ಅಗ್ನಿದಿವ್ಯದಲ್ಲಿ ಪುನೀತನಾದೆ, ಬರವಣಿಗೆ ಇನ್ನೂ ಇದೆ- ಖುಷ್ವಂತ್ ಸಿಂಗ್
*ಸೋನಿ ಮಿಶ್ರ
‘ನಾನು ಪರಿಶುದ್ಧನಾಗಿ ಹೊರ ಬಂದಿದ್ದೇನೆ!’
ಹಾಗೆಂದರು ಖುಷ್ವಂತ್ ಸಿಂಗ್. ಅವರ ಮೊಗದಲ್ಲಿ ತುಳುಕುತ್ತಿದ್ದುದು ಆರು ವರ್ಷಗಳ ಕಾಲ ಸೆಣೆಸಿದ ಕಾನೂನು ಸಮರದಲ್ಲಿ ಗೆದ್ದ ನೆಮ್ಮದಿ. ಖುಷ್ವಂತ್ ಖುಷಿಯಾಗಿದ್ದರು. ಆ ಖುಷಿಗೆ ಅವರ ಆತ್ಮಕಥೆಯ ಕೃತಿ ಕನ್ನಡಿಯಾಗಿತ್ತು .
ಖುಷ್ವಂತಜ್ಜನ ಆತ್ಮಕಥೆ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಬಿಡುಗಡೆಯಾಯಿತು. ಈ ಪುಸ್ತಕವನ್ನು ಪ್ರಕಟಿಸಲು ಖುಷ್ವಂತ್ ಪಟ್ಟ ಶ್ರಮ, ಎದುರಿಸಿದ ವಿರೋಧ ಅಷ್ಟಿಷ್ಟಲ್ಲ . ಅದೆಲ್ಲ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲಿ ಅವರಿಗೆ ನೆನಪಾಗಿರಬೇಕು; ಹೆರಿಗೆಯ ನಂತರದ ತಾಯಿಯ ಮೊಗದಲ್ಲಿನ ಖುಷಿ ಅವರ ಮೊಗದಲ್ಲೂ ಲಕಲಕಿಸುತ್ತಿತ್ತು.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂದ ಜಯ
ನ್ಯಾಯಾಲಯಕ್ಕೆ ಜೋತು ಬೀಳುವುದು ನನಗೇನೂ ಹೊಸದಲ್ಲ . ನನ್ನ ಬರವಣಿಗೆಯಲ್ಲಿ ಏನಾದರೊಂದು ಆಕ್ಷೇಪವನ್ನು ಯಾವಾಗಲೂ ಜನ ಗುರ್ತಿಸುತ್ತಲೇ ಇರುತ್ತಾರೆ. ಆದರೆ, ಪ್ರತಿಬಾರಿಯೂ ನಾನು ಪರಿಶುದ್ಧನಾಗಿ ಹೊರಬಂದಿದ್ದೇನೆ, ಈ ಬಾರಿಯೂ ಸತ್ಯ ಹೊರಬಿದ್ದಿದೆ ಎಂದರು ಖುಷ್ವಂತ್. ತಮ್ಮ ಆತ್ಮಕಥೆಯ ಬಿಡುಗಡೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂದ ವಿಜಯ ಎಂದು ಅವರು ಬಣ್ಣಿಸಿದರು. ಅವರದು ಹೋರಾಟಗಾರನ ಹುರುಪು.
ಖುಷ್ವಂತ್‌ರ ಆತ್ಮಕಥೆಯ ವಿರುದ್ಧ ಆಕ್ಷೇಪವೆತ್ತಿ ಕೋರ್ಟ್ ಕಟ್ಟೆ ಹತ್ತಿದ್ದವರು ಮನೇಕಾ ಗಾಂಧಿ. ಮಾಜಿ ಪ್ರಧಾನಿ ಹಾಗೂ ತಮ್ಮ ಅತ್ತೆ ಇಂದಿರಾಗಾಂಧಿ ಅವರ ವ್ಯಕ್ತಿತ್ವಕ್ಕೆ ಕುಂದು ತರುವ ಚಿತ್ರಣ ಕೃತಿಯಲ್ಲಿದೆ ಎಂಬುದವರ ಆಕ್ಷೇಪ. ಆ ಕಾರಣದಿಂದಾಗಿ ಕೃತಿ ಬಿಡುಗಡೆ ನಿಷೇಧಿಸುವಂತೆ ಮನೇಕಾ ದೆಹಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು ; ಡಿಸೆಂಬರ್ 1995 ರಲ್ಲಿ . ವಿಚಾರಣೆ ನಡೆಸಿದ ನ್ಯಾಯಾಲಯ 2001 ನೇ ಇಸವಿಯ ಸೆಪ್ಟಂಬರ್‌ನಲ್ಲಿ ಮನೇಕಾ ಅವರ ಅರ್ಜಿಯನ್ನು ತಳ್ಳಿಹಾಕಿತ್ತು .
ಪುಸ್ತಕಾಭಿಮಾನಕ್ಕೆ ಅಕ್ಷರ ರುಜು
ದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಪುಸ್ತಕ ಮೇಳದ ಅಂಗವಾಗಿ ಬಿಡುಗಡೆಯಾದ ಖುಷ್ವಂತ್‌ರ ಆತ್ಮಕಥೆಯ ಹಿಂದಿ ಕೃತಿಗೆ ವಿಪರೀತ ಬೇಡಿಕೆ. ಪುಸ್ತಕ ಕೊಳ್ಳಲೊಂದು ಸಣ್ಣ ಗುಂಪೇ ನೆರೆದಿತ್ತು . ಮೊದಲ ಅರ್ಧಗಂಟೆಯಲ್ಲಿ ಕೊಂಡವರ ಪುಸ್ತಕಗಳಿಗೆ ಸ್ವತಃ ಖುಷ್ವಂತ್ ಸಹಿ ಹಾಕಿದರು. ಅಭಿಮಾನಿಗಳೊಂದಿಗೆ ಮಾತನಾಡಿದರು.
ಇದೊಂದು ಆಯ್ದ ನೆನಪುಗಳ ಗುಚ್ಛ. ನಾನು ಪ್ರಾಮಾಣಿಕವಾಗಿ ಬರೆದಿದ್ದೇನೆ. ಓದುಗ ನನ್ನ ಬರವಣಿಗೆಯಲ್ಲಿ ಪ್ರಾಮಾಣಿಕತೆಯನ್ನು ಬಯಸುತ್ತಾನೆ. ಬರಹದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಲು ನಾನು ವಿಶೇಷ ಪ್ರಯತ್ನವನ್ನೇನೂ ಮಾಡಬೇಕಾಗಿಲ್ಲ . ಅದು ತಂತಾನೇ ಬರುತ್ತದೆ. ನಾವು ಸುಳ್ಳುಗಾರರಾಗಿದ್ದಾಗ ಮಾತ್ರ ಪ್ರಾಮಾಣಿಕರಾಗಿರುವುದು ಕಷ್ಟವಾಗುತ್ತದೆ. ನನಗಂತೂ ಇದು ಸಮಸ್ಯೆಯೇ ಅಲ್ಲ ಎಂದರು ಖುಷ್ವಂತ್.
ಪುಸ್ತಕ ಬಿಡುಗಡೆಯ ಸಂತಸದ ಸಂದರ್ಭದಲ್ಲಿ ಖುಷ್ವಂತ್ ಅವರಿಗೆ ನೆನಪಾದದ್ದು ಸಹಧರ್ಮಿಣಿ. ಆಕೆ ತಮ್ಮ ಚಟುವ
ಟಿಕೆಗಳಿಗೆ ಯಾವ ರೀತಿ ಬೆಂಬಲವಾಗಿದ್ದರು, ಬೆಂಗಾವಲಾಗಿದ್ದರು ಎನ್ನುವುದನ್ನು ಅವರು ಸ್ಮರಿಸಿಕೊಂಡರು. ಇತ್ತೀಚೆಗಷ್ಟೆ ಅಗಲಿದ ಪತ್ನಿಯನ್ನು ನೆನೆದು ಅರೆ ಕ್ಷಣ ಉದ್ವೇಗಗೊಂಡರು ; ಮರು ಗಳಿಗೆ ಅದೇ ಕಿರು ನಗೆ- ಮಾಸದ ತುಂಟತನ.
ನನ್ನ ಜೀವನದಲ್ಲಿ ಪ್ರವೇಶಿಸಿದ ವ್ಯಕ್ತಿಗಳು ಹಾಗೂ ಘಟನೆಗಳು ಆತ್ಮಕಥೆಯಲ್ಲಿ ಚಿತ್ರವಾಗಿವೆ. ವಿವಿಧ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳೂ ಕೃತಿಯಲ್ಲಿವೆ. ಇದು ಕಳೆದ ಜೀವನದ ಬಗೆಗಿನ ಅವಲೋಕನ ಎಂದು ಸಿಂಗ್ ಪುಸ್ತಕದ ಬಗ್ಗೆ ಹೇಳಿಕೊಂಡರು. ಖುಷ್ವಂತ್ ಅವರ ಜನಪ್ರಿಯ ಕೃತಿಗಳಾದ- ದಿ ಸಿಖ್ಸ್ , ಕಂಪನಿ ಆಫ್ ವುಮೆನ್, ಅನ್‌ಫರ್‌ಗೆಟಬಲ್ ವುಮೆನ್ ಹಾಗೂ ಡಿಕ್ಲೇರಿಂಗ್ ಲವ್ ಇನ್ ಪೋರ್ ಲಾಂಗ್ವೇಜಸ್‌ಗಳ ಮಾರಾಟ ದಾಖಲೆಯನ್ನು ಆತ್ಮಕಥೆ ಮುರಿಯುವ ನಿರೀಕ್ಷೆಯಿದೆ.
ಜೀವನದಲ್ಲಿ ಏನು ಬೇಕೆಂದು ಬಯಸುತ್ತೀರಿ?
‘ಉತ್ತಮವಾಗಿ ಬರೆಯುವುದು’- ಥಟ್ಟನೆ ಉತ್ತರಿಸುತ್ತಾರೆ ಖುಷ್ವಂತ್.
ನಾನು ಬರಹಗಾರನಾಗಿ ಯಶಸ್ವಿಯಾಗಿದ್ದೇನೆ. ಇದರರ್ಥ ಸಾಧನೆ ನನಗೆ ತೃಪ್ತಿ ಕೊಟ್ಟಿದೆ ಎಂದರ್ಥವಲ್ಲ . ಇನ್ನೂ ಉತ್ತಮವಾಗಿ ಬರೆಯುವುದು ನನ್ನ ಬಯಕೆ ಎಂದು ಖುಷ್ವಂತ್ ಕನಸುಗಳ ಬುತ್ತಿ ಬಿಚ್ಚುತ್ತಾರೆ. ಅವರಿಗೀಗ 87.
ಅಂದಹಾಗೆ, ಖುಷ್ವಂತ್‌ರ ಆತ್ಮಕಥೆಯ ಹೆಸರು-
Truth, Love and a Little Malice!
(ಪಿಟಿಐ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications