ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನುಮಂತನಗರದಿ ಹಾಡಿದಾಕಿ ‘ಸ್ವರ ಸಾಧಕಿ’ ಎಸ್‌.ಜಾನಕಿ

By Staff
|
Google Oneindia Kannada News

S. Janakiಉಪೇಂದ್ರ ಕುಮಾರ್‌ಜೀ ಸಂಗೀತ ಸಂಯೋಜನೆಯಲ್ಲಿ ಒರಿಯಾ ಭಾಷೆಯಲ್ಲಿ ಹಾಡು ಹಾಡಿದೆ. ಅದಕ್ಕೂ ಪ್ರಶಸ್ತಿ ಬಂತು. ಉಪೇಂದ್ರ ಕುಮಾರ್‌ಜೀ ಮತ್ತು ರಾಜನ್‌ಜೀ ಇವತ್ತು ನಮ್ಮ ಜೊತೆ ಇಲ್ಲ. ಅವರನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ಈವರೆಗೆ 15 ಸಾವಿರಕ್ಕೂ ಹೆಚ್ಚು ಹಾಡುಗಳ ಹಾಡಿದ್ದೇನೆ. 20 ಬಾರಿ ರಾಜ್ಯ ಪ್ರಶಸ್ತಿ ಸಿಕ್ಕಿದೆ. 4 ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಆದರೆ ಒಂದೇ ಒಂದು ಕರ್ನಾಟಕದ ಪ್ರಶಸ್ತಿ ಸಿಕ್ಕಿಲ್ಲ. ನನಗೆ ಪ್ರಶಸ್ತಿ ಕೊಡಿ ಅಂತ ಕೇಳುವುದಿಲ್ಲ. ನಾನು ಹಾಡಿರುವ ಹಾಡುಗಳಲ್ಲಿ ಕನ್ನಡದ ಗೀತೆಗಳೇ ಬೆಸ್ಟ್‌. ಹಾಗಿದ್ದೂ ಕರ್ನಾಟಕ ಸರ್ಕಾರ ನನಗೆ ಪ್ರಶಸ್ತಿ ಕೊಡುವುದಿಲ್ಲ ಎಂಬುದೂ ಗೊತ್ತು !

ಹಿರಿಯ ಹಿನ್ನೆಲೆ ಗಾಯಕಿ ಎಸ್‌.ಜಾನಕಿ ನಗುಮೊಗದಲ್ಲೇ ಚಾಟಿ ಸದ್ದು ಮಾಡಿದ್ದು ಹೀಗೆ. ಸಂದರ್ಭ- ಜ.27, ಭಾನುವಾರ ಸಾಧನಾ ಸಂಗೀತ ಶಾಲೆ ದಶಮಾನೋತ್ಸವ ಸಮಾರಂಭದಲ್ಲಿ ‘ಸ್ವರ ಸಾಧಕಿ’ ಪ್ರಶಸ್ತಿ ಸ್ವೀಕರಿದಾಗ.

ಯುವ ಗಾಯಕರಿಗಾದರೂ ಹೆಚ್ಚು ಅವಕಾಶಗಳನ್ನು ಕೊಡಬೇಕು. ಗಾಯಕ/ಗಾಯಕಿಯರನ್ನು ಪ್ರೋತ್ಸಾಹಿಸಲು ಸರ್ಕಾರ ಪ್ರಶಸ್ತಿ ಕೊಡಬೇಕು ಎಂದರು.

ಬೆಂಗಳೂರಿನ ಹನುಮಂತನಗರದ ಕೊಹಿನೂರು ಸ್ಟೇಡಿಯಂನಲ್ಲಿ ಖಚಾಖಚಿ ತುಂಬಿದ್ದ ಜನಕ್ಕೆ ಸಂಗೀತದ ಸಿಹಿ ಉಣಿಸುವ ಮುನ್ನ ಗಾಯಕಿ ಜಾನಕಿ ತೋಡಿಕೊಂಡದ್ದು ಅಳಲನ್ನ. ಕರ್ನಾಟಕ ಸರ್ಕಾರ ತಮ್ಮನ್ನು ಗುರ್ತಿಸದಿದ್ದಕ್ಕೆ ಆಗಿರುವ ಖೇದವನ್ನ. ಹಾಡಿಗೆ ಅಭಿಮಾನಿಗಳ ಮೊರೆ ಜೋರಾದ ನಂತರವೇ ಜಾನಕಿ ಅವರ ಮಾತಿನ ದಿಕ್ಕೂ ಬದಲಾದದ್ದು.

ವಯಸ್ಸಾಯ್ತು. ಹಾಡುಗಳು ಮರೆತು ಹೋಗ್ತಿವೆ. ಆದರೂ ಕೆಲವು ಎದೆಯಲ್ಲಿ ಮನೆ ಮಾಡಿವೆ ಅಂತಲೇ ಮಗುವಿನ ಕಂಠ, ತುಂಟ ಹುಡುಗಿಯ ಚೆಲ್ಲಾಟ, ಭಕ್ತಿ ರಸ ಎಲ್ಲವನ್ನೂ ಹಾಡಾಗಿಸಿದರು ಜಾನಕಿ. ಅವರ ಸಾಥ್‌ಗೆ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್‌ ಇದ್ದರು.

ಪೂಜಿಸಲೆಂದೆ ಹೂಗಳ ತಂದೆ, ಬಾನಲ್ಲು ನೀನೆ ಭುವಿಯಲ್ಲು ನೀನೆ, ಕಂಡೆ ನಾ ಈ ದಿನ ಜನರ ಪ್ರೀತಿ ರೀತಿಯಾ, ಗಗನವು ಎಲ್ಲೊ ೕ ಭೂಮಿಯು ಎಲ್ಲೋ, ಸಿಹಿ ಮುತ್ತು ಸಿಹಿ ಮುತ್ತು, ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು... ಹಾಡುಗಳ ಹೊನಲು. ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ ಹಾಡನ್ನು ಪಿ.ಬಿ. ಶ್ರೀನಿವಾಸ್‌ ಹಾಗೂ ಜಾನಕಿ ಹಾಡಿದಾಗ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತು. ಜೊತೆಗೆ ಒನ್ಸ್‌ ಮೋರ್‌ ಎಂಬ ಬೇಡಿಕೆ.

ಹಿರಿಯ ಗಾಯಕಿಗೆ ಹೃದಯ ತುಂಬಿ ಸನ್ಮಾನ ಮಾಡಿದವರು ಪಾರ್ವತಮ್ಮ ರಾಜ್‌ಕುಮಾರ್‌. ಶಾಲು ಹೊದಿಸಿ, ದೊಡ್ಡ ಹಾರ ಹಾಕಿದ ಪಾರ್ವತಮ್ಮನವರನ್ನು ಜಾನಕಿ ಅಪ್ಪಿಕೊಂಡರು. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅಪರೂಪದ ಗಾಯಕಿಗೆ ಬೆಳ್ಳಿಯ ವೀಣೆಯ ಉಡುಗೊರೆ ಕೊಟ್ಟರು. ಪಿ.ಬಿ.ಶ್ರೀನಿವಾಸ್‌ ಅವರಿಗೂ ಪಾರ್ವತಮ್ಮ ರಾಜ್‌ಕುಮಾರ್‌ ಸನ್ಮಾನ ಮಾಡಿದರು. ತಮಗೆ ಸಂದ ಶಾಲು ಹಾಗೂ ಹಾರವನ್ನು ಪಿಬಿ, ಜಾನಕಿಯವರಿಗೇ ಉಡುಗೊರೆಯಾಗಿ ಕೊಟ್ಟರು.

ನಟಿ ಬಿ.ಸರೋಜಾದೇವಿ ಸಮಾರಂಭವನ್ನು ಉದ್ಗಾಟಿಸಿದರು. ಸಂಗೀತ ನಿರ್ದೇಶಕರಾದ ವಿಜಯ ಭಾಸ್ಕರ್‌, ವಿ.ಮನೋಹರ್‌, ಸಾಹಿತಿ ಕೆ.ಕಲ್ಯಾಣ್‌, ನಟ ರಮೇಶ್‌, ಬೆಂಗಳೂರು ಮೇಯರ್‌ ಚಂದ್ರಶೇಖರ್‌ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು.

ಕಾರ್ಯಕ್ರಮಕ್ಕೆ ಕಳೆ ಕೊಟ್ಟಿದ್ದು ವಿನಯಾ ಪ್ರಸಾದ್‌ರ ಸೊಗಸಾದ ಕನ್ನಡದ ನಿರೂಪಣೆ. ಇಂಥಾ ಅಪರೂಪದ ಸಮಾರಂಭ ಆಯೋಜಿಸಿದ ಸಾಧನಾ ಸಂಗೀತ ಶಾಲೆಯ ಮಂಜುಳಾ ಗುರುರಾಜ್‌ ಹಾಗೂ ಗುರುರಾಜ್‌ ನಗುತ್ತಿದ್ದರು! ನೆರೆ-ದಿ-ದ್ದ ಸಾವಿ-ರಾ-ರು ಜನ-ರ ಮೊಗ-ಗಳಲ್ಲಿ ಆ ನಗು ಅನು-ರ-ಣಿ-ಸು-ತ್ತಿ-ತ್ತು.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X