ಸಿತಾರ್ ಮಾಂತ್ರಿಕ ಉಸ್ತಾದ್ ಬಾಲೇಖಾನ್ ವಿಧಿವಶ
ಬೆಳಗಾವಿ, ಡಿ.3 : ಖ್ಯಾತ ಸಿತಾರ್ ವಾದಕ ಉಸ್ತಾದ್ ಬಾಲೇಖಾನ್(65) ಭಾನುವಾರ(ಡಿ.2) ನಿಧನರಾದರು. ಉಸಿರಾಟದ ತೊಂದರೆಯಿಂದಾಗಿ ಶನಿವಾರ ಕೆಎಲ್ಇ ಆಸ್ಪತ್ರೆ ಸೇರಿದ್ದ, ಬಾಲೇಖಾನ್, ಹೃದಯಾಘಾತದಿಂದ ಮೃತಪಟ್ಟರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಇಂದು(ಡಿ.3) ಧಾರವಾಡದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಪರಿಚಯ :
- ಜನನ : ಆಗಸ್ಟ್ 28, 1942
- ಮರಣ : ಡಿಸೆಂಬರ್ 2, 2007
- 1968ರಲ್ಲಿ ಆಕಾಶವಾಣಿಯ ಕಲಾವಿದರಾಗಿ ಸೇವೆ.
- 1971ರಲ್ಲಿ ಆಕಾಶವಾಣಿಯಲ್ಲಿ ನಿಲಯದ ಕಲಾವಿದರಾಗಿ ನಿಯುಕ್ತಿ.
- 19171ರಲ್ಲಿ ಮೊದಲ ವಿದೇಶ ಪ್ರಯಾಣ.
- 1987ರಲ್ಲಿ ರಾಜ್ಯೋತ್ಸವ ಪ್ರಶಸ್ತಿ.
- 2003ರಲ್ಲಿ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ 'ಸಿತಾರ ನವಾಜ' ಎಂಬ ಬಿರುದು.
- 2005ರಲ್ಲಿ ಪುಟ್ಟರಾಜ ಗವಾಯಿ ಸಮ್ಮಾನಕ್ಕೆ ಪಾತ್ರರಾದರು.
ಸಿತಾರ್ ಮಾಂತ್ರಿಕ : ದಕ್ಷಿಣ ಭಾರತಕ್ಕೆ ಸಿತಾರ್ ವಾದ್ಯ ಪರಿಚಯಿಸಿದ ಸಿತಾರ್ ರತ್ನ ರಹಿಮರ್ ಖಾನರ ವಂಶಸ್ಥರಾದ ಬಾಲೇಖಾನರ ಮೂಲ ಹೆಸರು, ಬಾಬುಖಾನ್. ಅವರ ಅಜ್ಜ ರಹಿಮತ್ ಖಾನ್ ಅವರು 'ಬಾಲೆ' ಎಂದು ಕರೆಯುತ್ತಿದ್ದರು . ಮುಂದೆ ಅದೇ ಹೆಸರು ಜನಪ್ರಿಯವಾಯಿತು. ಬಾಲೇಖಾನರ ತಂದೆ ಅಬ್ದುಲ್ ಕರೀಂಖಾನರಿಗೆ ಮೊದಲ ಗುರು. ಮಗನನ್ನು ಗಾಯಕನಾಗಿಸಬೇಕೆಂಬ ಆಸೆ ಹೊತ್ತಿದ್ದ ಕರೀಂಖಾನರಿಗೆ ಮಗ, ಸಿತಾರ್ ಕಡೆಗೆ ಆಕರ್ಷಿತನಾದಾಗ, ಸಿಟ್ಟುಗೊಂಡರೂ ಮಗನ ಹಟಕ್ಕೆ ಮಣಿದು ಸಿತಾರ್ ವಾದನವನ್ನು ಕಲಿಸಿಕೊಟ್ಟರು. ಬಾಲೇಖಾನರ ಏಳು ಜನ ಸೋದರರು ಸಿತಾರ್ ವಾದಕರಾಗಿರುವುದು ವಿಶೇಷ.
ಬಾಲೇಖಾನರು ಬಾಲ್ಯದಲ್ಲಿ ಸಂಗೀತದ ಕಡೆಗೆ ಗಮನ ಹರಿಸತೊಡಗಿದ್ದರಿಂದ, ಶಿಕ್ಷಣದಲ್ಲಿ ಹಿಂದುಳಿದರು. ಆದರೆ, ಶಿಕ್ಷಕರ ಪ್ರೀತಿಯಿಂದ 10ನೇ ತರಗತಿವರೆಗೂ ಓದು ಮುಂದುವರೆಸಿದರು.
ತಮ್ಮ 13ನೇ ವಯಸ್ಸಿನಲ್ಲೇ ಬೆಳಗಾವಿಯ ಆರ್ಟ್ ಸರ್ಕಲ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬಾಲೇಖಾನರು, ಹಿಂದಿರುಗಿ ನೋಡಲಿಲ್ಲ. ನಂತರ ಮುಂಬಯಿಗೆ ತೆರಳಿ ಅಲ್ಲಿಂದ , ಕಿಸೆಯಲ್ಲಿ 3 ಡಾಲರ್ ಇಟ್ಟುಕೊಂಡು, ಕೀನ್ಯಾ, ಉಗಾಂಡಾ, ತಾಂಜಾನಿಯಾ, ಲಂಡನ್, ಮ್ಯಾಂಚೆಸ್ಟರ್ ಹಾಗೂ ಪ್ಯಾರಿಸ್ ಮುಂತಾದೆಡೆ ಸಂಗೀತ ರಸಧಾರೆ ಹರಿಸಿ ಬಂದರು.
ಕರ್ನಾಟಕದಾದ್ಯಂತ 162ಕ್ಕೂ ಅಧಿಕ ಶಿಷ್ಯರನ್ನು ಬಾಲೇಖಾನರು ಹೊಂದಿದ್ದಾರೆ. ಅವರಲ್ಲಿ ವಿ.ಜಿ. ಮಹಾಪಾತ್ರ, ರಫೀಕ್ ನದಾಫ್ ಸಾಂಗ್ಲಿ, ಎನ್.ರಾಘವನ್, ರಫೀಕ್ ಖಾನ್, ಶಫೀಕ್ ಖಾನ್ ಮತ್ತು ಶ್ರೀನಿವಾಸ ಜೋಶಿ ಪ್ರಮುಖರಾಗಿದ್ದಾರೆ.
ನಿಧಾನಗತಿಯ ಆಲಾಪ, ಲಯಬದ್ಧ ಜೋಡ್, ರಭಸದ ಝಲಾದಲ್ಲಿ ಚರಮಗತಿ ಬಾಲೇಖಾನರ್ ಶೈಲಿಯ ಗುಣಗಳಾಗಿದ್ದವು. ಸರಳ, ಸಜ್ಜನ , ಕಲಾರಸಿಕ ವ್ಯಕ್ತಿಯಾಗಿದ್ದ ಬಾಲೇಖಾನರ ನಿಧನ ನಾಡಿನ ಸಂಗೀತ ಲೋಕಕ್ಕೆ ಅಪಾರ ನಷ್ಟ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications