(ಸಂಸ್ಮರಣೆ) ಕನ್ನಡ ರಂಗಭೂಮಿಯ ಧ್ರುವತಾರೆ ಏಣಗಿ ಬಾಳಪ್ಪ

By: ರಂಗಕುಸುಮ
Subscribe to Oneindia Kannada

ಇತ್ತೀಚೆಗೆ, ನಮ್ಮನ್ನಗಲಿ ಹಿರಿಯ ರಂಗ ಜೀವಿ, ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಒನ್ ಇಂಡಿಯಾ ಕನ್ನಡ ಈ ಲೇಖನದ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ತಮ್ಮ 90 ವರ್ಷಗಳ ರಂಗಭೂಮಿ ಜೀವನದಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲದೆ, ಮಹಾರಾಷ್ಟ್ರದಲ್ಲೂ ಕನ್ನಡ ನಾಟಕ ರಂಗದ ಹಿರಿಮೆಯನ್ನು ಸಾರಿದ ಅವರು ರಂಗ ಕ್ಷೇತ್ರಕ್ಕೆ ನೀಡಿದ ಅನನ್ಯ ಸೇವೆಯ ಜತೆಗೆ ಅವರ ಸಾಮಾಜಿಕ ಸೇವೆಗಳನ್ನೂ ನೆನೆಯುವ ಮೂಲಕ ಅವರಿಗೆ ನುಡಿ ನಮನ ಸಲ್ಲಿಸುತ್ತಿದೆ.

ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಹೊಟ್ಟೆಪಾಡಿಗಾಗಿ 12ನೇ ವಯಸ್ಸಿಗೇ ಬಣ್ಣ ಹಚ್ಚಿದ ಏಣಗಿ ಬಾಳಪ್ಪ ಅವರದ್ದು ತಪಸ್ಸಿನ ಜೀವನ. ಶತಾಯುಷಿಯಾಗಿ ಬಾಳಿದ ಅವರ ಜೀವನವೇ ಕರ್ನಾಟಕಕ್ಕೆ ದೊಡ್ಡ ಕೊಡುಗೆ ಎಂದರೆ ಅದು ಖಂಡಿತವಾಗಿಯೂ ಅತಿಶಯೋಕ್ತಿಯಾಗದು.

Contributions of Enagi Balappa to Karnataka theatre

ಬದುಕಿದಷ್ಟೂ ದಿನ ರಂಗಭೂಮಿಯ ಒಳಿತನ್ನೇ ಚಿಂತನೆ ಮಾಡುತ್ತಿದ್ದ ಆ ಹಿರಿಯ ಜೀವಿ, ತಮ್ಮದೇ ಒಂದು ನಾಟಕ ಸಂಸ್ಥೆ ಕಟ್ಟಿ ಹಲವಾರು ಕಲಾವಿದರ ಅನ್ನಕ್ಕೆ ದಾರಿ ಮಾಡಿಕೊಟ್ಟಿದ್ದು ಮಾತ್ರವಲ್ಲ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಆಸರೆಯಿಂದ ಮೇಲೆ ಬಂದ ತಮ್ಮನ್ನು ಸಮಾಜಕ್ಕೇ ಅರ್ಪಿಸಿಕೊಂಡಿದ್ದು ಶ್ಲಾಘನೀಯ ಮಾತ್ರವಲ್ಲ, ಅನುಕರಣೀಯವೂ ಹೌದು.

ಹಿರಿಯ ರಂಗಕರ್ಮಿ ನಾಡೋಜ ಏಣಗಿ ಬಾಳಪ್ಪ ವಿಧಿವಶ

ತಮ್ಮೂರಿನಲ್ಲಿ ಶಾಲೆ ಕಟ್ಟಿಸಲು ಅವರು ಪಟ್ಟ ಹರಸಾಹಸ, ಕಲಾವಿದರ ಬಗ್ಗೆ ಅವರ ಕಾಳಜಿ, ಸ್ವಾತಂತ್ರ್ಯಾ ನಂತರ ಭಾರತ ಇಬ್ಭಾಗವಾದಾಗ, ಪಾಕಿಸ್ತಾನದಿಂದ ಬಂದ ನಿರಾಶ್ರಿತರಿಗೆ ಮಾಡಿದ ಸಹಾಯಗಳನ್ನು ಈ ಸಮಾಜ ಎಂದೂ ಮರೆಯುವಂತಿಲ್ಲ. ಪ್ರತಿ ನಾಟಕ ಮುಗಿನ ನಂತರ ಜೋಳಿಗೆ ಹಿಡಿದು ತಾವೇ ಜನರ ಬಳಿಗೆ ಹೋಗಿ ಧನ ಸಂಗ್ರಹಿಸಿ ಅದನ್ನು ಪಾಕ್ ನಿಂದ ಬಂದ ಸಂತ್ರಸ್ತರಿಗೆ ನೀಡಿದ್ದನ್ನು ಈಗಲೂ ಜನರು ಸ್ಮರಿಸುತ್ತಾರೆ. .

ರಂಗಭೂಮಿಯಲ್ಲಿ ಪ್ರಯೋಗ
ನಾಟಕ ಸಂಸ್ಥೆಯೊಂದನ್ನು ತಮ್ಮ ಜೀವನಕ್ಕೊಂದು ಆದಾಯ ಸೃಷ್ಟಿಸಿಕೊಳ್ಳುವ ಇರಾದೆ ಬಾಳಪ್ಪ ಅವರಲ್ಲಿ ಖಂಡಿತವಾಗಿಯೂ ಇರಲಿಲ್ಲ. ರಂಗಭೂಮಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದರು. ಅನೇಕ ಕಲಾವಿದರಲ್ಲಿನ ನೈಜ ಕಲೆಯನ್ನು ಅನಾವರಣಗೊಳಿಸಿದರು. ಸದಾ ಪ್ರಯೋಗಾತ್ಮಕವಾಗಿ ಆಲೋಚಿಸುತ್ತಿದ್ದ ಅವರು ರಂಗಭೂಮಿಯಲ್ಲಿ ಹೊಸತನ ತಂದರು.

ಇದು ಕನ್ನಡ ರಂಗಭೂಮಿಯ ಇತಿಹಾಸದಲ್ಲೇ ಇದೊಂದು ಅಮೋಘ ಪ್ರಯೋಗ. ಆಗಿನ ಕಾಲದ ರಂಗ ನಾಟಕಗಳಿಗೆ ಹೊಸತು ಎಂಬಂತಿದ್ದ ಧ್ವನಿವರ್ಧಕ, ನವನಾವೀನ ರಂಗಪರಿಕರ, ತಿರುಗುವ ರಂಗ ಮಂಚ - ಇಂಥವುಗಳನ್ನು ಪರಿಚಯಿಸಿದರು.

ಇದನ್ನಲ್ಲದೆ, ರಂಗ ನಾಟಕಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಆಡಿಸುವ ಹೊಸ ಪ್ರಯೋಗಗಳನ್ನು ಮಾಡಲು ಶುರು ಮಾಡಿದರು ಬಾಳಪ್ಪ. ಸಿನಿಮಾಗಳ ಜನಪ್ರಿಯತೆಯ ಏರುವಿಕೆಯ ನಡುವೆ ನಾಟಕಗಳ ಪ್ರಭೆ ಕುಸಿಯಲಾರಂಭಿಸಿದ್ದ ಕಾಲವದು. ಆಗಲೇ, ಹೆಚ್ಚು ಖರ್ಚುಮಾಡಿ ದುಬಾರಿ ಸೆಟ್ ಗಳನ್ನು ಬಳಸಿ ನಾಟಕ ಆಡಿಸುವ ಪದ್ಧತಿಗಳಿಂದ ದೂರ ಸರಿದು ವಾರಾಂತ ನಾಟಕ ಎಂಬ ಹೊಸ ರಂಗಪದ್ಧತಿಯನ್ನು ಪರಿಚಯಿಸುವ ಮೂಲಕ, ಇತರ ನಾಟಕ ಕಂಪನಿಗಳ ಮಾಲೀಕರಿಗೆ ಪ್ರೇರಣೆಯಾದರು.

ವಾರಾಂತ ನಾಟಕವೆಂದರೆ, ಅದು ಮನೆಯೊಂದರಲ್ಲಿ ಶುರುವಾಗಿ ನಾಟಕ ಮುಗಿಯುವವರೆಗೂ ಅದೇ ಮನೆಯಲ್ಲೇ ಮುಕ್ತಾಯವಾಗುವಂಥದ್ದು. ಇಲ್ಲಿ ಯಾವುದೇ ವಿಶೇಷ ಸೆಟ್, ಅಂಕಪರದೆಯೂ ಇಲ್ಲದೇ ಪ್ರದರ್ಶನವಾಗುತ್ತಿರಲಿಲ್ಲ. ಆಗಿನ ಕಾಲಘಟ್ಟಕ್ಕೆ ಇದು ಹೊಸ ಮಾದರಿಯ ಪ್ರಯೋಗ ಎನಿಸಿದ್ದು ಮಾತ್ರವಲ್ಲ, ಅದು ರಂಗಭೂಮಿಗೆ ಪರ್ಯಾಯ ದಾರಿಯನ್ನೂ ತೋರಿಸುವಂತಿತ್ತು.

ಕಲೆಗಾಗಿ ಸಮರ್ಪಣೆ
ಬಾಳಪ್ಪನವರು ತಮ್ಮ ವೃತ್ತಿಜೀವನದಲ್ಲಿ ಅಸಂಖ್ಯ ಪಾತ್ರಗಳನ್ನು ಮಾಡಿದ್ದಾರೆ. ಆದರೆ, ಅವುಗಳಲ್ಲಿ ಚಿರಸ್ಥಾಯಿಯಾದದ್ದು, ಅವರು ಮಾಡಿದ ಸ್ತ್ರೀ ಪಾತ್ರಗಳು ಹಾಗೂ ಕ್ರಾಂತಿಯೋಗಿ ಬಸವಣ್ಣನವರ ಪಾತ್ರ.

ರಂಗಭೂಮಿಯ ಈವರೆಗಿನ ಇತಿಹಾಸದಲ್ಲಿ ಅದೆಷ್ಟೋ ಜನರು ಸ್ತ್ರೀ ಪಾತ್ರಗಳನ್ನು ಮಾಡಿದ್ದರೂ, ಬಾಳಪ್ಪ ಅವರು ಮಾಡಿದ ಸ್ತ್ರೀಪಾತ್ರಗಳು ಅನುಕರಣೀಯ. ಅವರು ಇಂಥ ಪಾತ್ರಗಳನ್ನು ಮಾಡುವಾಗ ಕೇವಲ ವಯ್ಯಾರ, ಹೆಣ್ಣಿನ ದನಿಯನ್ನು ಮಾತ್ರ ಅನುಕರಿಸಲಿಲ್ಲ. ಸ್ತ್ರೀಯರ ಹಾವ-ಭಾವಗಳ ಜತೆಗೆ ಸ್ತ್ರೀ ದನಿಯಲ್ಲಿ ಹಾಡುಗಾರಿಕೆಯನ್ನೂ ಕಲಿತರು.

ಸ್ತ್ರೀಯರ ಶೃಂಗಾರದ ವಿಧಾನಗಳನ್ನೂ ಕರಗತ ಮಾಡಿಕೊಂಡರು. ಕಿತ್ತೂರು ರಾಣಿ ಚೆನ್ನಮ್ಮ, ಅಕ್ಕಮಹಾದೇವಿ ಮುಂತಾದ ಪಾತ್ರಗಳಲ್ಲಿ ಸಾಕ್ಷಾತ್ ರಾಣಿ ಚೆನ್ನಮ್ಮನೇ, ಅಕ್ಕಮಹಾದೇವಿಯೇ ಕಣ್ಮುಂದೆ ನಿಂತಂತೆ ಭಾವಿಸುವಷ್ಟು , ಪ್ರೇಕ್ಷಕರನ್ನು ಪರವಶವನ್ನಾಗಿಸುವಷ್ಟು ಪಾತ್ರಗಳನ್ನು ಮೈಗೂಡಿಸಿಕೊಂಡರು.

ಇನ್ನು, ಅವರಿಗೆ ಖ್ಯಾತಿ ತಂದುಕೊಟ್ಟ ಬಸವಣ್ಣನವರ ಪಾತ್ರದಲ್ಲಂತೂ ಕ್ರಾಂತಿಯೋಗಿಯೇ ಎದ್ದು ಬಂದಂಥ ಭಾವ. ಅಷ್ಟರ ಮಟ್ಟಿಗೆ ಬಸವಣ್ಣನವರನ್ನು ಅಭಿವ್ಯಕ್ತಗೊಳಿಸುತ್ತಿದ್ದರು. ಇದು, ಅವರ ಕಲಿಕೆ ಹಾಗೂ ಕರ್ತವ್ಯದಲ್ಲಿ ಇಟ್ಟಿದ್ದ ಭಕ್ತಿ, ಶ್ರದ್ಧೆಗಳಿಗೆ ಸಾಕ್ಷಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Enagi Balappa, the veteran theatre artist, who passed away recently. His contribution to Kannada Theatre sector is immortal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ