ಮಹದಾಯಿ ವಿವಾದದಲ್ಲಿ ಹೊಲಸು ರಾಜಕೀಯದ ವಾಸನೆ!

By: ಆನಂದ್ ಜೋಶಿ
Subscribe to Oneindia Kannada

ಮಹದಾಯಿ ನ್ಯಾಯಾಧಿಕರಣದ ಮುಂದೆ ಕರ್ನಾಟಕ ಸರ್ಕಾರವು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಸುದೀರ್ಘ ವಿಚಾರಣೆ ಮುಗಿದು ಅರ್ಜಿಯನ್ನು ತಿರಸ್ಕರಿಸಿದತೀರ್ಪುಬಂದಿದೆ. 'ತೀರ್ಪು ಮಧ್ಯಂತರ, ಇದೇನು ಅಂತಿಮವಲ್ಲಾ' ಎನ್ನುವ ಮುಖ್ಯಮಂತ್ರಿಗಳಮಾತುಸಹಜ ಮತ್ತು ನಿರೀಕ್ಷಿತ. ಈ ಸಂದರ್ಭದಲ್ಲಿ ತೀರ್ಪಿನ ನಂತರ ನಾಡಿನ ತುಂಬಾ ಪ್ರತಿಭಟನೆಗಳು ಶುರುವಾಗಿರುವುದು ಕೂಡಾ ಸಹಜ ಮತ್ತು ನಿರೀಕ್ಷಿತ.

ಈ ಹೊತ್ತಲ್ಲಿ ವರ್ಷದಿಂದ ನರಗುಂದದ ರೈತ ಸ್ಮಾರಕದ ಬಳಿ ಪ್ರತಿಭಟನೆ ಧರಣಿ ಮಾಡುತ್ತಿರುವ ಹೋರಾಟಗಾರರ ಪ್ರತಿಕ್ರಿಯೆ ಬಹಳ ಅರ್ಥಪೂರ್ಣವಾಗಿದೆ. "ಕುಡಿಯುವ ನೀರಿಗಾಗಿ ಕರ್ನಾಟಕ ಮೊರೆ ಇಟ್ಟರೂ ನಮ್ಮ ಜನರ ಪಾಲಿಗೆ ಸಿಕ್ಕಿದ್ದು ಕಣ್ಣೀರು ಮಾತ್ರ" ಎನ್ನುತ್ತಾರೆ ರೈತ ಮುಖಂಡರಾದ ಶಂಕರಪ್ಪ ಅಂಬಲಿಯವರು.

"ನ್ಯಾಯಾಧಿಕರಣದ ಮುಂದೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು ಕಳೆದ ಡಿಸೆಂಬರ್ ಒಂದರಂದು. ಅದೇ ದಿನ ಅರ್ಜಿಯನ್ನು ತಿರಸ್ಕರಿಸಿಬಿಟ್ಟಿದ್ದರೆ ಆರು ತಿಂಗಳ ಸಮಯವಾದರೂ ಉಳಿಯುತ್ತಿತ್ತು. ಈ ಮಧ್ಯಂತರ ಅರ್ಜಿಯ ಕಾಲದಲ್ಲಿ ನದಿನೀರು ಹಂಚಿಕೆಯ ಮೂಲ ವಾದವೇ ನಡೆಯದೆ ಸುಮ್ಮನೆ ಕಾಲಹರಣವಾಯಿತು" ಎಂದು ಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು. [ಹೋರಾಟಗಾರನ ಕಣ್ಣಿನಲ್ಲಿ ಮಹದಾಯಿ ಹೋರಾಟದ ಕಥನ]

Dirty smell of politics in Mahadayi controversy

"ಈ ಕಳಸಾ ಬಂಡೂರಿ ಕುರಿತ ಇಂದಿನ ತೀರ್ಪು ಮೇಲ್ನೋಟಕ್ಕೆ ಹಿನ್ನಡೆಯಾಗಿ ಕಂಡರೂ, ನಮ್ಮ ಜನರಲ್ಲಿ ನಮ್ಮ ರಾಜಕೀಯ ಪಕ್ಷಗಳ ಬೂಟಾಟಿಕೆಯನ್ನು ಬಯಲು ಮಾಡಿ ತೋರಿಸುವಲ್ಲಿ ಯಶಸ್ವಿಯಾಗುತ್ತಿದೆ. ಇನ್ನೇನಿದ್ದರೂ ನಮ್ಮ ಹೋರಾಟ ನಮ್ಮ ಜನಪ್ರತಿಧಿಗಳ ವಿರುದ್ಧ. ಹದಿನೇಳು ಸಂಸದರ ಭಾರತೀಯ ಜನತಾ ಪಕ್ಷದ ಸಂಸದರು ಪ್ರಧಾನಮಂತ್ರಿಗಳ ಮನವೊಲಿಸಿ ಮಾತುಕತೆಯ ಮೂಲಕ, ಕಡೆಯಪಕ್ಷ ಕುಡಿಯುವ ನೀರನ್ನಾದರೂ ಕೊಡಿಸಬೇಕು."

"ರಾಜ್ಯದ ರಾಜಕಾರಣಿಗಳು ಕಾಂಗ್ರೆಸ್ಸು, ಬಿಜೆಪಿ ಅಥವಾ ಜನತಾದಳವೆನ್ನುವ ಪಕ್ಷಭೇದವಿಲ್ಲದೆ ಮಹದಾಯಿ ವಿಷಯವಾಗಿ ಮಾಡಿರುವ ಒಂದೇ ಒಂದು ಕೆಲಸವೆಂದರೆ ಅದು ಮತ ರಾಜಕಾರಣ. ಪ್ರತಿಯೊಬ್ಬರಿಗೂ ಇರುವುದು, ಎದುರಾಳಿಗಳದ್ದೇ ತಪ್ಪು ಎಂದು ಬಿಂಬಿಸುವ ಉತ್ಸಾಹ ಮಾತ್ರ. ಅದರ ಬದಲಿಗೆ ಮಹದಾಯಿ ನೀರನ್ನು ನಮ್ಮ ಹೊಲಗಳಿಗೆ ಹರಿಸಿದ್ದಿದ್ದರೆ ನಾವು ಇವರ ಫೋಟೋ ಹಾಕಿಕೊಂಡು ಪೂಜೆ ಮಾಡುತ್ತಿದ್ದೆವು" ಅನ್ನುತ್ತಾರೆ. [Live : 'ಸಂಸದರೇ ರಾಜೀನಾಮೆ ಕೊಟ್ಟು ಕರ್ನಾಟಕಕ್ಕೆ ಬನ್ನಿ']

ಈ ವಿವಾದ ವ್ಯವಸ್ಥಿತ ರಾಜಕೀಯ ಸಂಚೇ?

ಮಹದಾಯಿಯಿಂದ ಮಲಪ್ರಭೆಗೆ ನೀರು ಹರಿಸುವ ಯೋಜನೆಗೆ ಗೋವಾ ಕೂಡಾ ಒಪ್ಪಿದ್ದಂಥಾ ಸಮಯದಲ್ಲಿ, ಅಂದರೆ ರಾಣೆ-ಬೊಮ್ಮಾಯಿ ಒಪ್ಪಂದವಾಗಿದ್ದ ಕಾಲದಲ್ಲಿ ಕರ್ನಾಟಕದ ರಾಜಕಾರಣಿಗಳು ಒಪ್ಪಿಗೆಯಾಗಿದ್ದ ಯೋಜನೆಯನ್ನು ಸದ್ದಿಲ್ಲದೆ ಮಾಡಿ ಮುಗಿಸದೆ, ರಾಜಕೀಯ ಲಾಭ ಪಡೆದುಕೊಳ್ಳಲು ದೊಡ್ಡಪ್ರಚಾರಕ್ಕೆ ಇಳಿದದ್ದರಿಂದಲೇ ಇದು ಗೋವಾದಲ್ಲಿ ಹೆಚ್ಚು ಚುನಾವಣಾ ವಿಷಯವಾಯಿತು ಎನ್ನುತ್ತಾರೆ ಬಲ್ಲವರು.

Dirty smell of politics in Mahadayi controversy

ಮಹದಾಯಿಗೂ ಗೋವಾ ಚುನಾವಣೆಗೂ ಸಂಬಂಧ

ಮಹದಾಯಿ ಮತ್ತು ಗೋವಾದ ಚುನಾವಣೆಗೂ ಸಂಬಂಧವಿರುವುದು ಕಾಣುತ್ತಿರುವುದು ಕಾಕತಾಳೀಯ ಎನ್ನುವುದಾದರೆ ಅನ್ನಬಹುದು. ಅಥವಾ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ರಾಜಕೀಯ ಪಕ್ಷಗಳ ರಾಜಕಾರಣದ ಹೊಲಸು ವಾಸನೆ ಮೂಗಿಗೆ ರಾಚಿದರೂ ರಾಚೀತು! ಏನೇ ಆದರೂ ಮೊದಲಿಗೆ ಇದನ್ನು ಗೋವಾ ಚುನಾವಣೆಯ ವಿಷಯವಾಗಿಸಿ "ಕರ್ನಾಟಕಕ್ಕೆ ಒಂದು ಹನಿ ನೀರನ್ನು ಹರಿಸಲು ಬಿಡುವುದಿಲ್ಲ" ಎಂಬ ಹೇಳಿಕೆಯನ್ನು 2007ರ ಜೂನ್ ತಿಂಗಳಲ್ಲಿ ಕೊಟ್ಟಿದ್ದು ಕಾಂಗ್ರೆಸ್ಸಿನ ಸೋನಿಯಾ ಗಾಂಧಿಯವರು.

ಆಗ ಕರ್ನಾಟಕದಲ್ಲಿ ಇದ್ದಿದ್ದು ಜನತಾ - ಬಿಜೆಪಿ ಸರ್ಕಾರ. ಆಗ ಗೋವಾದಲ್ಲಿ ಅಧಿಕಾರಕ್ಕೆ ಬಂದಿದ್ದು ಕಾಂಗ್ರೆಸ್ ಪಕ್ಷ! ಮುಂದೆ ಮಹದಾಯಿ ನ್ಯಾಯಾಧೀಕರಣ ರಚಿಸಿದ ಸಮಯವನ್ನು ಗಮನಿಸಿ. ಕೇಂದ್ರದ ಕಾಂಗ್ರೆಸ್ ಮುಂದಾಳ್ತನದ ಯುಪಿಎ ಸರ್ಕಾರ 2010ರಲ್ಲಿ ನ್ಯಾಯಾಧೀಕರಣವನ್ನು ರಚಿಸಿದ್ದು ಕೂಡಾ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದು, ಗೋವಾ ಚುನಾವಣೆಯ ಹೊಸ್ತಿಲಲ್ಲಿದ್ದಾಗಲೇ! ಪಾಪ. ಕಾಂಗ್ರೆಸ್ಸಿನ ದುರಾದೃಷ್ಟಕ್ಕೆ ಅಲ್ಲಿ ಬಿಜೆಪಿ ಗೆದ್ದುಬಂದಿತು. ಗೋವಾದಲ್ಲಿ ಬಿಜೆಪಿ, ಇಲ್ಲಿ ನಮ್ಮ ನಾಡಲ್ಲೂ ಬಿಜೆಪಿ ಅನ್ನುವ ಹೊತ್ತಿನಲ್ಲಿ ಮಾತುಕತೆ ನಡೆದೀತೇನೋ ಎಂದುಕೊಳ್ಳುವಷ್ಟರಲ್ಲಿ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಗೋವಾ, ಮಹಾರಾಷ್ಟ್ರ ಮತ್ತು ಕೇಂದ್ರಗಳಲ್ಲಿ ಬಿಜೆಪಿಯ ಸರ್ಕಾರಗಳು ರಚನೆಯಾದವು. [ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ]

Dirty smell of politics in Mahadayi controversy

ವಿವಾದ ನ್ಯಾಯಾಧೀಕರಣದಲ್ಲಿರುವಾಗ ಒಂದು ವಿಚಿತ್ರ ನಡೆಯಿತು. ಗೋವಾದ ಪರ ವಕೀಲರಾದ ಗೋವಾದ ಅಡ್ವೋಕೇಟ್ ಜನರಲ್ ಆಗಿದ್ದ ಆತ್ಮಾರಾಂ ನಾಡಕರ್ಣಿಯವರು 2016ರಲ್ಲಿ ಕೇಂದ್ರದ ಅಡಿಶನಲ್ ಸಾಲಿಸಿಟರ್ ಜನರಲ್ ಹುದ್ದೆಗೆನೇಮಕವಾದರು. ಇವರು ಇಂದಿಗೂ ಗೋವಾದ ಪರ ವಾದ ಮಾಡುವ ವಕೀಲರಾಗಿದ್ದಾರೆ. ವಿಷ್ಪಕ್ಷಪಾತವಾದ ನ್ಯಾಯ ವಿಚಾರಣೆ ನಡೆಯುತ್ತದೆ ಎಂಬ ಭರವಸೆ ನಮ್ಮ ರಾಜಕಾರಣಿಗಳಿಗೆ ಇದ್ದಿರಬಹುದಾದರೂ ನೈತಿಕವಾಗಿ ಅವರು ಒಂದು ರಾಜ್ಯದ ಪರ ವಾದ ಮಾಡುವುದನ್ನು ಸರಿಯೆಂದು ಒಪ್ಪಲಾಗುವುದೇ? ನ್ಯಾಯಾಧಿಕರಣದ ಬಗ್ಗೆ ಜನರ ನಂಬಿಕೆ ಕಡಿಮೆಯಾಗಲು ಇದು ಕಾರಣವಾಗಬಹುದಲ್ಲವೇ? ಈ ಕುರಿತಾಗಿ ರಾಜ್ಯದ ರಾಜಕೀಯ ಪಕ್ಷಗಳು ದನಿ ಎತ್ತಿಲ್ಲ ಎನ್ನುವುದು ವಿಚಿತ್ರವಾಗಿ ತೋರುವುದಿಲ್ಲವೇ?

ನ್ಯಾಯಾಧಿಕರಣದ ಮುಂದೆ ಮಧ್ಯಂತರ ಅರ್ಜಿಯನ್ನುಸಲ್ಲಿಸಿದ್ದುಕಳೆದವರ್ಷ ಡಿಸೆಂಬರ್ ತಿಂಗಳಲ್ಲಿ. ಇದೂ ಕೂಡಾ ಸಮಯ ಪಡೆಯುವ ಹುನ್ನಾರವೇ ಅನ್ನಿಸುತ್ತದೆ. ರಾಜ್ಯದ ವಿರೋಧಪಕ್ಷವಾದ ಬಿಜೆಪಿಯ ತೀವ್ರ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ ಕುಡಿಯುವ ನೀರಿಗಾಗಿ ಮಧ್ಯಂತರ ಮನವಿಯನ್ನು ಸಲ್ಲಿಸುವ ಮೂಲಕ ತಪ್ಪು ಮಾಡಿತೇ? ಕೇಂದ್ರ ಸರ್ಕಾರದ ಮೇಲೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿ ಎಂದು ಕರ್ನಾಟಕದ ನಿಯೋಗ ಹೋದಾಗ, ಕೇಂದ್ರ ಮಂತ್ರಿ ಉಮಾಭಾರತಿಯವರು ನೀಡಿಕೆಹೇಳಿಕೆಗಮನಿಸಿ ನೋಡಿ.. 'ಮಧ್ಯಸ್ಥಿಕೆ ವಹಿಸಲು ನ್ಯಾಯಾಧಿಕರಣದ ಮುಂದೆ ವಿಚಾರಣೆ ನಡೆಯುತ್ತಿರುವುದು ಕಾರಣ' ಎಂದಿದ್ದಾರೆ. ಈಗ ಮಧ್ಯಂತರ ಅರ್ಜಿಗೆ ವ್ಯತಿರಿಕ್ತ ತೀರ್ಪು ಬಂದಾಗ ರಾಜ್ಯ ಮಂತ್ರಿಗಳು ನೀಡಿರುವಸಮರ್ಥನೆನೋಡಿ. ಹೇಗೆ ತಪ್ಪಲ್ಲಿ ವಿರೋಧಪಕ್ಷದ ಪಾಲಿರುವುದನ್ನೂ ಹೇಳಿ ತಮ್ಮ ಹೊಣೆ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ತಿಳಿಯುತ್ತದೆ.

Dirty smell of politics in Mahadayi controversy

ಮುಂದಿನವರ್ಷ ಗೋವಾದಲ್ಲಿ ಚುನಾವಣೆ ನಡೆಯಲಿದೆ ಎನ್ನುವುದು ನಮ್ಮ ಜನರಲ್ಲಿ ಈ ಅನುಮಾನ ಹುಟ್ಟಲು ಕಾರಣವಾಗಿದೆ. ಮಧ್ಯಂತರ ಅರ್ಜಿ ಸಲ್ಲಿಸುವಂತೆ ಮಾಡುವುದು, ಆಮೇಲೆ ಅದರ ವಿಚಾರಣೆಗಾಗಿ ಒಂದು ವರ್ಷ ಸವೆಸುವುದು, ಗೋವಾ ಚುನಾವಣೆ ಹತ್ತಿರವಾಗುವಷ್ಟರಲ್ಲಿ ಅರ್ಜಿ ತಿರಸ್ಕಾರವಾಗುವುದು.. ಹೀಗೆಲ್ಲಾ ಆಗುತ್ತಿರುವುದನ್ನು ನೋಡಿದರೆ ಇಂಥದ್ದೊಂದು ಹುನ್ನಾರದ ವಾಸನೆ ಜನರ ಮೂಗಿಗೆ ಬಡಿಯುವುದಿಲ್ಲವೇ?

ಬಹುಶಃ ಗೋವಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದು, 2018ರ ಕರ್ನಾಟಕದ ಚುನಾವಣೆಯ ಹೊತ್ತಿಗೆ ರಾಜ್ಯಕ್ಕೆ ಸ್ವಲ್ಪ ಅನುಕೂಲವಾಗುವ ಬೆಳವಣಿಗೆಗಳು ನಡೆಯಬಹುದೇ? ಯಾಕಂದರೆ ಆ ವರ್ಷ ಕರ್ನಾಟಕದಲ್ಲಿ ಚುನಾವಣೆ. ಆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹೇಗೆ ಮಹದಾಯಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದು ಎಂಬುದನ್ನು ಸರಿಯಾಗಿ ಯೋಚಿಸುತ್ತಲೇ ಇರುತ್ತವೆ! ಕರ್ನಾಟಕದ ಜನರು ನಿಜವಾಗಿ ನಾಡಿನ ಹಿತ ಕಾಪಾಡುವ ರಾಜಕೀಯ ಪಕ್ಷಗಳಿಲ್ಲದ ಕಾರಣಕ್ಕೆ ಪದೇ ಪದೇ ಮಂಗಗಳಾಗುತ್ತಲೇ ಇರುತ್ತಾರೆ...

ಇಂಥಾ ಅನ್ಯಾಯದ ಸರಪಳಿಗಳನ್ನು ಕಂಡಾಗ ಕನ್ನಡಿಗರ ರಕ್ತ ಕುದಿಯದೇ? ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ವಿಷಯ ಬಂದಾಗ ಮಾನವೀಯ ನೆಲೆಯ ಮಾತಾಡುವ ತೀರ್ಪುಗಳು, ಕಾವೇರಿ ನೀರು ವ್ಯರ್ಥವಾಗಿ ಸಮುದ್ರ ಸೇರುವುದು ವ್ಯರ್ಥ ಎನ್ನುವ ತೀರ್ಪುಗಳು ಮಹದಾಯಿ ವಿಷಯಕ್ಕೆ ಬಂದಾಗ ಮರೆಯಾಗಿ ಬಿಡುತ್ತದೆ. ಇಂಥಾ ಒಂದಕ್ಕೊಂದು ವಿರುದ್ಧವಾದ ತೀರ್ಪುಗಳನ್ನು ಕಂಡಾಗ ಜನರಿಗೆ ನ್ಯಾಯಾಂಗದ ಮೇಲೆ ವಿಶ್ವಾಸ ಕರಗಿಹೋಗಿ ಬಿಡುವ ಅಪಾಯವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Protesters in North Karnataka smelling a rat in Mahadayi water sharing controversy. Political leaders in Karnataka are playing dirty political gain to come to power and playing with sentiments of people. Anand Joshi digs into the Kalasa Banduri issue, after tribunal rejected plea of Karnataka for water sharing.
Please Wait while comments are loading...