ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೋಗಿಲೆ ಈಗಿಲ್ಲ, ಆದರೆ ಅದರ ಹಾಡಿಗೆ ಸಾವಿಲ್ಲ’

By Staff
|
Google Oneindia Kannada News


ಮೈಸೂರು ಅನಂತಸ್ವಾಮಿಯವರು ನಮ್ಮನ್ನಗಲಿ (ಜನವರಿ.9) ಹನ್ನೆರಡು ವರ್ಷಗಳಾದವು. ಈ ಸಂದರ್ಭದಲ್ಲೊಂದು ಸ್ಮರಣೆ... ಅಕ್ಷರ ನಮಸ್ಕಾರ...

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
    ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
    [email protected]
A tribute to Mysore Anatha Swamy on his death anniversaryತನುವು ನಿನ್ನದು.. ಮನವು ನಿನ್ನದು, ಎದೆ ತುಂಬಿ ಹಾಡಿದೆನು, ಮತ್ತದೇ ಬೇಸರ, ಕುರಿಗಳು ಸಾರ್‌ ಕುರಿಗಳು, ಜಯ ಕರ್ನಾಟಕ ಮಾತೆ, ನಂ ತಿಪ್ಪಾರಳ್ಳಿ ಬಲು ದೂರ, ಮಡಿಕೇರಿ ಮಂಜು.... ಇವೆಲ್ಲವೂ ಒಂದು ಕಾಲಕ್ಕೆ ಕನ್ನಡ ರಸಿಕರ ಹೃದಯಕ್ಕೆ ಲಗ್ಗೆ ಹಾಕಿದ ಗೀತೆಗಳು. ಕೇಳುವ ಮನಸ್ಸಿಗಳಿದ್ದರೆ ಆಗಲೂ ಈಗಲೂ ಲಗ್ಗೆಯೇ. ಸಾಂಸ್ಕೃತಿಕ , ಸಂಗೀತ ವೇದಿಕೆಗಳಲ್ಲಿ ಯಾವತ್ತಿನಿಂದಲೂ ಅಷ್ಟೇ ಬೇಡಿಕೆ ಉಳಿಸಿಕೊಂಡಿರುವ ಗೀತೆಪುಷ್ಪಗಳನ್ನು ಕೊಟ್ಟವರು ಅನಂತಸ್ವಾಮಿ.

ತಮ್ಮ ಹಾಡು, ಸಂಗೀತ ಸಂಯೋಜನೆಗಳ ಮೂಲಕ ಕನ್ನಡಿಗರ ಮನೆ, ಮನಸ್ಸುಗಳಲ್ಲಿ ಶಾಶ್ವತ ಸ್ಥಾನಗಳಿಸಿಕೊಂಡಿರುವ ಮೈಸೂರು ಅನಂತಸ್ವಾಮಿಯವರು ನಮ್ಮನ್ನಗಲಿ (ಜನವರಿ.9) ಹನ್ನೆರಡು ವರ್ಷಗಳಾದವು. ಈ ಸಂದರ್ಭದಲ್ಲಿ, ತಮ್ಮ ಹಾಡುಗಳನ್ನು ಕನ್ನಡ ಭಾವಗೀತಾ ಪ್ರಪಂಚದ ಅಮೂಲ್ಯ ಆಸ್ತಿಯಾಗಿ ಉಳಿಸಿಹೋಗಿರುವ ಅಪರೂಪದ ಗಾಯಕನನ್ನು ಸ್ಮರಿಸಬೇಕಾಗಿದ್ದು ಕನ್ನಡಿಗರೆಲ್ಲರ ಕರ್ತವ್ಯವಾಗಿದೆ.

ಕವಿಯಾಬ್ಬ ತನ್ನ ಕಾವ್ಯದಲ್ಲಿ ಕಡೆದಿಟ್ಟ ಭಾವನೆಗಳನ್ನು ತನ್ನ ಗಾಯನದ ಮೂಲಕ ಜನರ ಮನೆ ಬಾಗಿಲಿಗೆ ಹೊತ್ತು ತಲುಪಿಸುವ ಕೆಲಸ ಗಾಯಕನದು. ಆತ ಹೂವಿನ ಸುಗಂಧವನ್ನು ಹೊತ್ತು ಎಲ್ಲೆಡೆ ಪಸರಿಸುವ ತಂಗಾಳಿಯಂತೆ! ‘‘ಹಾಡು ಕಟ್ಟುವವನದಲ್ಲ ಹಾಡು,ಹಾಡುವವನದು’’ ಎಂಬ ಕವಿವಾಣಿಯನ್ನು ಅಕ್ಷರಶಃ ನಿಜವಾಗಿಸಿದವರು ಮೈಸೂರು ಅನಂತಸ್ವಾಮಿ. ಅವರ ಸುಮಧುರ ಕಂಠದ ಮೂಲಕ ಕನ್ನಡ ಕವಿತೆಗಳು ಜನಜನಿತವಾದವು. ಕವಿಯ ಕಾವ್ಯ ಮನೆಮಾತಾಗಿ ಹೋಯಿತು. ಕವಿತೆಯನ್ನು ಓದುವುದಕ್ಕಿಂತ ಅದನ್ನು ಸಂಗೀತದೊಂದಿಗೆ ಕೇಳಿದಾಗ ಅದು ಬೀರುವ ಪರಿಣಾಮ ಹೆಚ್ಚಿನದು. ಕವಿ ಯಾರೆಂದು ತಿಳಿಯದಿದ್ದರೂ ಕವಿತೆಗಳು ಜನರ ಬಾಯಲ್ಲಿ ನಲಿದಾಡಿದ್ದು ಹೀಗೆ.

ಹಿಂದಿ, ಉರ್ದು ಭಾಷೆಗಳಲ್ಲಿ ಗಜಲುಗಳಿರುವಂತೆಯೇ ಸುಗಮ ಸಂಗೀತ ಕನ್ನಡದ ವೈಶಿಷ್ಟ್ಯ. ಬೇರಾವ ಭಾಷೆಯಲ್ಲೂ ಕಾಣ ಸಿಗದ ಇಂತಹದೊಂದು ಸುಂದರ ಸಂಗೀತ ವಿಭಾಗವನ್ನು ಕಟ್ಟಿ ಬೆಳೆಸಿದ ಹಿರಿಮೆ ನಮ್ಮ ಕನ್ನಡ ಗಾಯಕರದು. ಕನ್ನಡದಲ್ಲಿ, ಮೊಟ್ಟಮೊದಲಿಗೆ ಪ್ರಖ್ಯಾತ ಕವಿಗಳ ಕವನಗಳಿಗೆ ಸಂಗೀತ ಸಂಯೋಜಿಸಿ, ಹಾಡುವ ಪರಂಪರೆಯನ್ನು ಬೆಳೆಸಿದ ಕೀರ್ತಿ ದಿವಂಗತ ಪಿ.ಕಾಳಿಂಗರಾಯರದು. ನಂತರ ಮೈಸೂರು ಅನಂತಸ್ವಾಮಿಯವರ ಕಾಲದಲ್ಲಿ ಸುಗಮ ಸಂಗೀತ ಅತ್ಯುನ್ನತ ಸ್ಥಾನವನ್ನೇ ಪಡೆಯಿತು . ಈಗಲೂ ಅನೇಕ ಗಾಯಕ-ಗಾಯಕಿಯರು ತಮ್ಮ ಗಾಯನದಿಂದ ಈ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾರೆ.

‘’ - ಇದು ಕವಿ ಎಚ್‌.ಎಸ್‌.ವೆಂಕಟೇಶ ಮೂರ್ತಿಯವರು ಅನಂತಸ್ವಾಮಿಯವರನ್ನು ಕುರಿತು ಬರೆದಿರುವ ಆತ್ಮೀಯ ಸಾಲು. ಕವಿ ಲಕ್ಷ್ಮೀನಾರಾಯಣ ಭಟ್ಟರು ವಾರಾನ್ನಗಳ ಮೂಲಕ ಬದುಕುತ್ತಿದ್ದ ತಮ್ಮ ವಿದ್ಯಾರ್ಥಿ ಜೀವನದ ಅನುಭವವನ್ನು ಮೆಲುಕು ಹಾಕುತ್ತಾ ಒಂದೆಡೆ, ‘‘ಮೈಸೂರು ಅನಂತಸ್ವಾಮಿಯವರ ಹಾಡುಗಳನ್ನು ಕೇಳುತ್ತಾ ಹೊತ್ತು ಹೋಗಿದ್ದು ಕೂಡ ತಿಳಿಯದೆ ಅಂದು ರಾತ್ರಿ ಊಟವನ್ನು ತಪ್ಪಿಸಿಕೊಳ್ಳುತ್ತಿದ್ದೆ’’ ಎಂದು ಭಾವುಕರಾಗಿ ಬರೆದಿದ್ದಾರೆ.

‘‘ಕಾಳಿಂಗರಾಯರನ್ನು ಬಿಟ್ಟರೆ ನಾನು ನೋಡಿದ ಮತ್ತೊಬ್ಬ ಪ್ರತಿಭಾವಂತ ಗಾಯಕ ಮೈಸೂರು ಅನಂತಸ್ವಾಮಿ’’ ಎಂದು ಇತ್ತೀಚೆಗೆ ‘‘ಸಂಪದ’’ ಅಂತರ್ಜಾಲ ತಾಣ ನಡೆಸಿದ ಸಂದರ್ಶನದಲ್ಲಿ ಕವಿ ನಿಸಾರ್‌ ಅಹಮದ್‌ ಅನಂತಸ್ವಾಮಿಯವರನ್ನು ಕುರಿತು ಅಭಿಮಾನದ ಮಾತುಗಳನ್ನಾಡಿದ್ದಾರೆ.

ನಾಡು ಕಂಡ ಹೆಮ್ಮೆಯ ಗಾಯಕ ಮೈಸೂರು ಅನಂತಸ್ವಾಮಿಯವರಿಗೆ, ಎಲ್ಲಾ ಸುಗಮ ಸಂಗೀತ ಅಭಿಮಾನಿಗಳ ಪರವಾಗಿ ಈ ಪುಟ್ಟ ಬರಹದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ನಾನು ದೂರದಲ್ಲೆಲ್ಲೋ ಕುಳಿತು ಅವರ ಹಾಡುಗಳನ್ನು ಕೇಳುತ್ತಿದ್ದೇನೆ. ಈ ಸಂದರ್ಭದಲ್ಲಿ, ಕರ್ನಾಟಕ ಸರಕಾರ, ಸಾರ್ವಜನಿಕ ಸಂಘ,ಸಂಸ್ಥೆಗಳು ಎದೆ ತುಂಬಿ ಹಾಡಿದ ಈ ಹಾಡುಹಕ್ಕಿಯನ್ನು ನೆನಪು ಮಾಡಿಕೊಂಡವೋ ಇಲ್ಲವೋ ತಿಳಿಯಲಿಲ್ಲ. ಹಾಗೇನಾದರೂ ಅಂತಹ ಕಾರ್ಯಕ್ರಮಗಳು ನಡೆದಿದ್ದರೆ ಬಹಳ ಸಂತೋಷ. ನಡೆಯದಿದ್ದರೂ ಆಶ್ಚರ್ಯವೇನಿಲ್ಲ. ನೋಡಿ ಸ್ವಾಮಿ, ನಾವಿರೋದೇ ಹೀಗೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X