CT Ravi: ಕೋರ್ಟ್‌ಹಾಲ್‌ನಲ್ಲಿ ಕಣ್ಣೀರು ಹಾಕಿದ ಸಿ.ಟಿ ರವಿ
ಬೆಳಗಾವಿ, ಡಿಸೆಂಬರ್ 20: ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಸಂವಿಧಾನಿಕ ಪದಬಳಕೆ ಆರೋಪದಲ್ಲಿ ಬಂಧನವಾಗಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ಇಂದು ಬೆಳಗಾವಿ ಕೋರ್ಟ್‌ಗೆ ಹಾಜರುಪಡಿಸಿದರು.
5ನೇ ಸಿವಿಲ್ ಅಂಡ್ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿದ್ರು, ಕಲಂ 481 ಅಡಿ ವಕೀಲರು ಬೇಲ್‌ಗೆ ಅರ್ಜಿ ಸಲ್ಲಿಸಿದರು. ಈ ವೇಳೆ ಕೋರ್ಟ್‌ಹಾಲ್‌ನಲ್ಲಿ ಸಿ.ಟಿ ರವಿ ಕಣ್ಣೀರು ಹಾಕಿದ್ರು, ಬಳಿಕ ಅವರಿಗೆ ಆರ್. ಅಶೋಕ್, ಅಭಯ್ ಪಾಟೀಲ್ ಸಾಂತ್ವನ ಹೇಳಿದ ಪ್ರಸಂಗ ನಡೆಯಿತು. ನಂತರ ನ್ಯಾಯಾಧೀಶರಾದ ಸ್ಪರ್ಶಾ ಎಂ ಡಿಸೋಜಾ ಎದುರು ವಾದ ಮಂಡಿಸಿದ ಸಿ.ಟಿ ರವಿ ಪರ ವಕೀಲರಾದ ಎಮ್.ಬಿ. ಜಿರಲಿ ಮತ್ತು ರವಿರಾಜ್ ಪಾಟೀಲ್ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡುವಂತೆ ಮನವಿ ಮಾಡಿದ್ರು.

ಬೆಳಗಾವಿಯ ಜೆಎಂಎಫ್ ಸಿ ಕೋರ್ಟಲ್ಲಿ ವಿಚಾರಣೆ ಆರಂಭವಾದಾಗ ಜಡ್ಜ್ ಗೆ ಕೈಮುಗಿದು ನಿಂತಾಗ ನ್ಯಾಯಾಧೀಶೆ ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದರು. ಈ ವೇಳೆ ಸಿಟಿ ರವಿ ಅವರು 58 ವರ್ಷ ಎಂದು ತಿಳಿಸಿದ್ದಾರೆ. ಈ ವೇಳೆ ಸಿಟಿ ರವಿ ಅವರಿಗೆ ನಿಮ್ಮನ್ನು ಅರೆಸ್ಟ್ ಎಲ್ಲಿ ಮಾಡಿದ್ದಾರೆ ಎಂದು ಜಡ್ಜ್ ಕೇಳಿದರು. ನಿನ್ನೆ ಸಂಜೆ 6:30 ಸುಮಾರಿಗೆ ಸುವರ್ಣ ಸೌಧದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾತ್ರಿ ಇಡೀ 10 ಗಂಟೆಗಳ ಕಾಲ ಮೂರು ಜಿಲ್ಲೆಗಳನ್ನು ಸುತ್ತಿಸಿದ್ದಾರೆ ಎಂದು ಸಿಟಿ ರವಿಯವರು ಜಡ್ಜ್ ಗೆ ಉತ್ತರಿಸಿದರು.
ಇಲ್ಲಿ ಬರೋವರೆಗೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗ್ತಾ ಇದ್ರು. ಖಾನಾಪುರದಲ್ಲಿ ನನಗೆ ಹೊಡೆದರು. ತಲೆಯಲ್ಲಿ ನನಗೆ ರಕ್ತ ಸಹ ಬರುತ್ತಿತ್ತು ಎಂದು ನ್ಯಾಯಾಧೀಶರ ಬಳಿ ಪೊಲೀಸರ ವಿರುದ್ಧ ಆರೋಪ ಮಾಡಿದರು. ಈ ವೇಳೆ ಯಾರು ಹೊಡೆದರು ಎಂದು ಜಡ್ಜ್ ಕೇಳಿದಾಗ ಯಾರು ಹೊಡೆದರು ಅಂತ ಗೊತ್ತಿಲ್ಲ. ಆದರೆ ಪೊಲೀಸರೇ ಹೊಡೆದಿರಬಹುದು ಎಂದು ಸಿಟಿ ರವಿ ಅವರು ಉತ್ತರಿಸಿದ್ದಾರೆ.
ಸಿ.ಟಿ.ರವಿ ಅವರ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ
ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ಬಂಧನವನ್ನು ಖಂಡಿಸಿ ಇಂದು ಇಲ್ಲಿನ "ಫ್ರೀಡಂ ಪಾರ್ಕ್"ನಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತಿತರ ಮುಖಂಡರು ಮಾತನಾಡಿ ಬಂಧನ ಕ್ರಮವನ್ನು ಆಕ್ಷೇಪಿಸಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಸಚಿವ ಭೈರತಿ ಬಸವರಾಜ್, ಶಾಸಕ ರವಿಸುಬ್ರಹ್ಮಣ್ಯ, ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಹರೀಶ್ ಪೂಂಜಾ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications