ಯುವ ಕನ್ನಡ ಬರಹಗಾರರಿಗೆ ಆಹ್ವಾನ

ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಈವರೆಗೆ ಇಂಗ್ಲಿಷ್ ಲೇಖಕರಿಗೆ ಮಾತ್ರ ಸೀಮಿತವಾಗಿತ್ತು. ಈ ವರ್ಷದಿಂದ ಅದು ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts - TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ.
ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರು ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಬಹುದು. ಈ ಪುರಸ್ಕಾರದ ಉದ್ದೇಶವೇ ಹೊಸ ಬರಹಗಾರರನ್ನು ಗುರುತಿಸುವುದಾಗಿರುವುದರಿಂದ ನೀವು ಈಗಾಗಲೇ ಪ್ರಸಿದ್ಧಿ ಪಡೆದಿರುವ ಲೇಖಕರಾದರೆ ಇದಕ್ಕೆ ಪ್ರವೇಶಗಳನ್ನು ಕಳಿಸಬೇಡಿ. ಪ್ರತಿ ಪ್ರವೇಶವು 7,500 ಶಬ್ದಗಳನ್ನು ಮೀರಬಾರದು. ಕವಿತೆಗಳನ್ನು ಕಳುಹಿಸುವವರು 6 ರಿಂದ 10 ಕವಿತೆಗಳನ್ನು ಕಳಿಸಬಹುದು.
ನೀವು ಸಲ್ಲಿಸುವ ಪ್ರತಿ ಪ್ರವೇಶದ ಜೊತೆಗೆ ನಿಮ್ಮ ಹುಟ್ಟಿದ ದಿನಾಂಕ, ಕೃತಿಯು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆ ಪ್ರಕಟನೆಯ ವಿವರಗಳನ್ನು ನಮೂದಿಸಿ, ಇದು ನಿಮ್ಮದೇ ಸ್ವಂತ ಸೃಜನಶೀಲ ಕೃತಿಯೆಂಬುದನ್ನು ದೃಢೀಕರಿಸಿದ ಲಿಖಿತ ಹೇಳಿಕೆಯನ್ನು ಲಗತ್ತಿಸಬೇಕು. ಜೊತೆಗೆ ನಿಮ್ಮ ಅಂಚೆಯ ವಿಳಾಸ, ಈಮೇಲ್ ವಿಳಾಸ, ಫೋನ್ ನಂಬರುಗಳು (ಚರ ಮತ್ತು ಸ್ಥಿರ ದೂರವಾಣಿ ಸಂಖ್ಯೆಗಳು) ಹಾಗೂ ನಿಮ್ಮ ಸ್ವವಿವರಗಳುಳ್ಳ ಚಿಕ್ಕ ಬಯೋಡಾಟಾ ಕೂಡ ಪ್ರತ್ಯೇಕ ಹಾಳೆಯ ಮೇಲೆ ಬರೆದು ಕಳಿಸಿ.
ಪ್ರವೇಶಗಳನ್ನು ಈ ವಿಳಾಸಕ್ಕೆ ಕಳಿಸಿ:
Toto Funds the Arts (TFA)
H 301, Adarsh Gardens, 8th Block, 47th Cross,
Jayanagar, Bangalore 560 082
Phone 080 2699 0549
ನೀವು ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಪುರಸ್ಕಾರವನ್ನು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ. ಪುರಸ್ಕಾರದ ಕುರಿತು ಟಿ.ಎಫ್.ಎ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾದುದು ಮತ್ತು ಇದನ್ನು ಯಾವ ಬಗೆಯಲ್ಲೂ ಪ್ರಶ್ನಿಸಲಾಗದು.
ಅಗತ್ಯವಾದಲ್ಲಿ ನೀವು ಸಲ್ಲಿಸಿದ ಬರಹಗಳ ಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವಾ ಸಂಸ್ಥೆಯ ವೃತ್ತಪತ್ರದಲ್ಲಿ ಪುರಸ್ಕಾರದ ಪ್ರಚಾರಕ್ಕೆ ಬಳಸಿಕೊಳ್ಳುವ ಹಕ್ಕು ಟಿ.ಎಫ್.ಎ.ಗೆ ಇದೆ. ಉಳಿದಂತೆ ಕೃತಿಯ ಪೂರ್ತಿ ಹಕ್ಕುಸ್ವಾಮ್ಯವು ಬರಹಗಾರರದೇ ಆಗಿರುತ್ತದೆ.
ಟಿ.ಎಫ್.ಎ. ಸಂಸ್ಥೆಯು ಆಂಗಿರಸ 'ಟೊಟೊ' ವೆಲ್ಲಾನಿಯ ಸ್ಮರಣಾರ್ಥ 2004 ರಲ್ಲಿ ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. ಈ ಮೂಲಕ ಯುವ ಪ್ರತಿಭೆಗಳಿಗೆ ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.












Click it and Unblock the Notifications