ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಕೋಗಿಲೆ ಕಾಳಿಂಗರಾವ್‌!

By Staff
|
Google Oneindia Kannada News


ಕನ್ನಡ ಕವಿಗಳ ಕವನಗಳಿಗೆ ಜೀವ ತುಂಬಿದ ಮಾಂತ್ರಿಕ ಪಿ.ಕಾಳಿಂಗರಾವ್‌. ಅವರ ಕಂಠದಿಂದ ದಾಸರ ಪದ ಮತ್ತು ಜನಪದ ಗೀತೆಗಳು, ಭಾವಗೀತೆಗಳು ಹೆಚ್ಚಿನ ಮಾಧುರ್ಯ ಪಡೆದವು ಎಂದರೆ ಅತಿಶಯವೇನಿಲ್ಲ. ಅವರ ಶ್ರೀಮಂತ ಕಂಠ ಆಲಿಸಿ, ಸುಖಿಸದ ಮನಸ್ಸುಗಳೇ ವಿರಳ.

Vani Ramdasಮಾನವನ ಯಾವುದೇ ಭಾವನೆಗಳಿಗೆ ಚೌಕಟ್ಟುಗಳ ಸೀಮಿತವಿಲ್ಲ. ಕೆಲವೊಮ್ಮೆ ದೃಶ್ಯ ಒಂದೇ ಆದರೂ ಪ್ರತಿಯೋರ್ವರ ಭಾವಸ್ಪಂದನ ಬೇರೆ ಬೇರೆ. ಕಾವ್ಯದ ಸ್ವಭಾವವೇ ಹಾಗೆ. ಕವನ ಮನದ ಭಾವನೆ, ಆಸೆ, ಆಕಾಂಕ್ಷೆ, ತವಕ, ತಲ್ಲಣಗಳನ್ನು ಬಯಲುಗೊಳಿಸುತ್ತದೆ. ಮಾತು-ಮೌನಗಳ ನಡುವಣ ಸೂಕ್ಷ್ಮ ಅವಿನಾಭಾವ ಸಂಬಂಧವನ್ನು ಅನಾವರಣಗೊಳಿಸುತ್ತದೆ.

ಸಿಂಗಪುರದ ಮಳೆ ಬಹಳ ಜೋರು, ಜೊತೆಗೆ ಮಿಂಚು, ಗುಡುಗುಗಳ ಆರ್ಭಟ. ಮಳೆ ನಿಂತ ಮೇಲೆ ಪ್ರಕೃತಿಯ ಸೊಬಗು ನೋಡಲು ಎರಡು ಕಣ್ಣು ಸಾಲದು. ಟಪ..ಟಪಕ್ಕೆಂದು ಗಿಡ ಮರಗಳಿಂದ ಬೀಳುವ ಮುತ್ತಿನ ಹನಿಗಳು, ಬೀಸುವ ತಂಗಾಳಿ, ಕಣ್ಣಾಡಿಸಿದಲ್ಲೆಲ್ಲಾ ಹಸಿರು ಸೀರೆಯನುಟ್ಟ ವನಸಿರಿ ಎಂತಹ ಅರಸಿಕನ ಮನದಲ್ಲೂ ರಸಿಕತೆಯ ಭಾವ ತುಂಬುವ ಆಹ್ಲಾದಕರ ವಾತಾವರಣ. ಪ್ರಕೃತಿ ಸೌಂದರ್ಯ ಸವಿಯುತ್ತಾ ‘ಪ್ಲೀಸ್‌, ಯಾವುದಾದರೂ ಒಳ್ಳೇ ಹಾಡು ಹಾಕಿಪ್ಪಾ’ ಎಂದ ನನ್ನ ಕೋರಿಕೆಯನ್ನು ಮನ್ನಿಸಿ ಟೇಪ್‌ ಆನ್‌ ಮಾಡಿದರು ನನ್ನವರು. ಅಲೆಯಂತೆ ಉಲಿಯಿತು ಕಾಳಿಂಗರಾಯರ ಧ್ವನಿ ‘ಇಳಿದು ಬಾ ತಾಯಿ ಇಳಿದು ಬಾ..ಇಳಿದು ಬಾ ತಾಯಿ ಇಳಿದು ಬಾ.’

ಬೇಂದ್ರೆಯವರ ಸುಂದರ ರಚನೆಯಿದು. ರವಿ ಕಾಣದ್ದು ಕವಿ ಕಂಡ ಎನ್ನುವ ಮಾತು ಸತ್ಯ. ಕವಿಗಳ ಮನದ ಭಾವನಾ ಲೋಕಕ್ಕೆ ಸೀಮಿತವಿಲ್ಲ. ಅಲ್ಲಿ ಮೂಡುವ ಭಾವನೆಗಳಿಗೆ ಯಾವ ಅಡ್ಡಿ, ಆತಂಕಗಳಿಲ್ಲ.

ಕವಿ ಹೃದಯ ಮನ ಮುಟ್ಟಿದ ತಾಣ, ಸೌಂದರ್ಯ, ಪ್ರೇಮ, ಪ್ರೀತಿ, ಪರಿಸರ, ಬಾಂಧವ್ಯಗಳಲ್ಲಿ ವೀಣೆ ತಂತಿ ಮೀಟಿದ ಹಾಗೆ ಕವಿಯ ಮನದ ಭಾವನೆಗಳಲ್ಲಿ ಮಿಡಿದು ಪದ ರೂಪದಲಿ ಹೊರಹೊಮ್ಮುವುದು. ಇಂತಹ ಪದ ಮುತ್ತುಗಳೇ ಪದ್ಯ, ಕವಿಗಳ ಹೃದಯದಾಳದಿಂದ ಹೊಮ್ಮಿದ ಕವನ. ಅದು ಪದಗಳ ಭಂಡಾರ. ಈ ಪದ ಮುತ್ತುಗಳ ಭಂಡಾರವನ್ನು ನಮಗೆ ಉಡುಗೆಯಾಗಿ ನೀಡಿದವರು ನಮ್ಮ ಕವಿಗಳು.

ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳಾದ ಬಿ.ಎಂ.ಶ್ರೀ, ಡಿ.ವಿ.ಜಿ. ಕುವೆಂಪು, ಮಾಸ್ತಿ, ಬೇಂದ್ರೆ, ರಾಜರತ್ನಂ, ಕೆ.ಎಸ್‌.ನ, ಅಡಿಗರು, ನಿಸಾರ್‌, ಕಣವಿ, ಜಿ.ಎಸ್‌.ಎಸ್‌. ಮತ್ತು ಇನ್ನೂ ಅನೇಕರ ಕವನಗಳನ್ನು ಕೇಳುವುದೇ ಒಂದು ಸುಖ. ಕವಿಗಳ ಕವನದೊಳಗಿನ ಪದ ಭಂಡಾರ ಕೇವಲ ಸಾಹಿತ್ಯಾಸಕ್ತರಿಗೇ ಸೀಮಿತಗೊಂಡಿದ್ದ ಕಾಲವೊಂದಿತ್ತು. ಸೀಮಿತ ಪರಿಧಿಯೊಳಗೆ ಹುದುಗಿದ್ದ ನಿಧಿಯನ್ನು ನಾಡಿನ ಮೂಲೆ, ಮೂಲೆಗೂ ಹಂಚಿ ಜನಸಾಮಾನ್ಯನ ನಾಲಿಗೆಯಲ್ಲಿ ನಲಿದು-ಉಲಿಯುವಂತೆ ಮಾಡಿದ ಕೀರ್ತಿ ಸುಗಮ ಸಂಗೀತ ಕ್ಷೇತ್ರಕ್ಕೆ ಸಲ್ಲುತ್ತದೆ.

P. Kalinga Raoಇಂತಹ ಸತ್ಕಾರ್ಯಕ್ಕೆ ಅ.ನ.ಕೃ ಸ್ಪೂರ್ತಿ ನೀಡಿದರೆ, ತಮ್ಮ ಸಿರಿಕಂಠದ ಮೂಲಕ ಭದ್ರ ಬುನಾದಿ ಹಾಕಿದ ಕೀರ್ತಿ ಪಿ.ಕಾಳಿಂಗರಾಯರದ್ದು. ಮುಂದೆ ಇವರು ತೋರಿದ ಮಾರ್ಗದಲ್ಲಿ ಕನ್ನಡದ ಕಾವ್ಯದ ಕಂಪನ್ನು ನಾಡಿನ ಮೂಲೆ ಮೂಲೆಯಲ್ಲೂ ಪಸರಿಸಿದ/ಪಸರಿಸುತ್ತಿರುವ ಕೀರ್ತಿ -ಮೈಸೂರು ಅನಂತಸ್ವಾಮಿ, ರತ್ನಮಾಲಾ ಪ್ರಕಾಶ್‌, ಶಿವಮೊಗ್ಗ ಸುಬ್ಬಣ್ಣ, ಸಿ.ಅಶ್ವಥ್‌, ಎಂ.ಎಸ್‌. ಶೀಲ, ಮಾಲತಿ ಶರ್ಮ, ಎಚ್‌.ಕೆ.ನಾರಾಯಣ, ರಾಜು ಅನಂತಸ್ವಾಮಿ ಮತ್ತು ಇನ್ನೂ ಹಲವರಿಗೆ ಸಲ್ಲುತ್ತದೆ.

ಕಾಳಿಂಗರಾವ್‌ ಎಂದಾಕ್ಷಣ ನಾಲಿಗೆಯಲಿ ಮೊದಲು ಗುನುಗುವುದು ಬ್ರಹ್ಮ ನಿಂಗೆ ಜೋಡಿಸ್ತೀನಿ, ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಇಳಿದು ಬಾ ತಾಯಿ ಇಳಿದು ಬಾ, ಮೂಡಲ ಮನೆಯ, ಮೂಡಲ್‌ ಕುಣಿಗಳ್‌ ಕೆರೆ, ಎನ್ನ ಹೂ ಬಿಸಿಲ...

ಕಿತ್ತೂರು ಚೆನ್ನಮ್ಮ ಚಿತ್ರದ ತಾಯಿ ದೇವರನು ಕಾಣೆ ಹಂಬಲಿಸಿ ಮನ ಮಿಡಿಯುತ್ತದೆ. ತುಂಬಿದ ಕೊಡ ಚಿತ್ರದ ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ.. 8ರಿಂದ 80ರ ಹೆಣ್ಣಿನ ಕೆನ್ನೆಯನ್ನು ರಂಗೇರಿಸುತ್ತದೆ.

ಪಿ.ಕಾಳಿಂಗರಾವ್‌ ಎಂದೇ ಪ್ರಸಿದ್ಧಿ ಪಡೆದಿದ್ದ ಪಾಂಡೇಶ್ವರ ಕಾಳಿಂಗರಾಯರ ಜನನ 1914 ಆಗಸ್ಟ್‌ 31ರಂದು ಉಡುಪಿಯ ಆರೂರಿನಲ್ಲಿ. ತಂದೆ ನಾರಾಯಣರಾಯರು ಯಕ್ಷಗಾನದಲ್ಲಿ ಹೆಸರು ಮಾಡಿದವರು. ತಾಯಿ ನಾಗಮ್ಮ. ಬೆಳೆಯುವ ಪೈರು ಮೊಳಕೆಯಲ್ಲೆ ಎಂಬಂತೆ ಚಿಕ್ಕಂದಿನಿಂದಲೂ ಶ್ಲೋಕ, ಹಾಡು, ಭಜನೆ, ನಾಟಕ, ಸಂಗೀತ, ಯಕ್ಷಗಾನದಲ್ಲಿ ಬಹು ಆಸಕ್ತಿ. ಒಮ್ಮೆ ಶಾಲಾ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಆಗಮಿಸಿದ್ದ ಗೌನ್‌ ಸಾಹೇಬರಿಂದ ಪ್ರಶಸ್ತಿ ಪಡೆದ ಕಾಳಿಂಗರಾಯರ ಪ್ರತಿಭೆ ಕಂಡ ಮುಂಡಾಜೆ ರಂಗನಾಥಭಟ್ಟರು, ತಮ್ಮ ಅಂಬಾಪ್ರಸಾದ ಎಂಬ ನಾಟಕ ಮಂಡಳಿಗೆ ಅವರನ್ನು ಸೇರಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಪಳಗಿಸಿದರು. ಮುಂದೆ ಶ್ರೀಯುತ ರಾಮಚಂದ್ರ ಬುವಾ ಅವರು ಸಂಗೀತ ಕಲಿಸಿ ರಾಯರ ಪ್ರತಿಭೆಗೆ ಪುಷ್ಟಿಯನಿತ್ತರು. ಕರ್ನಾಟಕ ಸಂಗೀತವೇ ಅಲ್ಲದೆ ಆಗ್ರಾ ಘರಾನ ಹಿಂದೂಸ್ಥಾನಿ ಶೈಲಿಯಲ್ಲೂ ಕಾಳಿಂಗರಾಯರು ಪರಿಣತಿ ಪಡೆದರು.

ಇವರ ಕಂಠಸಿರಿಯ ಕೇಳಿ ಮನಸೋತ ರಾಜಾಜಿ ಮದರಾಸಿಗೆ ಆಹ್ವಾನವಿತ್ತರು. ಮದರಾಸಿನಲ್ಲಿ ಕಾಳಿಂಗರಾಯರಿಗೆ ಸಂಗೀತ ಶಾಲೆಯಲ್ಲಿ ಶಿಕ್ಷಕ ಕೆಲಸ ದೊರೆಯಿತು. ಮುಂದೆ ಅವರು ಅದೇ ಶಾಲೆಯಲ್ಲಿ ಪ್ರಾಂಶುಪಾಲರೂ ಆದರು.

ಹೆಸರೇ ಕಾಳಿಂಗ..ಜೊತೆಗೆ ಪ್ರತಿಭೆಯ ಆಗರ. ಇಂಪು ಕಂಠದ ಕಂಪು..ಜೊತೆಗೆ ನಾಟಕದ ಗೀಳು..ಅಂದಿನ ದಿನಗಳಲ್ಲಿ ಮದರಾಸು ಚಿತ್ರರಂಗದ ಕೇಂದ್ರಸ್ಥಾನವಾಗಿತ್ತು. ಇಲ್ಲಿಂದಲೇ ಪ್ರತಿಭೆಯ ಗಣಿ ಕಾಳಿಂಗರಾಯರಿಗೆ ಸಿನಿಮಾ ಒಡನಾಟ ಪ್ರಾರಂಭವಾದದ್ದು. ಪ್ರೇಮ್‌ ಸಾಗರ್‌ ಎಂಬ ಹಿಂದಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದ ಕಾಲದಲ್ಲಿ ಕನ್ನಡದ ಭೀಷ್ಮರೆನಿಸಿದ್ದ ನಟ, ನಿರ್ದೇಶಕ, ನಿರ್ಮಾಪಕ ನಾಗೇಂದ್ರರಾಯರ ಪರಿಚಯವಾಯಿತು. ಈ ಪರಿಚಯ ಕಾಳಿಂಗರಾವ್‌ ಅವರಿಗೆ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶನಕ್ಕೆ ನಾಂದಿ ಹಾಡಿತು.

ಐವತ್ತರ ದಶಕದಲ್ಲಿ ನಾಗೇಂದ್ರರಾವ್‌ ನಿರ್ಮಿಸಿದ ‘ವಸಂತಸೇನಾ’ ಕನ್ನಡ ಚಿತ್ರಕ್ಕೆ ಸಂಗೀತ ನೀಡಿದರಲ್ಲದೆ ಜೊತೆಗೆ ರಾಯರ ಸೊಸೆ, ಜೀವನ ನಾಟಕ, ವಸಂತ ಸೇನಾ ಚಿತ್ರಗಳಲ್ಲಿ, ನಾಟಕಗಳಲ್ಲಿ ನಟಿಸಿದರು ಕೂಡ. ಮುಂದೆ ಕೃಷ್ಣಲೀಲಾ, ನಟಶೇಖರ, ಅಬ್ಬಾ ಆ ಹುಡುಗಿ, ಕೈವಾರ ಮಹಾತ್ಮೆ ಮುಂತಾದ ಚಿತ್ರಗಳಿಗೆ ಸಿರಿಕಂಠದ ಜೊತೆಗೆ ಸಂಗೀತ ನೀಡಿದರು.

ಪ್ರೀತಿಯ ಗಾಯಕ ಸುಲಭವಾಗಿ ಸಿಕ್ಕದ ಕಾಲವದು. ಟಿ.ವಿ. ಮಾಧ್ಯಮ ಇರಲಿಲ್ಲ. ಆದರೂ, ಜನರ ಕುತೂಹಲಕ್ಕೆ ಕೊನೆಯಿರಲಿಲ್ಲ. ಹಣ ಕೊಟ್ಟು ಎಲ್ಲರೂ ಚಿತ್ರ, ನಾಟಕ ನೋಡುವ ಕಾಲ ಅದಾಗಿರಲಿಲ್ಲ. ಸುಗಮ ಸಂಗೀತದ ಗಮ ಗಮವ ಪಸರಿಸಲು ಅಂದು ಕಾಳಿಂಗರಾಯರು ನಿರ್ಧರಿಸಿದ್ದರು.

ಸದಾ ಸೂಟು-ಬೂಟು, ನೀಟಾಗಿ ಬಾಚಿದ ತಲೆ, ರೊಮ್ಯಾಂಟಿಕ್‌ ಮುಖಭಾವ -ಇದು ಕಾಳಿಂಗರಾಯರ ಶಿಸ್ತು. ಅವರು ಮೋಹನ-ಸೋಹನಕುಮಾರಿಯರ ಜೊತೆಗೂಡಿ, ನಾಡಿನಾದ್ಯಂತ ಸುತ್ತಾಡಿದರು. ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’, ‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ’ ಸೇರಿದಂತೆ ನಮ್ಮ ಕನ್ನಡ ಕವಿಗಳ ಅತ್ಯುದ್ಭುತ ಕವನಗಳನ್ನು ನಾಡಿನಾದ್ಯಂತ ಮನೆ ಮನೆಗೂ ಹಂಚಿದರು.

ಪಂಡಿತ ಜವಹರಲಾಲ್‌ ನೆಹರೂ ಅವರು ರಾಯರ ಕಂಠಸಿರಿಗೆ ಮನಸೋತು you have got a gold mine in your voice ಎಂದು ಹೇಳಿದ್ದರಂತೆ. ಆ ಚಿನ್ನದ ಗಣಿಯ ದೇಹ 1981ರ ಸೆಪ್ಟೆಂಬರ್‌ನಲ್ಲಿ ಅಳಿದರೂ, ಚಿನ್ನದ ಕಂಠ ಮಾತ್ರ ಇಂದೂ ಕರ್ನಾಟಕದ ಜನತೆಗೆ ಚಿನ್ನವನ್ನು ಕೊಡುತ್ತಲೇ ಬಂದಿದೆ. ಸಂಗೀತ ಪ್ರಿಯರ, ಕಲಾ ರಸಿಕರ ಮನದಲ್ಲಿ ಅವರ ನೆನಪು ಸದಾ ಹಸಿರು.

ನಿರೀಕ್ಷಿಸಿ! ನಿರೀಕ್ಷಿಸಿ!! ನಿರೀಕ್ಷಿಸಿ!!!
ಹಾಡು ಹಕ್ಕಿ ಕಾಳಿಂಗರಾಯರ ಇನ್ನೊಂದು ಮುಖ... ಅವರ ಪತ್ನಿಯಿಂದ ಅನಾವರಣ... ಮನಮಿಡಿಯು ಸತ್ಯಕತೆಗೆ, ಹಿರಿಯ ಸಿನಿಮಾ ಪತ್ರಕರ್ತ ಗಣೇಶ ಕಾಸರಗೋಡು ಅವರಿಂದ ಅಕ್ಷರ ರೂಪ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X