ಮಳೆಗಾಲದ ಕಲ್ಪವೃಕ್ಷ, ರೈತರಿಗೆ ವರದಾನ ಪಣಂಪುಳಿ

By: ಬಿಎಂ ಲವಕುಮಾರ್, ಮಡಿಕೇರಿ
Subscribe to Oneindia Kannada

ಕೊಡಗಿನ ರೈತರಿಗೆ ಆದಾಯ ತಂದುಕೊಡುವಲ್ಲಿ ಕಾಡು ಉತ್ಪನ್ನಗಳ ಪಾತ್ರವಿರುವುದನ್ನು ನಾವು ಕಾಣಬಹುದು. ಇಂತಹ ಕಾಡು ಉತ್ಪನ್ನಗಳ ಪೈಕಿ ಉಪ್ಪಾಗೆಯೂ ಒಂದಾಗಿದೆ.

ಕೊಡಗಿನವರು ಇದನ್ನು ಪಣಂಪುಳಿ ಎಂದು ಕರೆಯುತ್ತಾರೆ. ಇಲ್ಲಿ ಕಾಡು ಮಾತ್ರವಲ್ಲದೆ, ಕಾಫಿ ಏಲಕ್ಕಿ ತೋಟಗಳಲ್ಲಿ ಬೆಳೆಯುತ್ತವೆ. ಕೆಲವು ದಶಕಗಳ ಹಿಂದೆ ಇದು ಎಲ್ಲೆಡೆ ಹೇರಳವಾಗಿ ಕಂಡು ಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸದ್ದಿಲ್ಲದೆ ನಾಶವಾಗುತ್ತಿವೆ. ಮಳೆಗಾಲದಲ್ಲಿ ಕೊಡಗಿನಲ್ಲಿ ಆದಾಯವಿಲ್ಲದ ದಿನಗಳಲ್ಲಿ ಇದು ಆರ್ಥಿಕವಾಗಿ ಕಾಪಾಡುತ್ತದೆ. ಹೀಗಾಗಿ ಇದು ರೈತರಿಗೆ ವರದಾನ ಎಂದರೆ ತಪ್ಪಾಗಲಾರದು.

ಉಪ್ಪಾಗೆ ಮರಗಳು ಸುಮಾರು 20ರಿಂದ 30 ಮೀಟರ್ ಎತ್ತರ ಬೆಳೆಯಬಲ್ಲವು. ಹೂಗಳು ಕೆಂಪು ಮಿಶ್ರಿತ ಹಳದಿ ಬಣ್ಣದಿಂದ ಕೂಡಿರುತ್ತವೆ. ಹಣ್ಣಿನ ಮೇಲ್ಭಾಗ 6 ಹಾಗೂ 8 ಗೆರೆಗಳಿಂದ ಕೂಡಿ, ಉಬ್ಬು-ತಗ್ಗುಗಳನ್ನು ಒಳಗೊಂಡಿರುತ್ತದೆ. ಹಣ್ಣಿನಲ್ಲಿ ಸುಮಾರು 6-8 ಬೀಜಗಳಿರುತ್ತವೆ. ಮಾರ್ಚ್‌ನಲ್ಲಿ ಹೂ ಬಿಟ್ಟು ಜೂನ್ ಜುಲೈ ತಿಂಗಳಲ್ಲಿ ಹಣ್ಣಾಗುತ್ತವೆ. ಬಿದ್ದ ಅಥವಾ ಕೊಯ್ಲು ಮಾಡಿದ ಹಣ್ಣು ಕಾಯಿಗಳನ್ನು ಹೆಣೆದ ಬಿದಿರಿನ ತಟ್ಟಿ, ಕಬ್ಬಿಣದ ಪರದೆ ಮೇಲೆ ಬೆಂಕಿಯ ಶಾಖದಿಂದ ಒಣಗಿಸುವುದು ವಾಡಿಕೆ. ಹೀಗೆ ಒಣಗಿಸಿದ ಉಪ್ಪಾಗೆಯ ಸಿಪ್ಪೆಗೆ ಮಾರುಕಟ್ಟೆಯಲ್ಲಿ ಅಧಿಕ ಧಾರಣೆ. ಅಂದರೆ, ಪ್ರತಿ ಕೆಜಿಗೆ ಸುಮಾರು 100ರಿಂದ 150 ರು.ವರೆಗೆ ದೊರೆಯುತ್ತವೆ. [ರಜೆ ಕಳೆಯಲು ಬಂದ ಇಂಜಿನಿಯರ್ ಕಲ್ಲಂಗಡಿ ಬೆಳೆದರು!]

Panampuli or Uppage - high yielding and healthy fruit

ಉಪ್ಪಾಗೆಯಲ್ಲಿ ಕೊಬ್ಬು ಕರಗಿಸುವ ಶಕ್ತಿ

ಉಪ್ಪಾಗೆಯಲ್ಲಿ ವಿವಿಧ ತಳಿಗಳನ್ನು ಕಾಣಬಹುದಾಗಿದೆ. ಉತ್ತರ ಕನ್ನಡ ಜಿಲೆಯಲ್ಲಿ ಮುರುಗಲು, ಅರಶಿಣಗುರಗಿ, ಜಾಣಿಗೆ, ಕಾಡು ಮುರುಗಲು ಹೀಗೆ ವಿವಿಧ ಪ್ರಭೇದಗಳಿವೆ. ಉಪ್ಪಾಗೆಯಲ್ಲಿರುವ ಹೈಡಾಕ್ಸಿ ಸಿಟ್ರಿಕ್ ಎಂಬ ವಸ್ತುವಿಗೆ ಮಾನವನ ದೇಹದ ಕೊಬ್ಬನ್ನು ಕರಗಿಸುವ ಶಕ್ತಿ ಇದೆ. ಗಾರ್ಸಿನಿಯಾ ಕುಟುಂಬಕ್ಕೆ ಸೇರಿದ ಎಲ್ಲಾ ಪ್ರಭೇದದ ಹಣ್ಣುಗಳಲ್ಲಿಯೂ ಸಹಾ ಕೊಬ್ಬು ಕರಗಿಸಲು ಸಹಕಾರಿಯಾಗಬಲ್ಲಂತಹ ರಾಸಾಯನಿಕಗಳು ಕಂಡುಬಂದಿದೆ. ಆದರೆ, ಉಪ್ಪಾಗೆಯ ಹಣ್ಣುಗಳಲ್ಲಿ ಇದು ಹೇರಳವಾಗಿದೆ ಎಂದು ಬೆಂಗಳೂರಿನ ಇಕೋ ವಾಚ್ ಸಂಸ್ಥೆಯ ಸಸ್ಯ ಸಂಶೋಧನಾ ಸಹಾಯಕ ಎಂ.ಬಿ.ನಾಯ್ಕ ಕಡಕೇರಿ ಅಭಿಪ್ರಾಯಿಸಿದ್ದಾರೆ.

ಉಪ್ಪಾಗೆ ಹಣ್ಣಿನ ಸೇವನೆ ಜೀರ್ಣಕಾರಿ. ಜಂತುಹುಳು ನಿವಾರಣೆಗೆ ಅಪೂರ್ವ ಔಷಧಿ. ಹಣ್ಣಿನ ಸಿಪ್ಪೆಯಲ್ಲಿರುವ ಆಮ್ಲದಿಂದ ಕೊಲೆಸ್ಟ್ರಾಲ್ ಮತ್ತು ಬೊಜ್ಜು ನಿಯಂತ್ರಕ. ಕಾಳಿನ ಬಿರುಕುಗಳಿಗೆ ಇದರ ಬೀಜದ ಎಣ್ಣೆಯನ್ನು ಸವರುವುದರಿಂದ ಲಾಭವಾಗುತ್ತದೆ. [ಅಳಿವಿನಂಚಿನತ್ತ ಮಲೆನಾಡಿನ ಕಾಡುಮಾವು]

Panampuli or Uppage - high yielding and healthy fruit

ಉಪ್ಪಾಗೆ ಮರ ಮಳೆಗಾಲದ ಕಲ್ಪವೃಕ್ಷ!

ಮಲೆನಾಡು ರೈತರ ಪಾಲಿಗೆ ಅಧಿಕ ಆದಾಯ ತರುವ ಉಪ್ಪಾಗೆ ಮರ ಮಳೆಗಾಲದ ಕಲ್ಪವೃಕ್ಷ! ನಾಲ್ಕಾರು ದಶಕಗಳ ಹಿಂದೆ ಇದರ ಬೀಜದಿಂದ ತುಪ್ಪವನ್ನು ತಯಾರಿಸುತ್ತಿದ್ದರಂತೆ! ರೈತ ಆದಾಯದ ಮೂಲಕ್ಕೆ ಧಕ್ಕೆಯಾಗದಂತೆ ಉಪ್ಪಾಗೆ ಮರಗಳನ್ನು ಕಾಪಾಡಬೇಕಾಗಿದೆ. ಉಪ್ಪಾಗೆಯ ಒಣಗಿದ ಸಿಪ್ಪೆಯನ್ನು ತರಕಾರಿ, ಮೀನು, ಮತ್ತು ಮಾಂಸದ ಅಡುಗೆಗೂ ಧಾರಾಳವಾಗಿ ಬಳಸುತ್ತಾರೆ. ಬೀಜದಿಂದ ತೆಗೆದ ಎಣ್ಣೆಯನ್ನು ತುಪ್ಪದಂತೆ, ಎಣ್ಣೆಯಂತೆ ಅಡುಗೆಗೂ ಬಳಸಲಾಗುತ್ತಿದೆ. ತೊಗಟೆಯಿಂದ ದೊರಕುವ ರಸವನ್ನು ಬಣ್ಣದ ಚಿತ್ರ ಬಿಡಿಸಲು ಹಿಂದೆ ಉಪಯೋಗಿಸುತ್ತಿದ್ದರಂತೆ.

ಉಪ್ಪಾಗೆಯಿಂದ ದ್ರವವೊಂದನ್ನು ತಯಾರಿಸಲಾಗುತ್ತಿದೆ. ಇದು ಹಂದಿಮಾಂಸ ಸಾಂಬಾರಿಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಪ್ರತಿ ಬಾಟಲಿಗೆ ಸುಮಾರು ರು.850ಕ್ಕೂ ಅಧಿಕ ಧಾರಣೆ ಲಭ್ಯ, ಮದುವೆ ಸಮಯದಲ್ಲಿ ಹುಳಿನೀರು ಅಥವಾ ಕಾಚಂಪುಳಿ ಎಂದು ಕರೆಯಲಾಗುವ ಉಪ್ಪಾಗೆ ರಸಕ್ಕೆ ಅಧಿಕ ಬೇಡಿಕೆ. ಇದು ಕೊಬ್ಬು ಇಳಿಸುವಲ್ಲಿ ಸಹಕಾರಿಯಾಗಿದೆ. [ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು 6 ಸರಳ ಸೂತ್ರಗಳು]

ಹುಳಿ ನೀರಿಗೆ ಎಲ್ಲಿಲ್ಲದ ಬೇಡಿಕೆ

ಉಪ್ಪಾಗೆ ಹಣ್ಣುಗಳನ್ನು ಶೇಖರಿಸಿ, ತೊಳೆದು ಅದರ ಬೀಜ ಬೇರ್ಪಡಿಸಿ ಕೊಳೆಯಲು ಹಾಕಿ ದೊರಕುವ ಮಣ್ಣಿನ ಮಡಕೆಯಲ್ಲಿ ಬಿಂದಿಗೆಯಷ್ಟು ದ್ರವವನ್ನು 750 ಮಿ.ಲೀ ಆಗುವವರೆಗೆ ಕುದಿಸಿ, ಆರಿಸಿ ಸಿಗುವ ದ್ರವವನ್ನು ತಂಪಾದ ಬಳಿಕ ಗಾಜಿನ ಬಾಟಲಿಗೆ ತುಂಬಿಸಿಡಿ. ಅದೇ ರೀತಿ, ಉಪ್ಪಾಗೆ ಹಣ್ಣಿನಿಂದ ಬೇರ್ಪಡಿಸಿದ ಬೀಜ-ತಿರುಳನ್ನು ಚೀಲದಲ್ಲಿ ಸಂಗ್ರಹಿಸಿ ಎತ್ತರದಲ್ಲಿ ನೇತು ಹಾಕಿ. ಆದ್ದರಿಂದ ಬರುವ ದ್ರವವನ್ನು ಸಂಗ್ರಹಿಸಿ, ಬಿಂದಿಗೆ ದ್ರವ 750 ಮಿ.ಲೀ ಆಗುವವರೆಗೆ ಕುದಿಸಿ, ಆರಿಸಿದರೆ ಸಿದ್ಧವಾಗುತ್ತದೆ. ಈ ಹುಳಿ ನೀರು ಸ್ವಲ್ಪ ಕೆಂಬಣ್ಣದಿಂದ ಕೂಡಿರುತ್ತದೆ. ಇದಕ್ಕೆ ಕೊಡಗಿನಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ.

ಮೊದಲಿಗೆ ಹೋಲಿಸಿದರೆ ಉಪ್ಪಾಗೆ ಮರ ಎಲ್ಲೆಂದರಲ್ಲಿ ಕಂಡು ಬರುತ್ತಿಲ್ಲ. ಹಲವು ಕಾರಣಗಳಿಂದ ಇದರ ನಾಶವಾಗಿದ್ದು ರಕ್ಷಿಸುವುದು ಅಗತ್ಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Panampuli or Uppage, also known as garcinia gummi-gutta, belonging to garcinia family is high yielding and healthy fruit, especially grown in Coorg (Madikeri) during monsoon. The fruit looks like small pumpkin. It reduces fat and weight. But, these years the growth has come down.
Please Wait while comments are loading...