ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ಕತೆಯಾದ ದೊಡ್ಡವರು

By Super
|
Google Oneindia Kannada News

ಮಾಸ್ತಿ ವೆಂಕಟೇಶ ಅಯ್ಯಂಗಾರ್‌
ಅವರ ಕತೆಗಳಲ್ಲಿ ಜಾಣತನದ ಹೇಳಿಕೆಗಳೇ ಇಲ್ಲ . ಅವು ಅಪ್ಪಟ ಕಲಾಕೃತಿಗಳು ಅಷ್ಟೇ. ಅಲ್ಲಿ ಲೇಖಕ ತಾನು ಕೇಳಿದ ಕತೆಯನ್ನು ನಮಗೆ ದಾಟಿಸಿಬಿಡುತ್ತಾನೆ. ಹಾಗೆ ದಾಟಿಸುವಾಗ ಆ ಕತೆಗೆ ಲೇಖಕನ ಹಮ್ಮಿನ ಲೇಪವಾಗಲೀ, ಬೌದ್ಧಿಕತೆಯ ಪ್ರದರ್ಶನವಾಗಲೀ ಇರುವುದಿಲ್ಲ . ಅದೇ ಅವರ ಶಕ್ತಿ.

*ಸತ್ಯವ್ರತ ಹೊಸಬೆಟ್ಟು
ತುಂಬ ಸಜ್ಜನರೂ ಆಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು ಈಗಿನ ಕಾಲದ ಸಾಹಿತಿಗಳೂ ಕನ್ನಡ ಪ್ರೇಮಿಗಳೂ ಮಾಸ್ತಿ- ಕನ್ನಡದ ಆಸ್ತಿ ಎಂದೊಂದು ಪ್ರಾಸಬದ್ಧ ಹೇಳಿಕೆ ಒಗೆದು ಕೈ ಬಿಡುವುದುಂಟು. ಅವರು ಶ್ರೀನಿವಾಸ ಕಾವ್ಯನಾಮದಿಂದ ಬರೆದರೂ ಉಳಿದುಕೊಂಡದ್ದು ಮಾಸ್ತಿ . ಕುವೆಂಪು ಥರದವರು ಕಾವ್ಯನಾಮದಿಂದ ಹೆಸರಾದರೆ, ಮಾಸ್ತಿ ನಿಜ ನಾಮಧೇಯದಿಂದಲೇ ಹೆಸರು ಮಾಡಿದರು.

ಮಾಸ್ತಿಯವರಿಗೆ ಜ್ಞಾನಪೀಠ ಬಂದದ್ದು ತಡವಾಗಿ. ಅವರಿಗಿಂತ ಚಿಕ್ಕವರಿಗೆಲ್ಲ ಬಂದ ನಂತರ. ಆಗ ಯಾರೋ ಮಾಸ್ತಿಯವರನ್ನು ಕೇಳಿದರಂತೆ - ನಿಮಗಿಂತ ಚಿಕ್ಕವರಿಗೆಲ್ಲ ಜ್ಞಾನಪೀಠ ಬಂದ ನಂತರ ನಿಮಗೆ ಬರ್ತಾ ಇದೆ. ಈ ಬಗ್ಗೆ ಬೇಸರವಿದೆಯಾ? ಮಾಸ್ತಿ ಜಾಣರು. ಮನೇಲಿ ಸಿಹಿ ತಿಂಡಿ ಮಾಡಿದ್ರೆ ಮೊದಲು ಯಾರಿಗೆ ಕೊಡ್ತಾರೆ ಹೇಳಿ? ಚಿಕ್ಕೋರಿಗೆ ತಾನೇ? ಹಾಗೇ ಒಳ್ಳೇದನ್ನೆಲ್ಲ ಮೊದಲು ಚಿಕ್ಕೋರಿಗೆ ಕೊಟ್ಟು ನಂತರ ನಾವು ತಗೋಬೇಕು. ಉಳಿದವರೆಲ್ಲ ತಮಗಿಂತ ಚಿಕ್ಕವರು ಅನ್ನೋದನ್ನು , ತಮಗೆ ತಡವಾಗಿ ಬಂದದ್ದರಿಂದ ಬೇಸರವಾಗಿಲ್ಲ ಅನ್ನೋದನ್ನು ಮಾಸ್ತಿ ತೋರಿಸಿಕೊಟ್ಟಿದ್ದು ಹೀಗೆ. ಆದರೆ, ಅವರ ಕತೆಗಳಲ್ಲಿ ಇಂಥ ಜಾಣತನದ ಹೇಳಿಕೆಗಳೇ ಇಲ್ಲ . ಅವು ಅಪ್ಪಟ ಕಲಾಕೃತಿಗಳು ಅಷ್ಟೇ. ಅಲ್ಲಿ ಲೇಖಕ ತಾನು ಕೇಳಿದ ಕತೆಯನ್ನು ನಮಗೆ ದಾಟಿಸಿಬಿಡುತ್ತಾನೆ. ಹಾಗೆ ದಾಟಿಸುವಾಗ ಆ ಕತೆಗೆ ಲೇಖಕನ ಹಮ್ಮಿನ ಲೇಪವಾಗಲೀ, ಬೌದ್ಧಿಕತೆಯ ಪ್ರದರ್ಶನವಾಗಲೀ ಇರುವುದಿಲ್ಲ . ಅದೇ ಅವರ ಶಕ್ತಿ .

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಹೊಂಗೇನಹಳ್ಳಿಯಲ್ಲಿ ಮಾಸ್ತಿ ಹುಟ್ಟಿದ್ದು 1891 ರ ಜೂನ್‌ 6 ರಂದು. ತಂದೆ ರಾಮಸ್ವಾಮಿ ಅಯ್ಯಂಗಾರ್‌. ತಾಯಿ ತಿರುಮಲಮ್ಮ . ಬಡ ಕುಟುಂಬದಿಂದ ಬಂದ ಮಾಸ್ತಿಗೆ, ಓದಿನಲ್ಲಿ ಅಪಾರ ಆಸಕ್ತಿ . ಅದಕ್ಕೆ ನೀರೆರದವರು ಅಧ್ಯಾಪಕ ನಾರಣಪ್ಪ . ಹೊಂಗೇನಹಳ್ಳಿಯ ಶಿವಾರಪಟ್ಟಣದ ಪುಟ್ಟ ಸ್ಕೂಲಿನಿಂದ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಪಡೆದುಕೊಂಡ ಬಿ.ಎ. ಪದವಿ ತನಕ ಮಾಸ್ತಿ ಓದಿನಲ್ಲಿ ಹಿಂದೆ ಬಿದ್ದವರಲ್ಲ . ಮುಂದೆ ಇಂಗ್ಲಿಷ್‌ ಉಪನ್ಯಾಸಕರಾಗಿ, ಮೈಸೂರು ಸಿವಿಲ್‌ ಪರೀಕ್ಷೆಯಲ್ಲಿ ಪಾಸಾಗಿ ಅಸಿಸ್ಟೆಂಟ್‌ ಕಮಿಷನರ್‌ ಆಗಿ, ರಾಜಸೇವಾಪ್ರಸಕ್ತ ಬಿರುದನ್ನೂ ಮಾಸ್ತಿ ಪಡೆದದ್ದು ಮತ್ತೊಂದು ಕತೆ.

ಮಾಸ್ತಿಯವರಿಗೆ ಇಂಗ್ಲಿಷ್‌ನಲ್ಲಿ ಬರೆದು ಜನಪ್ರಿಯರಾಗಬೇಕೆಂದು ಆಸೆಯಿತ್ತು . ಆದರೆ, ಅವರ ವೃತ್ತಿ ಜೀವನದ ಘಟನೆಯಾಂದು ಅವರು ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಿಸುತ್ತದೆ. ಕೋಲಾರದ ಮಲ್ಲಸಂದ್ರ ಗ್ರಾಮದ ಜಮಾಬಂದಿಗೆ ಹೋದಾಗ ಅವರು ತಪ್ಪು ಮಾಡಿದ ರೈತನ ಮೇಲೆ ರೇಗುತ್ತಾರೆ. ಏನಯ್ಯಾ.. ನಿಂಗೆ ರೂಲ್ಸ್‌ ಗೊತ್ತಿಲ್ವಾ ? ಅದಕ್ಕೆ ಆತ ರೂಲ್ಸ್‌ ಎಲ್ಲ ಇಂಗ್ಲೀಷಿನಲ್ಲಿದೆ. ನನಗೆ ಹೇಗೆ ತಿಳಿಯಬೇಕು ಎಂದು ವಿನಯದ ಮಾತಾಡುತ್ತಾನೆ. ಅದು ತನಗೆ ಆಡಳಿತದ ವೈಫಲ್ಯಕ್ಕೆ ಕಾರಣವೇನು ಅನ್ನೋದನ್ನು ತಿಳಿಸಿಕೊಟ್ಟಿತು ಅನ್ನುತ್ತಾರೆ ಮಾಸ್ತಿ. ಅಂದಿನಿಂದ ಅವರು ಕನ್ನಡದ ಆಸ್ತಿಯಾಗುತ್ತಾರೆ.

ಅವರ ಮೊದಲ ಕತೆ ರಂಗನ ಮದುವೆ. ಅವರ ಹದಿನಾರು ಕಥಾ ಸಂಕಲನಗಳು ಬಿಡುಗಡೆಯಾಗಿವೆ. ಸುಬ್ಬಣ್ಣ , ಚನ್ನಬಸವ ನಾಯಕ, ಚಿಕ್ಕವೀರ ರಾಜೇಂದ್ರ, ಶೇಷಮ್ಮ , ಮಾತುಗಾರ ರಾಮಣ್ಣ ಮುಂತಾದ ಕಾದಂಬರಿಗಳನ್ನೂ, ನವರಾತ್ರಿ ಮಾಲಿಕೆಯಿಂದ ಹಿಡಿದು ಶ್ರೀರಾಮ ಪಟ್ಟಾಭಿಷೇಕದ ತನಕ ಕವನ ಸಂಕಲನಗಳನ್ನೂ, ಕಾಕನಕೋಟೆಯಂಥ ನಾಟಕಗಳನ್ನೂ ಬರೆದಿದ್ದಾರೆ. ಜೊತೆಗೆ ಜೀವನಚರಿತ್ರೆ, ವಿಮರ್ಶೆ ಕೂಡ ಬರೆದುದ್ದುಂಟು. ಮಾಸ್ತಿಯವರ ಕತೆಯನ್ನು ಅಜ್ಜ ಹಾಗೂ ಮೊಮ್ಮಗಳು ಜೊತೆಗೆ ಕುಳಿತು ಓದಬಹುದು. ಅಷ್ಟು ಸಜ್ಜನಿಕೆಯೂ ಸುಸಂಸ್ಕೃತವೂ ಆಗಿರುತ್ತವೆ. ಈಗಿನ ಕತೆಗಳು ಹಾಗಿಲ್ಲ ಎಂದು ಅನಂತ ಮೂರ್ತಿಯವರೊಮ್ಮೆ ಹೇಳಿದ್ದರು. ಅದು ನಿಜ.

ಜನನ- 06.06.1891 (ಕೋಲಾರ ಜಿಲ್ಲೆಯ ಮಾಸ್ತಿ) , ಮರಣ- 06.06.1986

ಪ್ರಮುಖ ಕೃತಿಗಳು

ಕಾದಂಬರಿಗಳು : ಚೆನ್ನಬಸವ ನಾಯಕ, ಚಿಕವೀರ ರಾಜೇಂದ್ರ, ಸುಬ್ಬಣ್ಣ
ನಾಟಕಗಳು : ಕಾಕನಕೋಟೆ, ಯಶೋಧರಾ, ಕಾಳಿದಾಸ, ಶಿವ ಛತ್ರಪತಿ
ಆತ್ಮ ಕಥನ : ಭಾವ
ಕವನ ಸಂಕಲನ : ಬಿನ್ನಹ, ತಾವರೆ
ಖಂಡಕಾವ್ಯ : ಶ್ರೀರಾಮ ಪಟ್ಟಾಭಿಷೇಕ

ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ : 1983 (ಚಿಕವೀರ ರಾಜೇಂದ್ರ)

English summary
masthi kannadada aasthi, jnanpeet award winner
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X