ಬಿಪಿಒ ಕಂಪೆನಿಗಿಂತ ಪೌರೋಹಿತ್ಯದಲ್ಲೇ ಜೀವನ ನೆಮ್ಮದಿಯಾಗಿದೆ...
ಇದು ನನ್ನ ಬಗ್ಗೆ ಹೇಳಿಕೊಳ್ಳುವುದಕ್ಕೆ ಬರೆದ ಪತ್ರ. ನಾನು ನಿಮ್ಮಂತೆಯೇ ತುಂಬ ಗಟ್ಟಿ. ಆದರೆ ಈಗ ಸೋಲು ಒಪ್ಪಿಕೊಂಡು ಐದಾರು ತಿಂಗಳಾಗಿದೆ. ನನ್ನ ಹೆಸರು ರವಿ. ಬೆಂಗಳೂರಿನ ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯಲ್ಲಿ ಮನೆ. ಹೆಂಡತಿ-ಮಗು, ಅಪ್ಪ-ಅಮ್ಮನ ಜತೆಗೆ ಇರುವ ಸಂಸಾರವಂದಿಗ.
ಚಿಕ್ಕವಯಸ್ಸಿನಲ್ಲಿ ಒಂದೈದು ವರ್ಷ ವೇದಾಭ್ಯಾಸಕ್ಕೆ ಅಂತ ನನ್ನ ತಂದೆ-ತಾಯಿ ಸೇರಿಸಿದ್ದರು. ಅದರ ಜತೆಜತೆಗೆ ಎಸ್ಸೆಸ್ಸೆಲ್ಸಿ ಮುಗಿಯಿತು. ಅಲ್ಲಿಂದ ಮುಂದೆ ನೈಟ್ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದೆ. ನನ್ನ ಮುಂದೆ ಎರಡು ಆಯ್ಕೆ ಇತ್ತು. ಒಂದೋ ಪೌರೋಹಿತ್ಯ ಮಾಡಿಸಬಹುದಿತ್ತು. ಇಲ್ಲದಿದ್ದರೆ ಯಾವುದಾದರೂ ಕಂಪೆನಿ ಕೆಲಸಕ್ಕೆ ಸೇರಬಹುದಿತ್ತು.
ನಾನು ಕಂಪೆನಿ ಕೆಲಸ ಆಯ್ಕೆ ಮಾಡಿಕೊಂಡೆ. ಮಧ್ಯೆ ಶನಿವಾರ-ಭಾನುವಾರದ ಬಿಡುವಿನಲ್ಲಿ ಪರಿಚಯದವರು ಕರೆದರೆ ಪೌರೋಹಿತ್ಯಕ್ಕೂ ಹೋಗ್ತಿದ್ದೆ. ಐಟಿಪಿಎಲ್ ನ ತುಂಬ ಹೆಸರಾದ ಕಂಪೆನಿಯಲ್ಲಿ ನನಗೆ ಕೆಲಸ ಸಿಕ್ಕಿತು. ಏಳು ವರ್ಷದಲ್ಲಿ ಟೀಮ್ ಲೀಡ್ ಕೂಡ ಆದೆ. ಅಷ್ಟರಲ್ಲಿ ಮದುವೆ-ಮಗು ಕಾಲ ಸರಿದಿದ್ದು ಗೊತ್ತಾಗಲೇ ಇಲ್ಲ.
ನೈಟ್ ಶಿಫ್ಟ್ ಕೆಲಸ ಅಂತಾದ ಮೇಲೆ ಒಂದು ವರ್ಷದಲ್ಲೇ ಸ್ವಲ್ಪ ದಪ್ಪಗಾದೆ. ಆಫೀಸಿನ ಕೆಲಸ ಮುಗಿಸಿ ಬಂದ ನಂತರ ಕೂಡ ಈ ಮೇಲ್ ಗೆ ಉತ್ತರ ಬರೆದನಾ, ಆ ಕೆಲಸ ಮುಗೀತಾ ಎಂದು ಕನಸಿನಲ್ಲೆಲ್ಲ ಅದೇ ಬರ್ತಿತ್ತು. ಸ್ವಲ್ಪ ಮಟ್ಟಿಗೆ ಆರೋಗ್ಯ ಕೈಕೊಡ್ತು. ಮೂಲವ್ಯಾಧಿ ಅಂತಾರಲ್ಲ ಪೈಲ್ಸ್ ಆ ಸಮಸ್ಯೆ ಆಯಿತು.

ಹನ್ನೆರಡರಿಂದ ಹದಿನೆಂಟು ಗಂಟೆ ಕೆಲಸ
ವೈದ್ಯರ ಹತ್ತಿರ ಹೋದಾಗ. ದಿನಕ್ಕೆ ಎಷ್ಟು ಗಂಟೆ ಕೂತು ಕೆಲಸ ಮಾಡ್ತೀರಿ ಅಂತ ಕೇಳಿದರು. ತಿಂಗಳ ಕೊನೆಯಲ್ಲಿ ಒಂದರಿಂದ ನಾಲ್ಕು ದಿನ ಹದಿನಾಲ್ಕು ಗಂಟೆಯಿಂದ ಹದಿನೆಂಟು ಗಂಟೆ ಆಗುತ್ತದೆ. ಉಳಿದಂತೆ ಹನ್ನೆರಡು ಗಂಟೆ ಆಗುತ್ತದೆ ಅಂದೆ. ಅವರೇನೂ ಮಾತನಾಡಲಿಲ್ಲ. ಒಂದಿಷ್ಟು ಔಷಧಿ ಬರೆದುಕೊಟ್ಟು, ನನ್ನನ್ನು ಆಚೆಗೆ ಕಳುಹಿಸಿದರು.

ಬಾಣಲೆಯಿಂದ ಬೆಂಕಿಗೆ ಬಿದ್ದೆ
ಆದರೆ, ನನ್ನ ಹೆಂಡತಿಗೆ ಕೆಲವು ವಿಚಾರ ಹೇಳಿದರು ಅನ್ನಿಸುತ್ತದೆ. ಡಾಕ್ಟರಿಗಿಂತ ಹೆಚ್ಚಾಗಿ ಅವಳೊಂದಿಷ್ಟು ಸಲಹೆ-ಸೂಚನೆ ಕೊಟ್ಟಳು. ಕೊನೆಗೆ ಆ ಕಂಪೆನಿ ಬಿಟ್ಟು ಮತ್ತೊಂದು ಕಂಪೆನಿ ಸೇರಿದೆ. ನನ್ನ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. ಅಕ್ಷರಶಃ ಒತ್ತಡವೇ ನಿಭಾಯಿಸುವುದಕ್ಕೆ ಆಗಲಿಲ್ಲ. ಈ ಸಲ ವೃತ್ತಿಯನ್ನೇ ಬಿಡುವ ನಿರ್ಧಾರ ಮಾಡಿದೆ.

ಸ್ನೇಹಿತ ನೀಡಿದ ಸಲಹೆ
ಆದರೆ, ಅದು ಅಷ್ಟು ಸುಲಭವಿರಲಿಲ್ಲ. ಸಂಬಳ ಕೈ ತುಂಬ ಬರ್ತಿತ್ತು. ಅಪ್ಪ, ಅಮ್ಮ, ಹೆಂಡತಿ ಎಲ್ಲರದೂ ನನ್ನ ನಿರ್ಧಾರಕ್ಕೆ ವಿರೋಧವೇ. ನನ್ನ ಸ್ನೇಹಿತ ಅದಾಗಲೇ ಪೌರೋಹಿತ್ಯ ಮಾಡುತ್ತಿದ್ದವನನ್ನು ಭೇಟಿಯಾಗಿ ಆಗಿರುವ ಗೊಂದಲ ಹೇಳಿಕೊಂಡೆ. ಮೂರು ತಿಂಗಳಿಗೆ ಆಗುವಷ್ಟು ಹಣ ಇಟ್ಟುಕೊಂಡು ಕೆಲಸ ಬಿಡು. ನೀನು ಪೌರೋಹಿತ್ಯಕ್ಕೆ ಬರುತ್ತೀಯ ಅನ್ನೋದನ್ನು ಎಲ್ಲರಿಗೂ ತಿಳಿಸು. ಸಾಧ್ಯವಾದರೆ ಮನೆ ಎದುರು ಬೋರ್ಡ್ ಹಾಕು ಅಂದ.

ಆದಾಯ ಸೃಷ್ಟಿಯಾಗಿದೆ
ಈ ಎಲ್ಲವನ್ನೂ ಚಾಚೂ ತಪ್ಪದೆ ಮಾಡಿದೆ. ಮೊದಲ ಎರಡು ತಿಂಗಳು ಬಹಳ ಕಷ್ಟವಾಯಿತು. ಕಾರ್ಯಕ್ರಮಗಳು ಸಿಗುತ್ತಿರಲಿಲ್ಲ. ಬಿಡುವಾಗಿರುತ್ತಿದ್ದನಲ್ಲ, ಒಂದೊಳ್ಳೆ ಸಂಸ್ಥೆಯಲ್ಲಿ ಜ್ಯೋತಿಷ್ಯ ಕಲಿತೆ. ನಿಧಾನವಾಗಿ ಪರಿಸ್ಥಿತಿ ಬದಲಾಯಿತು. ಈಗ ತಿಂಗಳಿಗೆ ಇಪ್ಪತ್ತೈದು ಸಾವಿರದಷ್ಟು ಆದಾಯ ಸೃಷ್ಟಿಯಾಗುತ್ತಿದೆ. ಅವರಿವರು ಕೆಲಸಕ್ಕೆ ಕರೆಯುತ್ತಿದ್ದಾರೆ.

ಈಗ ನೆಮ್ಮದಿಯಿದೆ
ಒತ್ತಡ, ಆರೋಗ್ಯ ಸಮಸ್ಯೆ ಇವ್ಯಾವುದನ್ನು ಹೇಳಿಕೊಳ್ಳಲಾಗದೆ ಮಾನಸಿಕವಾಗಿ ತೀರಾ ಕಿರಿಕಿರಿ ಅನುಭವಿಸಿದ್ದೀನಿ. ಈ ಬಗ್ಗೆ ಹೇಳಿಕೊಳ್ಳಬೇಕು ಎಂದು ಬಹಳ ದಿನದಿಂದ ಅನ್ನಿಸುತ್ತಿತ್ತು. ನನ್ನ ಆದಾಯ ಮುಂಚಿಗಿಂತ ಅರ್ಧಕ್ಕೆ ಇಳಿದಿದೆ. ಆದರೆ ನೆಮ್ಮದಿಯಾಗಿದ್ದೀನಿ. ನನ್ನ ಮಾತು ಕೇಳಿಸಿಕೊಂಡಿದ್ದಕ್ಕೆ ತುಂಬ ಥ್ಯಾಂಕ್ಸ್.












Click it and Unblock the Notifications