ಹೆಸರಿಗಾಗಿಯೇ ಕೃಷ್ಣದೇವರಾಯ ವಿಶ್ವವಿದ್ಯಾಲಯ

ಕಲ್ಬುರ್ಗಿ ಅವರು ಏಕೆ ಈ ಹೆಸರು ಇಡಬಾರದು ಎನ್ನುವುದಕ್ಕೆ ಸುದೀರ್ಘ ಕಾರಣಗಳನ್ನು ನೀಡಿದರು. ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಎಂದಿಗೂ ಕನ್ನಡಪರ ಇರಲಿಲ್ಲ. ದೇಶಭಾಷೆಗಳಲ್ಲೇ ತೆಲುಗು ಅತ್ಯಂತ ಸುಂದರ ಭಾಷೆ ಎಂದೂ ಹೇಳಿದ್ದಾನೆ. ಜೊತೆಗೆ ಈ ಭಾಷೆಯ ಬೆಳವಣಿಗೆಗೆ ಅಪಾರ ಪ್ರೋತ್ಸಾಹ ನೀಡಿದ್ದಾನೆ. ಆತನ ಆಸ್ಥಾನದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ತೆಲುಗು ಕವಿಗಳಿದ್ದರು. ಇಂಥ ರಾಜರಿಂದಲೇ ಕನ್ನಡದ ಬೆಳವಣಿಗೆಗೆ ಅಡ್ಡಿಯಾಯಿತು" ಎಂದರು. ಈ ಎಲ್ಲ ಅಭಿಪ್ರಾಯಗಳು ಸರಕಾರದ ಮೇಲೆ ಒತ್ತಡ ತಂದಿದ್ದರಿಂದಾಗಿ ವಿ.ವಿ. ಹೆಸರು ಬದಲಾವಣೆ ಆಗಲಿಲ್ಲ. ಆ ಸಂದರ್ಭದಲ್ಲಿ ಹೊಸಪೇಟೆಗೆ ಬಂದ ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರು 'ಕನ್ನಡ ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣದೇವರಾಯ ಹೆಸರಿಡುವ ನಿರ್ಧಾರ ಕೈ ಬಿಡಲಾಗಿದೆ" ಎಂದು ಕೈತೊಳೆದುಕೊಂಡಿದ್ದರು.
ಹೊಸ ವಿಶ್ವವಿದ್ಯಾಲಯವೇ ಬಂತು: ಶೈಕ್ಷಣಿಕ ಕೊರತೆಗಳನ್ನು ನಿವಾರಿಸುವ ಸಲುವಾಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯಾಗುವುದನ್ನು ಕೇಳಿದ್ದೇವೆ. ನೋಡಿದ್ದೇವೆ. ಆದರೆ ಹೆಸರೊಂದರ ಕಾರಣಕ್ಕಾಗಿಯೆ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ವಿಚಾರ ಕೇಳಿದ್ದೀರಾ! ಇದು ಕೂಡ ನಡೆದುಹೋಯಿತು. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಗೆ ಅನ್ವಯಿಸುವಂತೆ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲು ಮತ್ತು ಅದಕ್ಕೆ 'ಶ್ರೀಕೃಷ್ಣದೇವರಾಯ" ಹೆಸರಿಡಲು ಸಚಿವ ಸಂಪುಟ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಲು ಜನಾರ್ದನ ರೆಡ್ಡಿ ಯಶಸ್ವಿಯಾದರು. ಕೇವಲ ತೊಂಭತ್ತು ಕಿಲೋಮೀಟರ್ ದೂರವಿರುವ ಅನಂತಪುರ ಜಿಲ್ಲೆಯಲ್ಲಿ ಈಗಾಗಲೇ ಶ್ರೀಕೃಷ್ಣದೇವರಾಯ ಹೆಸರಿನ ವಿಶ್ವವಿದ್ಯಾಲಯವಿದೆ. ಹೀಗಿರುವಾಗ ಕರ್ನಾಟಕದಲ್ಲಿ ಇದೇ ಹೆಸರಿನ ವಿಶ್ವವಿದ್ಯಾಲಯದ ಅವಶ್ಯಕತೆ ಏನು. ಅದರ ತಾತ್ವಿಕ ಜರೂರತ್ತೇನು. ಬಳ್ಳಾರಿಯಲ್ಲಿ ಈಗಾಗಲೇ ಕನ್ನಡ ವಿಶ್ವವಿದ್ಯಾಲಯ ಇರುವಾಗ ಮತ್ತೊಂದು ವಿಶ್ವವಿದ್ಯಾಲಯ ಸ್ಥಾಪಿಸಬೇಕೆ… ಇದರಿಂದಾಗುವ ಪ್ರಯೋಜನಗಳೇನು.. ಎಂದೆಲ್ಲ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಯೋಚಿಸಲಿಲ್ಲ. ಜನಾರ್ದನ ರೆಡ್ಡಿ ನಿರ್ಧಾರಕ್ಕೆ ಸೊಲ್ಲೆತ್ತುವ ಧೈರ್ಯ ತಮಗಿಲ್ಲವೆಂಬುದನ್ನು ಅವರು ತೋರ್ಪಡಿಸಿದರು.












Click it and Unblock the Notifications