ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಿನ ಮಹಿಳೆಯರು ಮನೆಮಂದಿಗೆ ಅಚ್ಚುಮೆಚ್ಚು!

By Staff
|
Google Oneindia Kannada News

ಈ ಲೇಖನ ಓದಿ ಹೊಟ್ಟೆಕಿಚ್ಚು ಪಡಬೇಡಿ.. ನೀವೂ ನಿಮ್ಮ ಮನೆಯಂಗಳದಲ್ಲಿ ಕೈತೋಟ ಬೆಳೆಸಿ.. ಕೈತೋಟ ಮಾಡೋದು, ತಾಜಾ ತರಕಾರಿ ನೋಡೋದು, ಬಣ್ಣಬಣ್ಣದ ಹೂವಿನ ಗಿಡಡ ಮಧ್ಯೆ ಸುತ್ತಾಡೋದು.. ಆ ಸುಖವೇ ಬೇರೆ.. ಕೈ ಕೆಸರಾದ್ರೆ ಬಾಯ್ ಮೊಸರು..

ಲೇಖನ ಮತ್ತು ಚಿತ್ರಗಳು : ಆರ್.ಶರ್ಮಾ, ತಲವಾಟ.

ಮನೆಯಂಗಳದಲ್ಲಿ ಕೈ ತೋಟ.. ಮಲೆನಾಡಿನ ಹಳ್ಳಿಯ ಕೃಷಿಕರ ಮನೆಗಳೆಂದರೆ ಮನೆಯೆದುರು ಅಥವಾ ಪಕ್ಕದಲ್ಲಿ ವಿಶಾಲವಾದ ಅಂಗಳವಿರಲೇ ಬೇಕು. ಬೇಸಿಗೆಯ ದಿನದ ಸುಗ್ಗಿಕಾಲದಲ್ಲಿ ಕೃಷಿ ಉತ್ಪನ್ನಗಳನ್ನು ಒಣಗಿಸಲು, ಹರವಲು, ಬಳಸಲ್ಪಡುವ ಈ ಜಾಗಗಳು ಮಳೆಗಾಲದಲ್ಲಿ ಕೃಷಿಚಟುವಟಿಕೆಗೆ ಅಗತ್ಯವಿರುವುದಿಲ್ಲ. ಮಲೆನಾಡಿನ ಮನೆಯೊಡತಿಯರು ಈ ಮಳೆಗಾಲದ ಆರು ತಿಂಗಳು ಜಾಗ ವ್ಯರ್ಥವಾಗುವುದನ್ನು ತಪ್ಪಿಸಲು ತಾತ್ಕಾಲಿಕ ತರಕಾರಿ ಮತ್ತು ಹೂವಿನ ಕ್ಷೇತ್ರವನ್ನಾಗಿಸಿ ಮಾರ್ಪಡಿಸಿಬಿಡುತ್ತಾರೆ.

ಶ್ರಾವಣಮಾಸ ಆರಂಭವಾಗುತ್ತಿದಂತೆ ಹಬ್ಬ ಹರಿದಿನಗಳ ಸಾಲು ಪ್ರಾರಂಭವಾಗುತ್ತದೆ. ಆಗ ಹೂವು ಮತ್ತು ತರಕಾರಿಗಳು ಎಷ್ಟಿದ್ದರೂ ಸಾಲದು. ಬೇಡಿಕೆ ಜಾಸ್ತಿಯಿರುವ ದಿನಗಳಾದ್ದರಿಂದ ಮಾರುಕಟ್ಟೆಯಲ್ಲಿ ಅವುಗಳು ತುಟ್ಟಿಕೂಡ. ಇವನ್ನೆಲ್ಲಾ ಸರಿತೂಗಿಸಲು ಮನೆಯಂಗಳದಲ್ಲಿ ಮಳೆಗಾಲದಲ್ಲಿ ಬೆಳೆಯುವ ತ್ಯಾರಣ, ಚೆಂಡುಹೂವು,ತಾವರೆ, ತಿಂಗಳವರೆ, ಸೌತೆ, ಹಸಿಮೆಣಸು ಮುಂತಾದ ನಿತ್ಯಬಳಕೆಯ ತಾಜಾ ತರಕಾರಿ ಹಾಗೂ ಹೂವುಗಳು ಕೈಗೆಟಕುವ ಮನೆಯಂಗಳದಲ್ಲಿ ಸಿದ್ಧವಾಗಿರುತ್ತದೆ.

ಆರುತಿಂಗಳ ಕಾಲ ಜಿರ್ರೊ ಎಂದು ಸುರಿವ ಮಳೆಗಾಲದಲ್ಲಿ ಹತ್ತೆಂಟು ಕಿಲೋಮೀಟರ್ ದೂರವಿರುವ ಪೇಟೆಯಿಂದ ತರಕಾರಿ ತರುವುದು ಒಂದು ರಗಳೆಯ ಕೆಲಸ. ವಾರಕ್ಕೊಮ್ಮೆ ಸಂತೆಯಿಂದ ತರುವ ತರಕಾರಿ ಬಳಕೆಯಾಗುವುದಕ್ಕಿಂತ ಕೊಳೆತುಹೋಗುವುದೇ ಹೆಚ್ಚು. ರೆಫ್ರಿಜಿರೇಟರ್ ಇರುವ ಮನೆಗಳು ಅಲ್ಲೊಂದು ಇಲ್ಲೊಂದು. ಹಾಗಾಗಿ ಜನಸಾಮಾನ್ಯರು ಮೊರೆಹೋಗುವುದು ಮನೆಯಂಗಳದ ಕೈತೋಟಕ್ಕೆ.

ಇದು ಮಲೆನಾಡಿನ ಹಳ್ಳಿಗಳ ಎಲ್ಲಾ ಮನೆಗಳಲ್ಲಿಯೂ ಒಂದು ಉತ್ತಮ ಹವ್ಯಾಸವಾಗಿ ಬೆಳೆದುಬಂದಿದೆ. ಇವರ ಮನೆಯಲ್ಲಿ ಬೆಳೆದದ್ದು ಅವರ ಮನೆಗೆ, ಅವರ ಮನೆಯಲ್ಲಿ ಬೆಳೆದದ್ದು ಇವರ ಮನೆಗೆ ಎಂಬ ತನ್ನಷ್ಟಕ್ಕೆ ರೂಢಿಯಾಗಿ ಬಂದಿರುವ ವಿನಿಮಯ ಪದ್ದತಿಯಿಂದ ಯಾರ ಮನೆಯಲ್ಲಿಯೂ ತರಕಾರಿ ಕೊರತೆ ಕಾಣಿಸದು. ಜೊತೆಯಲ್ಲಿ ವ್ಯರ್ಥವೂ ಆಗದು. ಕೈಗೆಟುಕುವಂತಹ ದೂರದಲ್ಲಿ ತಾಜಾ ತರಕಾರಿ ಇರುವುದರಿಂದ ಬೇಕಷ್ಟನ್ನೇ ಕೊಯ್ದು ಬಳಸಬಹುದು. ಇದು ತಲೆಮಾರುಗಳಿಂದ ಬಳುವಳಿಯಾಗಿ ಬಂದಿರುವ ಸಹಜ ಪದ್ದತಿಯಾಗಿರುವುದರಿಂದ ತರಕಾರಿ ಬೀಜಗಳಿಗೂ ಕೂಡ ಎಲ್ಲಾ ಗೃಹಣಿಯರೂ ಸ್ವಾವಲಂಬಿಗಳು.

ಇನ್ನೇನು ಮಳೆಗಾಲ ಮುಗಿಯಿತು ಅನ್ನುವಾಗ ಕೆಲವು ಕಾಯಿಗಳನ್ನು ಬೀಜಕ್ಕಾಗಿ ಬಿಟ್ಟುಕೊಳ್ಳುತ್ತಾರೆ. ಮುಂದಿನ ವರ್ಷದ ಬೀಜಸಂಗ್ರಹವಾದ ತಕ್ಷಣ, ಮನೆಯೆದುರಿನ ಅಂಗಳವನ್ನು ಕೃಷಿಉತ್ಪನ್ನ ಗಳ ಹರವಲು ಹಸನುಮಾಡುತ್ತಾರೆ. ಮತ್ತೆ ಮಳೆಗಾಲ ಆರಂಭವಾದ ಕೂಡಲೆ ತರಕಾರಿ ಹೂವಿನತೋಟಕ್ಕೆ ಸಿದ್ಧತೆ ಶುರು. ಹೀಗೆ ಆರು ತಿಂಗಳ ಕಾಲ ನೀರು ಹೊತ್ತು ಹೊಯ್ಯದೆ, ಅತ್ಯಂತ ಕಡಿಮೆ ಕೆಲಸ ಮಾಡಿ ಹೆಚ್ಚು ಲಾಭಗಳಿಸುವ ಮನೆಗಳು ಒಂದೆರಡಲ್ಲ. ಮನೆಯಂಗಳದಲ್ಲಿ ತರಕಾರಿ ಬೆಳಸಿ, ಆರು ತಿಂಗಳು ತಾತ್ಕಾಲಿಕ ಕೈತೋಟದ ಮೂಲಕ ತರಕಾರಿ ಹಾಗೂ ಹೂವಿನ ವಿಚಾರದಲ್ಲಿ ಸ್ವಾವಲಂಬಿಗಳು ಮಲೆನಾಡಿನ ಮಹಿಳೆಯರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X