/disk2/v/apache/htdocs/VIRTUAL/thatskannada/public_html/common/header.html

ಗೋಕಾಕ್‌ ಕನ್ನಡದ ಪೀಕಾಕ್‌

Published: Thursday, April 3, 2003, 5:30 [IST]
 

Gokak

ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು ಎಂದವರು ಎಲ್ಲವೂ ಆಗಿದ್ದು ಎಲ್ಲಿಯೂ ನಿಲ್ಲದಂತಿದ್ದರು.

*ಸತ್ಯವ್ರತ ಹೊಸಬೆಟ್ಟು

ವಿನಾಯಕ ಕೃಷ್ಣ ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅನೇಕರು ಹುಬ್ಬೇರಿಸಿದ್ದುಂಟು. ವೈಎನ್ಕೆಯವರಂತೂ ಜ್ಞಾನವಿರುವುದು ಪೀಠದಲ್ಲಲ್ಲ , but at the other end ಎಂದು ಗೇಲಿ ಮಾಡಿದ್ದೂ ಉಂಟು. ಇದು ತನ್ನನ್ನು ಕುರಿತಾದ ತಮಾಷೆ ಎಂದು ಬಹಳ ವರ್ಷಗಳ ನಂತರ ಅನಂತಮೂರ್ತಿ ತಪ್ಪು ತಿಳಿದುಕೊಂಡು ದುಃಖಿಸಿದ್ದು ಇನ್ನೊಂದು ಕತೆ. ಆದರೆ ಗೋಕಾಕರಿಗೂ ಕಾವ್ಯ ರಸಿಕರಿದ್ದರು. ಆವರು ಬರೆದ ಭಾರತ ಸಿಂಧೂ ರಶ್ಮಿಯನ್ನು ಇವತ್ತಿಗೂ ನೆನಪಿಸಿಕೊಳ್ಳುವ ಜನರಿದ್ದಾರೆ. ಅವರ ಸಮುದ್ರದಾಚೆಯಿಂದ, ಸಮುದ್ರದೀಚೆಯಿಂದ ಪ್ರವಾಸ ಕಥನಗಳನ್ನು ಓದಿದವರು ಬಹಳಷ್ಟು ಮೆಚ್ಚಿಕೊಂಡಿದ್ದಾರೆ. ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು ಎಂಬ ಭಾವಗೀತೆಯ ಸಾಲುಗಳ ಮೂಲಕ ಆಗಾಗ ಗೋಕಾಕರು ನೆನಪಾಗುತ್ತಾರೆ.

ಕಾರಂತರನ್ನು ಕಾದಂಬರಿಕಾರರೆಂದು, ಅನಂತಮೂರ್ತಿಯವರನ್ನು ಸಣ್ಣ ಕತೆಗಳ ಮೂರ್ತಿ ಎಂದು, ಬೇಂದ್ರೆಯವರನ್ನು ನಾದಬಿಂದು ಎಂದೂ ಕುವೆಂಪು ಅವರನ್ನು ರಾಮಾಯಣ ದರ್ಶನದ ಕವಿ ಎಂದು ಗುರ್ತಿಸುವಂತೆ ಗೋಕಾಕರನ್ನು ಗುರ್ತಿಸುವುದು ಕಷ್ಟ . ಕವಿ, ವಿಮರ್ಶಕ, ಸಂಪಾದಕ, ನಾಟಕಕಾರ, ಪ್ರಬಂಧಕಾರ, ಶಿಕ್ಷಣ ತಜ್ಞ ಎಲ್ಲವೂ ಆಗಿದ್ದ ಗೋಕಾಕ್‌ ಎಲ್ಲಿಯೂ ನಿಲ್ಲಲಿಲ್ಲ.

: ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಕನ್ನಡಿಗ, ಜ್ಞಾನಪೀಠ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮೊದಲ ಕನ್ನಡಿಗ - ಹೀಗೆ ಗೋಕಾಕ್‌ ಕನ್ನಡ ಸರಸ್ವತಿಗೂ- ಸರಸ್ವತಿ ಪುತ್ರರಿಗೂ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಅನ್ನುವುದಂತೂ ನಿಜ . ಆದರೆ ಸಾಹಿತ್ಯ ಕೃತಿಯ ಮೂಲಕ ನೆನಪಾಗದೇ, ಸಾಹಿತ್ಯೇತರ ಕೃತಿಗಳ ಮೂಲಕ ನೆನಪಾಗುತ್ತಾರೆ.

ಗೋಕಾಕ್‌ ಹುಟ್ಟಿದ್ದು 1909 ರ ಆಗಸ್ಟ್‌ 9 ರಂದು. ತಂದೆ ಕೃಷ್ಣರಾವ್‌ ವಕೀಲರೂ ಜ್ಯೋತಿಷಿಗಳೂ ಆಗಿದ್ದವರು. ಸವಣೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ನಂತರ ಬಿಎಯಲ್ಲಿ ಫಸ್ಟ್‌ಕ್ಲಾಸ್‌, ಎಂಎಯಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಪ್ರಥಮ ಸ್ಥಾನ, ಹೀಗೆ ಗೋಕಾಕರು ಪ್ರಥಮರಾಗಿಯೇ ನಿಂತವರು.

1930 ರಲ್ಲಿ ಶಾರದಾದೇವಿಯವರ ಕೈ ಹಿಡಿದ ಗೋಕಾಕರು, 1936 ರಲ್ಲಿ ಆಕ್ಸ್‌ಫರ್ಡಿಗೆ ಹೊರಟು ಅಲ್ಲಿ ಪರೀಕ್ಷೆಗಳನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ ಬರುತ್ತಾರೆ.

ಕಟ್ಟಾ ಸ್ವಾಭಿಮಾನಿ : ಗೋಕಾಕರು ಆರಂಭದಲ್ಲಿ ತಮ್ಮ ಆತ್ಮಾಭಿಮಾನಕ್ಕೆ ಧಕ್ಕೆಯಾಗುವಂಥ ಯಾವುದೇ ಕೆಲಸವನ್ನೂ ಮಾಡಿದವರಲ್ಲ . ಆಕ್ಸ್‌ಫರ್ಡಿನಿಂದ ಮರಳುತ್ತಿದ್ದ ಹಾಗೇ ಅವರಿಗೆ ಸಾಂಗ್ಲಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಸಿಗುತ್ತದೆ. ಆದರೆ ಮುಂದೆ ಕೆಲವೇ ವರ್ಷಗಳಲ್ಲಿ ಆ ಕಾಲೇಜಿಗೆ ಕೊನೆಯ ನಮಸ್ಕಾರ ಹೇಳಿ ಗೋಕಾಕ್‌ ಹೊರ ಬೀಳುತ್ತಾರೆ. ಹುಟ್ಟೂರಾದ ಧಾರವಾಡಕ್ಕೆ ಬಂದು ನಿರುದ್ಯೋಗಿಗಳಾಗುತ್ತಾರೆ. ಆಗಲೇ ಸಮರಸವೇ ಜೀವನ ಕಾದಂಬರಿ ಬರೆದು ನೂರೈವತ್ತು ರುಪಾಯಿ ಸಂಭಾವನೆಯನ್ನೂ ಪಡೆಯುತ್ತಾರೆ.

1945 ರಲ್ಲಿ ಹೈದರಾಬಾದ್‌ನ ಉಸ್ಮಾನಿಯಾ ವಿವಿಯಲ್ಲಿ ಉದ್ಯೋಗ, ಒಂದೇ ವರ್ಷದಲ್ಲಿ ಅಲ್ಲಿಂದಲೂ ಹೊರಬೀಳುವ ಗೋಕಾಕ್‌, 1946 ರಲ್ಲಿ ಬರೋಡಾ ರಾಜ್ಯದ ವೀಸಾನಗರ ಕಾಲೇಜಿನ ಪ್ರಾಂಶುಪಾಲರಾಗುತ್ತಾರೆ. 1949 ರಲ್ಲಿ ಕೊಲ್ಲಾಪುರ ಕಾಲೇಜಿನ ಪ್ರಾಂಶುಪಾಲ ಹುದ್ದೆ . 1952 ರಲ್ಲಿ ತಾವು ಕಲಿತ ಧಾರವಾಡ ಕರ್ಣಾಟಕ ಕಾಲೇಜಿನಲ್ಲೇ ಉದ್ಯೋಗ.

ಸಾಯಿಭಕ್ತ, ಬೇಂದ್ರೆ ಅಭಿಮಾನಿ : ಸಾಯಿಬಾಬಾ ಅವರ ಭಕ್ತರಾಗಿ ಸಾಕಷ್ಟು ಟೀಕೆಗೂ ಗುರಿಯಾದ ಗೋಕಾಕರು, ತಮ್ಮೆಲ್ಲ ಏಳಿಗೆಗೆ ಸಾಯಿಬಾಬ ಕಾರಣ ಎಂದು ನಂಬಿದ್ದವರು. 1966 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕರಾದ ಗೋಕಾಕ್‌, 1977 ರಲ್ಲಿ ಜ್ಞಾನಪೀಠ ಆಯ್ಕೆ ಸಮಿತಿಯ ಅಧ್ಯಕ್ಷರಾಗುತ್ತಾರೆ.

ಬೇಂದ್ರೆಯವರ ಕಟ್ಟಾ ಶಿಷ್ಯರಾಗಿದ್ದ ಗೋಕಾಕರಿಗೆ ಬೇಂದ್ರೆಯವರ ಪ್ರಭಾವ ಮಾತ್ರ ಆಗಲಿಲ್ಲ ಅನ್ನುವುದು ಅವರ ಕಾವ್ಯವನ್ನು ನೋಡಿದಾಗ ಗೊತ್ತಾಗುತ್ತದೆ. 1934 ರಲ್ಲಿ ತಮ್ಮ ಮೊದಲ ಕವನ ಸಂಕಲನ ಕಲೋಪಾಸಕ ಮೂಲಕ ಕಾವ್ಯ ಜಗತ್ತಿಗೆ ಕಾಲಿಟ್ಟ ಗೋಕಾಕ್‌, ಭಾರತ ಸಿಂಧೂ ರಶ್ಮಿಯಂಥ ಮಹಾಕಾವ್ಯ ಬರೆಯುವ ಹೊತ್ತಿಗೆ ಬದುಕಿನ ಎಲ್ಲ ಮುಖಗಳ ದರ್ಶನವೂ ಆಗಿರುತ್ತದೆ.

1958 ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಎರಡೆರಡು ಗೌರವ ಡಾಕ್ಟರೇಟ್‌ಗಳು, ಕೇಂದ್ರ ಸರ್ಕಾರದ ಪದ್ಮಶ್ರೀ, ದ್ಯಾವಾ ಪೃಥಿವೀ ಕವನಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕೊನೆಗೆ ಜ್ಞಾನಪೀಠ.. ಹೀಗೆ ಗೋಕಾಕರು ತಮ್ಮ ಜೀವಿತಾವಧಿಯಲ್ಲೇ ಅತ್ಯುನ್ನತ ಗೌರವಗಳಿಗೆ ಪಾತ್ರರಾದವರು.

ಗೋಕಾಕ್‌ ಜನಸಾಮಾನ್ಯರಿಗೆ ಪರಿಚಯವಾದದ್ದು ಗೋಕಾಕ್‌ ಚಳವಳಿಯ ಸಂದರ್ಭದಲ್ಲಿ . 1982 ರಲ್ಲಿ ಗೋಕಾಕ್‌ ವರದಿಯ ಅನುಷ್ಠಾನ ಆಗ್ರಹಿಸಿ ನಡೆದ ಗೋಕಾಕ್‌ ಚಳವಳಿ, ಗೋಕಾಕರಿಗೆ ಹೆಸರು, ಜನಪ್ರಿಯತೆ ಎರಡನ್ನೂ ತಂದುಕೊಡುತ್ತದೆ. ಅವರಿಗೆ ಜ್ಞಾನಪೀಠ ಬಂದದ್ದು ಈ ಹೋರಾಟಕ್ಕಾಗಿ ಎಂದು ತಿಳಿಯುವವರೂ ಇಲ್ಲದಿಲ್ಲ . 1992 ರ ಏಪ್ರಿಲ್‌ 28 ರಂದು ಮುಂಬಯಿಯಲ್ಲಿ ತೀರಿಕೊಂಡ ಗೋಕಾಕರು ಸಜ್ಜನಿಕೆ, ಆತ್ಮಾಭಿಮಾನ, ಕನ್ನಡತನ - ಈ ಮೂರನ್ನು ಕೊನೆಯವರೆಗೂ ಬಿಡಲಿಲ್ಲ .

ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು ಎಂದು ಭಾಷೆ ಕೊಟ್ಟು ಹೋದ ಗೋಕಾಕ್‌, ಅಲ್ಲಿಂದ ಮರಳಿ ಬರಲಿಲ್ಲ , ಮಲ್ಲಿಗೆಯನ್ನೂ ತರಲಿಲ್ಲ ಎಂದು ಅವರನ್ನು ಕಟುವಾಗಿ ಟೀಕಿಸಿದವರೂ ಇದ್ದರು. ಅಂಥ ಟೀಕೆಗಳಿಗೆ ನೆರವಾಗಿ ನಿಂತದ್ದು ಜ್ಞಾನಪೀಠ.

ಗೋಕಾಕರ ಭಾರತ ಸಿಂಧು ರಶ್ಮಿಯಿಂದಾಯ್ದ ಕೆಲವು ಸಾಲುಗಳು ನಿಮ್ಮ ಅವಗಾಹನೆಗೆ :

ಒಮ್ಮೆ ಕಾಲೇಶ್ವರನು ಪೊರುಷನೊಂದು ರೂಪವಿಹ
ಕಾಲ ಕಾಲೇಶ್ವರನ ಪ್ರಾರ್ಥಿಸಿದ : ಆಲಿಸಿರಿ, ಪ್ರಭು !
ಇರಿಸಿದಿರಿ ನನ್ನಂಕಿತದೊಳೀ ಪ್ರಪಂಚವನೆಲ್ಲ .
ಪರಮಾಣುವಿನಿಂದ ಮಹತ್ತಿನ ತುತ್ತ ತುದಿಯವರೆಗೆ
ಕ್ರಿಮಿ- ಕೀಟ- ಪಕ್ಷಿ - ಪಶು- ಪ್ರಾಣಿಗಳ ಸೃಷ್ಟಿ -
ಸ್ಥಿತಿ- ಲಯಗಳನು ನಾ ನಿಯಂತ್ರಿಸಿಹೆನೋರಂತೆ.
ಸಮಸ್ಯಾ ಪ್ರಾಣಿ ಇಹನು ಮಾನವ ಮಾತ್ರ
ಸಂಯಮವಿಲ್ಲ , ಸಿಸ್ತಿಲ್ಲ , ತೃಪ್ತಿಯೇ ಇಲ್ಲವಾತನಿಗೆ.

ಈ ಸಾಲುಗಳೇ ಎಲ್ಲವನ್ನೂ ಹೇಳುತ್ತವೆ. ಟೀಕೆಯಾಗಲೀ ಟಿಪ್ಪಣಿಯಾಗಲೀ ಬೇಕಿಲ್ಲ ಅಲ್ಲವೇ?

ಜನನ- 09.08.1909 (ಸವಣೂರು), ಮರಣ -28.04.1992

ಪ್ರಮುಖ ಕೃತಿಗಳು

ಕವನ ಸಂಕಲನ : ಊರ್ಣನಾಭ, ಅಭ್ಯುದಯ, ಉಗಮ, ಬಾಳದೇಗುಲದಲ್ಲಿ , ದ್ಯಾವಾಪೃಥಿವೀ, ಸಮುದ್ರಗೀತೆಗಳು
ಕಾದಂಬರಿ : ಸಮರಸವೇ ಜೀವನ
ವಿಮರ್ಶೆ : ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು
ಮಹಾಕಾವ್ಯ : ಭಾರತ ಸಿಂಧುರಶ್ಮಿ

ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ :1990 (ಸಮಗ್ರ ಸಾಹಿತ್ಯ)

ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like