕಾಲೇಜಿಗೆ ಜೀಪಿನಲ್ಲಿ ಬರುತ್ತಿದ್ದಳು. ಎತ್ತರಕ್ಕೆ ಬಹಳ ಚೆನ್ನಾಗಿದ್ದಳು. ಅವಳ ಹಿಂದೆಯೇ ನಾನು ಕುಳಿತುಕೊಳ್ಳುತ್ತಿದ್ದೆ; ರೇಗಿಸುತ್ತಿದ್ದೆ. ಮೊದಲು ಮೊದಲು ದುರುಗುಟ್ಟಿಕೊಂಡು ನೋಡುತ್ತಿದ್ದಳು. ಹಾಗೇ ನಮ್ಮ ಮಧ್ಯೆ ಒಂದು ರೀತಿಯ ಸ್ನೇಹ ಸಹ ಬೆಳೆಯಿತು. ನಿತ್ಯ ಕಾಲೇಜಿಗೆ ತಂದ ಅವಳ ಬುತ್ತಿಯನ್ನು ಬಿಚ್ಚಿ ಸ್ವಲ್ಪ ತಿನ್ನುತ್ತಿದ್ದೆ. ಹಾಸ್ಟೆಲ್‌ನಲ್ಲಿ ನಾನು ಇದ್ದುದರಿಂದ ಮನೆ ಊಟ ಅಂದರೆ ನನಗೆ ಬಹಳ ರುಚಿಸುತ್ತಿತ್ತು. ಒಂದು ಸಲ ಸಂಕ್ರಾಂತಿ ಹಬ್ಬದಲ್ಲಿ ಒಂದು ಡಬ್ಬ ಎಳ್ಳು ಸಹ ತಂದು ಕೊಟ್ಟಿದ್ದಳು. ಬಹಳ ಒಳ್ಳೆ ಹುಡುಗಿ. ದಿನಕ್ಕೆ ಒಂದು ಬಾರಿ ಅವಳ ತಿಂಡಿ ಡಬ್ಬ ತೆಗೆದು ರುಚಿ ನೋಡದಿದ್ದರೆ ಯಾಕೋ ಒಂದು ತರಾ ನನ್ನನ್ನು ನೋಡುತ್ತಿದ್ದಳು. ಇದು ಯಾರಿಗೂ ಗೊತ್ತಾಗದೇ ಉಳಿದ ವಿಷಯ. ಹಿಂದೆ ಒಂದು ಬಾರಿ ರನ್ನಿಂಗ್‌ ರೇಸಿನಲ್ಲಿ ಅವಳು ಸೋತಿದ್ದಳು. ನಾನು ಕುದುರೆ ಕತ್ತೆಯಾಯ್ತು ಅಂತ ರೇಗಿಸಿದ್ದೆ. ಸಿಟ್ಟಿನಿಂದ ಬೈದಿದ್ದಳು. ನಾನು ಸೆಮಿನಾರ್‌ ಮಾಡುವ ಮುಂಚೆ ಬ್ಯಾಡ್‌ ಲಕ್‌ ಹೇಳಿದ್ದಳು. ಮಧ್ಯದಲ್ಲಿ ಒಂದು ಪ್ರಶ್ನೆ ಕೇಳಿ, ನಾನು ತಡವರಿಸಿದ್ದಕ್ಕೆ ನೇರ ದೃಷ್ಟಿಯಿಂದ ನನ್ನ ನೋಡಿ ತುಂಟ ನಗೆ ನಕ್ಕು ಕುಳಿತಿದ್ದಳು. ಆದರೆ ಇವತ್ತು ನೋಡಿದ ಶಾರದೆಯೇ ಬೇರೆ. ಅವಳ ಹಿಂದಿನ ಕಾಂತಿಯುಕ್ತ ಕಣ್ಣು ಇರಲಿಲ್ಲ. ಹಿಂದೆ ಒಂದು ಬಾರಿ ಚಾಲೆಂಜ್‌ ಮಾಡಿ ಬಯಾಲಜಿಯಲ್ಲಿ ನನಗಿಂತ ಹೆಚ್ಚು ಅಂಕ ಪಡೆದಿದ್ದಳು. ಆದರೆ ಇಂದು ಅವಳ ಚಾಲೆಂಜಿಂಗ್‌ ಸ್ಪಿರಿಟ್‌ ಆವಿಯಾಗಿ ಮನೆಗೆ ಬಾ ಅನ್ನುವ ಆಫರ್‌ನಲ್ಲಿ ಕರಗಿತ್ತು.

ಮರುದಿನ ಅವಳ ಮನೆಗೆ ನಡೆದು ಹೊರಟೆ. ಜೊತೆಯಲ್ಲಿ ಕರಿಯನೂ ಹೊರಟ. ದೊಡ್ಡ ಎಸ್ಟೇಟು, ದೊಡ್ಡ ಮನೆ, ಒಂದು ತರಹ ಶ್ರೀಮಂತಿಕೆ ಎದ್ದು ಕಾಣುತ್ತಿತ್ತು. ಬಾಗಿಲಲ್ಲೇ ಬರಮಾಡಿಕೊಂಡಳು. ಒಳಗೆ ಹೋಗೆ ಪಡಸಾಲೆಯಲ್ಲಿ ಕುಳಿತೆವು. ಸ್ವಲ್ಪ ಹೊತ್ತಾದ ಮೇಲೆ ಒಬ್ಬ ವ್ಯಕ್ತಿ ಒಳಗೆ ಬಂದು ನಮಸ್ಕಾರ ಅಂದ, ನಾನೂ ನಮಸ್ಕರಿಸಿದೆ. ಶಾರದೆ ‘ಇವರು ನಮ್ಮ..... ಇವರು ನಮ್ಮ ಹಳೇ ಕ್ಲಾಸ್‌ ಮೇಟ್‌, ಈಗ ಇಂಜಿನಿಯರ್‌’ ಅಂತ ಹೇಳಿದಳು. ವ್ಯಕ್ತಿ ಮುಗುಳುನಗೆ ನಕ್ಕು ದೂರ ಕುಳಿತರು. ಚಿಕ್ಕವಯಸ್ಸಿನವ, ಕೀಳರಿಮೆ ಮುಖದಲ್ಲಿ ಎದ್ದು ಕಾಣುತ್ತಿತ್ತು. ಸ್ವಲ್ಪ ಹೊತ್ತು ಮಾತಾಡಿದರು. ಮಧ್ಯೆ ವಿಚಾರ ವಿನಿಮಯಕ್ಕೆ ವಿಚಾರವಿಲ್ಲದೆ ಇಬ್ಬರೂ ಸುಮ್ಮನೆ ಕುಳಿತಿದ್ದೆವು. ಇನ್ನು ಸ್ವಲ್ಪ ಹೊತ್ತಾದ ಮೇಲೆ ‘ಸ್ವಲ್ಪ ಕೆಲಸದ ಮೇಲೆ ಮಂಗಳೂರಿಗೆ ಹೋಗಬೇಕು, ಬರುತ್ತೇನೆ, ಮತ್ತೊಮ್ಮೆ ಬನ್ನಿ’ ಎಂದು ಹೇಳಿ ಪಂಚೆ ಬಿಗಿದು ಹೊರಟೇಬಿಟ್ಟರು!

ಒಳಗಿನಿಂದ ಬಂದ ಶಾರದೆ, ‘ನಮ್ಮ ಮನೆಯವರು ಯಾವಾಗಲೂ ಹೀಗೇ’ ಅಂತ ಗೊಣಗುತ್ತ ಕುಳಿತಳು. ಬಹಳ ಹೊತ್ತು ಇಬ್ಬರ ಮಧ್ಯೆ ಮಾತಿಲ್ಲದೆ ನಿಶ್ಯಬ್ದ. ಇದ್ದಕ್ಕಿದ್ದಂತೆ ನನ್ನನ್ನು ನೋಡೋಕೆ ಶುರುಮಾಡಿದಳು. ದೊಡ್ಡ ಧ್ವನಿಯಿಂದ ‘ನೀನು ಬಹಳ ಲಕ್ಕಿ, ಎಂಜನಿಯರ್‌ ಆದೆ, ಈ ಹಳ್ಳಿ ಜೀವನ, ಈ ಸಂಸಾರ ಎಲ್ಲ ನನಗೆ ಉಳಿಯಿತು. ನನ್ನ ಓದು ಪಿ.ಯು.ಸಿ.ಗೆ ನಿಂತು ಹೋಯಿತು. ಗೊತ್ತಾಯ್ತ?’- ಅವಳ ದೃಷ್ಟಿ ನೇರ ನೆಟ್ಟಿತ್ತು. ಮುಖದಲ್ಲಿ ಸೋಲು ಎದ್ದು ಕಾಣುತ್ತಿತ್ತು. ಎದ್ದು ಹತ್ತಿರ ಬಂದು ಕುಳಿತಳು. ನನಗೆ ಏನು ಮಾಡಬೇಕೋ ತಿಳಿಯಲಿಲ್ಲ. ನನಗೆ ಹಿಂದೆ ನಡೆದು ಹೋದ ಘಟನೆಗಳೆಲ್ಲ ತಲೆಯಲ್ಲಿ ಸುತ್ತುತ್ತಿದ್ದವು. ಶಾರದೆ ‘ನಮ್ಮ ತಂದೆ.....ಗೊತ್ತಾಯ್ತಾ ?’ ಅಂದು ಕತ್ತು ಕೆಳಗೆ ಹಾಕಿದಳು. ನಾನು ‘ಗೊತ್ತಾಯ್ತು, ನೀನು ಯಾಕೆ ಮುಂದೆ ಓದಲಿಲ್ಲ ?’ ಅಂದೆ. ‘ನಮ್ಮ ಅಪ್ಪಾಜಿ ಹೋದಾಗ ನಾನು ಬೆಂಗಳೂರಿನಲ್ಲಿ ಎಂ.ಬಿ.ಬಿ.ಎಸ್‌. ಮೊದಲ ವರ್ಷದಲ್ಲಿದ್ದೆ. ನಾಲ್ಕು ತಿಂಗಳು ಕಳೆದಿತ್ತು. ಕಾಲೇಜು ಜೀವನ ಬಹಳ ಚೆನ್ನ. ನಿನಗೆ ಗೊತ್ತಲ್ಲ , ನಮ್ಮ ಅಣ್ಣ ಅಮೆರಿಕದಲ್ಲಿ ಡಾಕ್ಟರ್‌, ನಮ್ಮ ಅಪ್ಪಾಜಿ ಮುಖ ಅವರಿಗೆ ಸಿಗಲಿಲ್ಲ , ಅವರು ಬಂದು ನನಗೆ ಮದುವೆ ಮಾಡಿಕೋ ಎಂದು ಬಲವಂತ ಮಾಡಿದರು. ನಾನು ಇಲ್ಲ ಅಂದೆ. ಅವರು ‘ನಿನ್ನನ್ನು ನೋಡಿಕೊಳ್ಳೋಕೆ ಯಾರೂ ಇಲ್ಲ , ಈ ಎಸ್ಟೇಟ್‌, ಬಂಗಲೆ, ನೀನು- ಇದನ್ನೆಲ್ಲಾ!’. ‘ನೀವೇ ಅಮೆರಿಕಾದಿಂದ ಬಂದುಬಿಡಿ’ ಅಂದೆ. ಅದಕ್ಕವರು ‘ಒಂದು ಬಾರಿ ಅಮೆರಿಕಕ್ಕೆ ಹೋದರೆ ಬರೋಕೆ ಆಗೋಲ್ಲ , ಆ ಜನ ಹೋಗೋಕೆ ಬಿಡೋದಿಲ್ಲ’ ಅಂತ ಹೇಳಿದರು. ‘ಇನ್ನು ಐದು ವರ್ಷ ಬಿಟ್ಟು ಬರುತ್ತೇನೆ’ ಅಂತ ಹೇಳಿದರು. ವಿಧಿ ಇರಲಿಲ್ಲ, ಓದೋದು ಬಿಟ್ಟೆ. ಈಗ ಈ ಎಸ್ಟೇಟು, ಮನೆ, ನನ್ನ ಗಂಡ, ದನಕರು ಎಲ್ಲಾ ನೋಡೋದರಲ್ಲೇ ದಿನ ಕಳೆಯುತ್ತೆ. ನಿನಗೂ ಅಮೆರಿಕಕ್ಕೆ ಹೋಗೋ ಐಡಿಯಾ ಇದೆಯಲ್ಲಾ , ಹೋಗಬೇಡ, ಹೋದರೆ ಬರೋದಿಕ್ಕಾಗೋದಿಲ್ಲ. ಅಲ್ಲಿಯವರು ಬಹಳ ಕೆಟ್ಟ ಜನ’ ಅಂತ ಬಹಳ ಆತ್ಮೀಯವಾಗಿ ಹೇಳಿದಳು. ಈ ಮಲೆನಾಡ ಹುಡುಗಿಯ ಮುಗ್ಧತೆ ಕಂಡು ಹೊಟ್ಟೆ ಉರಿಯಿತು.

ಮಣೆ ಮೇಲೆ ಕುಳಿತು ಬಾಳೆ ಎಲೆ ಊಟ ಮಾಡಿದೆ. ಊಟ ಸೊಗಸಾಗಿತ್ತು. ಹೆಚ್ಚು ಹೊತ್ತು ಕೂರಲಿಲ್ಲ. ‘ನಾನು ಬರುತ್ತೇನೆ’ ಅಂತ ಹೇಳಿ ಹೊರಟೆ. ಎಸ್ಟೇಟ್‌ ಗೇಟ್‌ ತನಕ ಬಂದು, ‘ಮುಂದಕ್ಕೆ ಓದು, ದೊಡ್ಡ ಮನುಷ್ಯನಾಗು, ನಮ್ಮನ್ನೆಲ್ಲಾ ಮರೆಯಬೇಡ’ ಅಂತ ಹೇಳಿದಳು. ಅವಳ ಕಣ್ಣಲ್ಲಿ ನೀರು ತುಂಬಿತ್ತು. ನನ್ನ ಬಾಯಿಂದ ಮಾತು ಬರಲಿಲ್ಲ. ಅವಳ ಮನಸ್ಸಿನಲ್ಲಿ ಆಗುತ್ತಿದ್ದ ದ್ವಂದ್ವ ನನ್ನಲ್ಲೂ ಆಗುತ್ತಿತ್ತು. ಖೇದ ಮನಸ್ಸನ್ನು ಆವರಿಸಿತ್ತು. ಕೈಬೀಸಿದೆ. ಭರದಿಂದ ಮುನ್ನಡೆದೆ. ಬಹಳ ದೂರ ಹೋಗಿ ಹಿಂತಿರುಗಿ ನೋಡಿದೆ. ಅವಳು ಅಲ್ಲೇ ನಿಂತಿದ್ದಳು. ಕೈ ಬೀಸಿದೆ. ಆದರೆ ಅವಳು ಕೈ ಬೀಸಲಿಲ್ಲ.

ಈ ಕರಿಯ ನನ್ನ ಹಿಂದೆಯೇ ಬರುತ್ತಿದೆ. ಇಷ್ಟು ವರ್ಷವಾದರೂ ನನ್ನನ್ನು ಆತ್ಮೀಯವಾಗಿ ವಿಚಾರಿಸಿದ್ದಕ್ಕೆ ನಾನು ನಿಜವಾಗಲೂ ಕೃತಜ್ಞ. ಶಾರದೆ ಅಂದರೆ ನನಗೆ ಮೊದಲಿನಿಂದಲೂ ಬಹಳ ಆತ್ಮೀಯ. ಆದರೆ ಇವಳ ಮೇಲೆ ನನಗೆ ಒಂದು ರೀತಿ ಅಯ್ಯೋ ಅನ್ನುವ ಕನಿಕರ; ಅದೇ ಈಗಲೂ ಮುಂದುವರಿದಿದೆ.

ಹಿಂದಿನ ಆ ಮುಖದ ಕಳೆ ಇಂದು ಇರಲಿಲ್ಲ. ಅದರ ಹೆಣ ಇದೆ. ನಾಜೂಕಿನ ಡ್ರೆಸ್‌ ಇಲ್ಲ, ಮೈ ಮುಚ್ಚೋಕೆ ಬಟ್ಟೆ ಹೊದ್ದಿದ್ದಾಳೆ. ಇಡೀ ಕ್ಲಾಸಿನಲ್ಲಿ ಜೀವಂತ ಚಿಲುಮೆಯಾಗಿದ್ದ ಶಾರದೆ ಇಂದು ಬಹಳ ಸಪ್ಪೆಯಾಗಿ ಕಂಡಳು. ದಾರಿ ಹಾಗೇ ಸಾಗುತ್ತಿದ್ದೆ. ಕರಿಯ ನನ್ನ ಭರಕ್ಕೆ ಓಡುತ್ತಿತ್ತು. ನಾವು ಬದುಕಿರುವ ತನಕ ಯಾರು ಯಾರಿಗೂ ಇಲ್ಲ. ನಮ್ಮ ಪಾಲಿಗೆ ಬಂದದ್ದೆಲ್ಲಾ ಸುಖ ಅಂತ ಭ್ರಮೆಯನ್ನು ಹುಟ್ಟಿಸಿಕೊಂಡರೆ ಮಾತ್ರ ನಮಗೆ ಸಂತೋಷ......ಅಲ್ಲವೇ?

ಇತ್ತೀಚೆಗೆ ಶಾರದೆಯನ್ನು ಒಂದೆರಡು ಬಾರಿ ಕಂಡಿದ್ದೆ. ‘ಹೇಗಿದ್ದೇಯಾ? ಆರೋಗ್ಯನಾ?’ ಅಂತ ವಿಚಾರಿಸುವುದರಲ್ಲೇ ವರ್ಷಗಳು ಕಳಿಯುತ್ತಿದೆ. ಅದೇನೇ ಆದರೂ ಇಷ್ಟು ವರ್ಷ ಕಳೆದರೂ ನಮ್ಮ ನಾಯಿ ‘ಕರಿಯ’ ಕಪ್ಪಗೇ ಕಾಣುತ್ತಿದೆ. ಬೆಳ್ಳಗೆ ಮಾತ್ರ ಆಗುತ್ತಿಲ್ಲ.

(ಅಮೆರಿಕನ್ನಡ ; ಫೆಬ್ರವರಿ-ಮಾರ್ಚ್‌ 1986)


ಯಾರು ಈ ರವಿಶಂಕರ್‌ ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X