ಸೌಂದರ್ಯ ಸ್ಪರ್ಧೆಯಲ್ಲಿ ಭಾರತಕ್ಕೆ ಅಗ್ರ ತಾಂಬೂಲ?

ನವಂಬರ್ 30 ರಂದು ಲಂಡನ್ನಿನ ಮಿಲೆನಿಯಂ ಗುಮ್ಮಟದಲ್ಲಿ ನಡೆಯುವ ವಿಶ್ವ ಸುಂದರಿ ಸ್ಪರ್ಧೆಯ ಫೈನಲ್ಸ್ ಹತ್ತಿರವಾಗುತ್ತಿದ್ದಂತೆ, ಪ್ರಿಯಾಂಕ ಬುಕ್ಕಿಗಳ ಪಾಲಿನ ಹಾಟ್ ಫೇವರಿಟ್ ಆಗಿದ್ದಾರೆ. ಭಾರತ ಸುಂದರಿಗೆ ಪ್ರಮುಖ ಎದುರಾಳಿಗಳು ಎಂದು ಭಾವಿಸಿರುವ ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ನಿನ ಸುಂದರಿಯರಿಗಿಂತ ಪ್ರಿಯಾಂಕ ಸಾಕಷ್ಟು ಮುಂದಿದ್ದಾರೆ ಎಂದು ವಿಶ್ವದ ಪ್ರಸಿದ್ಧ ಪಣ ಲೆಕ್ಕಿಗನಾದ ಲ್ಯಾಡ್‌ಬ್ರೋಕ್ಸ್ ಅನುಭವದ ಮಾತಾಡುತ್ತಾರೆ.
ಇತ್ತೀಚಿನ ವರ್ಷಗಳ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತದ ಸುಂದರಿಯರು ಗಣನೀಯ ಸಾಧನೆ ಮೆರೆದಿರುವುದನ್ನು ಬ್ರೋಕ್ಸ್ ಅವರ ವಕ್ತಾರ ಸಿಯೆನ್ ಬೊಯ್ಸ ಎತ್ತಿ ತೋರಿಸುತ್ತಾರೆ. ಈ ವರ್ಷದ ಸ್ಪರ್ಧಿಯೂ ಅತ್ಯಂತ ಬಲಿಷ್ಠಳು ಎನ್ನುವ ಬೊಯ್ಸ, ಸೌಂದರ್ಯ ಕಿರೀಟ ಈ ಬಾರಿಯೂ ಭಾರತಕ್ಕೇ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ.
ಫೆಮಿನಾ ಭಾರತ ಸುಂದರಿ ಸ್ಪರ್ಧೆಯಲ್ಲಿ ಮೊದಲ ರನ್ನರಪ್ ಪ್ರಶಸ್ತಿ ಗಳಿಸಿರುವ ಪ್ರಿಯಾಂಕ, ಈಗ ವಿಶ್ವ ಸುಂದರಿ ಮುಕುಟದ ಸಮೀಪ ನಿಂತಿದ್ದಾರೆ. ನಿರೀಕ್ಷಿಸಿದಂತೆ ಪ್ರಶಸ್ತಿ ಅವರ ಮಡಿಲಿಗೆ ಬಿದ್ದರೆ, ಪ್ರಸಕ್ತ ಸಾಲಿನಲ್ಲಿ ವಿಶ್ವ ಸುಂದರಿ ಹಾಗೂ ಭುವನ ಸುಂದರಿ ಎರಡೂ ಪ್ರಶಸ್ತಿಗಳನ್ನು ಗೆದ್ದ ಡಬ್ಬಲ್ ಸಾಧನೆ ಭಾರತದ್ದಾಗುತ್ತದೆ. ಆರು ವರ್ಷಗಳ ಹಿಂದೆ ಸುಶ್ಮಿತಾ ಸೇನ್ ಹಾಗೂ ಐಶ್ವರ್ಯಾ ರೈ ಅವರು ಭಾರತಕ್ಕೆ ಡಬ್ಬಲ್ ಗೌರವ ಗಳಿಸಿಕೊಟ್ಟಿದ್ದರು.
ಪ್ರಿಯಾಂಕ ಕೂಡ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರುವ ವಿಶ್ವಾಸ ಹೊಂದಿದ್ದಾರೆ. ಭುವನ ಸುಂದರಿ ಸ್ಪರ್ಧೆಯಲ್ಲಿ ಲಾರಾದತ್ತ ವಿಜೇತಳಾಗಿರುವ ನೆನಪು ಜನಮನದಲ್ಲಿ ಹಸಿರಾಗಿರುವುದರಿಂದ ಸ್ಪರ್ಧೆಯಲ್ಲಿ ನನ್ನ ಮೇಲೆ ಅತೀವ ಒತ್ತಡವಿದೆ, ಜನತೆ ನನ್ನಿಂದಲೂ ಅದೇ ಸಾಧನೆ ನಿರೀಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಾಲಿನ ವಿಶ್ವಸುಂದರಿ ಸ್ಪರ್ಧೆಯಲ್ಲಿ 96 ರಾಷ್ಟ್ರಗಳ ಚೆಲುವೆಯರು ಭಾಗವಹಿಸುತ್ತಿದ್ದಾರೆ. ಮಾಲ್ಡೀವ್ಸ್ ದ್ವೀಪದ ಬೊಂಡೋಸ್‌ನಲ್ಲಿ ಶನಿವಾರ(ನ.11) ನಡೆದ ಈಜುಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸ್ಪರ್ಧಿಗಳು, ಬುಧವಾರ ಲಂಡನ್‌ನ ಮಿಲೆನಿಯಂ ಗುಮ್ಮಟಕ್ಕೆ ಆಗಮಿಸಲಿದ್ದಾರೆ.












Click it and Unblock the Notifications