ಜಿ.ವಿ. ಅತ್ರಿಯದು ಮಾಂತ್ರಿಕ ಪ್ರತಿಭೆ - ಪಿ.ಬಿ. ಶ್ರೀನಿವಾಸ್‌

ಬೆಂಗಳೂರು : ‘ಆತ ಪ್ರತಿಭಾವಂತ. ಆ ಮಾಂತ್ರಿಕ ಪ್ರತಿಭೆಯನ್ನು ಬಣ್ಣಿಸಲೂ ಅಸಾಧ್ಯ’. ಗುರು ಸ್ಥಾನದಲ್ಲಿರುವ ವ್ಯಕ್ತಿ ಯಿಂದ ಇಂಥಾ ಮಾತುಗಳನ್ನು ಕೇಳಲಿಕ್ಕೆ ಶಿಷ್ಯ ಅದೆಷ್ಟು ಪುಣ್ಯಶಾಲಿಯಾಗಿರಬೇಕು . ಅಂಥಾ ಅದೃಷ್ಟ ಜಿ.ವಿ. ಅತ್ರಿ ಅವರದು . ತಮ್ಮ ಮಾನಸ ಗುರು ಪಿ.ಬಿ. ಶ್ರೀನಿವಾಸ್‌ ಈ ರೀತಿ ಮನ ತುಂಬಿ ಹೊಗಳುವುದನ್ನು ನೋಡಲಿಕ್ಕೆ ಅತ್ರಿ ಅವರಿಗೆ ಅದೃಷ್ಟವಿರಲಿಲ್ಲ ಅಷ್ಟೇ . ಆ ಮಟ್ಟಿಗೆ ಅತ್ರಿ ದುರಾದೃಷ್ಟವಂತರೂ ಹೌದು.

ವರನಟ ಡಾ. ರಾಜ್‌ಕುಮಾರ್‌ರ ಶಾರೀರ ಎಂದೇ ಹೆಸರಾದ ಪಿ.ಬಿ. ಶ್ರೀನಿವಾಸ್‌ ಭಾವುಕರಾಗಿದ್ದರು. ಅದೇ ಭಾವುಕತೆ, ರೋಮಾಂಚನದ ಹೊಳಹು ಸೋಮವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಭಾಗವಹಿಸಿದ್ದವರ ಎದೆಯಲ್ಲಿ . ಅದು ಸಂಗೀತಗಂಗಾ ಸಂಸ್ಥೆ ಹಮ್ಮಿಕೊಂಡಿದ್ದ ಜಿ.ವಿ. ಅತ್ರಿ ಸಂಸ್ಮರಣಾ ಕಾರ್ಯಕ್ರಮ. ಅತ್ರಿ ಅಭಿಮಾನಿಗಳು, ಶಿಷ್ಯರು, ಬಂಧುಗಳು, ಸಂಗೀತ ಪ್ರೇಮಿಗಳು ಎಲ್ಲರೂ ಅಲ್ಲಿದ್ದರು.

ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ

ಸಂಸ್ಮರಣಾ ಕಾರ್ಯಕ್ರಮ ಸ್ವಲ್ಪ ಹೊತ್ತಿನಲ್ಲೇ ಸಂಗೀತ ಕಾರ್ಯಕ್ರಮವಾಗಿ ಬದಲಾಯಿತು. ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ ಎನ್ನುವ ಗೀತೆಯನ್ನು ಪಿಬಿ ಅರ್ಥಪೂರ್ಣವಾಗಿ ಎದೆ ತುಂಬಿ ಹಾಡಿದಾಗ, ನೆರೆದವರ ಕೊರಳುಗಳುಬ್ಬಿದವು. ಒಲವಿನಾ ಪ್ರಿಯಲತೆ, ಅವಳದೇ ಚಿಂತೆ ಎನ್ನುವ ಮತ್ತೊಂದು ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಪಿಬಿ ಮತ್ತಷ್ಟು ರಂಗುಗೊಳಿಸಿದರು.

ಚಿಕ್ಕ ವಯಸ್ಸಿನಲ್ಲಿ ಅತ್ರಿ ಸಾಧಿಸಿದ ಯಶಸ್ಸು ಎತ್ತರದ್ದು . ಅವರ ಬದುಕು ಚಿಕ್ಕ ವಯಸ್ಸಿನಲ್ಲಿ ಕೊನೆಗೊಂಡದ್ದು ಖೇದಕರ ಎಂದು ಪಿ.ಬಿ. ಶ್ರೀನಿವಾಸ್‌ ಹೇಳಿದರು. ಇದೇ ಸಂದರ್ಭದಲ್ಲಿ ಅತ್ರಿ ನೆನಪಿಗಾಗಿ ರಚಿಸಿದ ಮಾಂತ್ರಿಕ ಪ್ರತಿಭೆ ಎನ್ನುವ ಗೀತೆಯನ್ನು ಸಂಗೀತಾಗಂಗಾ ಸಂಸ್ಥೆಗೆ ಅವರು ಅರ್ಪಿಸಿದರು.

ಅತ್ರಿಯವರ ಆಕಾಲಿಕ ಮರಣಕ್ಕೆ ಅವರ ಗುರು ಪಂಡಿತ್‌ ಆರ್‌.ವಿ. ಶೇಷಾದ್ರಿ ಗವಾಯಿ ಹಾಗೂ ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ವಿಷಾದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ.ಜಿ.ಎಸ್‌. ಶಿವರುದ್ರಪ್ಪ , ಚನ್ನವೀರ ಕಣವಿ, ಡಾ.ಎನ್‌.ಎಸ್‌. ಲಕ್ಷ್ಮೀ ನಾರಾಯಣ ಭಟ್ಟ , ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ , ಸಂಗೀತ ನಿರ್ದೇಶಕ ವಿ. ಮನೋಹರ್‌ ಅವರಿಗೆ ಸಂಗೀತಾಗಂಗಾ ಸ್ಮರಣ ಫಲಕ ನೀಡಿ ಗೌರವಿಸಲಾಯಿತು .

ಕರ್ನಾಟಕ ಸಂಗೀತ- ನೃತ್ಯ ಅಕಾಡೆಮಿ ಅಧ್ಯಕ್ಷೆ ಶ್ಯಾಮಲಾ ಜಿ. ಭಾವೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಸಿ. ರಾಮಮೂರ್ತಿ, ಸಂಯುಕ್ತ ಜನತಾದಳ ಮುಖಂಡ ವಿ.ಎಸ್‌. ಕೃಷ್ಣಯ್ಯರ್‌ ಮುಂತಾದವರು ಸಮಾರಂಭದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+