ಅದೃಷ್ಟವೇ ಕೇರ್ ಮಾಡದ ಕೇರಂ ಚಾಂಪಿಯನ್

ಲೇಖಕ : ಪ್ರಸಾದ ನಾಯಿಕ
ಹೌದು. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಂದೇ ಒಂದು ಬಾರಿಯೂ ಪ್ಯಾಡ್ ಕಟ್ಟಿಕೊಳ್ಳದ, ಗ್ಲೌಸ್ ಧರಿಸಿಕೊಳ್ಳದ, ಅಸಲಿಗೆ ಬ್ಯಾಟೇ ಹಿಡಿಯದ, ಬೌಲಿಂಗ್ ಕೈಯನ್ನು ತಿರುಗಿಸದ ಆಟಗಾರ ಕೋಟ್ಯಾಧಿಪತಿಯಾಗಬಲ್ಲ. ಇದಕ್ಕೆ ಪಾರ್ಥಿವ್ ಪಟೇಲ್ ಜ್ವಲಂತ ಸಾಕ್ಷಿ. ಪೆವಿಲಿಯನ್ನಿನ ಬೆಂಚು ಸವಿಸಿಸವಿಸಿಯೇ ವಿಶ್ವಕಪ್‌ನಲ್ಲಿ ಕೋಟಿಕೋಟಿ ಹಣ ಜೇಬಿಗಿಳಿಸಿ ವಾಪಸು ಬಂದ. ಬೆಂಚು ಸವೆಸುವುದಿರಲಿ ವಿಶ್ವದ ಕಲಿಗಳನ್ನು ಬೆರಳಿನ ಚಾಕಚಕ್ಯತೆಯಿಂದಲೇ ಪಾಪರು ಮಾಡಿ ಎರಡು ಬಾರಿ (2000ರಲ್ಲಿ ದೆಹಲಿಯಲ್ಲಿ ಮತ್ತು 2004ರಲ್ಲಿ ಶ್ರೀಲಂಕಾದಲ್ಲಿ) ವಿಶ್ವಕಪ್ ಮುಡಿಗೇರಿಸಿಕೊಂಡ ಕೇರಂ ಧೀರನ ಕಿಸೆ ತುಂಬಿದ್ದು ಕವಡೆ ಕಾಸು! ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ದೇಶದ ಮಾನ ಕಳೆದ ಆಟಗಾರನಿಗೆ ಕೇಳಿದಷ್ಟು ಜಾಗ ನೀಡುವ ನಮ್ಮ ಕರ್ನಾಟಕ ಸರ್ಕಾರ ಇಲ್ಲಿಯವರೆಗೆ ಈ ಕೇರಂಕಲಿಗೆ ಅಡಿಯಷ್ಟು ಜಾಗವನ್ನೂ ನೀಡಿಲ್ಲ. ಜಾಗಕ್ಕಾಗಿ ಇಟ್ಟ ಬೇಡಿಕೆಯೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಜಾಗ ಹೋಗಲಿ, ಒಂದು ಪುಟ್ಟ ಸನ್ಮಾನ ಮಾಡಿ ಪ್ರೋತ್ಸಾಹದಾಯಕವಾಗಿ ಹಣವನ್ನೂ ನೀಡಿಲ್ಲ.
ಈ ಕೇರಂಪಟು ಮೂವತ್ತೆರಡರ ಹರೆಯದ ಆರ್.ಎಮ್. ಶಂಕರ್, ಬೆಂಗಳೂರಿನ ಕಣ್ಮಣಿಯಂತಿರುವ ಕಲಾಸಿಪಾಳ್ಯದ ಸಾಲೋಸಾಲು ಟೈರಂಗಡಿ, ತರಕಾರಿ ಮಾರುಕಟ್ಟೆಯ ನಡುವೆ ತಿರುವು ಮುರುವಿನಲ್ಲಿ ಒಂಟಿಕೋಣೆಯ ಪುಟ್ಟ ಮನೆದಲ್ಲಿ ಸಂಸಾರ ಹೂಡಿದ್ದಾರೆ. ಹೆಂಡತಿಯ ಜೊತೆ ಕೇರಂ ಆಟವನ್ನು ಪ್ರೋತ್ಸಾಹಿಸಿದ ಅಣ್ಣ, ಮತ್ತೊಬ್ಬಣ್ಣ, ಆತನ ಹೆಂಡತಿ ಮಕ್ಕಳು ಸೇರಿ ಭರ್ತಿ ಎಂಟು ಜನ ಆ ಮನೆಯಲ್ಲಿ ವಾಸವಾಗಿದ್ದಾರೆ. ಶಂಕರ್ ಅವರನ್ನು ಕೈಹಿಡಿದು ಪ್ರೋತ್ಸಾಹಿಸಿ, ಪೋಷಿಸುತ್ತಿರುವ ಭಾರತೀಯ ಕೇರಂ ಸಂಸ್ಥೆಯೂ ಶಂಕರ್ ಅವರ ಕೈಬಿಟ್ಟಿದ್ದರೆ ಶಂಕರ್ ಬದುಕು ಮೂರಾ'ಬುಟ್ಟಿ'ಯಾಗಿರುತ್ತಿತ್ತು. ಕುಟುಂಬದ ಸದಸ್ಯರು ತಲೆತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಬುಟ್ಟಿ ಹೆಣೆಯುವ, ಮಾರುವ ಕಾಯಕ ಮಾಡುತ್ತಿದ್ದಾರೆ. ಶಂಕರ್ ಮಾತ್ರ ಸರ್ಕಾರ ಸಹಾಯ ಮಾಡಲಿ ಬಿಡಲಿ ಕೇರಂ ಚಾಂಪಿಯನ್ನರನ್ನು ಬೆಳೆಸುವ ಕಾಯಕದಲ್ಲಿ ಸೈಲೆಂಟಾಗಿ ತಲ್ಲೀನರಾಗಿದ್ದಾರೆ, ಯಾವುದೇ ಪ್ರತಿಫಲಾಕ್ಷೆಯಿಲ್ಲದೆ!












Click it and Unblock the Notifications