ಹಾಡುಹಕ್ಕಿ ಮೈಸೂರು ಅನಂತಸ್ವಾಮಿ ಅವರಿಗೆ ನಮನ

Mysore Ananthswamy with wife Shanthaಕನ್ನಡನಾಡು ಕಂಡ ನಿಗರ್ವಿ ಗಾಯನಪ್ರತಿಭೆಗಳಲ್ಲಿ ಮೈಸೂರು ಅನಂತಸ್ವಾಮಿ ಎದ್ದುಕಾಣುವರು. ಅತ್ಯುತ್ತಮ ಸಾಹಿತ್ಯ ರಚನೆಗಳಿಗೆ ಸುಶ್ರಾವ್ಯದ ಕವಚ ತೊಡಿಸಿ ಮನೆಮನೆಗಳಿಗೆ ಹಂಚಿದ ಕೀರ್ತಿ ಅವರದ್ದು. ಅವರ ರಾಗಸಂಯೋಜನೆಯ ಗೀತಮಾಧುರ್ಯವನ್ನು ಕಿವಿಗಳಲ್ಲಿ ತುಂಬಿಕೊಳ್ಳದ ಕನ್ನಡಿಗನ ಎದೆಯಲ್ಲಿ ಸಂಗೀತವೇ ಇಲ್ಲ! ಆಶ್ವೀಜ ಶುಕ್ಲ ದಶಮಿ ಗುರುವಾರ (ಅ. 9) ಮೈಸೂರು ಸಂಗೀತದ ದೊರೆಯ ಹುಟ್ಟಿದಹಬ್ಬ. ತನ್ನಿಮಿತ್ತ ಸ್ವಾಮಿನಮನ - ದಟ್ಸ್ ಕನ್ನಡ.

ಲೇಖನ : ಸಂಧ್ಯಾ ರವೀಂದ್ರನಾಥ್, ಬೇ ಏರಿಯಾ

ನಾವು ಆಗ ಕೆನಡಾದಲ್ಲಿ ಇದ್ದೆವು. 1980ನೇ ಇಸವಿ ಇರಬೇಕು. ಇಂದಿನಂತೆ ಇಂಟರ್ನೆಟ್ ಇರಲಿಲ್ಲ. ಕನ್ನಡದ ಹಾಡುಗಳು ಬೇಕೆಂದರೆ ಕರ್ನಾಟಕಕ್ಕೇ ಹೋಗಬೇಕಿತ್ತು. ಆ ಸಮಯದಲ್ಲಿ ಬೆಂಗಳೂರಿನಿಂದ ಅಮ್ಮ ಕಳಿಸಿದ ತಿಂಡಿ ಪ್ಯಾಕೆಟ್ ಜೊತೆ ಒಂದು ಧ್ವನಿಸುರುಳಿಯೂ ಬಂತು. ಕನ್ನಡ ಸುಗಮ ಸಂಗೀತದ ಮೊಟ್ಟ ಮೊದಲ ಧ್ವನಿಸುರುಳಿ, ನಿತ್ಯೋತ್ಸವ. ಈ ಹೊಸ ಮಾಧ್ಯಮ ನಮ್ಮಂತಹ ಹೊರನಾಡ ಕನ್ನಡಿಗರಿಗೆ ಎಂತಹ ಮಹತ್ತರವಾದ ಕೊಡುಗೆಯಾಯ್ತು ಎಂದು ಹೇಳುವುದಕ್ಕೆ ನನ್ನಲ್ಲಿ ಶಬ್ದಗಳಿಲ್ಲ. ಆ ಹಾಡುಗಳನ್ನು ಕೇಳುತ್ತಿದ್ದರೆ, ಕ್ಷಣಮಾತ್ರದಲ್ಲಿ ತಾಯ್ನಾಡಿಗೇ ಹೋಗಿ ಬಂದಷ್ಟು ಸಂತೋಷವಾಗುತ್ತಿತ್ತು!

ನಿತ್ಯೋತ್ಸವದಿಂದ ಪರಿಚಿತರಾಗಿ ತಮ್ಮ ಸಿರಿಕಂಠದಿಂದ, ಅಸಾಮಾನ್ಯ ಸಂಗೀತ ರಚನೆಗಳಿಂದ ನಮ್ಮನ್ನು ಸೆಳೆದು ನಮಗೆ ಅತ್ಯಂತ ಪ್ರೀತಿಪಾತ್ರರಾದ ಶ್ರೀಯುತ ಮೈಸೂರು ಅನಂತಸ್ವಾಮಿಯವರನ್ನು ನಾವು ಭೇಟಿಯಾಗಿದ್ದು 1988ರಲ್ಲಿ. ತಮ್ಮ ಮಕ್ಕಳಾದ ಸುನೀತ ಮತ್ತು ರಾಜು ಅವರೊಡನೆ ಅಮೇರಿಕದಾದ್ಯಂತ ಸುಗಮ ಸಂಗೀತ ಕಚೇರಿ ನಡೆಸಲು ಬಂದಿದ್ದರು. ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ಅವರ ಕಾರ್ಯಕ್ರಮ ನಡೆದಾಗ ಸಭಾಮಂದಿರ ತುಂಬಿತ್ತು. ಇಲ್ಲಿ ಇಷ್ಟೊಂದು ಜನ ಕನ್ನಡಿಗರು ಇದ್ದಾರಾ? ಎಂದು ನಾವೇ ಅಚ್ಚರಿಪಟ್ಟಿದ್ದೆವು! ಅಂದು ಹಾಡುಹಕ್ಕಿ ಅನಂತಸ್ವಾಮಿ ಅವರು ಎಂದಿನಂತೆ ಎದೆ ತುಂಬಿ ಹಾಡಿದರು. ನಾವೆಲ್ಲ ಮನವಿಟ್ಟು ಕೇಳಿದೆವು. ನಮ್ಮಲ್ಲಿ ಬಹುಮಂದಿ ಅಂದು ಮೊಟ್ಟಮೊದಲ ಬಾರಿಗೆ ಅವರ ರಚನೆಗಳನ್ನು ಕೇಳುತ್ತಿದ್ದೆವು. ಮೈಎಲ್ಲ ಕಿವಿಯಾಗಿ ಕೇಳಿದೆವು. ಪುಳಕಿತರಾದೆವು. ಮಂತ್ರಮುಗ್ಧರಾದೆವು.

ಹೆಸರಾಂತ ಕವಿಗಳ ಕವನಗಳು ಜನಮನವನ್ನು ತಲುಪಲು ಅನಂತಸ್ವಾಮಿಯವರು ಮುಖ್ಯ ಕಾರಣರೆಂದರೆ ತಪ್ಪಾಗಲಾಗದು. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಪದ್ಯ ಪ್ರಾಯಶಃ ನಾನು 6ನೇ ತರಗತಿಯಲ್ಲಿ ಓದಿದ್ದು. ಮತ್ತೆ ಅದನ್ನು ಕೇಳಿದ್ದು ಅನಂತಸ್ವಾಮಿಯವರ ಗಾಯನದಲ್ಲೇ. ಈಗಲೂ ಮಂಕುತಿಮ್ಮನ ಕಗ್ಗ ಓದುತ್ತಿದ್ದರೆ ಈ ಪದ್ಯವನ್ನು ಓದುವಾಗ ಅನಂತಸ್ವಾಮಿಯವರು ಹಾಕಿರುವ ರಾಗವೇ ತಾನೇತಾನಾಗಿ ಬಂದುಬಿಡುತ್ತದೆ. ಕನ್ನಡ ಪುಸ್ತಕವನ್ನು ಬೀರುವಿನಿಂದ ತೆಗೆದು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ, ರಾಗ ಹಾಕಿ ಇವರು ಹಾಡಿರುವ ಹಿರಿಯ ಕವಿಗಳ ಕವಿತೆಗಳು ಜನರ ಹೃದಯದಲ್ಲಿ ಶಾಶ್ವತವಾಗಿ ನಿಂತಿವೆ. ಗಾನಕೋಗಿಲೆಯಾಗಿ ಇವರು ಈ ಕವನಗಳಿಗೆ ರಾಗ ಸಂಯೋಜಿಸಿ, ನಾವು ಮರೆಯದಂತೆ ಹಾಡಿನಲ್ಲಿ ಹಿಡಿದಿಟ್ಟಿದ್ದಾರೆ.

ಭಾವಕ್ಕೆ ತಕ್ಕ ರಾಗ : ನಿತ್ಯೋತ್ಸವ ಗೀತೆಯನ್ನೇ ತೆಗೆದುಕೊಳ್ಳಿ. ಅನಂತಸ್ವಾಮಿ ಅವರ ಸಂಗೀತ ಮತ್ತು ನಿಸಾರ್ ಅಹಮದ್ ಅವರ ಸಾಹಿತ್ಯದ ಈ ಗೀತೆ ಎಷ್ಟು ಜನಪ್ರಿಯವಾಗಿದೆ ಎಂದರೆ, ಎಲ್ಲರಿಗೂ ಬಾಯಿಪಾಠವಾಗಿದೆ. ಈ ಹಾಡನ್ನು ಶುರುಮಾಡಿದೊಡನೆ ಎಲ್ಲರೂ ಧ್ವನಿಗೂಡಿಸುತ್ತಾರೆ. ಇದು ಒಂದು ರೀತಿಯಲ್ಲಿ ನಾಡಗೀತೆಯಾಗಿ ಮಾರ್ಪಾಡಾಗಿದೆ. ಈ ರೀತಿ ಅನಂತಸ್ವಾಮಿಯವರು ಅಜರಾಮರಗೊಳಿಸಿರುವ ಕವಿತೆಗಳ ದೊಡ್ಡ ಪಟ್ಟಿಯೇ ಇದೆ. ಕುವೆಂಪು, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ, ನಿಸಾರ್ ಅಹಮದ್, ಲಕ್ಷ್ಮೀನಾರಾಯಣ ಭಟ್ಟ, ವೆಂಕಟೇಶಮೂರ್ತಿ ಮುಂತಾದವರ ಕವಿತೆಗಳಿಗೆ ಭಾವಕ್ಕೆ ತಕ್ಕ ರಾಗ ಜೋಡಿಸಿ, ಆ ಗೀತೆಗಳನ್ನು ಅವಕಾಶ ಸಿಕ್ಕಾಗಲೆಲ್ಲ ಗಣೇಶನ ಉತ್ಸವವಿರಲಿ, ಮದುವೆಮನೆ, ಶಾಲಾ ಕಾಲೇಜು ದಿನಾಚರಣೆ- ಎಲ್ಲೇ ಆಗಲಿ, ಹಾಡಿ, ಹೆಸರುವಾಸಿಗೊಳಿಸಿರುವ ಖ್ಯಾತಿ ಅನಂತಸ್ವಾಮಿಯವರದ್ದು.

ಪದಗಳ ಅರ್ಥಕ್ಕೆ ತಕ್ಕ, ಭಾವಕ್ಕೆ ತಕ್ಕ ರಾಗದಿಂದಲೇ ಆ ಸಂಗೀತ ಜನರ ಮನಸ್ಸಿಗೆ ಸರಾಗವಾಗಿ ತಲುಪಿದ್ದು. ಅದು ಸರಳವಾದ ಸಾಹಿತ್ಯವಾಗಲಿ, ಅಥವಾ ಸುಲಭವಾಗಿ ಅರ್ಥವಾಗದ ವೇದಾಂತದಿಂದಾಯ್ದಂತಹ ಪದಪುಂಜವಾಗಲಿ, ಉದ್ದುದ್ದನೆಯ ಪದಗುಚ್ಛದಲ್ಲಿ ಬರೆದಿಟ್ಟ ರಾಜಕೀಯ ವಿಡಂಬನೆಯಾಗಲೀ, ಅನಂತಸ್ವಾಮಿಯವರ ಕೈಯಲ್ಲಿ ಅದು ಇಂಪಾದ ಹಾಡಾಗಿಬಿಡುತ್ತಿತ್ತು. ಇದೇ ಸುಗಮ ಸಂಗೀತದ ಅಭಿವೃದ್ಧಿಗೆ ಬುನಾದಿಯಾಗಿದ್ದು. ಈ ಅಸಾಧ್ಯವಾದ ಕೆಲಸವನ್ನು ಮಾಡಿ ಅವರು ಸುಗಮ ಸಂಗೀತದ ಹರಿಕಾರರಾದರು. ಓ ನನ್ನ ಚೇತನ, ಎಲ್ಲ ಮರೆತಿರುವಾಗ, ಬೆಣ್ಣೆ ಕದ್ದ, ಓಂ ಸಚ್ಚಿದಾನಂದ ತ್ರಿತ್ವರೂಪವಾದ ಪರಬ್ರಹ್ಮನಲ್ಲಿ, ಕುರಿಗಳು ಸಾರ್, ಜಯ ಭಾರತ ಜನನಿಯ ತನುಜಾತೆ, ಜಯ ಕರ್ನಾಟಕ, ಮತ್ತದೇ ಬೇಸರ, ಯಾವ ಮೋಹನ ಮುರಳಿ, ದೀಪ ಹಚ್ಚಿ, ಎಲ್ಲ ಮರೆತಿರುವಾಗ, ಒಂದೊಂದೂ ಸಂಗೀತ ಸಾಗರದ ಆಣಿಮುತ್ತುಗಳು. ಭಾವದಲೆಗಳ ಮಹಾಪೂರವನ್ನೇ ಎಬ್ಬಿಸುವ ಅಪೂರ್ವವಾದ ಕಲಾತ್ಮಕ ರಚನೆಗಳು.

ಅವರು ಭಾವೋಚಿತವಾಗಿ ರಾಗ ಸಂಯೋಜಿಸುವುದರ ಜೊತೆಗೆ, ಮ್ಯಾಂಡೊಲಿನ್, ತಬಲ, ಕೊಳಲು, ಹಾರ್ಮೋನಿಯಂ ಮುಂತಾದ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ತಮ್ಮದೇ ಆದ ಕವಿತೆಗಳನ್ನು ರಚಿಸುವ ಶಕ್ತಿಯೂ ಇತ್ತು. ನಮ್ಮೂರ ವೈಭವ ಏನ್ ಹೇಳ್ಲಣ್ಣ, ಸ್ಟ್ರೈಕ್, ಸ್ಟ್ರೈಕ್, ಸ್ಟ್ರೈಕ್ ಮುಂತಾದ ಗೀತೆಗಳನ್ನು ತಾವೇ ಬರೆದು, ಸಂಗೀತ ಸಂಯೋಜಿಸಿ, ಹಾಡುತ್ತಿದ್ದ ಇವರು ನಿಜವಾಗಿಯೂ ಅಕ್ಷರಶಃ ಸಂಗೀತ ಸಂಯೋಜಕ ಮತ್ತು ಹುಟ್ಟು ಕಲಾವಿದ. ತಾವು ಹಾಡುತ್ತಿದ್ದ ಕವಿಗಳಿಗೆಲ್ಲರನ್ನು ಕುರಿತು ಓ ಕನ್ನಡದ ಕವಿಗಳೇ, ರಸ ಋಷಿಗಳೆ, ತಲೆಬಾಗಿ ನಮಿಪೆ ಎಂದು ಬರೆದು ನಮನ ಸಲ್ಲಿಸಿದ್ದಾರೆ ಈ ಸುಗಮ ಸಂಗೀತದ ದೊರೆ.

ಸಿನೆಮಾದಲ್ಲಿ ಏನಿದೆ? : ಅಂದಹಾಗೆ ಇವರನ್ನು ಮನೆಯಲ್ಲಿ ದೊರೆ ಎಂದು ಕರೆಯುತ್ತಿದ್ದರು. ಹೆಸರಿಗೆ ತಕ್ಕಂತೆ ಇವರು ಸುಗಮ ಸಂಗೀತದ ದೊರೆಯಾದರು. ಅನಂತಸ್ವಾಮಿಯವರು ಹುಟ್ಟಿದ್ದು ಸಂಗೀತದ ಮನೆತನದಲ್ಲಿ. ಇವರ ತಾತ ತಾಳ ಬ್ರಹ್ಮ ಎಂದು ಹೆಸರುವಾಸಿಯಾಗಿದ್ದ ಆಸ್ಥಾನ ವಿದ್ವಾನ್ ಚಿಕ್ಕ ರಾಮರಾಯರು. ಸಂಗೀತದ ಒಲವು ಜಾಸ್ತಿಯಾಗಿ, ಅನಂತಸ್ವಾಮಿಯವರಿಗೆ ಓದಲು ಆಸಕ್ತಿ ಇಲ್ಲವಾಗಿ ಇಂಟರ್‌ಮೀಡಿಯೇಟ್ ನಪಾಸಾದರಂತೆ!ಓದುವುದನ್ನು ಬಿಟ್ಟು ಸಿನೆಮಾ ಹುಚ್ಚು ಹಿಡಿದು ಮದ್ರಾಸಿಗೆ ಓಡಿ ಹೋಗಿದ್ದರಂತೆ. ಕಾಳಿಂಗರಾಯರ ಪರಿಚಯವಾಗಿ ಅವರ ಕೆಲವು ಸಿನೆಮಾ ಗೀತೆಗಳಿಗೆ ಮ್ಯಾಂಡೋಲಿನ್ ನುಡಿಸಿದ್ದರಂತೆ. ಅನಂತಸ್ವಾಮಿಯವರೇ ರಾಗ ಹಾಕಿಕೊಟ್ಟ ಇಳಿದು ಬಾ ತಾಯಿ ಗೀತೆಯನ್ನು ರಾಯರು ಹಾಡಿ, ಸಂತೋಷ್ ಪಟ್ಟು, ಬೆನ್ನು ತಟ್ಟಿದರಂತೆ. ಹಾಗೂ ಅದೇ ರಾಗದಲ್ಲಿ ಆ ಗೀತೆಯನ್ನು ಹಾಡಿ ಜನಪ್ರಿಯಗೊಳಿಸಿದರು. ಮುಂದೆ ಅವರೇ 'ಈ ಸಿನಿಮಾರಂಗದಲ್ಲಿ ಏನಿದೆ? ನೀನು ಕರ್ನಾಟಕಕ್ಕೆ ತೆರಳಿ ನಿನ್ನದೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊ. ಜೀವನ ಹೇಗೋ ಸಾಗುತ್ತದೆ' ಎಂದು ಸಲಹೆ ನೀಡಿ ಅನಂತಸ್ವಾಮಿಯವರು ಮತ್ತೆ ಕರ್ನಾಟಕಕ್ಕೆ ಹಿಂದಿರುಗುವಂತೆ ಮಾಡಿದರು.

ಸುಗಮ ಸಂಗೀತಕ್ಕೆ ಅನಂತಸ್ವಾಮಿಯವರ ಕೊಡುಗೆ ಅಪಾರ. ನಿಷ್ಠಾವಂತ ಸಾಧಕರಾಗಿ ಅದಕ್ಕೆ ಒಂದು ಗಟ್ಟಿಯಾದ ನೆಲೆ ಸಿಗುವಂತೆ ಮಾಡಿದವರಲ್ಲಿ ಇವರು ಅಗ್ರಗಣ್ಯರು. ಕರ್ನಾಟಕ ಸಂಗೀತ ಇಲ್ಲದಿದ್ದರೆ ಹಿಂದಿ ಸಿನಿಮಾ ಹಾಡುಗಳು ಮಾತ್ರ ಜನಪ್ರಿಯವಾಗಿದ್ದ ಆ ಕಾಲದಲ್ಲಿ ಜನತೆಯ ಅಭಿರುಚಿಯನ್ನು ಕನ್ನಡದ ಸುಗಮ ಸಂಗೀತದತ್ತ ಸೆಳೆಯುವುದರಲ್ಲಿ ಯಶಸ್ವಿಯಾದರು. ನಿತ್ಯೋತ್ಸವದಿಂದ ಪ್ರಾರಂಭಿಸಿ ಸುಗಮ ಸಂಗೀತವು ಧ್ವನಿಸುರುಳಿ ಮಾಧ್ಯಮದಲ್ಲಿ ಎಲ್ಲೆಡೆ ಸುಲಭವಾಗಿ ಸಿಗುವಂತೆ ಮಾಡಿದರು. ದೇಶದಾದ್ಯಂತ ಸುಗಮ ಸಂಗೀತದ ಕಚೇರಿ ನಡೆಸಿ, ಅದರ ಜನಪ್ರಿಯತೆಗೆ ಕಾರಣರಾದರು. ಮೊಟ್ಟ ಮೊದಲ ಬಾರಿಗೆ ಹೊರದೇಶದಲ್ಲಿ ಸುಗಮ ಸಂಗೀತ ಕಚೇರಿ ನಡೆಸಿದ ಖ್ಯಾತಿ ಅನಂತಸ್ವಾಮಿಯವರದ್ದು. ತಮ್ಮ ಮಕ್ಕಳಾದ ಸುನೀತ, ಅನೀತ, ರಾಜು ಮತ್ತು ಅಪಾರ ಶಿಷ್ಯವೃಂದಕ್ಕೆ ಪ್ರೀತಿಯಿಂದ ಸಂಗೀತವನ್ನು ಕಲಿಸಿ, ಅದನ್ನು ಮುನ್ನಡೆಸುವಂತೆ ಉತ್ತೇಜಿಸಿದರು.

ಮೌನವಾದ ಹಾಡುಹಕ್ಕಿ : ಹಾಡು ಹಕ್ಕಿ, ಗಾನ ಕೋಗಿಲೆ, ಸುಗಮ ಸಂಗೀತದ ಹರಿಕಾರ, ಸುಗಮ ಸಂಗೀತದ ದೊರೆ ಇವೇ ಮುಂತಾದ ಹೆಸರಿಂದ ಖ್ಯಾತರಾದ ಮೈಸೂರು ಅನಂತಸ್ವಾಮಿ ಅವರು ಜನವರಿ 9, 1995ರಂದು ನಿಶ್ಶಬ್ಧರಾದರು. ಗಂಟಲಿನ ಕ್ಯಾನ್ಸರಿನಿಂದಾಗಿ ಮಾತನಾಡುವುದೂ ಕಷ್ಟವಾಯಿತು. ಸನ್ನೆ ಮಾತು ಮತ್ತು ಹಾಳೆಯಲ್ಲಿ ಬರೆದು ತೋರಿಸುತ್ತಿದ್ದರು. ಆ ಕೊನೆಯ ದಿನಗಳಲ್ಲಿ ಕೆಲವು ಕ್ಷಣಗಳನ್ನು ಅವರೊಂದಿಗೆ ಕಳೆಯುವ ಯೋಗ ನನ್ನವರಾದ ರವಿ ರವೀಂದ್ರನಾಥ್‌ಗೆ ಒದಗಿಬಂದಿತ್ತು. ಅವರು ಅನಂತಸ್ವಾಮಿಗೆ ಹೇಳಿದ ಮಾತು: 'ನೀವು ಇನ್ನು ಹಾಡಲಾಗದಿದ್ದರೇನು - ನಿಮ್ಮ ಹಾಡುಗಳನ್ನು ದೇಶ ವಿದೇಶಗಳಲ್ಲಿ ಅಭಿಮಾನಿಗಳು ಹಾಡುತ್ತಿದ್ದಾರೆ, ಹಾಡುತ್ತಲೇ ಇರುತ್ತಾರೆ'.

ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ ಎಂದು ಹಾಡುತ್ತಿದ್ದ ಈ ಶ್ರೇಷ್ಠ ಕಲಾವಿದರು ನಮ್ಮೆಲ್ಲರ ಹೃದಯದಲ್ಲಿ ಸ್ಥಿರವಾದ ಹಾಗೂ ವಿಶೇಷವಾದ ಸ್ಥಾನ ಗಳಿಸಿದ್ದಾರೆ. ಮನೆಯನೆಂದು ಕಟ್ಟದಿರು, ಕೊನೆಯನೆಂತು ಮುಟ್ಟದಿರು, ನೀ ಅನಂತವಾಗಿರು ಎನ್ನುವ ಕವಿವಾಣಿಯಂತೆ ತಮ್ಮ ಸೃಜನಶೀಲ ಸಂಗೀತದ ಮೂಲಕ ಅನಂತಸ್ವಾಮಿಯವರು ಎಲ್ಲರ ಮನಮುಟ್ಟಿ ಅನಂತವಾಗಿದ್ದಾರೆ.

ಅವರ ಜನ್ಮದಿನ ವಿಜಯದಶಮಿಯಂದು ಎಂದು ಮೊನ್ನೆ ಅವರ ಮಗಳಾದ ಸುನೀತಳಿಂದ ತಿಳಿಯಿತು. ಅವರು ಇದ್ದಿದ್ದರೆ 72 ವರ್ಷ ತುಂಬಿರುತ್ತಿತ್ತಂತೆ. ಆ ಸಂದರ್ಭದಲ್ಲಿ ಅವರಿಗೆ ಶ್ರದ್ದಾಪೂರ್ವಕ ಅಕ್ಷರ ನಮನ. ದೇವರು ಅನಂತಸ್ವಾಮಿಯವರ ಪತ್ನಿ ಶಾಂತ, ಮತ್ತು ಮಕ್ಕಳಾದ ಸವಿತ, ಸುನೀತ, ರಾಜು, ಅನಿತಾ, ಮತ್ತು ಅವರ ಕುಟುಂಬದವರಿಗೆ ಒಳ್ಳೆಯದು ಮಾಡಲಿ.

ಮೈಸೂರು ಅನಂತಸ್ವಾಮಿ ಹಾಡಿರುವ ಹಾಡು ಕೇಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+